Shivanpakshakra Mantra-Significance | ಶಿವಪಂಚಾಕ್ಷರೀ ಮಂತ್ರ ಮತ್ತು ಅದರ ಮಹತ್ವ

ಶಿವನಿಗೆ ಪ್ರಿಯವಾದ ಮಂತ್ರವೆಂದರೆ ಅದು ಶಿವಪಂಚಾಕ್ಷರೀ ಮಂತ್ರ. ಸರ್ವಮಾನವರು ಎಲ್ಲ ಕಾಲದಲ್ಲಿಯು ಸುಲಭವಾಗಿ ಜಪಿಸಬಹುದಾದ ಸರಳ ಮಂತ್ರ ಈ ಶಿವಪಂಚಾಕ್ಷರೀ ಮಂತ್ರ.

ಕಾಶೀನಗರದಲ್ಲಿ ನೆಲೆಗೊಂಡಿರುವ ಶ್ರೀಕಾಶಿ ವಿಶ್ವನಾಥನು ಪುರುಷೋತ್ತಮ ಶ್ರೀರಾಮಚಂದ್ರನ ತ್ರಯೋದಶಾಕ್ಷರೀ ಮಂತ್ರವನ್ನೂ ಮತ್ತು ಪವಿತ್ರ ರಾಮೇಶ್ವರದಲ್ಲಿ ಸ್ಥಿತವಾಗಿರುವ ಶ್ರೀರಾಮಚಂದ್ರನು ಶಿವಪಂಚಾಕ್ಷರೀ ಮಂತ್ರವನ್ನು ತಮ್ಮ ಭಕ್ತರಿಗೆ ಉಪದೇಶಿಸುವರು ಎಂಬುದು ಆಸ್ತಿಕರ ನಂಬಿಕೆ.

ಶ್ರೀರಾಮ ಜಯರಾಮ ಜಯ ಜಯ ರಾಮ — ಎಂಬುದು ಶ್ರೀರಾಮನ ತ್ರಯೋದಶಾಕ್ಷರೀ ಮಂತ್ರವಾದರೆ, ನಮಃ ಶಿವಾಯ — ಎಂಬುದು ಶಿವಪಂಚಾಕ್ಷರೀ ಮಂತ್ರವಾಗಿದೆ. ಇದಕ್ಕೆ ಪ್ರಣವ ಸೇರಿಸಿದಾಗ ಓಂ ನಮಃ ಶಿವಾಯ ಎಂಬ ಷಡಕ್ಷರೀ ಮಂತ್ರವಾಗುತ್ತದೆ.

ಆಸ್ತಿಕರು ತಮಗೆ ಇಷ್ಟವಾದ ಷಡಕ್ಷರೀ ಮಂತ್ರವಾಗಲಿ ಅಥವ ಶಿವಪಂಚಾಕ್ಷರೀ ಮಂತ್ರದ ಜಪದಿಂದ ತಮ್ಮ ಸಿದ್ಧಿಯನ್ನು ಸಾಧಿಸಿಕೊಳ್ಳುತ್ತಾರೆ.

ಶಿವಪಂಚಾಕ್ಷರೀ ಮಂತ್ರಜಪದ ಮಹಿಮೆ ಹೀಗಿವೆ:

  1. ಶಿವಪಂಚಾಕ್ಷರೀ ಮಂತ್ರಜಪದಿಂದ ಪಂಚಮಹಾಪಾತಕಗಳು ಶಮನವಾಗಿ ಮಾನವರು ಪುನೀತರಾಗುತ್ತಾರೆ.
  2. ಶಿವಪಂಚಾಕ್ಷರೀ ಮಂತ್ರಜಪನಿಷ್ಠರಿಗೆ ಆಕಾಶಾದಿ ಪಂಚಭೂತಗಳು ಸಂತೃಪ್ತಿಗೊಂಡು ಇವುಗಳಿಂದ ಯಾವ ತೊಂದರೆಗಳು ಉಂಟಾಗುವುದಿಲ್ಲ.
  3. ಶಿವಪಂಚಾಕ್ಷರೀ ಮಂತ್ರಜಪದಿಂದ ತಿಥಿ, ವಾರ ನಕ್ಷತ್ರ, ಯೋಗ, ಕರಣಗಳೆಂಬ ಪಂಚಮಹಾಭೂತಗಳು ಸಂತೃಪ್ತಿಗೊಂಡು ಸದಾ ಮಂಗಳಕರವಾಗುತ್ತವೆ.
  4. ಶಿವಪಂಚಾಕ್ಷರೀ ಮಂತ್ರಜಪದಿಂದ ಕಣ್ಣು, ಕಿವಿ, ಮೂರು, ನಾಲಿಗೆ, ಚರ್ಮ ಎಂಬ ಐದು ಜ್ಞಾನೇಂದಿಯಗಳು ಮತ್ತು ವಾಕ್, ಪಾಣಿ, ಪಾದ, ಪಾಯು ಮತ್ತು ಉಪಸ್ಥಗಳೆಂಬ ಐದು ಕರ್ಮೇಂದ್ರಿಯಗಳೂ ಶುದ್ಧವಾಗುವುದರೊಂದಿಗೆ ಪಾವನಗೊಳ್ಳುತ್ತವೆ ಪವಿತ್ರವಾಗುತ್ತವೆ.
  5. ಶಿವಪಂಚಾಕ್ಷರೀ ಮಂತ್ರಜಪದಿಂದ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನಗಳೆಂಬ ಪಂಚಪ್ರಾಣಗಳು ಶುದ್ಧವಾಗುತ್ತವೆ.
  6. ಶಿವಪಂಚಾಕ್ಷರೀ ಮಂತ್ರಜಪದಿಂದ ಪಂಚಕೋಶಗಳನ್ನು ದಾಟಿಹೋಗಬಹುದು ಎಂಬ ಅಚಲ ನಂಬಿಕೆಯಿದೆ. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯಗಳೆಂಬ ಪಂಚಕೋಶಗಳನ್ನು ದಾಟಿಕೊಂಡು ಶಿವಭಕ್ತನು ಬ್ರಹ್ಮಜ್ಞಾನಿಯಾಗಿ ಶಿವಸಾಯುಜ್ಯವನ್ನು ಹೊಂದುತ್ತಾನೆ.

ಶಿವೋಹಂ
ಶಿವಾರ್ಪಣಂ

Leave a Comment

Your email address will not be published. Required fields are marked *