ಏನು ಈ ವೇದಾಂತ?
ವೇದಗಳ ಕೊನೆಯ ಭಾಗವಾಗಿರುವ ಉಪನಿಷತ್ತುಗಳನ್ನು ವೇದಾಂತವೆಂದು ಕರೆಯುವ ರೂಢಿಯಿದೆ.
” ವೇದಾನಾಂ ಅಂತಃ ವೇದಾಂತಃ ” .
ವೇದಗಳಲ್ಲಿ ಸಂಹಿತಾ , ಬ್ರಾಹ್ಮಣ ಮತ್ತು ಆರಣ್ಯಕಗಳ ಅನಂತರ ಉಪನಿಷತ್ತುಗಳಿರುವುದರಿಂದ ಉಪನಿಷತ್ತುಗಳು ವೇದಾಂತಗಳೆನಿಸಿದವು .
ಸಂಹಿತಾಬ್ರಾಹ್ಮಣಾರಣ್ಯಕಗಳಲ್ಲಿಕರ್ಮಕಾಂಡದ ಪ್ರತಿಪಾದನೆಯಿದ್ದು; ಅನಂತರದ ಉಪನಿಷತ್ತುಗಳಲ್ಲಿ ಜ್ಞಾನಕಾಂಡವು ಪ್ರತಿಪಾದಿತವಾಗಿರುವುದರಿಂದ ಉಪನಿಷತ್ತುಗಳು ವೇದಾಂತ .
ಉಪನಿಷತ್ತುಗಳು ಪ್ರತಿಪಾದಿಸುವ ಜ್ಞಾನವು ವೇದಾಂತ. ಉಪನಿಷತ್ತುಗಳ ದರ್ಶನವು ವೇದಾಂತ .
” ವೇದಾನಾಂ ಅಂತಃ ವೇದಾಂತಃ ” ಎಂಬಲ್ಲಿ ಅಂತಃ ಎಂಬ ಶಬ್ದಕ್ಕೆ ಕೊನೆ ಎ೦ದು ಅರ್ಥ .
ವೇದಗಳ ಕೊನೆಯಲ್ಲಿರುವುದು ಉಪನಿಷತ್ತುಗಳು . ಕೊನೆ , ಸೀಮೆ , ಎಲ್ಲೆ , ಗಡಿ ಎಂಬ ಅರ್ಥಗಳು ಅಂತಃ ಎಂಬ ಶಬ್ದದ್ದು .
ಈ ಅರ್ಥದಲ್ಲಿ ಅಂತಃ ಶಬ್ದದ ಪ್ರಯೋಗವು ನೈಷಧ ಕಾವ್ಯದಲ್ಲಿದೆ.
” ವನಾಂತಪರ್ಯಂತಮುಪೇತ್ಯ ಸಸ್ಪೃಹಮ್ ” — ೧ — ೭೫ .
ಅಂತಃ ಶಬ್ದಕ್ಕೆ ನಿಶ್ಚಯವೆಂಬ ಅರ್ಥವಿರುವುದು .
ವೇದಾನಾಂ ಅಂತಃ ನಿಶ್ಚಯಃ ವೇದಾಂತಃ ”
ಸರ್ವವೇದಗಳ ನಿಶ್ಚಿತವಾದ , ನಿರ್ಣೀತವಾದ ವಿಚಾರಗಳು ವೇದಾಂತವೆನಿಸುವುದು .
ಸರ್ವವೇದತಾತ್ಪರ್ಯನಿಶ್ಚಯವು ವೇದಾಂತ . ಇದು ಜ್ಞಾನವನ್ನೇ ಭೂಮಿಕೆಯನ್ನಾಗಿ ಹೊಂದಿರುವುದು . ಕರ್ಮಭೂಮಿಕಾಶ್ರಿತವಾದುದು ಅಲ್ಲ .
ವೈಜಯಂತೀಕೋಶದಲ್ಲಿ ಅಂತಃ ಶಬ್ದಕ್ಕೆ ನಿಶ್ಚಯವೆಂಬ ಅರ್ಥವನ್ನು ನೀಡಲಾಗಿದೆ.
” ನಿರ್ಣಯೋsoತಶ್ಚ ನಿಶ್ಚಯಃ ”
ಶ್ರೀಮದ್ಭಗವದ್ಗೀತೆಯಲ್ಲಿ ಅಂತಃ ಶಬ್ದವು ನಿಶ್ಚಯವೆಂಬ ಅರ್ಥದಲ್ಲಿ ಪ್ರಯೋಗವಾಗಿದೆ.
” ಉಭಯೋರಪಿ ದೃಷ್ಟೋsoತಸ್ತ್ವನಯೋ: ತತ್ತ್ವದರ್ಶಿಭಿ: ” — ೨ — ೧೬ .
ಅಂತಃ ಶಬ್ದವು ಸಮೀಪ , ಹತ್ತಿರ ಎಂಬ ಅರ್ಥವನ್ನೂ ಹೊಂದಿರುವುದು .
ಉಪನಿಷತ್ತು ಎಂಬುದನ್ನು ವಿವರಿಸುವಾಗ ಉಪ – ಸಮೀಪೇ ಅಂದರೆ ಗುರುವಿನ ಸಮೀಪದಲ್ಲಿದ್ದುಕೊಂಡು ಅಧ್ಯಯನ ಮಾಡುವ ,
ಅರ್ಥಾನುಸಂಧಾನ ಮಾಡುವ , ಜ್ಞಾನಪ್ರಾಪ್ತಿಗಾಗಿ ತನ್ಮೂಲಕ ನಿಃಶ್ರೇಯಸ್ಸಿನಸಿದ್ದಿಗಾಗಿ ಅಧ್ಯಯನೀಯವಾದ ವೇದಭಾಗವೆಂದು ಹೇಳಲಾಗುವುದು . ಈ ನೆಲೆಯಲ್ಲಿ ವೇದಾಂತವೆಂದರೆ ವೇದಗಳ ಸಾಮೀಪ್ಯ , ವೇದ ತತ್ತ್ವಗ್ರಹಣ , ವೇದಜ್ಞಾನಸ್ವೀಕಾರ , ವೇದಗಳ ಅಂತಿಮ ಭಾಗವಾಗಿರುವ
ಉಪನಿಷತ್ತುಗಳ ದರ್ಶನ ಎ೦ದು ವಿವರಿಸಬಹುದು .
ಉಪನಿಷತ್ತುಗಳು ಬ್ರಹ್ಮ ಪ್ರತಿಪಾದಕವಾದುದರಿಂದ , ಜ್ಞಾನದಾಯಕಗಳಾಗಿರುವುದರಿಂದ , ಮೋಕ್ಷವಿಷಯಕಗಳಾಗಿರುವುದರಿಂದ ವೇದದ — ಜ್ಞಾನದ ಅಂತವೆನಿಸಿವೆ.
ಕರ್ಮಬೋಧಕ ವೇದಭಾಗಗಗಳ ಅನಂತರ ಜ್ಞಾನಬೋಧಕ ಉಪನಿಷತ್ತುಗಳ ಅಧ್ಯಯನವಿರುವುದು . ಕರ್ಮಾನುಷ್ಠಾನಗಳಿಂದ ಚಿತ್ತಶುದ್ಧಿಯನ್ನು ಹೊಂದಿ ; ತ್ರೈಗುಣ್ಯವಿಷಯಗಳಾದ ವೇದವಿಹಿತಕರ್ಮಗಳ ಫಲಗಳು ಅಲ್ಪ , ಅಸ್ಥಿರ , ನಶ್ವರ , ಅಶಾಶ್ವತ ಹಾಗೂ ಅನಿತ್ಯಗಳೆಂದು ತಿಳಿದು ; ನಿತ್ಯವೂ ಶಾಶ್ವತವೂ ಸ್ಥಿರವೂ ಅನಶ್ವರವೂ ಆಗಿರುವುದನ್ನು ಹೊಂದಬೇಕೆಂಬ ಇಚ್ಛೆಯಿಂದ , ಮುಮುಕ್ಷುವಾಗಿ , ಆತ್ಮಾನಾತ್ಮ ವಿಚಾರಪರನಾಗಿ ಬ್ರಹ್ಮ ಜಿಜ್ಞಾಸುವಾಗಿ ” ಅಥಾತೋ ಬ್ರಹ್ಮಜಿಜ್ಞಾಸಾ ” ಎಂಬ ನೆಲೆಯಲ್ಲಿ ಗುರೂಪದೇಶ , ಅಧ್ಯಯನ , ಅನುಸಂಧಾನ , ಜ್ಞಾನಪ್ರಾಪ್ತಿ , ಮೋಕ್ಷ — ಈ ವಿಷಯಗಳು ನಿರ್ಣಯ ಪೂರ್ವಕವಾಗಿ
ಮೀಮಾಂಸಿಸಲ್ಪಡುವುದೇ ವೇದಾಂತವೆಂಬ ಶಾಸ್ತ್ರ . ವೇದಾಂತವೆಂಬ ದರ್ಶನ . ವೇದಾಂತವೆಂಬ ಅಧ್ಯಾತ್ಮ , ” ವೃತ್ತಾತ್ ಕರ್ಮಾಧಿಗಮಾತ್ ಅನಂತರಂ ಬ್ರಹ್ಮವಿವಿದಿಷಾ ” ಎ೦ದು ಹೇಳಲಾಗಿದೆ.
ಅಂತಃ ಶಬ್ದವು ನಪುಂಸಕಲಿಂಗವಾದಾಗ ( ಅಂತಮ್ ) ಸ್ವರೂಪವೆಂಬ ಅರ್ಥವಿರುವುದು . ವೇದಾಂತಮ್ , ವೇದಾನಾಂ ಅಂತಂ ಎಂದರೆ ವೇದಸ್ವರೂಪವೆಂದು ಅರ್ಥವಾಗುವುದು . ಆದರೆ ಈ ಅರ್ಥದಲ್ಲಿ ವೇದಾಂತಮ್ ಎಂಬ ಶಬ್ದದ ಪ್ರಯೋಗವು ಕಂಡುಬರಲಿಲ್ಲ,
ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಸದಾನಂದರು ತಮ್ಮ ವೇದಾಂತಸಾರವೆಂಬ ಗ್ರಂಥದಲ್ಲಿ ‘ ವೇದಾಂತ ‘ ಎಂಬ ಶಬ್ದದ ಅರ್ಥವನ್ನು ಈ ರೀತಿಯಲ್ಲಿ ವಿವರಿಸಿದ್ದಾರೆ —
” ವೇದಾಂತೋ ನಾಮ ಉಪನಿಷತ್ಪ್ರಮಾಣಂ ತದುಪಕಾರೀಣಿ ಶಾರೀರಕ ಸೂತ್ರಾದೀನಿ ಚ ”
ವೇದಾಂತವೆಂದರೆ ಉಪನಿಷತ್ತುಗಳೇ ಪ್ರಮಾಣವಾಗಿರುವ ; ಮತ್ತು ಉಪನಿಷತ್ತುಗಳಿಗೆ ಸಹಾಯಕವಾಗಿರುವ ಶಾರೀರಕ ಸೂತ್ರಾದಿಗಳು .
ಶುದ್ಧಚೈತನ್ಯವೂ ಪ್ರಮೇಯವೂ ಆಗಿರುವ ಜೀವ – ಬ್ರಹ್ಮರ ಐಕ್ಯವು ವೇದಾಂತದ ವಿಷಯವಾಗಿರುವುದರಿಂದ ಅದನ್ನು ಪ್ರತಿಪಾದಿಸುವ ಉಪನಿಷತ್ತುಗಳು ; ಉಪನಿಷತ್ತುಗಳ ತಾತ್ಪರ್ಯ ನಿರ್ಣಯಕ್ಕೆ ಸಹಾಯಕವಾಗಿರುವ ಶ್ರೀಬಾದರಾಯಣಮಹರ್ಷಿ ಪ್ರಣೀತ ಬ್ರಹ್ಮಸೂತ್ರ ಮತ್ತು ಶ್ರೀಮದ್ಭಗವದ್ಗೀತೆಗಳ ವಿಷಯಗಳೇ ವೇದಾಂತ .
ವೇದಾಂತವೆಂದರೆ ಅದ್ವೈತ . ಅದ್ವೈತವೆಂದರೆ ವೇದಾಂತ . ಅದ್ವೈತವೇದಾಂತವೆಂದು ಹೇಳುವ ಅಗತ್ಯವೇ ಇಲ್ಲ. ಹೇಳಿದರದು ಪುನರುಕ್ತಿದೋಷವಾಗುವುದು .” ಯಂ ಶೈವಾ: ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ ” ಎಂಬಲ್ಲಿ ಮತ್ತು ಇತರ ಅನೇಕ ಸ್ಥಳಗಳಲ್ಲಿ ಇದು ಸ್ಫುಟವಾಗುವುದು .
ಹೆಚ್ಚಿನ ಎಲ್ಲ ದರ್ಶನಕಾರರು ಅದ್ವೈತವನ್ನು ಪೂರ್ವಪಕ್ಷವಾಗಿ ಸ್ವೀಕರಿಸುವಾಗ , ವೇದಾಂತೇ , ವೇದಾಂತಿನಸ್ತು ಎಂಬುದಾಗಿ ಪ್ರಯೋಗಮಾಡಿರುವುದು ಕಂಡುಬರುತ್ತದೆ.
ಅದುದರಿಂದ ವೇದಾಂತವೆಂದರೆ ಅದ್ವೈತ . ಅದ್ವೈತವೆಂದರೆ ವೇದಾಂತ . ಅದ್ವೈತವೆಂಬ ಶಬ್ದವು ಸರ್ವರಿಗೂ ಪ್ರಿಯವಾದುದು .
ಶ್ರೀರಾಮಾನುಜನರ ಸಿದ್ಧಾಂತವು ವಿಶಿಷ್ಟಾದ್ವೈತವೆನಿಸಿದೆ .
ಶ್ರೀನಿಂಬಾರ್ಕರ ಮತವು ದ್ವೈತಾದ್ವೈತವಾಗಿದೆ. . ಶ್ರೀಕಂಠಾಚಾರ್ಯರ ಸಿದ್ಧಾಂತವು
ಶಿವವಿಶಿಷ್ಟಾದ್ವೈತವಾಗಿದೆ.
ಶ್ರೀಪತ್ಯಾಚಾರ್ಯರ ಮತವನ್ನು ಶಕ್ತಿವಿಶಿಷ್ಟಾದ್ವೈತವೆಂದು ಕರೆಯಲಾಗಿದೆ. ಶ್ರೀವಲ್ಲಭಾಚಾರ್ಯರ ಸಿದ್ಧಾಂತವನ್ನು ಶುದ್ಧಾದ್ವೈತವೆಂದು ಕರೆದಿದ್ದಾರೆ. ಶ್ರೀವಿಜ್ಞಾನಭಿಕ್ಷುವು ಸಾಂಖ್ಯ ಪರವಾಗಿರುವ ತನ್ನ
ಬ್ರಹ್ಮಸೂತ್ರಭಾಷ್ಯದಲ್ಲಿ ಸಾಂಖ್ಯಮತವು ಅವಿಭಾಗಾದ್ವೈತವೆಂದಿದ್ದಾನೆ .
ಶ್ರೀಆಲೂರು ವೆಂಕಟರಾಯರು ,ಡಾ.ಬಿ . ಎನ್ . ಕೆ . ಶರ್ಮಾ ಇವರು ಶ್ರೀ ಮಧ್ವಾಚಾರ್ಯರ ದ್ವೈತಮತವನ್ನು ಸ್ವತಂತ್ರಾದ್ವಿತೀಯಬ್ರಹ್ಮವಾದ ಅಥವಾ ಸ್ವತಂತ್ರಾದ್ವೈತವೆಂದು ಪ್ರತಿಪಾದಿಸಿದ್ದಾರೆ.
ಅದುದರಿಂದ ಅದ್ವೈತವೆಂಬ ಶಬ್ದವು ಸರ್ವಗ್ರಾಹ್ಯವಾಗಿದೆ. ಸರ್ವರಿಗೂ ಸ್ವೀಕಾರಾರ್ಹವೂ ಪ್ರಿಯವೂ ಆದುದು .
ಓಂ ನಮೋ ಭಗವತೇ ಅದ್ವೈತಾಚಾರ್ಯಾಯ ಶ್ರೀಶಂಕರಾಯ ಜಗದ್ಗುರವೇ
