ಶ್ರೀ ಶಿವ ಪ್ರಾತಃ ಸ್ಮರಣ ಸ್ತೋತ್ರಂ (ಶ್ರೀ ಶಂಕರಾಚಾರ್ಯ ವಿರಚಿತ)

ಶ್ರೀ ಶಂಕರಾಚಾರ್ಯ ವಿರಚಿತ – ಶ್ರೀ ಶಿವ ಪ್ರಾತಃ ಸ್ಮರಣ ಸ್ತೋತ್ರಂ

ಪ್ರಾತಃ ಸ್ಮರಾಮಿ ಭವಭೀತಿಹರಂ ಸುರೇಶಂ, ಗಂಗಾಧರಂ ವೃಷಭವಾಹನಮಂಬಿಕೇಶಂ। 

ಖಟ್ವಾಂಗ ಶೂಲ ವರದಾಭಯಹಸ್ತಮೀಶಂ, ಸಂಸಾರ ರೋಗಹರಮೌಷಧಮದ್ವಿತೀಯಂ॥೧॥

ಭಾವಾರ್ಥ:- ಸಂಸಾರದ ಭಯಗಳನ್ನು ನಿವಾರಿಸುವವನೂ, ದೇವತೆಗಳ ಒಡೆಯನೂ, ಗಂಗಾಧರನೂ, ನಂದಿವಾಹನನೂ, ಅಂಬಿಕೆಯ ಪತಿಯೂ, ಖಟ್ವಾಂಗ- ಶೂಲಗಳನ್ನು ಆಯುಧಗಳಾಗಿ ಹೊಂದಿರುವವನೂ, ಶರಣಾಗತ ಭಕ್ತರಿಗೆ ಅಭಯಹಸ್ತದಿಂದ ವರಪ್ರದಾನ ಮಾಡುವ ಈಶ್ವರನೂ, ಭಕ್ತರ ಸಂಸಾರ ವ್ಯಾಧಿಯನ್ನು ಹೋಗಲಾಡಿಸುವ ಅದ್ವಿತೀಯ ಔಷಧ ರೂಪನಾಗಿರುವ ಶಿವನನ್ನು ನಾನು ಪ್ರಾತಃ ಕಾಲದಲ್ಲಿ ಸ್ಮರಣೆ ಮಾಡುತ್ತೇನೆ.

ಪ್ರಾತರ್ನಮಾಮಿ ಗಿರಿಶಂ ಗಿರಿಜಾರ್ಧದೇಹಂ, ಸರ್ಗಸ್ಥಿತಿಪ್ರಲಯ ಕಾರಣಮಾದಿದೇವಂ। 

ವಿಶ್ವೇಶ್ವರಂ ವಿಜಿತ ವಿಶ್ವಮನೋಽಭಿರಾಮಂ, ಸಂಸಾರ ರೋಗಹರಮೌಷಧಮದ್ವಿತೀಯಂ॥೨॥

ಭಾವಾರ್ಥ:- ಅರ್ಧನಾರೀಶ್ವರನೂ, ಕೈಲಾಸಪತಿಯೂ, ವಿಶ್ವದ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನೂ, ವಿಶ್ವೇಶ್ವರನೂ, ತನ್ನ ಮನೋಹರ ಸ್ವರೂಪದಿಂದ ವಿಶ್ವವನ್ನು ಗೆದ್ದಿರುವವನೂ, ಭಕ್ತರ ಸಂಸಾರ ವ್ಯಾಧಿಯನ್ನು ಹೋಗಲಾಡಿಸುವುದರಲ್ಲಿ ಅದ್ವಿತೀಯ ಔಷಧ ರೂಪನಾಗಿರುವ ಶಿವನನ್ನು ನಾನು ಪ್ರಾತಃ ಕಾಲದಲ್ಲಿ ಸ್ಮರಿಸುತ್ತೇನೆ.

ಪ್ರಾತರ್ಭಜಾಮಿ ಶಿವಮೇಕಮನಂತಮಾದ್ಯಂ, ವೇದಾಂತವೇದ್ಯಮನಘಂ ಪುರುಷಂ ಮಹಾಂತಂ। 

ನಾಮಾದಿಭೇದರಹಿತಂ ಷಡಭಾವಶೂನ್ಯಂ, ಸಂಸಾರ ರೋಗಹರಮೌಷಧಮದ್ವಿತೀಯಂ॥೩॥

ಭಾವಾರ್ಥ:- ಅನಂತನೂ, ಆದಿ ಪುರುಷನೂ, ವೇದಾಂತದಿಂದ ಅರಿಯಲ್ಪಡುವವನೂ, ಶುದ್ದನೂ, ಮಹತ್ ತತ್ತ್ವರೂಪನೂ, ನಾಮಾದಿಭೇದವಿಲ್ಲದವನೂ, ಷಡ್ಭಾವರಹಿತನೂ, ಸಂಸಾರವೆಂಬ ರೋಗವನ್ನು ಹೋಗಲಾಡಿಸುವುದರಲ್ಲಿ ಅದ್ವಿತೀಯ ಔಷಧ ರೂಪನಾಗಿರುವ ಶಿವನನ್ನು ನಾನು ಪ್ರಾತಃ ಕಾಲದಲ್ಲಿ ಭಜಿಸುತ್ತೇನೆ.

Leave a Comment

Your email address will not be published. Required fields are marked *