ಧರ್ಮ ಅಧರ್ಮಗಳೊಳಗೆ ಕೃಷ್ಣನ ಧರ್ಮ
Index of Important Points
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || [ಭ.ಗೀ.ಅ.ಶ್ಲೋ.೪(೭)]
ಅರ್ಥ :
ಎಲೈ ಭಾರತಾ ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿ ಯಾದಾಗಲೆಲ್ಲ ನನ್ನ ಸ್ವರೂಪವನ್ನು ರಚಿಸುತ್ತೇನೆ ಅಂದರೆ ಸಾಕಾರ ರೂಪದಲ್ಲಿ ಜನರ ಮುಂದೆ ಪ್ರಕಟವಾಗುತ್ತೇನೆ
ಮಹಾಭಾರತದಲ್ಲಿ ಪಾಂಡವರು ಸಂಪೂರ್ಣ ಧರ್ಮದ ಹಾದಿಯಲ್ಲಿ ನಡೆದರೇ ಇಲ್ಲ ಆದರೆ ಅಧರ್ಮದ ಪಾಲು ಕೌರವರಲ್ಲಿ ಹೆಚ್ಚಾಗಿ ಇದ್ದದ್ದು ಮಾತ್ರ ಸತ್ಯ.
ಮಹಾಭಾರತ ಯುದ್ಧಕ್ಕೆ ಮೂಲ ಶಕುನಿ
ಹೌದು
ಶಕುನಿ ಮತ್ತು ಆತನ ಸೋದರರೊಂದಿಗೆ ನಡೆದ ಅನ್ಯಾಯ ಅದಕ್ಕಾಗಿ ಶಕುನಿಗೆ ಕೌರವರ ಮೇಲಿದ್ದ ಕೋಪವು ಮುಂದೆ ಅವರನ್ನೇ ಬಳಸಿ ಪಾಂಡವರಿಗೆ ಅನ್ಯಾಯ ಮಾಡಿಸಿ ಅವರ ಸರ್ವನಾಶಕ್ಕೆ ಕಾರಣನಾದ ಅದು ಕೃಷ್ಣನಿಗೂ ತಿಳಿದಿತ್ತು ಆದರೂ ಆತ ಸುಮ್ಮನುಳಿದ ಕಾರಣ ಶಕುನಿಗಾದ ಅನ್ಯಾಯಕ್ಕೆ ನ್ಯಾಯ ಒದಗಿಸುವುದಾಗಿತ್ತು.
ಕರ್ಣನೊಂದಿಗೆ ಪಾಂಡವರೇನು ಒಳ್ಳೆಯವರಾಗಿ ನಡೆದುಕೊಂಡರೇ ಆತನ ಧನುರ್ವಿದ್ಯೆ ಕಂಡು ಸಹಿಸದೆ ಆತನ ಕುಲದ ವಿಷಯವನೆತ್ತಿದರು ಅದಕ್ಕೆ ದುರ್ಯೋಧನನ್ನು ಕರ್ಣನನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಶಕುನಿ ನೀಡಿದ ಸಲಹೆಯಾಗಿತ್ತು
ಕರ್ಣನೂ ಕೌರವರೊಂದಿಗೆ ಸೇರಿದ ಇದೆಲ್ಲದರ ಹೊರತಾಗಿ ದುರ್ಯೋಧನ ಆಡಳಿತದಲ್ಲಿ ನಿಷ್ಠೆಯಿಂದಲೇ ಇದ್ದ ಪಾಂಡವರ ಬಗೆಗೆ ಆತನಲ್ಲಿ ಅಸುಯೆಯನ್ನ ಬೆಳೆಸಿದ್ದೇ ಶಕುನಿ ಕಾರಣ ಮತ್ತದೇಸೇಡು,
ಧರ್ಮಯುದ್ಧದಲ್ಲಿ ಕೃಷ್ಣ ಅಧರ್ಮ ತಂದನೇ? ಇಲ್ಲ ..ಧರ್ಮದಿಂದಲೇ ಯುದ್ಧ ನಡೆಸಿದ !
ಭೀಷ್ಮರಸೋಲು
ಭೀಷ್ಮರನ್ನು ಸೋಲಿಸದಿದ್ದರೆ ಶಕುನಿಗೆ ನ್ಯಾಯ ಒದಗಿಸುವುದು ಸಾಧ್ಯವಿರಲಿಲ್ಲ ಅಲ್ಲದೆ ಭೀಷ್ಮರು ಅಂಬೆಯ ವಿಷಯದಲ್ಲಿ ಮಾಡಿದ ತಪ್ಪು ಆಕೆಯ ಇಚ್ಛೆ ಅರಿಯದೆ ಕಾಶಿಯಿಂದ ಹೊತ್ತು ತಂದದ್ದು ಜೊತೆಗೆ ಆಕೆಯ ಬದುಕಿಗೆ ಸರಿಯಾದ ನ್ಯಾಯ ಒದಗಿಸದಿದ್ದದ್ದು ನಂತರ ಅಂಬೆಯು ಭೀಷ್ಮ ಮರಣದ ಪ್ರತಿಜ್ಞೆಮಾಡಿ ಪ್ರಾಣ ಬಿಟ್ಟಳು ಶಿಖಂಡಿಯಾಗಿ ಹುಟ್ಟಿದಳು
ಆಕೆಯ ಪ್ರತಿಜ್ಞೆಯನ್ನು ಪೂರ್ಣಗೊಳಿಸುವುದು ಕೃಷ್ಣನ ಜವಾಬ್ದಾರಿ ಆಗಿತ್ತು ಅಂಬೆಯೆ ಶಿಖಂಡಿಯಾಗಿ ಜನಿಸಿದಳು ಯುದ್ಧದಲ್ಲಿ ಭೀಷ್ಮರನ್ನ ಸೋಲಿಸಲು ಕೃಷ್ಣ ಸಹಾಯ ಮಾಡಿದ
ದ್ರೋಣರಮೃತ್ಯು
ದ್ರೋಣರ ಮೇಲಿನ ಸೇಡು ತೀರಿಸಿಕೊಳ್ಳಲೆಂದೇ ಹುಟ್ಟಿದ್ದ ದ್ರುಪದನಮಗ ದೃಷ್ಟದ್ಯುಮ್ನನನ್ನು ಬಳಸಿದ್ದು ಮತ್ತು ಸತ್ಯವನ್ನ ಸುಳ್ಳಿನಂತೆ ಬಿಂಬಿಸಿದನು “ಅಶ್ವತ್ಥಾಮೋ ಹತ ಕುಂಜರಃ” ಎಂದ ಧರ್ಮರಾಯನ ಮಾತನ್ನು ಪಾಂಚಜನ್ಯದ ಮೂಲಕ ಶಿಥಿಲಗೊಳಿಸಿದನು ಒಂದು ವೇಳೆ ಹೀಗೆ ಮಾಡದಿದ್ದರೆ ಶಕುನಿಗೆ ನ್ಯಾಯ ದೊರೆಯುತ್ತಿರಲಿಲ್ಲ ಅದಕ್ಕೆ ಕೃಷ್ಣ ಮಾಡಿದ ಉಪಾಯವೇ ಹೊರತು ಅಧರ್ಮವಲ್ಲ
#ಕರ್ಣನ_ವಿನಾಶ
ಕರ್ಣನ ರಥರಥದ ಚಕ್ರ ಹುಗಿದಾಗಲೇ ಅರ್ಜುನನಿಗೆ ಬಾಣ ಪ್ರಯೋಗ ಮಾಡೆಂದು
ಹೇಳಲು ಕಾರಣ ಕರ್ಣನ ಸ್ವಯಂಕೃತ ಅಪರಾಧಗಳು ದುರ್ಯೋಧನನ್ನು ಇನ್ನಷ್ಟು ಅಧರ್ಮಗಳ ಹಾದಿಗೆ ನೂಕಿದ್ದು ಮಾತು ಮಾತಿಗೆ ಪಾಂಡರ ವಿರುದ್ಧ ದ್ವೇಷ ಹುಟ್ಟಿಸಿದ್ದು ಕರ್ಣ ಮಾಡಿದ ತಪ್ಪುಗಳೆ.
ಇಷ್ಟಲ್ಲದೆ ಕರ್ಣನಿಗೆ ಹುಗಿದ ರಥವನ್ನ ಎತ್ತಿಕೊಳ್ಳಲು ಸಮಯ ನೀಡಿದ್ದರೆ ಯುದ್ಧ ಚಿತ್ರಣವೇ ಬದಲಾಗುತಿತ್ತು ಅದಕ್ಕೆ ಆತನನ್ನು ವಧಿಸಲು ಅದೇ ಸೂಕ್ತ ಸಮಯವಾಗಿತ್ತು
#ದುರ್ಯೋಧನ_ವಧೆ
ದುರ್ಯೋಧನ ಗಧಾಯುದ್ಧದಲ್ಲಿ ಮೊದಲು ಯುದ್ಧನಿಯಮ ಮುರಿದು ಭೀಮನ ಶಿರಕ್ಕೆ ಹೊಡೆದ ಭೀಮನೂ ಮೂರ್ಛಿತನಾದ ಎಚ್ಚರವಾದಾಗ ಮತ್ತೆ ಯುದ್ಧ ಆರಂಭವಾಗಿ ಭೀಮ ದುರ್ಯೋಧನನ ತೊಡೆಯನ್ನು ಮುರಿದ ಅಲ್ಲದೆ ಮತ್ತೆ ದೇಹದ ಉಳಿದ ಭಾಗವೆಲ್ಲ ವಜ್ರಕವಚವಾಗಿತ್ತು ಅದೂ ಗಾಂಧಾರಿಯ ತಪಃಶಕ್ತಿಯ ಕಾರಣಕ್ಕೆ..
ಏನೇ ಆಗಲಿ ಮಹಾಭಾರತ ರೋಚಕವಾದದ್ದೇ ಅಲ್ಲದೆ ಬದುಕಿಗೆ ಬೇಕಾದ ಸಂಪೂರ್ಣ ಧರ್ಮಶಾಸ್ತ್ರ.
ಭಗವದ್ಗೀತೆಯ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಉಪನಿಷತ್ತುಗಳ ಸಾರಸಂಗ್ರಹವೇ ಭಗವದ್ಗೀತೆ.
ಅದರ ಒಂದೊಂದು ಶ್ಲೋಕಗಳು ಒಂದೊಂದು ಬೆಂಕಿಯ ಕಡ್ಡಿಗಳಿದ್ದಂತೆ. ಒಂದು ಬೆಂಕಿಯ ಕಡ್ಡಿಯೂ ದೊಡ್ಡ ಕಾಡನ್ನೆ ಸುಡುವಂತೆ ಗೀತೆಯ ಒಂದು ಶ್ಲೋಕವೂ ನಮ್ಮ ಅನೇಕ ದುರ್ಗುಣಗಳನ್ನು ಸುಡಬಲ್ಲುದು.
ಭಗವದ್ಗೀತೆ ಹೇಳಿದ ನಿಷ್ಕಾಮಕರ್ಮದ ಸಂದೇಶ ಇಂದಿನ ಸಮಾಜಕ್ಕೆ ತೀರಾ ಅಗತ್ಯವಾಗಿದೆ.
ಅತಿಯಾದ ಆಸೆಯಿಂದ ಅನೀತಿ, ಅನ್ಯಾಯಗಳಿಗಾಗಿ ಅಧಿಕಾರವನ್ನು ದುರುಪಯೋಗ ಪಡಿಸುವ ಇಂದಿನ ಅಧಿಕಾರವರ್ಗ ಶ್ರೀಕೃಷ್ಣನ ಈ ಸಂದೇಶದ ಬಗ್ಗೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ಭಗವದ್ಗೀತೆ ಉದಿಸಿಬಂದ ಭಾರತಭೂಮಿಯ ಪ್ರಜೆಗಳು ನಾವು ಎಂದು ಹೇಳಿಕೊಳ್ಳುವ ಹಕ್ಕೆ ನಮಗಿಲ್ಲದಾಗುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ಈ ಪ್ರಜ್ಞೆಯನ್ನು ಅವಶ್ಯವಾಗಿ ಬೆಳೆಸಿಕೊಳ್ಳಬೇಕಾಗಿದೆ. ನಮಗೆ ಸಮಾಜದ ಹಿರಿಯರಿಗಿಂತಲೂ ಇಂದಿನ ಯುವ ಪೀಳಿಗೆಯ ಮೇಲೆ ಹೆಚ್ಚಿನ ಭರವಸೆ ಇದೆ.
ಭಗವದ್ಗೀತೆಯು ತತ್ತ್ವಶಾಸ್ತ್ರವೂ ಹೌದು; ಜೀವನ ಶಾಸ್ತ್ರವೂ ಹೌದು. ಆಧ್ಯಾತ್ಮಿಕ ತತ್ತ್ವ ಹಾಗೂ ಲೌಕಿಕ ಜೀವನ ಇವೆರಡನ್ನೂ ಇಷ್ಟು ಪರಿಷ್ಕೃತ ರೀತಿಯಿಂದ ಸಮನ್ವಯಗೊಳಿಸುವ ವಿಧಾನವನ್ನು ಬೇರೆ ಯಾವ ಗ್ರಂಥದಲ್ಲಿಯೂ ನಾವು ನೋಡಲಾರೆವು.
ಭಗವಂತನು ಅವತರಿಸುವ ಉದ್ದೇಶ
ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ
ತದಾತ್ಮಾನಂ ಸೃಜಾಮ್ಯಹಮ್
ಭಗವದ್ಗೀತೆ 4.7
“ಭರತ ವಂಶಜನಾದ ಅರ್ಜುನನೆ, ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೋ ಆಗ ಸ್ವಯಂ ಅವತಾರ ಮಾಡುತ್ತೇನೆ.”
ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ , ಭಗವದ್ಗೀತೆ 4.7
ನಾವು ಮಾಡಿದ ಪಾಪ ಕರ್ಮದ ಫಲವನ್ನು ನಾವೇ ಅನುಭವಿಸಬೇಕು
ಇಲ್ಲಿ ಕೃಷ್ಣ ಹೇಳುತ್ತಾನೆ: “ಯಾರ ಪಾಪವನ್ನೂ ನೀನು ತೆಗೆದುಕೊಳ್ಳಲು ಬರುವುದಿಲ್ಲ ಹಾಗೂ ಇನ್ನೊಬ್ಬರ ಪುಣ್ಯ ನಮಗೆ ಸಿಗುವುದಿಲ್ಲ
ನಾವು ಏನು ಅನುಭವಿಸುತ್ತೇವೇ ಅದು ನಾವು ಮಾಡಿದ ಕರ್ಮಫಲ” ಎಂದು.
ನಾSದತ್ತೇ ಕಸ್ಯಚಿತ್ ಪಾಪಂ ನ ಚೈವ ಸುಕೃತಂ ವಿಭುಃ ।
ಅಜ್ಞಾನೇನಾSವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ ॥೫.೧೫॥
ಈ ಶ್ಲೋಕವನ್ನು ‘ಜೀವದ’ ಪರವಾಗಿ ಮತ್ತು ‘ಭಗವಂತ’ನ ಪರವಾಗಿ ಎರಡು ರೂಪದಲ್ಲಿ ನೋಡಬಹುದು. ‘ಜೀವದ’ ಪರದಲ್ಲಿ ನೋಡಿದಾಗ ವಿಭುಃ ಎನ್ನುವ ಪದ ವಿಶಿಷ್ಟ, ವೈವಿಧ್ಯ, ವಿವಿಧ ಇತ್ಯಾದಿ ಅರ್ಥವನ್ನು ಕೊಡುತ್ತದೆ. ಜಡಕ್ಕಿಂತ ವಿಶಿಷ್ಟನಾಗಿ-ಇಚ್ಛೆ, ಯೋಚನೆ, ಜ್ಞಾನ ಇರುವ ಜೀವ ವಿಶಿಷ್ಟ. ಬೇರೆಬೇರೆ ಜನ್ಮದಲ್ಲಿ ಬೇರೆಬೇರೆ ಜೀವಿಯಾಗಿ ಹುಟ್ಟಬಹುದಾದ ಜೀವ, ಒಂದು ಜನ್ಮದಲ್ಲೇ ಅನೇಕ ವೈವಿಧ್ಯತೆಯನ್ನು ಕಾಣಬಹುದು.
ಉದಾಹರಣೆಗೆ: ಮನುಷ್ಯನಾದವನು ಶ್ರೀಮಂತನಾಗಿ ಸುಖದ ಸುಪ್ಪತ್ತಿಗೆಯಲ್ಲಿ ಬದುಕಬಹುದು, ದಾರಿದ್ರ್ಯದಲ್ಲಿರಬಹುದು. ದೊಡ್ಡ ವಿದ್ವಾಂಸನಾಗಿ ಬದುಕಬಹುದು ಅಥವಾ ಏನೂ ಅರಿವಿಲ್ಲದ ಮೂಢನಾಗಿ ಬದುಕಬಹುದು. ಈ ರೀತಿಯ ವೈವಿದ್ಯತೆ ಜೀವದಲ್ಲಿದೆ-ಅದಕ್ಕಾಗಿ ಜೀವ ವಿಭುಃ.
ಒಂದೇ ಜನ್ಮದಲ್ಲಿ ಹುಟ್ಟಿ ಸಾಯುವ ತನಕ ಅನೇಕ ಮಜಲುಗಳಲ್ಲಿ ಅನೇಕ ವೈವಿಧ್ಯತೆಯನ್ನು ನಾವು ಅನುಭವಿಸಬಹುದು. ಶ್ರೀಮಂತನಾಗಿದ್ದವನು ಎಲ್ಲವನ್ನೂ ಕಳೆದುಕೊಂಡು ದಾರಿದ್ರ್ಯವನ್ನು ಪಡೆಯಬಹುದು.
ಹೀಗಾದಾಗ ನಾವು ಅದರ ಹಿಂದೆ ಏನೇನೋ ಕಾರಣಗಳನ್ನು ಹುಡುಕುತ್ತೇವೆ. ಸಾಮಾನ್ಯವಾಗಿ ನಾವು ಮಾಡುವ ಮೊದಲ ಕೆಲಸ ಯಾವುದೋ ಜ್ಯೋತಿಷಿಗಳಲ್ಲಿ ಹೋಗಿ ಪ್ರಶ್ನೆ ಹಾಕುವುದು. ಹಾಗೆ ಕೇಳಿದಾಗ ಅವರು ಯಾರೋ ವಾಮಾಚಾರ (Witchcraft) ಮಾಡಿದ್ದರಿಂದ ನೀನು ನಷ್ಟ ಅನುಭವಿಸುತ್ತಿರುವುದು ಇತ್ಯಾದಿಯಾಗಿ ಹೇಳುತ್ತಾರೆ.
ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ: “ಯಾರ ಪಾಪವನ್ನೂ ನೀನು ತೆಗೆದುಕೊಳ್ಳಲು ಬರುವುದಿಲ್ಲ ಹಾಗೂ ಇನ್ನೊಬ್ಬರ ಪುಣ್ಯ ನಮಗೆ ಸಿಗುವುದಿಲ್ಲ. ನಾವು ಏನು ಅನುಭವಿಸುತ್ತೇವೇ ಅದು ನಾವು ಮಾಡಿದ ಕರ್ಮಫಲ” ಎಂದು. ಈ ಕಾರಣದಿಂದ ಇನ್ನೊಬ್ಬರಿಂದ ನಾವು ಹಾಳಾದೆವು ಎಂದು ತಿಳಿಯುವುದು ತಪ್ಪು ಎನ್ನುವುದು ಇಲ್ಲಿ ಸ್ಪಷ್ಟ.
ಹಾಗಿದ್ದರೆ ವಾಮಾಚಾರ ಇತ್ಯಾದಿ ಮಾಡಲು ಬರುವುದಿಲ್ಲವೋ, ಅದರಿಂದ ತೊಂದರೆ ಆಗುವುದು ಸುಳ್ಳೋ, ಎಂದರೆ – ನಮ್ಮ ಸುಕೃತದ ಫಲ ನಮ್ಮನ್ನು ರಕ್ಷಣೆ ಮಾಡುವಷ್ಟು ಕಾಲ ಯಾವ ವಾಮಾಚಾರವೂ ನಮ್ಮನ್ನು ಏನೂ ಮಾಡುವುದಿಲ್ಲ. ಇದನ್ನು ಜ್ಯೋತಿಷಿಗಳು “ನಿಮ್ಮ ಗ್ರಹಗತಿ ಚೆನ್ನಾಗಿತ್ತು ಆದ್ದರಿಂದ ಈವರೆಗೆ ಏನೂ ಆಗಿಲ್ಲ, ಆದರೆ ಈಗ ಅದು ಕೆಟ್ಟಿದೆ” ಇತ್ಯಾದಿಯಾಗಿ ಹೇಳುತ್ತಾರೆ.
ಇಲ್ಲಿ ಗ್ರಹಗತಿ ಕೆಟ್ಟಿದೆ ಎಂದರೆ ನಮ್ಮ ಪಾಪದ ಫಲ ಪಕ್ವವಾಗಿದೆ ಎಂದರ್ಥ.
ಆದ್ದರಿಂದ ಯಾರು ನಮ್ಮ ಮೇಲೆ ಕೃತ್ರಿಮ ಪ್ರಯೋಗ ಮಾಡಿದರೂ, ಅದರಿಂದ ನಮಗೆ ಅನಿಷ್ಠವಾಗಬೇಕಾದರೆ ನಾವು ಹಿಂದೆ ಅನಿಷ್ಠಕರ್ಮ ಮಾಡಿರಬೇಕು. ಅದರ ಫಲವಾಗಿ ಇಲ್ಲಿ ನಮಗೆ ಅದು ಅನುಭವಕ್ಕೆ ಬರುತ್ತದೆ.
ನಮ್ಮ ದೋಷಗಳು, ನಮ್ಮ ಬಡತನ, ನಮ್ಮ ಅಜ್ಞಾನ, ರೋಗ-ರುಜಿನ ಇತ್ಯಾದಿಗಳಿಗೆ ಇನ್ನೊಬ್ಬರನ್ನು ತೋರಿಸುವುದು, ಅವರಿಂದ ಹೀಗಾಯ್ತು ಎನ್ನುವುದು ತಪ್ಪು.
ನಮಗೆ ರೋಗ ಉಲ್ಬಣವಾಗಿ ಅದನ್ನು ಅನುಭವಿಸುವ ಪ್ರರಾಬ್ಧಕರ್ಮ ಇದ್ದರೆ ಅದನ್ನು ಯಾರಿಂದಲೂ ತಪ್ಪಿಸಲು ಬರುವುದಿಲ್ಲ. ಇದಕ್ಕಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ತಪ್ಪು. ಯಾರೋ ಮಾಡಿದ ಪಾಪಕರ್ಮದ ಫಲವನ್ನು ನಾನು ಅನುಭವಿಸುವುದಿಲ್ಲ. ನಾನು ಮಾಡಿದ ಪಾಪ ಕರ್ಮದ ಫಲವನ್ನೇ ನಾನು ಅನುಭವಿಸುವುದು.
ಭಕ್ತನ ಪರ ಪುರೋಹಿತ ಮಾಡುವ ಕರ್ಮ ಭಕ್ತನಿಗೆ ಬರುತ್ತದೆ; ತಂದೆಯ ಪರ ಮಗ ಮಾಡುವ ಕರ್ಮ ತಂದೆಗೆ ಬರಬಹುದು. ಇದು ಒಬ್ಬರ ಪರ ಇನ್ನೊಬ್ಬರು ಮಾಡಿದ ಕರ್ಮ. ಈ ವಿಚಾರವನ್ನು ಹೊರತುಪಡಿಸಿದರೆ (Exception) ನಾವು ಅನುಭವಿಸುವುದು ನಾವೇ ಮಾಡಿದ ಕರ್ಮಫಲವೇ ಹೊರತು ಇನ್ನೊಬ್ಬರದ್ದಲ್ಲ.
ಜನರಿಗೆ ಸರಿಯಾದ ಅರಿವಿಲ್ಲದ ಕಾರಣ ‘ಇನ್ನೊಬ್ಬರಿಂದ ನನಗೆ ತೊಂದರೆ ಆಯ್ತು’ ಎಂದು ತಿಳಿಯುತ್ತಾರೆ. ಇದಕ್ಕೆಲ್ಲಾ ಮೂಲಕಾರಣ ಕರ್ಮದ ಬಗ್ಗೆ, ಜೀವದಬಗ್ಗೆ, ಪರಮಾತ್ಮನ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದು. ಜ್ಞಾನವೆನ್ನುವುದು ಅಜ್ಞಾನದ ಮುಸುಕಿನಲ್ಲಿ ಮುಚ್ಚಿಹೋಗಿ ಅದರಿಂದ ತಪ್ಪು ತಿಳುವಳಿಕೆ ಹಾಗೂ ಮೋಹದ ಭ್ರಾಂತಿ ನಮ್ಮನ್ನು ಆವರಿಸಿರುವುದು.
ಈ ಶ್ಲೋಕದ ಇನ್ನೊಂದು ಮುಖ ನೋಡಿದರೆ ‘ವಿಭುಃ’ ಅಂದರೆ ಸರ್ವಸಮರ್ಥನಾದ, ಸರ್ವಗತನಾದ ಭಗವಂತ.
ಈ ಅರ್ಥದಲ್ಲಿ ನೋಡಿದಾಗ: ಭಗವಂತನಿಗೆ ಯಾವ ಕರ್ಮದ ಲೇಪವೂ ಇಲ್ಲ. ಆತ ಜೀವ ಸ್ವರೂಪದಲ್ಲಿನ ಅಂತರವನ್ನು ಗುರುತಿಸಿ ಅದಕ್ಕೆ ತಕ್ಕಂತೆಯೇ ಬೆಳವಣಿಗೆಯನ್ನು ಕೊಡುತ್ತಾನೆ. ಆತ ಎಂದೂ ಪಕ್ಷಪಾತಿ ಅಲ್ಲ.
(Equal treatment of unequal is discrimination). ಪಾಪ-ಪುಣ್ಯ ಎರಡರ ಲೇಪವೂ ಆತನಿಗಿಲ್ಲ. ಆದರೆ ಭಗವಂತನ ಈ ಕರ್ಮಸಿದ್ಧಾಂತ, ಆತನ ಸರ್ವಸಮರ್ಥತೆ, ಮತ್ತು ಅವನ ನಿರ್ಲಿಪ್ತತೆ, ಇದರ ಅರಿವು ಬಹಳ ಜನಕ್ಕೆ ತಿಳಿದಿಲ್ಲ-ಆದ್ದರಿಂದ ಭಗವಂತನ ಬಗೆಗೆ ಗೊಂದಲಕ್ಕೊಳಗಾಗುತ್ತಾರೆ.
ಭಗವಾನುವಾಚ ।
ಲೋಕೇsಸ್ಮಿನ್ ದ್ವಿವಿದಾ ನಿಷ್ಠಾ ಪುರಾ ಪ್ರೋಕ್ತಾ ಮಯಾsನಘ ।
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ ॥೩॥
ಶ್ರೀಭಗವದ್ಗೀತಾ
ಅಧ್ಯಾಯ – 03 : ಶ್ಲೋಕ – 03
ಭಗವಾನುವಾಚ ।
ಲೋಕೇsಸ್ಮಿನ್ ದ್ವಿವಿದಾ ನಿಷ್ಠಾ ಪುರಾ ಪ್ರೋಕ್ತಾ ಮಯಾsನಘ ।
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ ॥೩॥
ಭಗವಾನುವಾಚ-ಭಗವಂತ ನುಡಿದನು:
ಲೋಕೇ ಅಸ್ಮಿನ್ ದ್ವಿ ವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾ ಅನಘ
ಜ್ಞಾನಯೋಗೇನ ಸಾಂಖ್ಯಾನಾಮ್ ಕರ್ಮಯೋಗೇನ ಯೋಗಿನಾಮ್–
ಓ ಪಾಪದೂರನೆ, ಈ ಲೋಕದಲ್ಲಿ ಎರಡು ಬಗೆಯ ಇರವನ್ನು (ಮುಕ್ತಿಯನ್ನು) ನಾನು ಹಿಂದೆ ಹೇಳಿರುವೆ: ಜ್ಞಾನಮಾರ್ಗಿಗಳಿಗೆ ಜ್ಞಾನ ಪ್ರಧಾನವಾದ ಸಾಧನೆಯಿಂದ; ಕರ್ಮಮಾರ್ಗಿಗಳಿಗೆ ಕರ್ಮಪ್ರಧಾನವಾದ ಸಾಧನೆಯಿಂದ.
ಈ ಹಿಂದೆ ಜ್ಞಾನಮಾರ್ಗ ಮತ್ತು ಕರ್ಮಮಾರ್ಗದ ಬಗ್ಗೆ ಹೇಳಿದ್ದ ಕೃಷ್ಣ, ಯಾವ ನೆಲೆಯಲ್ಲಿ ಯಾವ ಸ್ತರದಲ್ಲಿ ಯಾವುದು ಮುಖ್ಯ ಎನ್ನುವ ವಿಚಾರವನ್ನು ಇಲ್ಲಿ ವಿವರಿಸುತ್ತಾನೆ. ಕರ್ಮಯೋಗದ ಬಗ್ಗೆ ವಿಶೇಷ ವಿವರಣೆ ಇಲ್ಲಿಂದ ಆರಂಭವಾಗುತ್ತದೆ.
ಈ ಶ್ಲೋಕದಲ್ಲಿ ‘ನಿಷ್ಠಾ’ ಎನ್ನುವ ಪದ ಬಳಕೆಯಾಗಿದೆ. ಇಲ್ಲಿ ‘ನಿಷ್ಠಾ’ ಎಂದರೆ ಜೀವನದ ನಡೆ ಅಥವಾ ಕೊನೇಯ ಸ್ಥಿತಿ-ಅದೇ ‘ಮೋಕ್ಷ’. ಕೃಷ್ಣ ಹೇಳುತ್ತಾನೆ: “ಸಾಧಕರಲ್ಲಿ ಎರಡು ವಿಧ -ಸಾಂಖ್ಯರು ಮತ್ತು ಯೋಗಿಗಳು” ಎಂದು. ಇಲ್ಲಿ ಸಾಂಖ್ಯರು ಎಂದರೆ ಜ್ಞಾನಮಾರ್ಗದಲ್ಲಿ ಸಾಧನೆ ಮಾಡುವವರು. ಯೋಗಿಗಳು ಎಂದರೆ ಕರ್ಮಸಾಧನೆಯ ಮೂಲಕ ಸಾಧನೆ ಮಾಡುವವರು.
ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ: “ಜ್ಞಾನದ ಸಾಧಕರು ಜ್ಞಾನ ಮಾರ್ಗದಲ್ಲಿ ಹೋಗಬೇಕು, ಕರ್ಮದ ಮೂಲಕ ಸಾಧನೆ ಮಾಡುವವರು ಕರ್ಮದ ದಾರಿಯಲ್ಲಿ ಹೋಗಬೇಕು” ಎಂದು ಹೇಳಿದಂತೆ ಕಾಣಿಸುತ್ತದೆ. ಇಲ್ಲಿ ಅರ್ಜುನ ಕರ್ಮದ ಮೂಲಕ ಸಾಧನೆ ಮಾಡಬೇಕಾದವ, ಆದ್ದರಿಂದ ಕೃಷ್ಣ ಆತನಲ್ಲಿ ಯುದ್ಧ ಮಾಡು ಎಂದು ಹೇಳಿದ ಎನ್ನುವಂತೆ ಕಾಣುತ್ತದೆ. ಆದರೆ ಅದು ನಿಜವಾದ ಅರ್ಥವಲ್ಲ. ನಿಮಗೆ ತಿಳಿದಂತೆ ಅರ್ಜುನ ಆ ಕಾಲದ ಮಹಾ ಜ್ಞಾನಿಗಳಲ್ಲಿ ಒಬ್ಬ. ಹಾಗಿರುವಾಗ ನಾವು ಈ ರೀತಿ ಮೇಲ್ನೋಟದ ಅರ್ಥವನ್ನು ಈ ಶ್ಲೋಕಕ್ಕೆ ಅರ್ಥೈಸಬಾರದು. ಇಲ್ಲಿ ಆಳವಾದ ಚಿಂತನೆ ಅಗತ್ಯ.
ಶಾಸ್ತ್ರಗಳಲ್ಲಿ ಹೇಳುವಂತೆ ಜ್ಞಾನದಿಂದ ಮಾತ್ರ ಮೋಕ್ಷಕ್ಕೆ ಹೋಗಲು ಸಾಧ್ಯ. ಮೋಕ್ಷಕ್ಕೆ ಬೇರೆ ಮಾರ್ಗವೇ ಇಲ್ಲ. ಅಂದಮೇಲೆ ಮೋಕ್ಷ ಸಾಧನೆಗೆ ಜ್ಞಾನ ಬೇಕೇಬೇಕು. ಕರ್ಮವಿರುವುದು ಜ್ಞಾನಕ್ಕಾಗಿ. ಜ್ಞಾನಕ್ಕೆ ಪೂರಕವಲ್ಲದ ಕರ್ಮ ಕರ್ಮವಲ್ಲ. ಬೆಳಗಿನಿಂದ ಸಂಜೆಯ ತನಕ ಜಪ ಮಣಿ ಹಿಡಿದು ಮಡಿ-ಮಡಿ ಎಂದು ಕುಳಿತರೆ ಅದು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಾರದು. ನಾವು ಏನೇ ಕರ್ಮ ಮಾಡುವುದಿದ್ದರೂ ಅದನ್ನು ತಿಳಿದು ಮಾಡಬೇಕು. ಮಾಡುವ ಕರ್ಮ ಜ್ಞಾನಕ್ಕೆ ಪೂರಕವಾಗಿರಬೇಕು. ಆದ್ದರಿಂದ ಬರೀ ಜ್ಞಾನಯೋಗವೆಂದಾಗಲಿ, ಬರೀ ಕರ್ಮಯೋಗವೆಂದಾಗಲಿ ಇಲ್ಲ. ಕರ್ಮವಿಲ್ಲದೆ ಜ್ಞಾನವಿಲ್ಲ, ಜ್ಞಾನವಿಲ್ಲದೆ ಕರ್ಮವಿಲ್ಲ. ಛಾ೦ಧೋಕ್ಯ ಉಪನಿಷತ್ತಿನಲ್ಲಿ ಹೇಳುವಂತೆ: “ಯದೇವ ವಿದ್ಯಯಾ ಕರೋತಿ ಶ್ರದ್ಧೆಯ ಉಪನಿಷದಾ, ತದೇವ ವೀರ್ಯವತ್ತರ೦ ಭವತಿ , ವಿಜ್ಞಾನ೦ ಯಜ್ಞಾ೦ ತನುತೇ”. ಅಂದರೆ “ನೀನು ಏನನ್ನೂ ಮಾಡಿದರೂ ತಿಳಿದು ಮಾಡು. ಜ್ಞಾನ ಪೂರ್ವಕವಾಗಿ ಮಾಡಿದ ಕರ್ಮ ಸಫಲ. ಇಲ್ಲದಿದ್ದರೆ ಅದು ವ್ಯರ್ಥ”. ಮಾಡುವ ಕರ್ಮವನ್ನು ಏತಕ್ಕಾಗಿ ಮಾಡುತ್ತಿದ್ದೇವೆ,ಮಾಡುವುದರ ಫಲವೇನು, ಮಾಡುವುದು ಹೇಗೆ-ಎನ್ನುವುದು ಗೊತ್ತಿರಬೇಕು. ಅಜ್ಞಾನದಿಂದ ಮಾಡುವ ಕರ್ಮ ವ್ಯರ್ಥವಾಗುತ್ತದೆ. ಇಲ್ಲಿ ಕೃಷ್ಣ ಹೇಳಿರುವುದು ಒಂದು ಕರ್ಮಪ್ರದವಾದ ಮಾರ್ಗ(ಜನಕಾದಿಗಳಂತೆ) ಹಾಗು ಇನ್ನೊಂದು ಜ್ಞಾನಪ್ರದವಾದ ಮಾರ್ಗ(ಸನಕಾದಿಗಳಂತೆ).
सर्वभूतानि कौन्तेय प्रकृतिं यान्ति मामिकाम् | कल्पक्षये पुनस्तानि कल्पादौ विसृजाम्यहम् || 7||
_” श्री मद्भगवद्गीता “
ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ ।
ಶ್ರೀ ಮದ್ಭಗವದ್ಗೀತಾ.
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ ॥೭
ಸೃಷ್ಟಿಯ ಕೊನೆಯಲ್ಲಿ ಎಲ್ಲ ವಸ್ತುಗಳೂ ನನ್ನದೇ ಆದ ಮೂಲ ಪ್ರಕೃತಿಯನ್ನು ಸೇರುತ್ತವೆ. ಸೃಷ್ಟಿಯ ಮೊದಲಲ್ಲಿ ಮರಳಿ ಅವನ್ನುನಾನು ನಿರ್ಮಿಸುತ್ತೇನೆ.
ಸೃಷ್ಟಿಯಾಗಿ 31,104 ಸಾವಿರ ಕೋಟಿ ವರ್ಷಗಳ ನಂತರ ಮಹಾಪ್ರಳಯ. ಇದು ಚತುರ್ಮುಖ ಬ್ರಹ್ಮನ ನೂರು ವರ್ಷ. ಇದನ್ನು ಕಲ್ಪಕ್ಷಯ ಎನ್ನುತ್ತಾರೆ. ಈ ಮಹಪ್ರಳಯದಲ್ಲಿ ಸತ್ಯಲೋಕದಿಂದ ಹಿಡಿದು ಪ್ರತಿಯೊಂದೂ ತನ್ನ ಸ್ಥೂಲ ರೂಪವನ್ನು ಕಳೆದುಕೊಂಡು ಸೂಕ್ಷ್ಮ ರೂಪದಲ್ಲಿ ಭಗವಂತನ ಅಧೀನವಾದ ಪ್ರಕೃತಿಯನ್ನು ಸೇರುತ್ತವೆ. ಎಲ್ಲಾ ಜೀವ ಜಾತಗಳೂ ಕೂಡಾ ತನ್ನ ಸ್ಥೂಲ ರೂಪವನ್ನು ಕಳೆದುಕೊಂಡು ಭಗವಂತನ ಉದರವನ್ನು ಸೇರುತ್ತದೆ. ಮತ್ತೆ 31,104 ಸಾವಿರ ಕೋಟಿ ವರ್ಷ ಪ್ರಳಯಕಾಲ. ನಂತರ ಮರಳಿ ಈ ಸೃಷ್ಟಿ ನಿರ್ಮಾಣವಾಗುತ್ತವೆ. ಅಂದರೆ ಮರಳಿ ಸೂಕ್ಷ್ಮರೂಪದಿಂದ ಸ್ಥೂಲರೂಪವನ್ನು ಪಡೆಯುತ್ತವೆ.
_” ಶ್ರೀ ಮದ್ಭಗವದ್ಗೀತಾ.”
ಭಗವಂತನ ಪರಿಶುದ್ಧಭಕ್ತರ ಕರುಣೆಯು, ಪವಿತ್ರವಾದ ಗಂಗಾನದಿಯ ನೀರಿಗಿಂತ ಹೆಚ್ಚು ಪ್ರಬಲವಾದದ್ದು!
ಯತ್ಪಾದ-ಸಂಶ್ರಯಾಃ ಸೂತ
ಶ್ರೀಮದ್ಭಾಗವತಮ್ 1.1.15
ಮುನಯಃ ಪ್ರಶಮಾಯನಾಃ
ಸದ್ಯಃ ಪುನಂತ್ಯುಪಸ್ಪೃಶ್ಟಾಃ
ಸ್ವರ್ಧುನ್ಯಾಪುನುಸೇವಯಾ
“ಓ ಸೂತ, ಭಗವಂತನ ಪಾದಕಮಲಗಳನ್ನು ಸಂಪೂರ್ಣವಾಗಿ ಆಶ್ರಯಿಸಿದ ಮಹಾಋಷಿಗಳು ತಮ್ಮ ಸಂಪರ್ಕಕ್ಕೆ ಬಂದವರನ್ನು ಒಮ್ಮೆಲೆ ಪವಿತ್ರಗೊಳಿಸಬಹುದು. ಆದರೆ ಗಂಗಾನದಿಯ ನೀರು ದೀರ್ಘಾವಧಿಯ ಬಳಕೆಯ ನಂತರವೇ ಪವಿತ್ರಗೊಳಿಸುತ್ತದೆ.“
ಕ್ರೋಧದ ಸಮಯ
ಪಿತಾಮಹ ಭೀಷ್ಮರು ತಮ್ಮ ಜೀವನದಲ್ಲಿ ಒಂದೇ ಒಂದು ಪಾಪವನ್ನೆಸಗಿದ್ದರು..
ಅದು ಯಾವ ಸಮಯದಲ್ಲಿ ಕ್ರೋಧಗೊಳ್ಳಬೇಕಿತ್ತೋ ಅಂತಹ ಸಮಯದಲ್ಲಿ ಅವರು ಕ್ರೋಧಗೊಳ್ಳಲಿಲ್ಲ..(ದ್ರೌಪದಿಯ ವಸ್ತ್ರಾಪಹರಣದ ಸಮಯ).
ಹಾಗೂ ಜಟಾಯು ಮಾಡಿದ ಒಂದೇ ಒಂದು ಪುಣ್ಯದ ಕೆಲಸವೆಂದರೆ, ಸರಿಯಾದ ಸಮಯದಲ್ಲಿ ಕ್ರೋಧಗೊಂಡದ್ದು..(ಮಾತೆ ಸೀತೆಯ ಅಪಹರಣದ ಸಮಯ)
ಸಮಯ ಬಂದಾಗ ಇಬ್ಬರೂ ಮರಣ ಹೊಂದಿದರು.ಆದರೆ..
‘ಅವರವರ ಕರ್ಮದ ಪರಿಣಾಮ ಒಬ್ಬರಿಗೆ ಶರ ಶಯ್ಯೆಯ ಮೇಲೆ ಮೃತ್ಯು ಪ್ರಾಪ್ತಿಯಾದರೆ, ಒಬ್ಬರಿಗೆ ಮರ್ಯಾದಾ ಪುರುಷೋತ್ತಮ, ಭಗವಾನ್ ಶ್ರೀರಾಮನ ತೊಡೆಯ ಮೇಲೆ ಮರಣ ಹೊಂದುವ ಪುಣ್ಯ ಪ್ರಾಪ್ತಿಯಾಯಿತು.’
ವೇದ ಹೇಳುತ್ತದೆ, “ಧರ್ಮ ಮತ್ತು ಮರ್ಯಾದೆಗಾಗಿ ನೀನು ಕ್ರೋಧಗೊಂಡಲ್ಲಿ , ಆ ಕ್ರೋಧವು ಪುಣ್ಯವೆಂದು ಪರಿಗಣಿಸಲ್ಪಡುವುದು.ಹಾಗೂ ಧರ್ಮ ಮತ್ತು ಮರ್ಯಾದೆಯನ್ನು ಉಳಿಸುವಲ್ಲಿ ನಿನ್ನ ಸಹನಶೀಲತೆಯು ವಿಫಲವಾದಲ್ಲಿ ಆ ಸಹನಶೀಲತೆಯು ಪಾಪವೆಂದು ಪರಿಗಣಿಸಲ್ಪಡುವುದು.”
ಭಗವದ್ಗೀತೆಯ 15 ಜೀವನ ಪಾಠಗಳು
ಭಗವದ್ಗೀತೆ ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ. ಅದೊಂದು ಪರಿಪೂರ್ಣ ವ್ಯಕ್ತಿತ್ವ ವಿಕಸನದ (ಬೆಸ್ಟ್ ಪರ್ಸನಾಲಿಟಿ ಡೆವಲಪ್‌ಮೆಂಟ್ ಹಾಗೂ ಮೋಟಿವೆಷನಲ್ ಬುಕ್) ಅತ್ಯದ್ಭುತ ಗ್ರಂಥ ಆಗಿದೆ. ಅದರಲ್ಲಿ ನಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರಗಳಿವೆ. ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಗಳಿವೆ. ನಮ್ಮಲ್ಲಿ ಕೆಲಸ ಮಾಡುವ ಇಚ್ಛಾಶಕ್ತಿ ಕಡಿಮೆಯಾದಾಗ ಪದೇಪದೇ ಭಗವದ್ಗೀತೆಯನ್ನು ಓದುವುದರಿಂದ, ಪ್ರತಿಸಲ ಓದಿದಾಗ ನಮಗೆ ಒಂದೊಂದು ಹೊಸ ವಿಷಯಗಳು ಹೊಳೆಯುತ್ತವೆ, ಹೊಸ ಶಕ್ತಿ ಸಿಗುತ್ತದೆ. ಆದ್ದರಿಂದ ನೀವು ಸಹ ತಪ್ಪದೇ ಆಗಾಗ ಭಗವದ್ಗೀತೆಯನ್ನು ಓದಿ. ಖಂಡಿತ ನಿಮ್ಮ ಲೈಫ್ ಸಕ್ಸೆಸ್ ಫುಲ್ಲಾಗುತ್ತದೆ. ಭಗವದ್ಗೀತೆಯಿಂದ ಕಲಿಯಬೇಕಾದ ಕೆಲವು ವಿಷಯಗಳು ಇಂತಿವೆ :
- 1) ಇಲ್ಲಿಯ ತನಕ ಆಗಿದ್ದೆಲ್ಲವೂ ಒಳ್ಳೆಯದೇ, ಸದ್ಯಕ್ಕೆ ಆಗುತ್ತಿರುವುದೆಲ್ಲವೂ ಒಳ್ಳೆಯದೇ, ಮುಂದೆ ಆಗುವುದೆಲ್ಲವೂ ಒಳ್ಳೆಯದೇ. ಆದಕಾರಣ ಯಾವುದಕ್ಕೂ ಜಾಸ್ತಿ ಚಿಂತಿಸದಿರಿ, ಜಾಸ್ತಿ ಕೊರಗದಿರಿ. ನಿಮ್ಮ ಕೆಲಸಗಳನ್ನು ನೀವು ಸರಿಯಾಗಿ ಮಾಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ.
- 2) ಈ ಜಗತ್ತು ನಶ್ವರವಾಗಿದೆ. ಈ ಭೂಮಿಗೆ ಬಂದಿದ್ದೆಲ್ಲವು ಒಂದಲ್ಲ ಒಂದಿನ ಮರಳಿ ಹೋಗುತ್ತದೆ. ನಮ್ಮ ದೇಹವು ನಶ್ವರವಾಗಿದೆ. ಆದರೆ ನಮ್ಮ ಆತ್ಮ ಅಮರವಾಗಿದೆ. ನಮ್ಮ ಆತ್ಮಕ್ಕೆ ಆದಿ ಅಂತ್ಯವಿಲ್ಲ. ನಮ್ಮ ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಸಾವಿಗೆ ಹೆದರಬೇಡಿ. ಏಕೆಂದರೆ ಅದೊಂದು ಪರಿವರ್ತನಾ ಹಂತವಷ್ಟೇ. Its a transitional phase between birth to death and death to birth.
- 3) ಬರಿಗೈಯಲ್ಲಿ ಬಂದ ನಾವು ಬರಿಗೈಯಲ್ಲಿ ಮರಳಿ ಹೋಗುತ್ತೇವೆ. ಯಾವುದು ಮತ್ತು ಯಾರೂ ನಮ್ಮೊಂದಿಗೆ ಶಾಶ್ವತವಾಗಿರಲ್ಲ. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಅದಕ್ಕಾಗಿ ನಾವು ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳದೇ ನಮ್ಮ ಧರ್ಮಕರ್ಮಗಳನ್ನು ಸರಿಯಾಗಿ ಮಾಡಬೇಕು. ಫಲಿತಾಂಶದ ಬಗ್ಗೆ ಹೆಚ್ಚಿಗೆ ಚಿಂತಿಸದೇ ನಾವು ನಮ್ಮ ಕೆಲಸವನ್ನು ನಿಯತ್ತಾಗಿ ಮಾಡಬೇಕು.
- 4) ನಮ್ಮ ಮನಸ್ಸು ನಮ್ಮ ಅಸಲಿ ಮಿತ್ರ ಹಾಗೂ ಅಸಲಿ ಶತ್ರುವಾಗಿದೆ. ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಅದಕ್ಕಿಂತ ಒಳ್ಳೇ ಮಿತ್ರ ಬೇರೆ ಯಾರೂ ಇಲ್ಲ. ಅದೇ ಮನಸ್ಸು ನಮ್ಮ ನಿಯಂತ್ರಣ ತಪ್ಪಿ ಹೋದರೆ ಅದಕ್ಕಿಂತ ಕೆಟ್ಟ ಶತ್ರು ಬೇರೆ ಯಾರೂ ಇಲ್ಲ. ನಾವು ನಮ್ಮ ಮನಸ್ಸನ್ನು ಗೆದ್ದರೆ ಎಲ್ಲವನ್ನೂ ಗೆದ್ದಂತೆ.
- 5) ಬದಲಾವಣೆಗಳಿಗೆ ಹೆದರಬೇಡಿ. ಬದಲಾವಣೆ ನಿಸರ್ಗದ ನಿಯಮವಾಗಿದೆ. ನೀವು ಬದಲಾವಣೆಗಳಿಗೆ ಸದಾಕಾಲ ಸಿದ್ಧರಾಗಿರಬೇಕು. ನೀವು ನಿಮ್ಮ ಕರ್ಮಗಳ ಅನುಸಾರವಾಗಿ ಮುಂದೆ ನೀವು ಬಿಲೆನಿಯರ್ ಆಗಬಹುದು ಅಥವಾ ಭಿಕ್ಷುಕರಾಗಬಹುದು.
- 6) ಕಾಮ ಕ್ರೋಧ ಲೋಭಗಳು ನಿಮ್ಮನ್ನು ನಿಮ್ಮಿಂದಲೇ ಹಾಳು ಮಾಡುತ್ತವೆ. ಕಾಮ ನಿಮ್ಮನ್ನು ಕರ್ತವ್ಯ ಭ್ರಷ್ಟನನ್ನಾಗಿ ಮಾಡುತ್ತದೆ. ಕ್ರೋಧ ನಿಮ್ಮ ಸಂಬಂಧಗಳನ್ನು ಕೆಡಿಸಿ ನಿಮ್ಮನ್ನು ಒಬ್ಬಂಟಿಯಾಗಿಸುತ್ತದೆ. ನಿಮ್ಮ ಕೋಪದ ಜ್ವಾಲೆ ನಿಮ್ಮನ್ನೇ ಸುಡುತ್ತದೆ. ಲೋಭ ನಿಮ್ಮ ಸಂತೋಷವನ್ನು ಕಿತ್ತುಕೊಳ್ಳುತ್ತದೆ. ಈ ಕಾಮ ಕ್ರೋಧ ಲೋಭಗಳು (Lust, Anger and Greed) ನರಕದ ಬಾಗಿಲುಗಳಿದ್ದಂತೆ. ಆದ್ದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು. ಕಾಮ ಕ್ರೋಧ ಲೋಭಗಳು ಎಂದೂ ಆರದ ಅಗ್ನಿಗಳಾಗಿವೆ. ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುವ ಮೂಲಕ ಇವುಗಳನ್ನು ಹಿಡಿತದಲ್ಲಿಡಬಹುದು.
- 7) ಎಲ್ಲದಕ್ಕೂ ಅನುಮಾನಪಡುವವರು ಎಂದಿಗೂ ಖುಷಿಯಾಗಿರಲಾರರು. ಸಂಶಯಾಸ್ಪದವಾದ ಮನಸ್ಸು ಎಂದಿಗೂ ಯಾವುದರ ಮೇಲೆಯೂ ಫೋಕಸ ಮಾಡಲಾಗದು. ಸಂಶಯಾಸ್ಪದವಾದ ಮನಸ್ಸು ಎಂದಿಗೂ ನಿಮ್ಮನ್ನು ನಿಮ್ಮ ಗುರಿ ತಲುಪಿಸಲ್ಲ. ಆದ್ದರಿಂದ ಸಂಶಯದಿಂದ ಹೊರಬನ್ನಿ. ಕೆಟ್ಟ ಆಲೋಚನೆಗಳಿಂದ ಹೊರ ಬನ್ನಿ. ಉಚ್ಛ ಯೋಚನೆಗಳನ್ನು ಮಾಡಿ. ಉಚ್ಛ ಕೆಲಸಗಳನ್ನು ಮಾಡಿ.
- 8).ಮನುಷ್ಯ ತಾನು ಮಾಡಿದ ಒಳ್ಳೆಯ ಕರ್ಮಗಳಿಂದ ಮೇಲಕ್ಕೆರಬಹುದು. ಇಲ್ಲವೇ ತನ್ನ ಕೆಟ್ಟ ಕರ್ಮಗಳಿಂದ ಕೆಳಗೆ ಬೀಳಬಹುದು. ಆದ್ದರಿಂದ ಮನುಷ್ಯನ ನಿಜವಾದ ಮಿತ್ರ ಹಾಗೂ ಶತ್ರು ಮನುಷ್ಯನೇ. ನಿಮ್ಮ ಮಿತ್ರನೂ ನೀವೇ, ಶತ್ರುನೂ ನೀವೇ.
- 9) ನಿಮ್ಮ ಮನಸ್ಸಲ್ಲಿ ಸ್ವಾರ್ಥವನ್ನು ಬೆಳೆಯಲು ಬಿಟ್ಟರೆ ನಿಮ್ಮ ಬುದ್ಧಿ ಮಂಕಾಗುತ್ತದೆ. ಮೈಮನಸ್ಸಿನ ತುಂಬ ಸ್ವಾರ್ಥವನ್ನು ತುಂಬಿಕೊಂಡಿರುವ ಜ್ಞಾನಿಯ ವಿದ್ಯೆ ಬುದ್ಧಿ ಪ್ರಯೋಜನಕ್ಕೆ ಬಾರವು. ಸ್ವಾರ್ಥ ತುಂಬಿಕೊಂಡಿರುವ ಜ್ಞಾನಿ ಹಾಗೂ ಧೂಳು ಬಿದ್ದಿರುವ ಕನ್ನಡಿ ಎರಡೂ ಒಂದೇ, ಎರಡೂ ಹೊಳೆಯರಾರವು.
- 10) ನಿಮ್ಮ ಕರ್ತವ್ಯದಿಂದ ದೂರ ಓಡಬೇಡಿ. ಅದರ ಪರಿಣಾಮ ಒಳ್ಳೆಯದಾಗಿರದಿದ್ದರೂ ಸಹ ಅದನ್ನು ಪೂರ್ಣಗೊಳಿಸಿ. ನಿಮ್ಮ ಕರ್ತವ್ಯವನ್ನು ನೀವು ಪ್ರಾಮಾಣಿಕವಾಗಿ ಮಾಡಿ. ಫಲಿತಾಂಶವನ್ನು ಭಗವಂತನಿಗೆ ಬಿಟ್ಟು ಬಿಡಿ. ಕೇವಲ ಕರ್ಮ ನಿಮ್ಮ ಕೈಯಲ್ಲಿದೆ, ಫಲ ನಿಮ್ಮ ಕೈಯಲಿಲ್ಲ.
- 11) ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ನೀವು ಜ್ಞಾನ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಲೇಬೇಕು. ಜ್ಞಾನ ಮತ್ತು ಶಿಸ್ತುಗಳು ನಿಮ್ಮನ್ನು ಅನಾವಶ್ಯಕ ಸಮಸ್ಯೆಗಳಿಂದ ರಕ್ಷಿಸುತ್ತವೆ.
- 12) ದೇವರನ್ನು ಸೇರಲು ಹಲವಾರು ದಾರಿಗಳಿವೆ. ನೀವು ನಿಮಗೆ ಸರಿಯೆನಿಸಿದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಭಕ್ತಿಯೋಗಗಳೆಲ್ಲವು ನಿಶ್ಚಿತವಾಗಿ ದೈವವನ್ನು ಸೇರುತ್ತವೆ. ನಿಮಗೆ ಸೂಕ್ತವಾದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ.
- 13) ಯಾವುದಾದರೂ ಅತಿಯಾದರೂ ಅಥವಾ ಕಮ್ಮಿಯಾದರೂ ನಿಮ್ಮ ಮನಸ್ಸಿನ ಸಮತೋಲನ ಕೆಡುತ್ತದೆ. ನಿಮ್ಮ ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ನೀವು ಸೇವಿಸುವ ಆಹಾರ, ತೆಗೆದುಕೊಳ್ಳುವ ವಿಶ್ರಾಂತಿ ಅಂದರೆ ನಿದ್ದೆ ಎಲ್ಲವೂ ಸಮತೋಲನದಲ್ಲಿರಬೇಕು. ಯುಕ್ತ ಆಹಾರ, ಯುಕ್ತ ವಿಹಾರ, ಯುಕ್ತ ವಿಚಾರಗಳನ್ನು ರೂಢಿಸಿಕೊಳ್ಳಿ.
- 14) ಭಾವನೆಗಳ ಆಧಾರದ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಭಾವನೆಗಳನ್ನು ಟೆಂಪರರಿ ಆಗಿವೆ. ಅತ್ಯಂತ ಖುಷಿಯಾಗಿದ್ದಾಗ ಅಥವಾ ದು:ಖದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರಗಳಲ್ಲಿ ಹೆಚ್ಚಿನವು ತಪ್ಪಾಗಿರುತ್ತವೆ. ಆದ್ದರಿಂದ ನೀವು ನಾರ್ಮಲ್ ಆಗಿದ್ದಾಗ ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕೋಪದಲ್ಲಿ ಅಥವಾ ಪ್ರೀತಿಯಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಎಮೋಷನಲ್ ಆದಾಗ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
- 15) ಬದುಕೊಂದು ಯುದ್ಧಭೂಮಿಯಾಗಿದೆ. ಧೈರ್ಯವಾಗಿ ಹೋರಾಡಿ. ಕಾಲ ಕೆಳಗಿನ ನೆಲ ಕುಸಿದು ಬಿದ್ದರೂ ಯಾರಿಂದಲೂ ಏನನ್ನೂ ಬಯಸದೆ, ಯಾರಿಗೂ ಹೆದರದೇ ಮುನ್ನುಗ್ಗಬೇಕು.
ಭಗವದ್ಗೀತೆಯ ಅಧ್ಯಾಯಗಳ ಸಾರಾಂಶ
ಭಗವದ್ಗೀತೆ ಓದಬೇಕು ಅಂತ ಬಹುತೇಕ ಹಿಂದೂಗಳಿಗೆ ಆಸೆ ಇರುತ್ತದೆ. ಭಗವದ್ಗೀತೆಯಲ್ಲಿ ಅಂಥದ್ದೇನಿದೆ ತಿಳ್ಕೋಬೇಕೆಂಬ ಕುತೂಹಲ. ಆದರೆ, 700 ಶ್ಲೋಕಗಳಿರುವ ಪುಸ್ತಕದ ಗಾತ್ರ ನೋಡಿ ಕೆಲವರು ಓದಲು ಹಿಂಜರಿದರೆ, ಮತ್ತೆ ಕೆಲವರು ಆ ಶ್ಲೋಕ ಗೀಕ ಎಲ್ಲ ಯಾರು ಓದ್ತಾರೆ ಅಂತ ಸುಮ್ನಾಗಿರ್ತಾರೆ. ನಿಮ್ಮಂಥವರಿಗಾಗಿಯೇ ಸರಳವಾಗಿ ಒಂದೊಂದು ಅಧ್ಯಾಯಗಳ ಸಾರವನ್ನೂ ಒಂದೆರಡು ಸಾಲಿನಲ್ಲಿ ಇಲ್ಲಿ ಕೊಡಲಾಗಿದೆ.
ಅಧ್ಯಾಯ 1:
ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ
ಅರ್ಜುನನ ದುಃಖ ಇಲ್ಲಿ ಮುಖ್ಯ ವಿಷಯ. ಯುದ್ಧಕ್ಕಾಗಿ ಬಂಧುಗಳನ್ನೇ ಕೊಲ್ಲಬೇಕಾದ ದುಗುಡ ಹಾಗೂ ಖಿನ್ನತೆ. ಧರ್ಮ ಹಾಳುಗೆಡವಿದ್ದನ್ನು ನೋಡುವುದಕ್ಕಿಂತ ಅವರೆಲ್ಲ ತನ್ನ ಬಂಧುಗಳೇ. ಅವರನ್ನು ಹೇಗೆ ಕೊಲ್ಲುವುದು ಎಂದು ಅರ್ಜುನ ಯೋಚಿಸುತ್ತಿರುತ್ತಾನೆ. ಆದರೆ, ಈ ಯೋಚನೆ ತಪ್ಪು. ಧರ್ಮವು ಈ ಭವಬಂಧನಗಳಿಗಿಂತ ಹೆಚ್ಚು. ತಪ್ಪಾಗಿ ಯೋಚಿಸುವುದರಿಂದ ತಪ್ಪಾದ ತೀರ್ಪು ಹೊರಬರುತ್ತದೆ ಎಂಬುದನ್ನು ಶ್ರೀಕೃಷ್ಣ ವಿವರಿಸುತ್ತಾನೆ. ಆದರೆ, ಅರ್ಜುನನಿಗೆ ಸಮಧಾನವಾಗುವುದಿಲ್ಲ. ಆತ ಗೊಂದಲ ಹಾಗೂ ದುಃಖದಿಂದ ಕುಳಿತುಕೊಳ್ಳುತ್ತಾನೆ.
ಅಧ್ಯಾಯ 2:
ಸರಿಯಾದ ಜ್ಞಾನವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ
ಕೃಷ್ಣನು ಅರ್ಜುನನಿಗೆ ಅವನೆಲ್ಲ ದುಃಖದುಮ್ಮಾನ, ಸಮಸ್ಯೆಗಳಿಗೆ ಅಜ್ಞಾನವೇ ಕಾರಣ ಎಂಬುದನ್ನು ತಿಳಿಸುತ್ತಾನೆ. ಭೀಷ್ಮನಿಂದ ಹಿಡಿದು ಯಾರೊಬ್ಬರ ಆತ್ಮಗಳನ್ನೂ ನಾಶಪಡಿಸಲಾಗುವುದಿಲ್ಲ. ಹಾಗಾಗಿ ಅವರೆಲ್ಲ ಶಾಶ್ವತವಾಗಿರುತ್ತಾರೆ. ಯುದ್ಧವನ್ನು ದೂರವಿಡುವುದರಿಂದ ನಿನ್ನ ಧರ್ಮವನ್ನೇ ದೂರವಿಟ್ಟಂತಾಗುತ್ತದೆ. ಅದು ಪಾಪಕಾರ್ಯ. ಹೋರಾಡದಿದ್ದರೆ ಆತನೊಬ್ಬ ಹೇಡಿ ಎನಿಸಿಕೊಳ್ಳುತ್ತಾನೆ ಎಂದು ಎಚ್ಚರಿಸುತ್ತಾನೆ ಕೃಷ್ಣ.
ಅಧ್ಯಾಯ 3:
ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿಸ್ವಾರ್ಥವೊಂದೇ ದಾರಿ
ಕೃಷ್ಣ ಇಲ್ಲಿ ನಿಸ್ವಾರ್ಥ ಸೇವೆಯಾದ ಕರ್ಮಯೋಗದ ಕುರಿತು ಮಾತನಾಡುತ್ತಾನೆ. ಕರ್ಮಯೋಗಿಯು ಧರ್ಮದ ಆಧ್ಯಾತ್ಮಕ್ಕೆ ಬೆಲೆ ಕೊಟ್ಟು ತನ್ನೆಲ್ಲ ಕೆಲಸಗಳನ್ನು ದೇವರಿಗೆ ಸಮರ್ಪಿಸುತ್ತಾನೆ. ಫಲಿತಾಂಶದ ಬಗ್ಗೆ ಯೋಚಿಸದೆ ತನ್ನ ಪಾಡಿಗೆ ತಾನು ಶಾಂತಚಿತ್ತದಿಂದ ಕೆಲಸ ಮಾಡಿಕೊಂಡು ಹೋಗುತ್ತಾನೆ. ನಮ್ಮ ಆಸೆ, ಸಿಟ್ಟು, ಅತಿಯಾದ ಪ್ರೀತಿಯೇ ನಮ್ಮ ನಿಜವಾದ ಶತ್ರುಗಳು. ಇವು ನಮ್ಮನ್ನು ಸ್ವಾರ್ಥಿಗಳಾಗಿಸಿ ಶಾಂತಿಯನ್ನು ಕಸಿದುಕೊಳ್ಳುತ್ತದೆ ಎಂದು ತಿಳಿಸುತ್ತಾನೆ.
ಅಧ್ಯಾಯ 4: ಧರ್ಮಸಂಸ್ಥಾಪನೆಗೆ ಭಗವಂತ ಅವತಾರ ಎತ್ತುತ್ತಾನೆ
ಧರ್ಮಕ್ಕೆ ಹಾನಿಯಾದಾಗ ಭಗವಂತನು ಸಜ್ಜನರನ್ನು ಕಾಪಾಡಿ, ದುರ್ಜನರನ್ನು ನಾಶ ಮಾಡಲು, ಪ್ರತಿ ಯುಗದಲ್ಲಿ ಭೂಮಿಯಲ್ಲಿ ಅವತರಿಸುತ್ತಾನೆ ಎಂದು ಕೃಷ್ಣ ವಿವರಿಸುತ್ತಾನೆ. ಅಷ್ಟೇ ಅಲ್ಲ, ಭಗವಂತನ ಈ ಜನ್ಮ ರಹಸ್ಯವನ್ನು ಅರಿತವರು ಮೋಕ್ಷ ಪ್ರದರು ಎಂದು ತಿಳಿಸುತ್ತಾನೆ.
ಅಧ್ಯಾಯ 5:
ಅಹಂಕಾರದಿಂದ ಹೊರ ಬಂದು ಫಲದಾಸೆ ಇಲ್ಲದೆ ಕರ್ಮ ಮಾಡು
ಹೇಗೆ ಕರ್ತವ್ಯ ನಿಭಾಯಿಸುತ್ತಲೇ ಫಲದಾಸೆಯಿಲ್ಲದೆ ಸನ್ಯಾಸಿಯಂತಿರುವುದು ಎಂದು ಅರ್ಜುನ ಪ್ರಶ್ನಿಸುತ್ತಾನೆ. ಇದಕ್ಕೆ ಕೃಷ್ಣನು ನಿಜವಾದದ ಕರ್ಮಯೋಗಿಯು ಫಲಿತಾಂಶದ ಬಗ್ಗೆ ಯೋಚಿಸದೆ ಫಲವನ್ನು ದೇವರಿಗೆ ಬಿಟ್ಟು ತಾನು ಕರ್ತವ್ಯ ನಿಭಾಯಿಸುತ್ತಾನೆ. ಈ ಮನಸ್ಥಿತಿಯಿಂದಾಗಿ ಆತ ಸ್ವಯಂ ನಿಯಂತ್ರಣ ಸಾಧಿಸಿ ಅಹಂಕಾರದಿಂದ ಹೊರಬರಬಲ್ಲ ಎಂದು ಹೇಳುತ್ತಾನೆ.
ಅಧ್ಯಾಯ 6:
ಧ್ಯಾನಸಾಧಕನಿಗೆ ಕರ್ಮ ಸಾಧನೆ ಸಾಧ್ಯ
ಧ್ಯಾನದ ಕುರಿತು ಇಲ್ಲಿ ಕೃಷ್ಣ ಹೇಳುತ್ತಾನೆ. ಧ್ಯಾನವನ್ನು ಅಭ್ಯಾಸ ಮಾಡುವವನು ಏಕಾಂಗಿಯಾಗಿ, ದೇಹವನ್ನೂ ಮನಸ್ಸನ್ನೂ ಬಿಗಿಹಿಡಿದು, ಮನಸ್ಸನ್ನು ಪರಮಾತ್ಮನಲ್ಲಿ ಕೂಡಿಸಿಕೊಂಡಿರಬೇಕು. ಪ್ರಯತ್ನದಿಂದಲೇ ಇಂದ್ರಿಯಗಳನ್ನೂ, ಮನಸ್ಸನ್ನು ಗೆಲ್ಲಬೇಕು ಎನ್ನುತ್ತಾನೆ.
ಅಧ್ಯಾಯ 7:
ನೀನಾರು ಎಂದು ತಿಳಿದುಕೋ.
ಧ್ಯಾನ ಮಾಡುತ್ತಿರುವುದರಿಂದ ನಿನಗೆ ನೀನು ಯಾರೆಂಬುದು ಅರಿವಾಗಬೇಕು. ಜ್ಞಾನಿಯು ನನ್ನಲ್ಲಿ ಲೀನನಾಗುತ್ತಾನೆ ಎಂಬ ತತ್ವ ಬೋಧಿಸುತ್ತಾನೆ.
ಅಧ್ಯಾಯ 8:
ಪ್ರಯತ್ನ ಬಿಡಬೇಡ
ದೇವರ ಧ್ಯಾನದಲ್ಲಿ ಪ್ರಾಮಾಣಿಕವಾಗಿ ತೊಡಗಿರುವವನಿಗೆ ದೇವರು ಸಿಕ್ಕೇ ಸಿಗುತ್ತಾನೆ. ಪ್ರಯತ್ನ ಬಿಡಕೂಡದು ಎಂದು ಹೇಳುತ್ತಾನೆ.
ಅಧ್ಯಾಯ 9:
ದೇವರ ಧ್ಯಾನದಿಂದ ನನ್ನ ಸೇರಬಹುದು
ಈ ಜಗತ್ತೆಲ್ಲಾ ಕಣ್ಣಿಗೆ ಕಾಣದ ನನ್ನಿಂದ ತುಂಬಿರುವುದು. ಈ ಎಲ್ಲಾ ವಸ್ತುಗಳೂ ನನ್ನಲ್ಲಿ ಇರುವುವು, ಆದರೆ ನಾನು ಅವುಗಳಲ್ಲಿ ಇಲ್ಲ.ಯಾವ ಜನರು, ತಮ್ಮ ಆತ್ಮವೆಂದು ನನ್ನನ್ನು ಧ್ಯಾನ ಮಾಡುತ್ತಾರೋ, ನಾನು ಅವರ ಯೋಗಕ್ಷೇಮ ಹೊರೆ ಹೊರುತ್ತೇನೆ ಎನ್ನುತ್ತಾನೆ.
ಅಧ್ಯಾಯ 10:
ಕರ್ಮಕ್ಕೆ ತಕ್ಕ ಫಲ ಪ್ರಾಪ್ತಿ
ಭೂಮಿಯ ಪ್ರತಿಯೊಂದು ಚರಾಚರಗಳಲ್ಲೂ ನಾನಿದ್ದೇನೆ. ನಿನ್ನ ಸುತ್ತಲ ಬದುಕು ಸಂಪೂರ್ಣ ಪವಾಡಗಳಿಂದಲೇ ತುಂಬಿದೆ. ಅವುಗಳನ್ನು ಕಂಡು ಖುಷಿಪಡು. ಜಗತ್ತಿನಲ್ಲಿ ದೇವರಿರುವುದಲ್ಲ, ದೇವರೊಳಗೆ ಸಂಪೂರ್ಣ ಜಗತ್ತಿದೆ. ನಿನ್ನ ಕರ್ಮಕ್ಕೆ ತಕ್ಕ ಫಲವನ್ನು ನಾನು ನೀಡಿಯೇ ತೀರುತ್ತೇನೆ.
ಅಧ್ಯಾಯ 11:
ವಿಶ್ವರೂಪ ದರ್ಶನ
ಈಶ್ವರತ್ವದ ರೂಪವನ್ನು ನೋಡುವ ಆಸೆಯನ್ನು ಅರ್ಜುನ ವ್ಯಕ್ತಪಡಿಸುತ್ತಾನೆ. ಇದರಿಂದ ಕೃಷ್ಣನು ತನ್ನ ಆದಿಅಂತ್ಯವಿಲ್ಲದ ಪ್ರಕಾಶಮಾನವಾದ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಇದನ್ನು ನೋಡಿ ಅರ್ಜುನ ಬೆರಗಾಗಿ ಶರಣಾಗುತ್ತಾನೆ. ಸತ್ಯವನ್ನು ಅರಿಯದಿದ್ದುದಕ್ಕೆ ಕ್ಷಮೆ ಯಾಚಿಸುತ್ತಾನೆ.
ಅಧ್ಯಾಯ 12:
ವೈರಾಗ್ಯದಿಂದ ಧ್ಯಾನಿಸುವವರೇ ಯೋಗಿ
ಯಾರು ಭಗವಂತನಲ್ಲಿ ಹೆಚ್ಚು ಪ್ರೀತಿಯನ್ನಿಟ್ಟು ವಿಶ್ವರೂಪವನ್ನು ಧ್ಯಾನಿಸುತ್ತಾ ಉಪಾಸನೆ ಮಾಡುವರೋ ಅವರು ಹೆಚ್ಚಿನ ಯೋಗಿಗಳು. ವಿವೇಕ ವೈರಾಗ್ಯಗಳಿಂದ ಅದನ್ನು ಅಭ್ಯಾ ಸಮಾಡಬೇಕು. ಅದು ಕಷ್ಟವಾದರೆ, ಭಗವಂತನ ಪ್ರೀತ್ಯರ್ಥವಾಗಿ ಕರ್ಮಗಳನ್ನು ಮಾಡು. ಅದೂ ಕಷ್ಟವಾದರೆ. ಕರ್ಮಗಳ ಫಲಗಳ ಬಯಕೆಗಳನ್ನೆಲ್ಲಾ ಬಿಡು ಎನ್ನುತ್ತಾನೆ.
ಅಧ್ಯಾಯ 13:
ಮಾಯೆಯಿಂದ ಕಳಚಿಕೊಂಡು ಭಗವಂತನನ್ನು ಭಜಿಸು
ಈ ಬ್ರಹ್ಮಾಂಡವೇ ಒಂದು ಮಾಯೆ. ಇವೆಲ್ಲದರ ಸೃಷ್ಟಿಕರ್ತ ಬ್ರಹ್ಮನಾಗಿದ್ದು,ಅವನು ಪ್ರತಿಯೊಂದು ಅಣುರೇಣತೃಣಕಾಷ್ಟಗಳಲ್ಲೂ ನೆಲೆಸಿದ್ದಾನೆ. ನಿನ್ನೊಳಗೂ ಆತ ಇರುವುದನ್ನು ಅರ್ಥ ಮಾಡಿಕೊಂಡು ಮಾಯೆಯಿಂದ ಕಳಚಿಕೊಂಡು ಭಕ್ತಿಯಿಂದ ಜೀವಿಸು ಎಂದು ಕೃಷ್ಣ ವಿವರಿಸುತ್ತಾನೆ.
ಅಧ್ಯಾಯ 14: ನಿನ್ನದೃಷ್ಟಿಕೋನಕ್ಕೆ ಹೊಂದುವ ಜೀವನಶೈಲಿ ಅಳವಡಿಸಿಕೋ
ಎಲ್ಲರಲ್ಲೂ ಮೂರು ಗುಣಗಳಿರುತ್ತವೆ. ಸಾತ್ವಿಕ ಗುಣವು ಬೆಳಕಿನ, ಸುಖದ, ವಿಚಾರದ ರೂಪ, ರಜೋಗುಣವು ಪ್ರೀತಿ, ಬಯಕೆ ಅಹಂಕಾರದ ಕ್ರಿಯಾಶೀಲ ರೂಪ, ತಮವು ಅಜ್ಞಾನ, ತಪ್ಪು ತಿಳುವಳಿಕೆ, ಆಲಸ್ಯದ ರೂಪ. ಇವುಗಳಲ್ಲಿ ಶಕ್ತವಾದ ಗುಣ ಆತ್ಮವನ್ನು ಕಟ್ಟಿಹಾಕುತ್ತದೆ. ಎಲ್ಲರಲ್ಲಿಯೂ ಇಷ್ಟೂ ಗುಣಗಳಿದ್ದರೂ ಒಂದು ಗುಣ ಮೇಲುಗೈ ಸಾಧಿಸುವುದು. ಸಾತ್ವಿಕ ಗುಣದವನು ಮೋಕ್ಷ, ರಾಜಸಿಕ ಗುಣದವನು ಪುನರ್ಜನ್ಮ ಹಾಗೂ ತಾಮಸಿಕ ಗುಣದವನು ಕೆಳಮಟ್ಟದ ಜನ್ಮವೆತ್ತುತ್ತಾನೆ ಎಂದು ಕೃಷ್ಣ ಹೇಳುತ್ತಾನೆ.
ಅಧ್ಯಾಯ 15:
ದೈವಿಕತ್ವಕ್ಕೆ ಬೆಲೆ ಕೊಡು
ಈ ಪ್ರಾಪಂಚಿಕ ಜೀವನದಲ್ಲಿ ನಾವು ಹೇಗೆ ಸಾವು ಹಾಗೂ ಪುನರ್ಜನ್ಮಗಳ ಮಧ್ಯೆ ಸಿಲುಕಿದ್ದೇವೆ ಎಂಬುದನ್ನು ಕೃಷ್ಣ ಅರ್ಜುನನಿಗೆ ಅರ್ಥ ಮಾಡಿಸುತ್ತಾನೆ. ಆತ ಸಂಸಾರವನ್ನು ತಲೆಕೆಳಗಾದ ಅರಳಿ ಮರಕ್ಕೆ ಹೋಲಿಸಿ ಮಾತನಾಡುತ್ತಾನೆ. ಪಾಪ ಪುಣ್ಯಗಳ ಕರ್ಮಗಳನ್ನು ಅಂಟಿಸುವ ಒಳ ಬೇರುಗಳು ಮೇಲಕ್ಕೂ ಕೆಳಕ್ಕೂ ಹರಡಿಕೊಂಡಿದೆ. ಸುಖದ ಬಯಕೆಗಳೆ ಅದರ ಚಿಗುರುಗಳು. ಇದು ಆದಿ ಅಂತ್ಯವಿಲ್ಲದ್ದು. ಇದನ್ನು ವೈರಾಗ್ಯವೆಂಬ ಶಸ್ತ್ರದಿಂದ ಕತ್ತರಿಸಬೇಕು. ದೈವಿಕತ್ವಕ್ಕೆ ಬೆಲೆ ಕೊಟ್ಟಾಗ ಇದು ಸಾಧ್ಯ ಎಂದು ಕೃಷ್ಣ ಮನ ಮುಟ್ಟುವಂತೆ ಹೇಳುತ್ತಾನೆ.
ಅಧ್ಯಾಯ 16 : ಉತ್ತಮನಾಗಿರುವುದೇ ವರ
ಸಿಟ್ಟು, ಕ್ರೂರತೆ, ಅಜ್ಞಾನ, ಅಪ್ರಾಮಾಣಿಕತೆ, ಅತಿಯಾಸೆ, ಅನೈತಿಕತೆ, ಅಹಂಕಾರ ಮುಂತಾದವು ವ್ಯಕ್ತಿಯನ್ನು ಆಧ್ಯಾತ್ಮಿಕವಾಗಿ ನಾಶ ಮಾಡುತ್ತವೆ. ಆದರೆ ಮಾನವೀಯತೆ, ಸತ್ಯ, ಅಹಿಂಸೆ, ತಾಳ್ಮೆ, ಇಂದ್ರಿಯಗಳ ನಿಯಂತ್ರಣ ಮುಂತಾದ ಸದ್ಗುಣಗಳು ಜ್ಞಾನಕ್ಕೆ ಕಾರಣವಾಗಿ ಸ್ವತಂತ್ರರನ್ನಾಗಿಸುತ್ತದೆ.
ಅಧ್ಯಾಯ 17:
ಮೇರು ಸತ್ಯ
ಇಲ್ಲಿ ಕೃಷ್ಣ ಓಂ ತತ್ ಸತ್ ಮಂತ್ರದ ಮಹತ್ವ ಹೇಳುತ್ತಾನೆ. ಇದರ ಅರ್ಥ ಮೇರು ಸತ್ಯ ಎಂದು. ಓಂನಾಮದಿಂದಲೇ ಸತ್ಕಾರ್ಯ ಆರಂಭಿಸಬೇಕು. ಯಜ್ಞ, ದಾನ ಹಾಗೂ ತಪಸ್ಸು ಸತ್ಕಾರ್ಯಗಳು ಎಂದು ವಿವರಿಸುತ್ತಾನೆ.
ಅಧ್ಯಾಯ 18: ಪರಮಾತ್ಮನೊಂದಿಗೆ ಐಕ್ಯ
ಫಲದ ಬಯಕೆಯಿಂದ ಮಾಡುವ ಕರ್ಮಗಳನ್ನು ಬಿಡುವುದು ಸಂನ್ಯಾಸ, ಆ ಎಲ್ಲಾ ಕರ್ಮಗಳನ್ನು ಮಾಡಿ ಫಲವನ್ನ ಬಯಸದೇ ಇರುವುದು ತ್ಯಾಗ ಎಂದು ಹೇಳುವ ಕೃಷ್ಣನು, ಕರ್ಮಯೋಗಿಯಾಗಿ ಬದುಕಬೇಕು. ನಿಮ್ಮ ಕೆಲಸವೇ ನಿಮ್ಮನ್ನು ಆತ್ಮದೊಂದಿಗೆ ಜೋಡಿಸುತ್ತದೆ. ಪರಮಾತ್ಮನೊಂದಿಗೆ ಐಕ್ಯವಾಗಲು ದಾರಿ ತೋರುತ್ತದೆ ಎಂದು ವಿವರಿಸುತ್ತಾರೆ .
