ಸೂರ್ಯದೇವರ ಹುಟ್ಟಿನ ಕಥೆ
ಸೂರ್ಯದೇವನ ಕುರಿತಾದ ವಿಷಯಗಳು ಋಗ್ವೇದದಲ್ಲಿ ಉಲ್ಲೇಖಿಸಿದೆ. ಅನೇಕ ಪುರಾಣಗಳ ಪ್ರಕಾರ ಬ್ರಹ್ಮನ ಮಾನಸ ಪುತ್ರ ಮರೀಚಿ, ಇವರ ಮಗ ಕಶ್ಯಪ.
ಇವರು ದಕ್ಷಬ್ರಹ್ಮನ ಮಕ್ಕಳಾದ ಅದಿತಿ ಮತ್ತು ದಿತಿಯನ್ನು ವಿವಾಹವಾಗುತ್ತಾರೆ.
ಕಶ್ಯಪ ರಿಂದ ಅದಿತಿಗೆ ದೇವತೆಗಳು ಹುಟ್ಟಿದರೆ, ದಿತಿಗೆ ಅಸುರರು ಹುಟ್ಟುತ್ತಾರೆ.
ಋಷಿಮುನಿಗಳು ಬ್ರಾಹ್ಮಣರು ಮಾಡಿದ ಯಾಗಾದಿಗಳ ಫಲ ದೇವತೆಗಳಿಗೆ ಹೋಗಿ ಅವರಿಗೆ ಹೆಚ್ಚು ಶಕ್ತಿ ಬರುತ್ತದೆ.
ಇದರಿಂದಾಗಿ ಅಸುರರು ತಮಗೆ ಫಲ ದೊರಕುವುದಿಲ್ಲ ವೆಂದು ದೇವತೆಗಳ ಮೇಲೆ ದ್ವೇಷ ಬೆಳೆಯುತ್ತದೆ.
ಬರಬರುತ್ತಾ ಇದು ಇಷ್ಟಕ್ಕೆ ನಿಲ್ಲದೆ ದೇವತೆಗಳಿಗೆ ಹಿಂಸೆ ಕೊಡುವುದಲ್ಲದೆ, ಅವರ ಮೇಲೆ ಯುದ್ಧಮಾಡಿ ಸ್ವರ್ಗ ಲೋಕದಿಂದ ಹೊರಗೆ ತಳ್ಳುತ್ತಾರೆ. ಸ್ವರ್ಗವನ್ನು ಅಸುರರು ಆಕ್ರಮಿಸುತ್ತಾರೆ.
ದೇವತೆಗಳ ತಾಯಿಯಾದ ಅದಿತಿಗೆ ಇದನ್ನೆಲ್ಲಾ ನೋಡಿ ಸಂಕಟವಾಗಿ ತನ್ನ ಮಕ್ಕಳಾದ ದೇವತೆಗಳನ್ನು ರಕ್ಷಿಸಲು ಈಶ್ವರನ ಕುರಿತು ಘೋರವಾದ ತಪಸ್ಸು ಮಾಡುತ್ತಾಳೆ.
ಅವಳ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಪ್ರತ್ಯಕ್ಷವಾಗಿ ಏನು ವರ ಬೇಕೆಂದು ಕೇಳುತ್ತಾನೆ.
ಅದಿತಿಯು ಕೈಮುಗಿದು ದೇವಾ, ನನ್ನ ತಂಗಿ ‘ದಿತಿ’ ಯ ಮಕ್ಕಳಾದ ಅಸುರರು ನನ್ನ ಮಕ್ಕಳಿಗೆ ಚಿತ್ರಹಿಂಸೆಗಳನ್ನು ಕೊಟ್ಟು ಸ್ವರ್ಗದಿಂದ ದಬ್ಬಿ, ನಿಲ್ಲಲು ನೆಲೆಯಿಲ್ಲದೆ ಒದ್ದಾಡುವಂತೆ ಮಾಡಿದ್ದಾರೆ.
ದೇವ ನೀವು ಕರುಣೆಯಿಟ್ಟು ನನ್ನ ಮಕ್ಕಳಿಗೆ ಎಂದಿನಂತೆ ಸ್ವರ್ಗವು ದೊರಯುವಂತೆ ಆಶೀರ್ವದಿಸಬೇಕು ಎಂದು ಬೇಡಿದಳು.
ಆಗ ಶಿವನು ನನ್ನ ಅಂಶದಿಂದ ನಿನಗೆ ಒಬ್ಬ ಮಗ ಜನಿಸುತ್ತಾನೆ ಅವನು ರಾಕ್ಷಸರನ್ನು ಸೋಲಿಸಿ ಸ್ವರ್ಗವನ್ನು ನಿನ್ನ ಮಕ್ಕಳಿಗೆ ಕೊಡಿಸುತ್ತಾನೆ ಎಂದು ಅದಿತಿಗೆ ಹರಸಿದನು.
ಸ್ವಲ್ಪ ದಿನಗಳಲ್ಲಿ ಪರಮೇಶ್ವರನ ಅನುಗ್ರಹದಿಂದ ಅದಿತಿಗೆ ಒಬ್ಬ ಮಗ ಜನಿಸುತ್ತಾನೆ. ಅವನು ಹುಟ್ಟುವಾಗಲೇ ಫಳಫಳ ಹೊಳೆಯುತ್ತಿದ್ದು ಬೆಂಕಿಯಂತೆ ಪ್ರಜ್ವಲಿಸುತ್ತಿದ್ದನು ಆದುದರಿಂದ ಮಗುವಿಗೆ ‘ಸೂರ್ಯ’ ಎಂದು ಹೆಸರಿಟ್ಟರು.
ಇವನು ಮುಂದೆ ಬೆಳೆದು ದೊಡ್ಡವನಾಗಿ ಸಹೋದರರೊಂದಿಗೆ ಅಸುರರ ಮೇಲೆ ಯುದ್ಧ ಸಾರಿ, ಸ್ವರ್ಗದಿಂದ ಅಸುರರನ್ನು ಹೊರಗೆ ದಬ್ಬಿ ತನ್ನ ಸಹೋದರರಿಗೆ ಅವರ ಸ್ವರ್ಗವನ್ನು ಅವರಿಗೆ ಕೊಡಿಸುತ್ತಾನೆ. ಅಂದಿನಿಂದಲೇ ಸೂರ್ಯದೇವನು ಜಗತ್ತಿಗೆ ಬೆಳಕನ್ನು ಕೊಡುತ್ತಾ ಅನೇಕ ಜೀವ ಕೋಟಿಗಳಿಗೆ ಕಾರಣನಾಗುತ್ತಾನೆ.
ಸೂರ್ಯನು ಹುಟ್ಟುವ ಮೊದಲು, ಸೃಷ್ಟಿಯು ಆರಂಭವಾಗುವ ಸಮಯ, ಮೊದಲು ಜಗತ್ತು ಕತ್ತಲಲ್ಲಿ ತುಂಬಿತ್ತು. ಆಗ ವಿಷ್ಣು ತಾನೊಬ್ಬನೇ ಇದ್ದು ಅವನಿಗೆ ಜೊತೆ ಬೇಕು ಎನಿಸಿ ಹಲವಾರು ದೇವತೆಗಳನ್ನು ಸೃಷ್ಟಿಸಲು ಯೋಚಿಸುತ್ತಾನೆ.
ಹೀಗೆ ಯೋಚಿಸಿದಾಗ ಅವನ ನಾಭಿಯಿಂದ ಒಂದು ಕಮಲದ ಹೂವು ಹೊರಬರುತ್ತದೆ ಅದರೊಳಗಿಂದ ಬ್ರಹ್ಮ ಸೃಷ್ಟಿಯಾದನು.
ಬ್ರಹ್ಮ ಹುಟ್ಟಿದಾಗ ಜಗತ್ತೆಲ್ಲ ಕತ್ತಲೆ ಮಯವಾಗಿತ್ತು ಬ್ರಹ್ಮಾಂಡದಲ್ಲಿನ ನೀರು ತುಂಬಿತ್ತು. ಬ್ರಹ್ಮನು ಈ ಕತ್ತಲ ಪ್ರಪಂಚದಲ್ಲಿ ಸಾವಿರಾರು ವರುಷ ಕಳೆದನು.
ಹೀಗೆ ಕಳೆಯುತ್ತಿರುವಾಗ ಸಮುದ್ರದ ನೀರಿನಲ್ಲಿ ಬರುವ ತೊರೆಗಳೆಲ್ಲ ಒಂದೆಡೆ ಸಂಗ್ರಹವಾಗಿ ಮೊಟ್ಟೆಯ ರೂಪ ತಾಳುತ್ತದೆ.
ಬ್ರಹ್ಮನು ಆ ಮೊಟ್ಟೆಯನ್ನು ಒಡೆದಾಗ ಸೂರ್ಯದೇವನು ಹೊರಬರುತ್ತಾನೆ. ಸೂರ್ಯದೇವನು ಹುಟ್ಟುತ್ತಿದ್ದಂತೆಯೇ ಶಾಖ ಮತ್ತು ಬೆಳಕನ್ನು ಉತ್ಪತ್ತಿಮಾಡುತ್ತ ಬಂದನು. ಶಾಖ ಮತ್ತು ಬೆಳಕು ದಿನೇ ದಿನೇ ಹೆಚ್ಚಾಗತೊಡಗಿತ್ತು. ಇದರಿಂದ ನೀರೆಲ್ಲಾ ಬತ್ತಿತು. ಶಾಖ ತಡೆದುಕೊಳ್ಳಲಾಗದೆ ಎಲ್ಲಾ ಜೀವಿಗಳು ಒದ್ದಾಡಿದವು.
ಬ್ರಹ್ಮನಿಗೂ ಈ ತಾಪ ತಾಳಲಾರದೆ ಸೂರ್ಯದೇವನನ್ನು ಸಂಹರಿಸಿದನು.
ಇದರಿಂದ ಬೆಳಗ್ಗೆ ಇಲ್ಲದಂತಾಗಿ ದೇವತೆಗಳಿಗೆ ಹೀಗೆ ಬದುಕುವುದು ಅಸಾಧ್ಯವೆನಿಸಿತು. ಅವರೆಲ್ಲರೂ ಬೆಳಕು ಬೇಕೆಂದು ಶಿವನ ಮೊರೆ ಹೊಕ್ಕರು.
ಶಿವನು ಸೂರ್ಯದೇವನಿಗೆ ಸಾಮಾನ್ಯ ಶಾಖ ವಿರುವಂತೆ ಮಾಡಿ ಅದಿತಿಯ ಹೊಟ್ಟೆಯಲ್ಲಿ ಜನಿಸುವಂತೆ ಮಾಡುತ್ತಾನೆ.
ಸೂರ್ಯ ಎಂದರೆ ಬೆಳಕು.
ನವಗ್ರಹಗಳಲ್ಲಿ ಸೂರ್ಯ ಪ್ರಮುಖನಾದವನು. ಸೂರ್ಯನ ದೇವತೆ ಆದಿತ್ಯ. ಸೂರ್ಯನಿಗೆ ಹೊಂಬಣ್ಣದ ಕೂದಲುಗಳಿವೆ. ಬಂಗಾರ ಬಣ್ಣದ ಕೈಗಳಿವೆ. ಸೂರ್ಯನು ತನ್ನ ವಿಜಯೋತ್ಸವದ ರಥದಲ್ಲಿ ಸ್ವರ್ಗದಿಂದ ಇಳಿದು ಬರುತ್ತಾನೆ. ಏಳು ಕುದುರೆಗಳು ರಥವನ್ನು ಎಳೆಯುತ್ತವೆ. ಅವುಗಳ ತಲೆಯು ಕಾಮನಬಿಲ್ಲಿನ ಬಣ್ಣಗಳನ್ನು ಪ್ರತಿನಿಧಿಸುತ್ತವೆ.
ಸೂರ್ಯ ಪ್ರತಿನಿಧಿಸುವ ವಾರ ರವಿವಾರ. ಕಣ್ಣಿಗೆ ಕಾಣುವ ದೇವರು ಸೂರ್ಯ. ಪ್ರತಿದಿನ ಮುಂಜಾನೆ ಸೂರ್ಯೋದಯ ನೋಡಿ ಸ್ತುತಿಸಿ ನಮಸ್ಕರಿಸುತ್ತಾರೆ.
ಸೂರ್ಯರಾಧನೆ ಬಹಳ ಪ್ರಾಮುಖ್ಯ ಪಡೆದಿದೆ. ಸೂರ್ಯ ಜಗತ್ತಿಗೆ ಆಧಾರ.
ಜಯತು ಜಯತು ಸೂರ್ಯ, ಸಪ್ತ ಲೋಕೈಕ ದೀಪಂ ,
ಕಿರಣ ಶಮಿತ ಪಾಪಂ ಕ್ಲೇಶ ದುಃಖಸ್ಯ ನಾಶಂ,
ಅರುಣ ನಿಗಮ ಗಮ್ಯಂ, ಚಾದಿ ಮಾದಿತ್ಯ ಮೂರ್ತಿಂ,
ಸಕಲ ಭುವನ ವಂದ್ಯಂ ಭಾಸ್ಕರಂ ತಂ ನಮಾಮಿ!
