ಶಿವನಿಗೆ ಪ್ರಿಯವಾದ ಮಂತ್ರವೆಂದರೆ ಅದು ಶಿವಪಂಚಾಕ್ಷರೀ ಮಂತ್ರ. ಸರ್ವಮಾನವರು ಎಲ್ಲ ಕಾಲದಲ್ಲಿಯು ಸುಲಭವಾಗಿ ಜಪಿಸಬಹುದಾದ ಸರಳ ಮಂತ್ರ ಈ ಶಿವಪಂಚಾಕ್ಷರೀ ಮಂತ್ರ.
ಕಾಶೀನಗರದಲ್ಲಿ ನೆಲೆಗೊಂಡಿರುವ ಶ್ರೀಕಾಶಿ ವಿಶ್ವನಾಥನು ಪುರುಷೋತ್ತಮ ಶ್ರೀರಾಮಚಂದ್ರನ ತ್ರಯೋದಶಾಕ್ಷರೀ ಮಂತ್ರವನ್ನೂ ಮತ್ತು ಪವಿತ್ರ ರಾಮೇಶ್ವರದಲ್ಲಿ ಸ್ಥಿತವಾಗಿರುವ ಶ್ರೀರಾಮಚಂದ್ರನು ಶಿವಪಂಚಾಕ್ಷರೀ ಮಂತ್ರವನ್ನು ತಮ್ಮ ಭಕ್ತರಿಗೆ ಉಪದೇಶಿಸುವರು ಎಂಬುದು ಆಸ್ತಿಕರ ನಂಬಿಕೆ.
ಶ್ರೀರಾಮ ಜಯರಾಮ ಜಯ ಜಯ ರಾಮ — ಎಂಬುದು ಶ್ರೀರಾಮನ ತ್ರಯೋದಶಾಕ್ಷರೀ ಮಂತ್ರವಾದರೆ, ನಮಃ ಶಿವಾಯ — ಎಂಬುದು ಶಿವಪಂಚಾಕ್ಷರೀ ಮಂತ್ರವಾಗಿದೆ. ಇದಕ್ಕೆ ಪ್ರಣವ ಸೇರಿಸಿದಾಗ ಓಂ ನಮಃ ಶಿವಾಯ ಎಂಬ ಷಡಕ್ಷರೀ ಮಂತ್ರವಾಗುತ್ತದೆ.
ಆಸ್ತಿಕರು ತಮಗೆ ಇಷ್ಟವಾದ ಷಡಕ್ಷರೀ ಮಂತ್ರವಾಗಲಿ ಅಥವ ಶಿವಪಂಚಾಕ್ಷರೀ ಮಂತ್ರದ ಜಪದಿಂದ ತಮ್ಮ ಸಿದ್ಧಿಯನ್ನು ಸಾಧಿಸಿಕೊಳ್ಳುತ್ತಾರೆ.
ಶಿವಪಂಚಾಕ್ಷರೀ ಮಂತ್ರಜಪದ ಮಹಿಮೆ ಹೀಗಿವೆ:
- ಶಿವಪಂಚಾಕ್ಷರೀ ಮಂತ್ರಜಪದಿಂದ ಪಂಚಮಹಾಪಾತಕಗಳು ಶಮನವಾಗಿ ಮಾನವರು ಪುನೀತರಾಗುತ್ತಾರೆ.
- ಶಿವಪಂಚಾಕ್ಷರೀ ಮಂತ್ರಜಪನಿಷ್ಠರಿಗೆ ಆಕಾಶಾದಿ ಪಂಚಭೂತಗಳು ಸಂತೃಪ್ತಿಗೊಂಡು ಇವುಗಳಿಂದ ಯಾವ ತೊಂದರೆಗಳು ಉಂಟಾಗುವುದಿಲ್ಲ.
- ಶಿವಪಂಚಾಕ್ಷರೀ ಮಂತ್ರಜಪದಿಂದ ತಿಥಿ, ವಾರ ನಕ್ಷತ್ರ, ಯೋಗ, ಕರಣಗಳೆಂಬ ಪಂಚಮಹಾಭೂತಗಳು ಸಂತೃಪ್ತಿಗೊಂಡು ಸದಾ ಮಂಗಳಕರವಾಗುತ್ತವೆ.
- ಶಿವಪಂಚಾಕ್ಷರೀ ಮಂತ್ರಜಪದಿಂದ ಕಣ್ಣು, ಕಿವಿ, ಮೂರು, ನಾಲಿಗೆ, ಚರ್ಮ ಎಂಬ ಐದು ಜ್ಞಾನೇಂದಿಯಗಳು ಮತ್ತು ವಾಕ್, ಪಾಣಿ, ಪಾದ, ಪಾಯು ಮತ್ತು ಉಪಸ್ಥಗಳೆಂಬ ಐದು ಕರ್ಮೇಂದ್ರಿಯಗಳೂ ಶುದ್ಧವಾಗುವುದರೊಂದಿಗೆ ಪಾವನಗೊಳ್ಳುತ್ತವೆ ಪವಿತ್ರವಾಗುತ್ತವೆ.
- ಶಿವಪಂಚಾಕ್ಷರೀ ಮಂತ್ರಜಪದಿಂದ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನಗಳೆಂಬ ಪಂಚಪ್ರಾಣಗಳು ಶುದ್ಧವಾಗುತ್ತವೆ.
- ಶಿವಪಂಚಾಕ್ಷರೀ ಮಂತ್ರಜಪದಿಂದ ಪಂಚಕೋಶಗಳನ್ನು ದಾಟಿಹೋಗಬಹುದು ಎಂಬ ಅಚಲ ನಂಬಿಕೆಯಿದೆ. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯಗಳೆಂಬ ಪಂಚಕೋಶಗಳನ್ನು ದಾಟಿಕೊಂಡು ಶಿವಭಕ್ತನು ಬ್ರಹ್ಮಜ್ಞಾನಿಯಾಗಿ ಶಿವಸಾಯುಜ್ಯವನ್ನು ಹೊಂದುತ್ತಾನೆ.
ಶಿವೋಹಂ
ಶಿವಾರ್ಪಣಂ
