ಚಿದಂಬರ ರಹಸ್ಯ ತುಂಬ ಸರಿ ಕೇಳಿದ್ದೇವೆ ಆದರೆ ಏನಿದು !
ಬದುಕಿನಲ್ಲಿ ಕೆಲವು ಅರ್ಥವೇ ಆಗುವುದಿಲ್ಲ , ಕೂಡಿಸಿ , ಕಳೆದು , ಗುಣಿಸಿ , ಭಾಗಿಸಿ ಏನೆಲ್ಲ ಮಾಡಿದರೂ ಉತ್ತರ ಸಿಗುವುದಿಲ್ಲ .
ಅದು ಕೊನೆಗಾಣದ ಗಣಿತದ ಪ್ರಮೇಯದಂತೆ , ಬಿಡಿಸಲಾಗದ ಕಗ್ಗಂಟಿನಂತೆ , ಹೊಂದಿಕೆಯ ಪದ ಸಿಗದ ಪದಬಂಧದಂತೆ ರಹಸ್ಯ ಭೇದಿಸುವ ತಿಣುಕಾಟಕ್ಕೆ ತಿಣುಕಾಡಿದ್ದಪ್ಪ ಫಲವಾಗಿರುತ್ತದೆ .
ಒಬ್ಬನ ವ್ಯಕ್ತಿತ್ವ ಅಂಥದ್ದಾಗಿರುವುದಿಲ್ಲ . ಆದರೆ ಅವನ ಬದುಕಿನಲ್ಲಿ ಅಂಥದೊಂದು ಘಟನೆ ನಡೆದಿರುತ್ತದೆ . ಅವನು ಹೀಗೇಕೆ ಮಾಡಿದೆ ಎಂದು ಎಷ್ಟು ಯೋಚಿಸಿದರೂ ಸಕಾರಣವಾದ ಉತ್ತರ ಸಿಗುವುದಿಲ್ಲ .
ಇದ್ದಕ್ಕಿದ್ದಂತೆ ನಮ್ಮೊಡನಿದ್ದವರು ದೂರಾಗಿಬಿಡುತ್ತಾರೆ . ಯಾಕೆಂದು ಅವರು ಹೇಳುವುದಿಲ್ಲ . ನಾವು ಯೋಚಿಸಿದರೆ ನಮಗೆ ಕಾರಣ ಸಿಗುವುದಿಲ್ಲ , ಇಂತಹ ಸಂದರ್ಭಕ್ಕೆ ಬಳಕೆಯಾಗುವ ಪದ ‘ ಚಿದಂಬರ ರಹಸ್ಯ ‘ , ಇದರ ಮೂಲವಿರುವುದು ಚಿದಂಬರಂ ಕ್ಷೇತ್ರದಲ್ಲಿ , ಭಾರತದ ಸುಪ್ರಸಿದ್ದ ತೀರ್ಥಕ್ಷೇತ್ರಗಳಲ್ಲೊಂದಾದ ಚಿದಂಬರಂ ಇರುವುದು .
ತಮಿಳುನಾಡಿನಲ್ಲಿ , ಶಿವನ ಆಕಾಶಲಿಂಗವಿರುವ ಕ್ಷೇತ್ರವಿದು , ಪೃಥಿವಿ , ಜಲ , ತೇಜಸ್ಸು , ವಾಯು , ಆಕಾಶ ಇವು ಪಂಚಭೂತಗಳು . ಈ ಐದಕ್ಕೂ ಐದು ಶಿವಲಿಂಗಕ್ಷೇತ್ರಗಳಿವೆ . ಕಂಚಿಯಲ್ಲಿ ಪೃಥಿವೀ ಲಿಂಗ , ಅರುಣಾಚಲಂನಲ್ಲಿ ಅಗ್ನಿ ಲಿಂಗ , ಜಂಬುಕೇಶ್ವರದಲ್ಲಿ ಜಲ ಲಿಂಗ, ಶ್ರೀಕಾಳಹಸ್ತಿಯಲ್ಲಿ ವಾಯುಲಿಂಗ, ಇವು ಪಂಚಭೂತ ಉಳಿದ ಲಿಂಗಕ್ಷೇತ್ರಗಳು .
ಶಿವ ಚಿದಂಬರಂನಲ್ಲಿ ಸ್ಪಟಿಕ ಲಿಂಗಾಕಾರದೊಂದಿಗೆ ನಟರಾಜನೂ ಆಗಿ ಕಾಣಿಸಿಕೊಂಡಿದ್ದಾನೆ . ಜೊತೆಗೆ ಅವನ ಇನ್ನೊಂದು ಸಾನ್ನಿಧ್ಯವೂ ಇಲ್ಲಿದೆ .
ಅದೇ ನಿರಾಕಾರದ ರಹಸ್ಯ , ಭೂಮಿಯಲ್ಲಿ ಶಿವನ ಪ್ರಥಮ ನಾಟ್ಯ ನಡೆದ ಕ್ಷೇತ್ರವಿದು .
ಹಿಂದೆ ಈ ಪ್ರದೇಶದಲ್ಲಿದ್ದ ತಪಸ್ವಿಗಳಿಗೆ ತಾವೇ ದೊಡ್ಡವರೆಂಬ ಅಹಂಕಾರ ಮೂಡಿರುತ್ತದೆ . ಅದನ್ನು ಮುರಿಯಲು ದಿಗಂಬರನಾಗಿ ಬರುವ ಶಿವ ನಾಟ್ಯ ಮಾಡುತ್ತಾನೆ . ಶಿವನನ್ನು ಕಾಣುವ ತಪಸ್ವಿಗಳ ಪತ್ನಿಯರು ಅವನತ್ತ ಆಕರ್ಷಿತರಾಗುತ್ತಾರೆ . ಆಗ ತಪಸ್ವಿಗಳು ವಿಷದ ಹಾವುಗಳನ್ನು ಸೃಷ್ಟಿ ಮಾಡಿ ಶಿವನ ಮೇಲೆ ಬಿಡುತ್ತಾರೆ . ಅವನು ಅವುಗಳನ್ನು ತನ್ನ ಆಭರಣವಾಗಿಸಿಕೊಳ್ಳುತ್ತಾನೆ .
ಆಗ ತಪಸ್ವಿಗಳು ಒಬ್ಬ ಭಯಂಕರ ರಾಕ್ಷಸನನ್ನು ಸೃಷ್ಟಿಸಿ ಶಿವನ ಮೇಲೆ ಬಿಡುತ್ತಾರೆ . ಶಿವ ಆ ರಾಕ್ಷಸನನ್ನು ಬೀಳಿಸಿ ಅವನ ಮೇಲೆಯೇ ನಾಟ್ಯ ಮಾಡುತ್ತಾನೆ .
ಇಷ್ಟೆಲ್ಲ ಆದಮೇಲೆ ಬಂದವ ಶಿವನೆಂದು ಅರಿಯುವ ತಪಸಿಗಳು ಅವನಿಗೆ ಶರಣಾಗತರಾಗಿ ಅಹಂಕಾರವನ್ನು ಬಿಡುತ್ತಾರೆ .
ಈ ಕ್ಷೇತ್ರದ ಮಹಿಮೆ ಅರಿತ ಮುನಿ ವ್ಯಾಘ್ರಪಾದ ಮತ್ತು ಮಹರ್ಷಿ ಪತಂಜಲಿ ಇಲ್ಲಿ ಲಿಂಗಸ್ಥಾಪನೆ ಮಾಡುತ್ತಾರೆ ,
ಅಲ್ಲದೆ ಅಲ್ಲಿಯೇ ತಪಸ್ಸು ಮಾಡುತ್ತಾರೆ . ಅವರ ತಪಸ್ಸಿಗೆ ಮೆಚ್ಚಿದ ಶಿವ ಮತ್ತೆ ಅಲ್ಲಿ ಆನಂದ ತಾಂಡವ ಮಾಡುತ್ತಾನೆ .
ಚಿದಂಬರಂ ದೇವಾಲಯದ ಗರ್ಭಗೃಹದ ಮಧ್ಯದಲ್ಲಿ ನಟರಾಜನ ಮೂರ್ತಿಯಿದೆ . ಎಡಭಾಗದಲ್ಲಿ ಶಿವಕಾಮಸುಂದರಿಯ ಮೂರ್ತಿಯಿದೆ , ಬಲಭಾಗದಲ್ಲಿ ಇರುವುದೇ ಚಿದಂಬರ ರಹಸ್ಯ , ಅಲ್ಲೊಂದು ಪರದೆಯಿದೆ . ಪರದೆಯ ಹಿಂಭಾಗದಲ್ಲಿ ಏನಿದೆ ಎನ್ನುವುದು ಅರಿವಾಗುವುದಿಲ್ಲ .
ಆದರೂ ಅಲ್ಲಿಗೆ ಪೂಜೆ ಸಲ್ಲುತ್ತದೆ . ಅಲ್ಲಿ ಸಾಕ್ಷಾತ್ ಶಿವನೇ ಇದ್ದಾನೆ ಎನ್ನುವುದು ನಂಬಿಕೆ . ಆದರೆ ಅದು ಯಾರಿಗೂ ಕಾಣದೇ ಅಲ್ಲಿ ಶಿವ ಹೇಗಿದ್ದಾನೆ ಎಂದು ಅರ್ಥವಾಗದೆ ಅದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ . ಹಾಗಾಗಿ ಬಿಡಿಸಲಾಗದ ಗುಟ್ಟಿನ ಎಲ್ಲದಕ್ಕೂ ಅದೇ ಶಬ್ದ ಸಂದಿದೆ .
