ಶ್ರೀ ಶನಿದೇವರ ಮಹಾತ್ಮೆಯ ಕಥೆ
ಶ್ರೀಶನಿದೇವರ ಮಹಾತ್ಮೆಯ ಕಥೆ ಮತ್ತು ಹಾಡು ಹೇಳುವೆ.
ಇದನ್ನು ಕೇಳುವುದರಿಂದ ಹೇಳುವುದರಿಂದ ಯಾವುದೇ ತರಹದ ಜಾತಕದಲ್ಲಿ ಶನಿದೋಷ ಇದ್ದರೆ ಸಂಪೂರ್ಣವಾಗಿ ಪರಿಹಾರವಾಗುತ್ತದೆ.
ಇದು ಶನಿದೇವರು ವಿಕ್ರಮನಿಗೆ ಕೊಟ್ಟ ಮಾತು. ಪ್ರತಿ ಶನಿವಾರ ಓದಿ ಒಂದು ಎಳ್ಳೆಣ್ಣೆಯಿಂದ ದೀಪ ಹಚ್ಚಿ
ಶನಿ ಮಹಾತ್ಮ
ವಿಕ್ರಮ ಅದ್ದೂರಿಯಾಗಿ ನವರಾತ್ರಿಯನ್ನು ಆಚರಿಸುತ್ತಿದ್ದನು ಮತ್ತು ಪ್ರತಿ ದಿನ ಒಂದೊಂದು ಗ್ರಹದ ಬಗ್ಗೆ ಮಂಥನವನ್ನು ಏರ್ಪಡಿಸುತ್ತಿದ್ದನು.
ಕೊನೆಯ ದಿನ ಅದು ಶನಿ ಮಹಾತ್ಮನ ಬಗೆಯದಾಗಿತ್ತು.
ಬ್ರಾಹ್ಮಣನು ಶನಿ ಮಹಾತ್ಮನ ಬಗ್ಗೆ ವಿವರಿಸುತ್ತ ಶನಿ ಮಹಾತ್ಮನ ಶಕ್ತಿಯ ಬಗ್ಗೆ ಮತ್ತು ಧರಣಿಯಲ್ಲಿ ಧರ್ಮ ಸ್ಥಾಪಿಸುವುದರಲ್ಲಿ ಆತನ ಪಾತ್ರದ ಬಗ್ಗೆ ಹೇಳುತ್ತಾನೆ.
ಆ ಬ್ರಾಹ್ಮಣನು ಆ ಸಮಾರಂಭದಲ್ಲಿ ವಿಕ್ರಮನ ಜಾತಕದ ಪ್ರಕಾರ ಶನಿ ಗ್ರಹವು 12ನೇ ಹಂತದಲ್ಲಿ ಪ್ರವೇಶಿಸುತ್ತಿದೆ ಇದು ಬಹಳ ಕೆಡುಕಿಗೆ ಕಾರಣವಾಗುತ್ತದೆ ಎಂದನು.
ಆದಾಗ್ಯೂ ವಿಕ್ರಮನಿಗೆ ತೃಪ್ತಿ ಆಗಲಿಲ್ಲ; ಶನಿ ಕೇವಲ ತೊಂದರೆ ಮಾಡುವವನಷ್ಟೇ ತನ್ನ ಸ್ವಂತ ತಂದೆ (ಸೂರ್ಯನಿಗೂ, ಗುರು (ಬೃಹಸ್ಪತಿ)ಗೂ ತೊಂದರೆ ಕೊಟ್ಟವನೆಂದ. ಆದುದರಿಂದ ತನ್ನ ಪೂಜೆ ಸ್ವೀಕರಿಸಲು ಶನಿಗೆ ಅರ್ಹತೆಯಿಲ್ಲವೆಂದು ಬಿಟ್ಟ ವಿಕ್ರಮ, ಶ್ರೀ ದೇವಿಯ ಸಂಪೂರ್ಣ ಆಶೀರ್ವಾದವು ತನಗಿದೆಯೆಂದು ವಿಕ್ರಮನಿಗೆ ಬಹಳ ಹೆಮ್ಮೆ ಇತ್ತು.
ಈ ವಿಷಯ ತಿಳಿದ ಶನಿದೇವ ನವರಾತ್ರಿಯ ಆಚರಣೆಯ ಈ ಸಂದರ್ಭದಲ್ಲಿ ಜನಸಮೂಹದ ಮುಂದೆ ತನಗೆ ಅವಮಾನವಾಯಿತೆಂದು ಶನಿ ಮಹಾತ್ಮನಿಗೆ ಕೋಪವುಂಟಾಯಿತು.
ವಿಕ್ರಮರಾಜನಿಗೆ ತನ್ನ ಪರಾಕ್ರಮವನ್ನು ತೋರಿಸುವದಾಗಿ ತನ್ನನ್ನು ಪೂಜಿಸುವಂತೆ ಮಾಡುವುದಾಗಿ ಶನಿ ಮಹಾತ್ಮ ಸವಾಲನ್ನೆಸೆದು ಶನಿ ಮಹಾತ್ಮ ಆಕಾಶದಲ್ಲಿ ಮಾಯವಾದಾಗ, ವಿಕ್ರಮ ಅದೊಂದು ಆಕಸ್ಮಿಕವಷ್ಟೆ ಮತ್ತು ತನಗಿರುವ ಆಶೀರ್ವಾದದಿಂದ ತನಗೊದಗುವ ಎಲ್ಲಾ ಸವಾಲುಗಳನ್ನು ಎದುರಿಸುವುದಾಗಿ ಹೇಳಿದ.
ಬ್ರಾಹ್ಮಣನು ಜಾತಕದ ಪ್ರಕಾರ ಹೇಳಿರುವುದು ಸರಿಯಿರಬಹುದು ಆದರೆ ಶನಿ ಅಷ್ಟೊಂದು ದೊಡ್ಡವನೆಂದು ತಾನು ಒಪ್ಪಿಕೊಳ್ಳಲು ಸಿದ್ಧನಿಲ್ಲ ಎಂದನು ವಿಕ್ರಮ.
“ಏನು ನಡೆಯಬೇಕೋ ಅದು ನಡೆದೇ ತೀರುತ್ತದೆ, ಏನು ನಡೆಯುವುದಿಲ್ಲವೋ ಅದು ನಡೆಯುವುದೇ ಇಲ್ಲಾ” ಆದುದರಿಂದ ತಾನು ಶನಿಯ ಸವಾಲನ್ನು ಸ್ವೀಕರಿಸುವುದಾಗಿಯೂ ಹೇಳಿದ.
ಒಂದು ದಿನ ಕುದುರೆ ಮಾರಾಟಗಾರನೊಬ್ಬ ಅರಮನೆಗೆ ಬಂದು ವಿಕ್ರಮನ ಸಾಮ್ರಾಜ್ಯದಲ್ಲಿ ಯಾರೂ ತನ್ನ ಕುದುರೆಯನ್ನು ಕೊಳ್ಳಲಾರರು ಎಂದು ಹೇಳಿದನು. ಈ ಕುದುರೆ ಕ್ಷಣಾರ್ಧದಲ್ಲಿ ಆಕಾಶಕ್ಕೆ ನೆಗೆದು ಮರು ಕ್ಷಣವೇ ಭೂಮಿಗೆ ಮರಳುವ ವಿಶೇಷಣವನ್ನು ಹೊಂದಿರುವುದಾಗಿ ಹೇಳಿದ. ಈ ರೀತಿ ಅದು ಹಾರಬಹುದು ಅಥವಾ ಭೂಮಿಯ ಮೇಲೆ ಓಡಬಹುದು. ವಿಕ್ರಮನಿಗೆ ಇದನ್ನು ನಂಬಲು ಸಿದ್ಧನಿರಲಿಲ್ಲ. ಅದಕ್ಕಾಗಿ ಒಮ್ಮೆ ಆ ಕುದುರೆಯ ಮೇಲೆ ಸವಾರಿ ಮಾಡಿ ಆನಂತರ ಕೊಂಡುಕೊಳ್ಳುವುದಾಗಿ ಹೇಳಿದನು.
ಮಾರಾಟಗಾರನು ಇದಕ್ಕೆ ಒಪ್ಪಿದ ಮೇಲೆ ವಿಕ್ರಮನು ಆ ಕುದುರೆ ಮೇಲೆ ಕುಳಿತು ಅದಕ್ಕೊಂದು ಚಾಟಿ ಏಟು ಕೊಟ್ಟನು.
ಮಾರಾಟಗಾರನು ಹೇಳಿದ ಹಾಗೆ ಆ ಕುದುರೆ ಅವನನ್ನು ಆಕಾಶಕ್ಕೆ ಎಳೆದುಕೊಂಡು ಹೋಯಿತು.
ಎರಡನೆಯ ಏಟಿಗೆ ಅದು ಭೂಮಿಗೆ ಬರಬೇಕಿತ್ತು ಆದರೆ ಬರಲಿಲ್ಲ. ಬದಲಾಗಿ ವಿಕ್ರಮನನ್ನು ದೂರಕ್ಕೆ ಕರೆದುಕೊಂಡು ಹೋಗಿ ಕಾಡಿನೊಳಕ್ಕೆ ಎಸೆಯಿತು.
ವಿಕ್ರಮನಿಗೆ ಗಾಯಗಳಾದವು ಮತ್ತು ಮರಳಿ ಬರಲು ದಾರಿ ಹುಡುಕುತ್ತಿದ್ದನು.
ಇದೆಲ್ಲಾ ವಿಧಿಯಷ್ಟೇ ಇನ್ನೇನೂ ಇರಲಾರದು ಎನ್ನುತ್ತ ಕುದುರೆ ಮಾರಾಟಗಾರನ ರೂಪದಲ್ಲಿ ಬಂದ ಶನಿ ಮಹಾತ್ಮನನ್ನು ಕಾಣಲು ವಿಫಲಗೊಂಡು, ಕಾಡಿನಲ್ಲಿ ದಾರಿಯನ್ನು ಅರಸುತ್ತಿದ್ದಾಗ ಡಕಾಯಿತರು ವಿಕ್ರಮನನ್ನು ದಾಳಿಮಾಡಿದರು. ಅವನನ್ನು ಥಳಿಸಿ ಅವನು ಧರಿಸಿದ್ದ ಆಭರಣಗಳನೆಲ್ಲಾ ದೋಚಿದರು.
ಇನ್ನೂ ಪರಿಸ್ಥಿಯ ಅರಿವಿಲ್ಲದ ವಿಕ್ರಮ ಕಳ್ಳರು ತನ್ನ ಕಿರೀಟವನಷ್ಟೇ ಒಯ್ದರು ತನ್ನ ತಲೆಯನ್ನಲ್ಲವಲ್ಲಾ ಎಂದನು.
ಬಾಯಾರಿಕೆಗೆ ಹತ್ತಿರ ಕಂಡ ನದಿಯೊಂದರ ಬಳಿ ಸಾಗಿದ್ದಾಗ ಕಾಲು ಜಾರಿ ವಿಕ್ರಮನನ್ನು ಎಷ್ಟೋ ದೂರಕ್ಕೆ ಎಳೆದುಕೊಂಡು ಹೋಗಿಬಿಟ್ಟಿತು.
ವಿಕ್ರಮನು ಬಹು ಕಷ್ಟದಿಂದ ಒಂದು ಪಟ್ಟಣದ ಬಳಿಗೆ ಬಂದನು, ಹಸಿದುಕೊಂಡು ಮರದ ನೆರಳಲ್ಲಿ ಕುಳಿತನು. ವಿಕ್ರಮ ಕುಳಿತ ಮರದ ಎದುರಿಗೆ ಒಂದು ಅಂಗಡಿ ಇತ್ತು, ಆ ಅಂಗಡಿ ಒಡೆಯನಿಗೆ ಸದಾ ಹಣದ್ದೇ ಚಿಂತೆ. ವಿಕ್ರಮನು ಆ ಮರದ ಕೆಳಗೆ ಕುಳಿತ್ತದ್ದೇ ತಡ ಆ ಅಂಗಡಿಗೆ ಅಧಿಕ ಜನರು ಬಂದು ಒಳ್ಳೆ ವ್ಯಾಪಾರವಾಯಿತು. ಹಣದ ದುರಾಸೆಯ ಆ ವರ್ತಕ ಇದನ್ನು ಗ್ರಹಿಸಿ, ವಿಕ್ರಮನನ್ನು ಮನೆಗೆ ಆಹ್ವಾನಿಸಿ ಊಟ ಬಡಿಸಿಸಿದನು.
ಅಂಗಡಿಯಲ್ಲಿ ಒಳ್ಳೆ ವ್ಯಾಪಾರ ಕಂಡ ವರ್ತಕನು ಇದನ್ನು ಮುಂದುವರೆಸುವ ದೆಸೆಯಿಂದ ವಿಕ್ರಮನನ್ನು ತನ್ನಲ್ಲೇ ಉಳಿಸಿಕೊಳ್ಳುವ ಯೋಜನೆಯನ್ನು ಹೂಡಿದನು.
ಅದರ ಪ್ರಕಾರ ತನ್ನ ಮಗಳನ್ನು ವಿಕ್ರಮನನ್ನು ಮದುವೆಯಾಗಲು ಹೇಳುತ್ತಾನೆ. ಊಟವಾದ ನಂತರ ವಿಕ್ರಮನು ಕೋಣೆಯೊಂದರಲ್ಲಿ ವಿಶ್ರಮಿಸುತ್ತಿದ್ದಾಗ ವರ್ತಕನ ಮಗಳು ಆ ಕೋಣೆಯನ್ನು ಪ್ರವೇಶಿಸಿದಳು.
ವಿಕ್ರಮನು ಪವಡಿಸಿದ ಹಾಸಿಗೆಯ ಬಳಿ ವಿಕ್ರಮನು ಎಚ್ಚರಗಗೊಳುವುದನ್ನೇ ಕಾಯುತ್ತಿದ್ದಳು. ನಿಧಾನಕ್ಕೆ ಅವಳಿಗೂ ನಿದ್ದೆ ಆವರಿಸಿದಂತಾಯಿತು. ತನ್ನ ಒಡವೆಗಳನೆಲ್ಲಾ ತೆಗೆದು ಬಾತುಕೋಳಿಯ ಚಿತ್ರಪಟ ನೇತು ಹಾಕಿದ್ದ ಮೊಳೆಗೆ ತಗುಲಿಹಾಕಿದಳು. ಆನಂತರ ನಿದ್ದೆಗೆ ಶರಣಾದಳು. ಎಚ್ಚರಗೊಂಡ ವಿಕ್ರಮನು ನೋಡುತ್ತಾನೆ,
ಚಿತ್ರಪಟದಲ್ಲಿ ಮೂಡಿದ್ದ ಬಾತುಕೋಳಿ ಆ ಪಟಕ್ಕೆ ತಗುಲಿಹಾಕಿದ್ದ ಒಡವೆಗಳನ್ನು ನುಂಗುತ್ತಿತ್ತು. ಆಶ್ಚರ್ಯದಿಂದ ನೋಡುತ್ತಿರುವಂತೆಯೇ ನಿದ್ದೆಯಿಂದೆದ್ದ ವರ್ತಕನ ಮಗಳು ತಾನಿಟ್ಟಿದ್ದ ಸ್ಥಳದಲ್ಲಿ ಒಡವೆಗಳು ಕಾಣೆಯಾಗಿರುವುದನ್ನು ಕಂಡು ತನ್ನ ತಂದೆಯನ್ನು ಕೂಗಿ ವಿಕ್ರಮನೇ ಅದನ್ನು ಕದ್ದಿರುವುದಾಗಿ ಹೇಳಿದಳು. ವಿಕ್ರಮನಿಗೆ ಆ ವ್ಯಾಪಾರಿ ಮನಬಂದಂತೆ ಥಳಿಸಿದರು ನಮ್ಮ ಒಡವೆಗಳನ್ನು ಕೊಟ್ಟು ಬಿಡು ಎಂದು ಗದರಿಸಿದರು ಅವನ ಬಳಿ ಇಲ್ಲವೆಂದಮೇಲೆ ಎಲ್ಲಿಂದ ಕೊಟ್ಟಾನು..
ವಿಕ್ರಮನನ್ನು ರಾಜನ ಬಳಿಗೆ ಕರೆದೊಯ್ಯಲಾಯಿತು. ವರ್ತಕನ ಆರೋಪವನ್ನು ಆಲಿಸಿದ ರಾಜನು ವಿಕ್ರಮನ ಕೈ-ಕಾಲುಗಳನ್ನು ಕತ್ತರಿಸಿ ಕಾಡಿಗೆ ಬಿಟ್ಟುಬಿಡಬೇಕೆಂದು ಆಜ್ಞಾಪಿಸಿದನು. ಕೈ-ಕಾಲುಗಳಿಲ್ಲದೆ ನರಳುತ್ತಿದ್ದ ವಿಕ್ರಮನನ್ನು, ಆ ದಾರಿಯಲ್ಲಿ ಉಜ್ಜಯಿನಿಯ ತನ್ನ ತವರು ಮನೆಯಿಂದ ಗಂಡನ ಮನೆಗೆ ಹಾದು ಹೋಗುತ್ತಿದ್ದ ಮಹಿಳೆಯೊಬ್ಬಳು ಗುರುತಿಸಿದಳು.
ಆತನ ಬಗ್ಗೆ ವಿಚಾರಿಸಿ, ಕುದುರೆ ಸವಾರಿ ಮಾಡುತ್ತ ಮಾಯವಾದ ರಾಜನ ಬಗ್ಗೆ ಉಜ್ಜಯಿನಿಯ ಜನರು ಆತಂಕಗೊಂಡಿದ್ದಾರೆ ಎಂದು ಹೇಳಿದಳು.
ಆಕೆಯ ಭಾವ-ಮೈದುನರಿಗೆ ವಿಕ್ರಮನನ್ನು ತನ್ನ ಮನೆಯಲ್ಲಿ ಉಳಿಸಿಕೊಳ್ಳಬೇಕೆಂದು ವಿನಂತಿಸಿಕೊಂಡಳು.
ಅವಳ ಕುಟುಂಬವು ಎಣ್ಣೆಯ ವ್ಯಾಪಾರ ವರ್ಗದವರಾಗಿದ್ದು; ವಿಕ್ರಮನು ಕೆಲಸ ಕೇಳಿದನು. ತಾನು ಹೊಲದಲ್ಲಿ ಕುಳಿತು ಎತ್ತುಗಳು ಗಾಣದ ಕೆಲಸ ಮಾಡುವೆ ಎಂದನು.
ಬಹು ಕಾಲದವರೆಗು ಇನ್ನೊಬ್ಬರ ಮನೆಯಲ್ಲಿ ಅತಿಥಿಯಾಗಿ ಉಳಿಯಲು ತನಗಷ್ಟವಿಲ್ಲ ಎಂದನು.
ಒಂದು ಸಂಜೆ ವಿಕ್ರಮನು ಕಾರ್ಯನಿರತನಾಗಿದ್ದಾಗ ಜೋರಾಗಿ ಬೀಸಿದ ಗಾಳಿಗೆ ದೀಪ ಹಾರಿತು. ಆಗ ದೀಪಕ ರಾಗವನ್ನು ಹಾಡಿ ದೀಪಗಳನ್ನು ಹೊತ್ತಿಸಿದನು.
ಈ ರಾಗವು ಪಟ್ಟಣದ ಎಲ್ಲಾ ದೀಪಗಳನ್ನು ಹೊತ್ತಿಸಿತು-ಆ ಪಟ್ಟಣದ ರಾಜಕುಮಾರಿ ದೀಪಕ ರಾಗವನ್ನು ಹಾಡಿ ದೀಪವನ್ನು ಹೊತ್ತಿಸಿದವರು ಯಾರೇ ಆಗಿರಲಿ ಅವರನ್ನು ತಾನು ಮದುವೆಯಾಗುವುದಾಗಿ ಘೋಶಿಸಿದಳು.
ಅಂಗವಿಕಲನಾದ ವಿಕ್ರಮನಿಂದಾಗಿ ದೀಪ ಹೊತ್ತಿದ್ದನ್ನು ಕಂಡು ಚಕಿತಳಾದರೂ ರಾಜಕುಮಾರಿ ಅವನನ್ನೇ ಮದುವೆಯಾಗುವುದಾಗಿ ನಿರ್ಧರಿಸಿದಳು.
ವಿಕ್ರಮನನ್ನು ನೋಡಿದ ರಾಜನಿಗೆ ತಾನು ಕಳ್ಳತನದ ಅಪರಾಧಕ್ಕೆ ಕೈ-ಕಾಲು ಮುರಿಸಿ ಕಾಡಿಗಟ್ಟಿದ್ದ ವ್ಯಕ್ತಿ ಈತನೇ ಎಂದು ನೆನಪಾಗಿ ಈಗ ತನ್ನ ಮಗಳನ್ನೇ ಮದುವೆಯಾಗಲು ಪ್ರಯತ್ನಿಸುತ್ತಿದ್ದಾನೆಂದು ಕೋಪೋದ್ರೇಕಗೊಂಡ.
ತನ್ನ ಕತ್ತಿಯನ್ನು ಹೊರತೆಗೆದು ವಿಕ್ರಮನ ತಲೆಯನ್ನು ತೆಗೆಯಲು ಮುಂದಾದ.
ಆ ಸಮಯದಲ್ಲಿ ವಿಕ್ರಮನಿಗೆ ಇದೆಲ್ಲಾ ಶನಿ ಮಹಾತ್ಮನ ಶಕ್ತಿಯಿಂದ ಉಂಟಾಗುತ್ತಿದೆ ಎಂದು ಅರಿವಾಗುತ್ತದೆ.
ಆಗ ಶನಿ ಮಹಾತ್ಮನನ್ನು ಪ್ರಾರ್ಥಿಸುತ್ತಾನೆ. ತನ್ನ ತಪ್ಪುಗಳನ್ನು ಒಪ್ಪಿಕೊಂಡು ಶನಿ ಮಹಾತ್ಮನ ಶಕ್ತಿಯ ಬಗ್ಗೆ ಹೆಮ್ಮೆ ಪಡುವುದಾಗಿ ಪ್ರಾರ್ಥಿಸುತ್ತಾನೆ.
ಶನಿ ಮಹಾತ್ಮ ಪ್ರತ್ಯಕ್ಷನಾಗಿ ವಿಕ್ರಮನ ಕೈ-ಕಾಲುಗಳನ್ನು ಮೊದಲಿನ ರೀತಿಯಲ್ಲೇ ಮಾಡಿ ಒಡವೆಗಳನ್ನು ಮತ್ತು ಆತನಿಗೆ ಸೇರಿದ್ದ ಎಲ್ಲವನ್ನು ಮರಳಿ ಕೊಟ್ಟನು.
ವಿಕ್ರಮನು ತಾನು ಅನುಭವಿಸಿದ ಹಿಂಸೆಯನ್ನು ಸಾಮಾನ್ಯರಿಗೆ ಕೊಡದಿರಲು ಪ್ರಾರ್ಥಿಸಿದನು.
ತನ್ನಂಥ ಬಲಿಷ್ಠನೇ ತಾಳುವುದಕ್ಕೆ ಆಗದಿದ್ದ ಮೇಲೆ ಇನ್ನು ಸಾಮಾನ್ಯರು ತಡೆದುಕೊಳ್ಳಲಾರರು ಎಂದನು.
ಸಾಮಾನ್ಯರಿಗೆ ನೋವು ಕೊಡದಿರಲು ಶನಿ ಮಹಾತ್ಮ ಒಪ್ಪಿದನು. ರಾಜನಿಗೆ ಇದೆಲ್ಲಾ ಗೊತ್ತಾಗಿ ತನ್ನ ರಾಜ್ಯವನ್ನು ವಿಕ್ರಮನ ಸಾಮ್ರಾಜ್ಯಕ್ಕೆ ಒಪ್ಪಿಸಿ ತನ್ನ ಮಗಳನ್ನು ಮದುವೆ ಮಾಡಿ ಕೊಡುವುದಾಗಿ ಹೇಳಿದನು.
ಇದೇ ಸಮಯಕ್ಕೆ ಹಿಂದೆ ಉಲ್ಲೇಖಿಸಿರುವ ವರ್ತಕನು ಅರಮನೆಗೆ ಓಡೋಡಿ ಬಂದು ಆಭರಣಗಳನ್ನು ನುಂಗಿದ ಚಿತ್ರ ಪಟದಲ್ಲಿದ್ದ ಬಾತು ಕೋಳಿ ತನ್ನ ಬಾಯಿಂದ ಆಭರಣಗಳನ್ನು ಕಕ್ಕಿತು ಎಂದು ಹೇಳಿದನು.
ವರ್ತಕನೂ ತನ್ನ ಮಗಳನ್ನು ರಾಜ ವಿಕ್ರಮನಿಗೆ ಧಾರೆ ಎರೆದು ಕೊಡುವುದಾಗಿ ಹೇಳುತ್ತಾನೆ.
ವಿಕ್ರಮನು ಉಜ್ಜಯಿನಿಗೆ ಮರಳಿ ಶನಿ ಮಹಾತ್ಮನ ಆಶೀರ್ವಾದದಿಂದ ಶ್ರೇಷ್ಠ ಸಾಮ್ರಾಟನೆನ್ನಿಸಿಕೊಂಡ.
ಶನಿ ಮಹಾತ್ಮೆಯನ್ನು ಹೇಳಿಕೇಳಿದವರಿಗೆ ಶನಿ ಯಾವತ್ತೂ ಕಾಡುವುದಿಲ್ಲ ಎಂದು ಶನಿ ದೇವರು ವಿಕ್ರಮ ರಾಜನಿಗೆ ಮಾತು ಕೊಡಲಾಯಿತು …
ಓಂ ಶನಿದೇವಾಯ ನಮಃ
ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ||
|| *ಶನಿದೇವರ ಮಂಗಳಂ ಹಾಡು ||
ಮಂಗಳಂ ಮಂಗಳಂ
ಶನಿದೇವರಿಗೆ ಜಯ ಮಂಗಳಂ ನಿತ್ಯ ಶುಭ ಮಂಗಲಂ ||ಪ||
ಸೂರ್ಯನ ಮಗನಾಗಿ ಜನಿಸಿದ ಧರೆಯೊಳು ಶ್ಯಾಮಲ ವರ್ಣವ ತಾಳಿದಗೆ ಧೈರ್ಯವಂತನಾಗಿ ಜಗವ ಅಲ್ಲಾಡಿಸಿದ ಜಗವೀರನಾದ ಶನಿದೇವರಿಗೆ ||
ಕಲಿಯುಗದೊಳು ವಿಕ್ರಮಾರ್ಕನ ಸಭೆಯೊಳು ನಲಿದಾಡಿ ವಿಪ್ರರು ಪೇಳುತಿರೆ ಗ್ರಹಗಳ ಸಾಮರ್ಥ್ಯ ಪೇಳುವ ಸಮಯದಿ ಕೊನೆಯಲಿ ವರ್ಣನೆ ಬಂದಾ ಶನಿದೇವರಿಗೆ ||
ಹುಟ್ಟಿದಾಗಲೆ ಶನಿದೇವರು ತಂದೆಗೆ ಕಡುಕಷ್ಟ ಕೊಟ್ಟನೆಂದೇಳುತಿರೆ ಭ್ರಷ್ಟನಾ ಸುದ್ದಿ ಬೇಡೆನ್ನಲ್
ವಿಕ್ರಮ ಅಷ್ಟರೊಳಗೆ ಬಂದಾ ಶನಿದೇವರಿಗೆ ||
ನಿಂದಾನೆ ವಿಕ್ರಮ ಬಂದಾನು ಸಭೆಯೊಳು ನಿಂದು ಆರ್ಭಟಿಸುತ್ತಾ ಗುಡಿಗುಡಿಸೇ ನಡುಗಿ ವಿಕ್ರಮ ತಾನು ಒಡನೆ ಪಾದವ ಕಟ್ಟಿ ಒಡನೆ ಚಿಮ್ಮಿದನಾ ಶನಿದೇವರಿಗೆ ||
ಆಡಿದ್ದು ತಪ್ಪೆಂದು ಕ್ಷಮಿಸೆಂದು ವಿಕ್ರಮ ಬೇಡಾಲು ಶನಿದೇವರ್ ತಾನು ಬಿಡಿಸುವೆ ಗರ್ವವ ವಿಕ್ರಮ ನೋಡೆಂದು ನಡೆದನಾ ಶನಿದೇವರಿಗೆ ll
ಬಂದಾನು ವಿಕ್ರಮ ಮನದಲ್ಲಿ ಚಿಂತಿಸೆ ಎಂತುಗೈವನೋ ಶಿವನೆ ಎನ್ನುತಿರೆ ಪಂಚವರ್ಣದ ಕುದುರೆ ವಂಚಿಸಿ ತಂದಾ ಕಾರ್ವಾನ್ ದೇಶದ ಶನಿದೇವರಿಗೆ ||
ನೋಡಿದ ವಿಕ್ರಮ ಮಾಯದ ಕುದುರೆಯ ಬೆಲೆಯೇನು ಹೇಳೆಂದು ಕೇಳುತಿರೆ ಸವಾರಿ ಮಾಡಿದ ಮೇಲೆ ಬೆಲೆಯ ಹೇಳುವೆನೆಂದು ಕುದುರೆ ಮೇಲೆರಿಸಿದಾ ಶನಿದೇವರಿಗೆ ||
ಏರೀದ ಕೂಡಲೆ ಹಾರಿತು ಗಗನಕ್ಕೆ ಭೋರೆಂದು ನಡೆಯುತ್ತಾ ರಾಜ್ಯ ಬಿಟ್ಟು ಅಲ್ಲಿ ಘೋರ ಅರಣ್ಯದ ಮಧ್ಯದ ನಿಶೆಯೊಳು ಕುದುರೆ ಇಳಿಸಿದನಾ ಶನಿದೇವರಿಗೆ ||
ಮಾಯವಾಯಿತು ಕುದುರೆ ನೋಡಿದ ವಿಕ್ರಮ ಹಾ! ಎಂದು ದುಃಖವ ಮಾಡುತಿರೆ ಮೂರು ದಿನ
ಅನ್ನ ನೀರಿಲ್ಲದೆ ಕಡು ಕಷ್ಟ ಪಡಿಸಿದನಾ ಶನಿದೇವರಿಗೆ ||
ದಾರೀಯ ಮರೆ ಮಾಡಿ ಘೋರ ಕಾಡಿನೊಳಗೆ ಗುಡ್ಡ ಬೆಟ್ಟಗಳನ್ನು ಹತ್ತುತಿರೆ ಅಲ್ಲಿ ದಾರಿಯ ತೋರಿಸಿ ತಾಮಲಿಂದಾ ಪುರವ ಸೇರಿಸಿದಾ ಶನಿದೇವರಿಗೆ ll
ಪಟ್ಟಣದೊಳು ಪೋಗಿ ಶೆಟ್ಟಿಯು ತಾ ಕಂಡು ಅಟ್ಟಹಾಸದಿ ಅಡಿಗೆ ಮಾಡಿಸಿದಾ ಊಟ ಮಾಡಿಸಿ
ಹಾಸು ಮಂಚದ ಮೇಲೆ
ಮಲಗಿಸಿದಾ ಶನಿದೇವರಿಗೆ ||
ಮಗಳಿಗೆ ತಕ್ಕಂಥ ವರನೆಂದು ಭಾವಿಸಿ ಮಗಳನ್ನು ಕಳುಹಲು ಮನೆಯೊಳಗೆ ಮುತ್ತಿನ
ಸರವನ್ನು ಗೂಟಕ್ಕೆ ಹಾಕಲು ಹಂಸನಾಗಿ ನುಂಗಿ ಹಾರಿಹೋದ ಶನಿದೇವರಿಗೆ ||
ಶೆಟ್ಟಿಯ ಮಗಳಿಗೆ ಎಚ್ಚರವಾಗಲು ಹಾರವ ಕಾಣದೆ ಕಳ್ಳನೆಂದೂ ದಂಡಿಸಿ ಎಳೆದೊಯ್ಯ ರಾಜನ ಬಳಿಗಾಗ ಕೈ ಕಾಲು ಕಡಿಸಿದಾ ಶನಿದೇವರಿಗೆ il೧೩||
ಕತ್ತರಿಸಿದ ಬಾಧೆ ರಕ್ತ ಹರಿಯುವ ಬಾಧೆ ಅನ್ನ ನೀರಿಲ್ಲದ ಹೊಟ್ಟೆ ಬಾಧೆ ತಡೆಯಲಾರದೆ ವಿಕ್ರಮಾದಿತ್ಯ ರಾಯನು ಬೇಡಲು ಶನಿದೇವರಿಗೆ ||
ಬೇಡಾಲು ವಿಕ್ರಮ ಹುಟ್ಟಿತು ಕರುಣೆಯು ಬಿಡಬೇಕು ಇವನನ್ನು ಎಂದೆನುತಾ ಅನ್ನ ನೀರಿನ
ಸುಖ ಆಗಲೆ ಮಾಡಿಸಿ ಉರಿ ತಣ್ಣಗೆ
ಮಾಡಿದನಾ ಶನಿದೇವರಿಗೆ ||
ಬಂದಾಳು ಉಜ್ಜಯಿನಿ ಪುರದಿಂದ ಮಾರ್ಗದಿ ಕಂಡಳು ರಾಜನ ತೇಲಿಸೊಸೆ ತಂದೆಯ ತೆರದಲ್ಲಿ ತಂದಾಳು ಮಂದಿರಕೆ ಅಲ್ಲಿ ಚಂದಾದ ಗಾಣವ
ಹೊಡೆಸಿದಾ ಶನಿದೇವರಿಗೆ ||
ಗಾಣಾದ ಮೇಲೇರಿ ಹಾಡಲು ರಾಗದಿ ಹತ್ತಿತು ದೀಪಗಳ ಬೆಳಕಾಗಲು ರಾಜನ ಮಗಳು
ಆಶ್ಚರ್ಯಪಡುತ ಅಲ್ಲಿಗೆ
ದೊರೆಯು ಕರೆಸಿದಾಗಲೆ
ಅಲ್ಲಿಗೆ ಬಂದಾ ಶನಿದೇವರಿಗೆ ||
ಮಗಳಿಗೆ ಬಂತೆನ್ನು ಮಾಯದ ನಿದ್ರೆಯು
ಪ್ರತ್ಯಕ್ಷವಾದರು ಶನಿದೇವರು
ಸತ್ಯಕೆ ಮೆಚ್ಚಿದೆ ವಿಕ್ರಮ ಬೇಡು ವರವ
ಕೊಡುವನೆಂದಾ ಶನಿದೇವರಿಗೆ ||
ನೋಡಿದ ವಿಕ್ರಮ ಎರಗೀದ ಪಾದಕ್ಕೆ ನಾಡೀನ ಜನರಿಗೆ ಪೀಡಿಸದೆ ಇಂಥ ಕಡು ಕಷ್ಟ ನರರಿಗೆ ಕೊಡುವುದಿಲ್ಲಾವೆಂದ ವರವ ಕೊಡು ಎಂದ ಶನಿದೇವರಿಗೆ ||
ವಿಕ್ರಮ ರಾಯನೆ ನಿನ್ನಯ ಚರಿತೆಯ ಯಾರು ಓದಿಸಿ ಕೇಳುವರೋ ಅಂಥವರನ್ನು ಪಿಡಿಯುದಿಲ್ಲವೆಂದು ವರವ ಕೊಡು ಎಂದ ಶನಿದೇವರಿಗೆ ||
ಶನಿವಾರದಾ ದಿವಸ ಓದುವ ನರರಿಗೆ ಧನಧಾನ್ಯ ಕೊಟ್ಟು ಪುತ್ತರ ಕೊಡುವೆನು ಪೂಜಿಸಿ ಇನ್ನು ಘನ ಸುಖ ಸಂಪತ್ತು ಕೊಡುವೆನೆಂದ ಶನಿದೇವರಿಗೆ ll
ಶಂಕರ ದಾಸಯ್ಯ ಹೇಳಿದ ಶನಿ ಮಹಿಮೆ
ಆದರದಿಂದಲಿ ಕೇಳಿದರೆ ಅವರ್ ಬೇಡಿದ ವರವ
ಕೊಡುವೆ ನಾನಿನ್ನು ಇದು ಸತ್ಯ ಸತ್ಯ ಎಂದ ಶನಿದೇವರಿಗೆ ||
ಮಂಗಳಂ ಮಂಗಳಂ ಶನಿದೇವರಿಗೆ | ಜಯ ಮಂಗಳಂ ಪ್ರತಿನಿತ್ಯ ಶುಭ ಮಂಗಳಂ ||
