ಮಹಾಭಾರತದ ಪುಟ್ಟ ಕಥೆಗಳು | Short Stories from Mahabharatha in kannada
Index of Important Points
💐 ಕಾಮಧೇನುವಿನ ಪುತ್ರ ವಾತ್ಸಲ್ಯ 💐
🌴 ಇದು ಮಹಾಭಾರತದಲ್ಲಿ ಬರುವ ಕಥೆ. ಒಮ್ಮೆ ದೃತರಾಷ್ಟನ ಹತ್ತಿರ ವೇದವ್ಯಾಸರು ಬಂದು, ನೋಡು ದೃತರಾಷ್ಟ್ರ ನಿನ್ನ ಮಕ್ಕಳಾದ ದುರ್ಯೋಧನ ದುಶ್ಯಾಸನ, ಹಾಗೂ ನಿನ್ನ ಭಾವಮೈದುನ ಶಕುನಿ, ಇವರು ಪಾಂಡು ಮಕ್ಕಳಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ನೀನು ಅವರಿಗೆ ಸ್ವಲ್ಪ ಬುದ್ಧಿ ಹೇಳಬಾರದೆ ಎಂದು ಕೇಳಿದರು. ಇದರಿಂದ ದೃತರಾಷ್ಟ್ರನಿಗೆ ಬೇಜಾರಾಯಿತು ನೀವು ಯಾವಾಗಲೂ ನನ್ನ ಮಕ್ಕಳಿಗೆ ಬುದ್ಧಿ ಹೇಳುವಂತೆ ಹೇಳುತ್ತೀರಿ. ನೀವು ಪಾಂಡು ಮಕ್ಕಳ ಮೇಲೆ ಹೆಚ್ಚು ವಾತ್ಸಲ್ಯ ಪ್ರೀತಿ ತೋರಿಸುತ್ತೀರಿ. ಯಾಕೆ ನನ್ನ ಮಕ್ಕಳು ನಿಮಗೆ ಮೊಮ್ಮಕ್ಕಳಲ್ಲವೇ? ಪಾಂಡು ಮಕ್ಕಳು ಮಾತ್ರ ಮೊಮ್ಮಕ್ಕಳಾ? ಎಂದು ಕೇಳಿದ.
🌴 ಇದನ್ನು ಕೇಳಿದ ವ್ಯಾಸರು ಒಂದು ಕಥೆ ಹೇಳುತ್ತಾರೆ. ಒಮ್ಮೆ ದೇವಲೋಕದಲ್ಲಿ ಕಾಮಧೇನು ಅಳುತ್ತಿದ್ದಳು. ಅಲ್ಲಿಗೆ ಬಂದ ಇಂದ್ರದೇವ ಯಾಕೆ ಅಳುತ್ತಾ ಇದ್ದಿ ನಮ್ಮಿಂದ ಏನಾದರೂ ತಪ್ಪಾಯ್ತು ಅಥವಾ ಯಾರಾದರೂ ನಿನ್ನ ಮನಸ್ಸಿಗೆ ನೋವಾಗುವಂತೆ ಮಾತನಾಡಿದರಾ ಎಂದು ಕೇಳಿದ. ಕಾಮಧೇನು ಇಂದ್ರನನ್ನು ಕರೆದು ಅಲ್ಲಿನೋಡು ಎಂದು ಭೂಮಿ ಕಡೆ ತೋರಿಸಿದಳು. ಇಂದ್ರನು ನೋಡಿದ. ಅದೊಂದು ಹಳ್ಳಿ ಅಲ್ಲಿ ಸ್ವಲ್ಪ ಗದ್ದೆ ಇತ್ತು. ಅದು ಬಡ ರೈತನ ಗದ್ದೆ ಯಾಗಿತ್ತು. ರೈತನು ಅವನ ಹತ್ತಿರವಿದ್ದ ಎರಡು ಎತ್ತುಗಳನ್ನು ನೊಗಕ್ಕೆ ಕಟ್ಟಿ ಗದ್ದೆಯಲ್ಲಿ ಕೆಲಸ ಮಾಡಿಸುತ್ತಿದ್ದ.
🌴 ಅವು ಮುಂದೆ ಹೋಗದಿದ್ದರೆ ಬಾರುಕೋಲಿನಿಂದ ಅವುಗಳಿಗೆ ಹೊಡೆಯುತ್ತಿದ್ದ. ಆ ಎತ್ತುಗಳು ಸರಿಯಾಗಿ ಹೊಟ್ಟೆಗೆ ಇಲ್ಲದೆ ಚರ್ಮ ಮೂಳೆ ಮಾತ್ರ ಕಾಣುತ್ತಿತ್ತು. ಅವುಗಳಿಗೆ ನೊಗ ಎಳೆಯಲು ಸಾಗುತ್ತಿರಲಿಲ್ಲ. ರೈತನು ಹೊಡೆಯುತ್ತಿದ್ದ. ಹೀಗಾಗಿ ಅವುಗಳ ಕಣ್ಣಲ್ಲಿ ನೀರು ಬರುತ್ತಿತ್ತು. ಎತ್ತುಗಳನ್ನು ತೋರಿಸಿದ ಕಾಮಧೇನು ದೇವರಾಜ ನನ್ನ ಮಕ್ಕಳು ಹೇಗೆ ಅಳುತ್ತಿವೆ ಅವುಗಳ ಕಷ್ಟ ನನ್ನಿಂದ ನೋಡಲಾಗುತ್ತಿಲ್ಲ ಏನಾದರೂ ಮಾಡಿ ಅವುಗಳ ಕಷ್ಟವನ್ನು ಪರಿಹರಿಸು ಎಂದು ಕೇಳಿಕೊಂಡಿತು.
🌴 ಅದಕ್ಕೆ ಇಂದ್ರನು ಏನಮ್ಮ ಕಾಮಧೇನು, ನಿನಗೆ ಇವೇ ಎರಡು ಮಕ್ಕಳಾ? ಎತ್ತು, ಹಸುಗಳು ಸೇರಿ ಕೋಟಿ ಕೋಟಿ ಮಕ್ಕಳಿದ್ದಾರೆ. ಅವುಗಳನ್ನೆಲ್ಲಾ ಬಿಟ್ಟು ಈ ಎರಡು ಮಕ್ಕಳ ಮೇಲೆ ಮಾತ್ರ ಅಷ್ಟೊಂದು ಪ್ರೀತಿ ಯಾಕೆ ಎಂದು ಕೇಳಿದ. ಆಗ ಕಾಮಧೇನು ಹೇಳಿದಳು. ನೋಡು ಇಂದ್ರ ನೀನು ಹೇಳಿದಂತೆ ನನಗೆ ಎತ್ತು, ಹಸುಗಳು ಸೇರಿ ಕೋಟಿ ಕೋಟಿ ಮಕ್ಕಳು ಇದ್ದಾರೆ ನಿಜ. ಅವುಗಳೆಲ್ಲ ಸುಖವಾಗಿ ಇದ್ದಾವೆ. ಆದರೆ ಈ ಎರಡು ಮಕ್ಕಳು ಮಾತ್ರ ಹೊಟ್ಟೆಗಿಲ್ಲದೆ, ಅವನ ಗದ್ದೆಯನ್ನು ಉತ್ತಬೇಕು. ಅಲ್ಲದೆ ಮಳೆ ಬರದೆ ಭೂಮಿಯೆಲ್ಲ ಒಣಗಿ ಬಿರುಕು ಬಿಟ್ಟಿದೆ.
🌴 ಕಲ್ಲಿನಂತೆ ಗಟ್ಟಿಯಾಗಿರುವ ಭೂಮಿಯನ್ನು ನೇಗಿಲಿನಿಂದ ಎಳೆಯಲು ಹೊಟ್ಟೆಗೂ ಹಾಕದೆ ನಿತ್ರಾಣ ವಾಗಿರುವ ಅವುಗಳಿಂದ ಕೆಲಸ ಮಾಡಿಸುತ್ತಾನೆ, ಕೆಲಸ ಮಾಡಲು ಆಗದೆ ರೈತನ ಕೈಯಲ್ಲಿ ಹೊಡೆಸಿಕೊಳ್ಳುತ್ತಾ ನಿತ್ಯವೂ ಕಣ್ಣೀರು ಹಾಕುತ್ತವೆ. ಇದನ್ನು ನನ್ನಿಂದ ನೋಡಲಾಗುವುದಿಲ್ಲ ಹಾಗಾಗಿ ಹೇಳಿದೆ ಎಂದಿತು. ಕನಿಕರಗೊಂಡ ಇಂದ್ರನು ಕಾಮಧೇನು ನಿನ್ನ ಮಕ್ಕಳ ಮೇಲಿರುವ ಕರುಳಿನ ಪ್ರೀತಿ ನನಗೆ ಅರ್ಥವಾಯಿತು ಎನ್ನುತ್ತಾ, ಬಡ ರೈತನ ಗದ್ದೆ ಸೇರಿದಂತೆ ಸುತ್ತಮುತ್ತ ಮಳೆ ಸುರಿಸಿದನು. ಇದರಿಂದ ಭೂಮಿಯೆಲ್ಲಾ ಒದ್ದೆಯಾಗಿ ಮಣ್ಣು ಮೃದುವಾಯಿತು. ಎತ್ತುಗಳು ಸರಾಗವಾಗಿ ನೇಗಿಲನ್ನು ಎಳೆದವು. ಇದು ಕಾಮಧೇನುವಿಗಿರುವ ಪುತ್ರ ವಾತ್ಸಲ್ಯ ಎಂದು ತಿಳಿಸಿದರು.
🌴 ಹೀಗೆ ಕತೆ ಹೇಳಿ ಮುಗಿಸಿದ ವ್ಯಾಸರು, ನೋಡು ದೃತರಾಷ್ಟ್ರ ನೀನೂ ಸಹ ನನಗೆ ಮಗ, ಪಾಂಡುವು ಮಗನೇ, ಹಾಗೆಯೇ ನಿನ್ನ ಮಕ್ಕಳು ಮೊಮ್ಮಕ್ಕಳೇ, ಪಾಂಡು ಮಕ್ಕಳು ಮೊಮ್ಮಕ್ಕಳೇ, ಎಲ್ಲರ ಮೇಲೂ ನನಗೆ ಸಮಾನವಾದ ಪ್ರೀತಿ ಇದೆ. ಆದರೆ ಯಾವ ಮಕ್ಕಳು ಹೆಚ್ಚು ಕಷ್ಟಪಡುತ್ತಿರುತ್ತಾರೋ, ಅವರ ಬಗ್ಗೆ ಹೆತ್ತ ತಂದೆ ತಾಯಿಗೆ ಕನಿಕರ ಪ್ರೀತಿ ಜಾಸ್ತಿ ಇರುತ್ತದೆ. ಅದು ಸಹಜವೂ ಕೂಡ. ಆದುದರಿಂದ ನಿನ್ನ ಮಕ್ಕಳು ಪಾಂಡು ಮಕ್ಕಳಿಗೆ ತೊಂದರೆ ಕೊಡದಂತೆ ತಿದ್ದಿ ಬುದ್ಧಿ ಹೇಳು. ತಂದೆ ಇಲ್ಲದ ಅವರನ್ನು ನಿನ್ನ ಮಕ್ಕಳಂತೆಯೇ ಪಾಲಿಸಬೇಕು. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂದು ತಾರತಮ್ಯ ತೋರಬೇಡ ಭಗವಂತ ಮೆಚ್ಚುವುದಿಲ್ಲ ಎಂದು ಬುದ್ಧಿವಾದ ಹೇಳಿದರು.
🌷 ಪರಿಸ್ಥಿತಿಗಳ ಕೈಗೊಂಬೆಯಾದ ಅಂಗರಾಜ ಕರ್ಣ 🌷
🌟 ಮಹಾಭಾರತದಲ್ಲಿ ಕರ್ಣ ಒಬ್ಬ ದುರಂತನಾಯಕ. ನಿಜಕ್ಕೂ ಅವನು ಪುಣ್ಯವಂತ. ಕುಂತಿಗೆ ಜೇಷ್ಠ ಪುತ್ರ, ಸೂರ್ಯನ ಮಗ, ಕುಂತಿಯ ಸದ್ಗುಣಗಳು, ಸೂರ್ಯನ ತೇಜಸ್ಸು. ಇದಕ್ಕಿಂತ ಅದೃಷ್ಟ ಬೇರೆ ಇನ್ನೇನು ಬೇಕು. ಪಾಂಡವರಲ್ಲಿ ಕರ್ಣನೇ ದೊಡ್ಡವನು. ಎಲ್ಲವೂ ಸರಿಯಿದ್ದರೆ, ಅವನೇ ಕುರುವಂಶದ ಚಕ್ರವರ್ತಿ ಆಗಿರುತ್ತಿದ್ದ. ಆದರೆ ಅವನ ದೌರ್ಭಾಗ್ಯದ ವಿಧಿ. ಅವನು ಬುದ್ಧಿವಂತ, ಶಕ್ತಿ, ಧೈರ್ಯ,ಸಾಹಸ, ಪ್ರತಿಭೆ, ರೂಪಗಳಲ್ಲಿ ಅವನಿಗೆ ಸರಿಗಟ್ಟುವವರು ಯಾರೂ ಇರಲಿಲ್ಲ. ಗುರು ದ್ರೋಣಾಚಾರ್ಯರು, ಹಾಗೂ ಪರಶುರಾಮರಿಂದ, ಸಾಕಷ್ಟು ವಿದ್ಯೆ ಪಡೆದಿದ್ದನು. ಇಷ್ಟೆಲ್ಲಾ ಇದ್ದು ಅವನು ನಾಯಕನಾಗಲೆ ಇಲ್ಲ. ಇದಕ್ಕೆ ಮುಖ್ಯ ಕಾರ್ಯ ಸಹವಾಸದೋಷ. ಅವನು ಆರಿಸಿಕೊಂಡ ಸ್ನೇಹಿತರ ಆಯ್ಕೆ ಸರಿಯಾಗಿರಲಿಲ್ಲ. ಮೇಲಾಗಿ ಅವನಲ್ಲಿ ಕೀಳರಿಮೆ ಹಾಗೂ ಉದ್ಧಟತನ ತುಂಬಿತ್ತು.
🌟 ಅದೊಂದು ಸಂದರ್ಭ:- ದ್ರೋಣಾಚಾರ್ಯರು ಕೌರವ, ಪಾಂಡವರಿಗೆ, ಅಸ್ತ್ರ ಶಸ್ತ್ರ, ಶಾಸ್ತ್ರಭ್ಯಾಸಗಳನ್ನು ಮಾಡಿಸಿದರು. ಅದರ ಶಕ್ತಿ ಪ್ರದರ್ಶನವನ್ನು ಅರಮನೆಯವರು, ಹಾಗೂ ರಾಜ್ಯದ ಜನತೆ ಎದುರು ಮಾಡಬೇಕೆಂದು ದೊಡ್ಡ ಮೈದಾನ ಸಿದ್ಧವಾಯಿತು. ಕೌರವರು ಪಾಂಡವರು ಶಕ್ತಿ ಪ್ರದರ್ಶನಕ್ಕೆ ತಯಾರಾದರು. ಮೊದಲು ಧರ್ಮರಾಜ ತನ್ನ ‘ಭಲ್ಲೆ’ ತಿರುಗಿಸುವುದು ಮತ್ತು ಯುದ್ಧಭೂಮಿಯಲ್ಲಿ ರಥ ಓಡಿಸುವುದು ಇವುಗಳನ್ನು ಪ್ರದರ್ಶನ ಮಾಡಿ ಮೆಚ್ಚುಗೆ ಪಡೆದ. ಮುಂದೆ ನಕುಲ – ಸಹದೇವರು ಖಡ್ಗ ಪ್ರಹಾರ ಹಾಗೂ ಕುದುರೆ ಸವಾರಿ, ಪ್ರದರ್ಶಿಸಿದರು. ನಂತರ ಭೀಮ-ದುರ್ಯೋಧನರು ಗದಾಯುದ್ಧ ದರ್ಶನವನ್ನು ಆರು ಗಂಟೆಗಳ ಕಾಲ ಮಾಡಿದರು. ಯಾರಿಗೆ ಯಾರೂ ಸೋಲಲಿಲ್ಲ. ಹಿರಿಯರ ಆಣತಿಯಂತೆ ದ್ರೋಣರು ಇಬ್ಬರಿಗೂ ಸರಿ ಸಮಾನರು ಎಂದು ಹೇಳಿ ನಿಲ್ಲಿಸಿದರು.
🌟 ಹಾಗೇ ದ್ರೋಣರು ಮುಂದೆ ಬಂದು, ಅರ್ಜುನ ಇದುವರೆಗೂ ಬಾಣ, ಕತ್ತಿ, ಖಡ್ಗ, ಭಲ್ಲೆ, ಗದೆ, ಇವುಗಳ ಪ್ರದರ್ಶನವನ್ನು ನೋಡಿ ಜನಗಳಿಗೆ ಬೇಸರವಾಗಿದೆ. ನೀನು ಏನಾದರೂ ಚಮತ್ಕಾರ ತೋರಿಸು ಎಂದರು. ಅರ್ಜುನನು ಒಂದು ಬಾಣ ಆಕಾಶಕ್ಕೆ ಬಿಟ್ಟನು ಅದು ಜೋರಾಗಿ ಮಳೆ ಸುರಿಸಿತು. ಆದರೆ ಹಿಂದೆ ಇನ್ನೊಂದು ಬಾಣ ಬಿಟ್ಟನು ಅದು ಮಳೆಯನ್ನು ನುಂಗಿತು. ಮತ್ತೆ ಇನ್ನೊಂದು ಬಾಣಬಿಟ್ಟಾಗ ಅದು ಬೆಂಕಿಯಾಗಿ ನಂತರ ಗುಲಾಬಿ ಪಕಳೆಗಳಾಗಿ ಅಲ್ಲಿದ್ದ ಎಲ್ಲರ ಮೇಲೂ ಪುಷ್ಪವೃಷ್ಟಿಯಾಯಿತು. ಸಭೆಯಲ್ಲಿದ್ದವರೆಲ್ಲ ಮೈಮರೆತು, ತೆರೆದ ಕಣ್ಣು ಮುಚ್ಚದೆ ಮುಂದೇನು ಮಾಡುತ್ತಾನೆ ಎಂದು ಕಾತರದಿಂದ ನೋಡುತ್ತಿದ್ದರು. ಮತ್ತೆ ಅರ್ಜುನನು ತನ್ನ ಸುತ್ತ ನಾಲ್ಕು ಬಾಣಗಳನ್ನು ಬಿಡುತ್ತಾನೆ. ಇದರಿಂದ ರಾಶಿರಾಶಿ ಹಾವುಗಳು ಬಂದವು. ಅವು ಜನಗಳ ಹತ್ತಿರ ಹೋಗುವ ಮೊದಲೇ ಅರ್ಜುನನು ಮತ್ತೆ ಬಾಣ ಬಿಟ್ಟ.
🌟 ಒಂದು ಹಿಂಡು ಗರುಡ ಪಕ್ಷಿಗಳು ಬಂದು ಎಲ್ಲಾ ಹಾವುಗಳನ್ನು ಕಚ್ಚಿಕೊಂಡು ಹೋದವು. ಇದನ್ನು ನೋಡಿದ ಜನ ನಿಬ್ಬೆರಗಾಗಿ ಶಹಭಾಸ್ ಅರ್ಜುನ ಎಂದು ಕರತಾಡನ ಮಾಡಿದರು. ದುರ್ಯೋಧನನಿಗೆ ಇದನ್ನು ನೋಡಿ ಹೊಟ್ಟೆಕಿಚ್ಚು ತಡೆಯಲಾಗಲಿಲ್ಲ. ಇವನನ್ನು ಸೋಲಿಸುವ ವೀರರು ಯಾರೂ ಇಲ್ಲವೇ ಎಂದು ಹಲ್ಕಚ್ಚಿ ಕೈಕೈ ಹಿಸುಕಿಕೊಳ್ಳುತ್ತಿರುವಾಗಲೇ, “ಸಾಕು ನಿನ್ನ ಮಕ್ಕಳಾಟ ಧೈರ್ಯವಿದ್ದರೆ ನನ್ನೊಂದಿಗೆ ಯುದ್ಧಮಾಡು” ಕಂಚಿನ ಕಂಠದ ಧ್ವನಿ ಬಂದತ್ತ ಎಲ್ಲರ ದೃಷ್ಟಿ ಹೊರಳುತ್ತದೆ. ದುರ್ಯೋಧನಿಗಂತೂ ಕ್ಷೀರಸಾಗರದಲ್ಲಿ ಮುಳುಗಿದಷ್ಟು ಸಂತೋಷವಾಗುತ್ತದೆ. ಹಿಮಾಲಯ ಪರ್ವತ ಹೊತ್ತು ತಂದಷ್ಟು ಆತ್ಮವಿಶ್ವಾಸ ಬಂದಿತು.
🌟 ಇಡೀ ಪ್ರಪಂಚವನ್ನು ತಾನೊಬ್ಬನೇ ಆಳಬಲ್ಲೆ ಎನ್ನುವ ಗಜಧೈರ್ಯ ಹೊರಹೊಮ್ಮಿತು. ಎಲ್ಲರೂ ನೋಡುತ್ತಾರೆ. ಸೂರ್ಯನಂಥ ತೇಜಸ್ಸು, ಸುಂದರವಾದ ಯುವಕ. ಆಕರ್ಷಕ ಮೈಕಟ್ಟು, ಸ್ಪಟಿಕ ಮಣಿಯಂಥ ರಕ್ಷಣಾ ಕವಚ, ಕಿವಿಯಲ್ಲಿ ಕರ್ಣ ಕುಂಡಲಗಳು, ಸಾಕ್ಷಾತ್ ಶಿವನೇ ಬಿಲ್ಲು ಬಾಣ ಹಿಡಿದು ಥಟ್ಟಂತ ಪ್ರತ್ಯಕ್ಷವಾದಂತೆ. ಅವನೇ ದಾನಶೂರ ಕರ್ಣ. ದುರ್ಯೋಧನನಿಗೆ ಕರ್ಣನನ್ನ ನೋಡಿ ಅಮೃತ ಕುಡಿದಷ್ಟು, ಜೀವನೋತ್ಸಾಹ ಮೈದುಂಬಿ ಮೈಯಲ್ಲಿ ಮಿಂಚು ಸಂಚಾರವಾಯಿತು.
🌟 ಕರ್ಣ ಬಂದವನೇ, ಅರ್ಜುನ ನೀನು ಮಾಡಿದ್ದು ಒಂದು ಚಮತ್ಕಾರ. ಇದು ಯುದ್ಧ ವಿದ್ಯೆ ಅಲ್ಲ. ನಿನಗೆ ಯುದ್ಧ ಕಲೆ ಗೊತ್ತಿಲ್ಲವೆ? ಗೊತ್ತಿದ್ದರೆ ನನ್ನೊಡನೆ ಯುದ್ಧ ಮಾಡು ಬಾ, ಪ್ರಪಂಚವನ್ನು 21 ಸಾರಿ ಸುತ್ತಿ ಕ್ಷತ್ರಿಯರನ್ನೆಲ್ಲಾ ಸದೆ ಬಡಿದ ಪರಶುರಾಮರ ಶಿಷ್ಯ ನಾನು ಎಂದು ಸವಾಲೆಸೆದ. ಜೊತೆಗೆ ಧೋರಣೆಯಿಂದ “ದುರ್ಯೋಧನ, ಹೆದರಬೇಡ, ಧರ್ಮ ಶಕ್ತಿಯನ್ನು ಹಿಂಬಾಲಿಸಿ ಬರುತ್ತದೆ” ಎಂದನು.
🌟 ವಿವೇಕವಿಲ್ಲದೆ ಕರ್ಣ ಹೇಳಿದ್ದನ್ನು ಕೇಳುತ್ತಾ, ಅಲ್ಲಿಯೇ ಕುಳಿತಿದ್ದ ವ್ಯಾಸರು, “ಯಾವಾಗಲೂ ಶಕ್ತಿ ಧರ್ಮವನ್ನು ಹಿಂಬಾಲಿಸಿ ಬರಬೇಕು. ಧರ್ಮಕ್ಕಿಂತ ಶ್ರೇಷ್ಠವಾದ್ದು ಯಾವುದು ಇಲ್ಲ. ಒಂದು ವೇಳೆ ಧರ್ಮ ಶಕ್ತಿಯನ್ನು ಹಿಂಬಾಲಿಸಿ ಹೋದರೆ ಜಗತ್ತೇ ನಾಶವಾಗುತ್ತದೆ” ಇವನ ದುರಹಂಕಾರಕ್ಕಷ್ಟು, ಎಷ್ಟು ಉದ್ಧಟತನ ಇವನು ಹಣೆಬರಹವೇ ಇಷ್ಟು ಎಂದು ಅಲ್ಲಿ ಕುಳಿತಿದ್ದ ಹಿರಿಯರ ಕಿವಿಯಲ್ಲಿ ಹೇಳಿದರು. ಮುಂದೆ ಬಂದ ದ್ರೋಣರು ಕರ್ಣನಿಗೆ ನೀನು ಯಾವ ಜಾತಿ ಎಂದು ಕೇಳಿದಾಗ ‘ಸೂತಪುತ್ರ’ ಎಂದನು. ಇಲ್ಲಿ ಕ್ಷತ್ರಿಯರ ಶಕ್ತಿಪ್ರದರ್ಶನ ನಡೆಯುತ್ತಿರುವುದು ನಿನ್ನಂಥವರಿಗೆ ಇಲ್ಲೇನು ಕೆಲಸ, ಇಲ್ಲಿ ರಾಜಮನೆತನಕ್ಕೆ ಮಾತ್ರ ಸಂಬಂಧಿಸಿದ್ದು, ರಾಜರೆದುರಿಗೆ ನಿಂತು ಮಾತನಾಡುವ ಯೋಗ್ಯತೆ ಕೂಡ ನಿನಗಿಲ್ಲ ಎಂದರು. ಕರ್ಣನು ತಲೆ ತಗ್ಗಿಸಿ ಅವಮಾನದಿಂದ ಕುಸಿದ.
🌟 ಅಲ್ಲಿ ಕುಳಿತು ಗಮನಿಸುತ್ತಿದ್ದ ದುರ್ಯೋಧನ ಕೂಡಲೇ ಎದ್ದು, ಧೃತರಾಷ್ಟ್ರನ ಹತ್ತಿರ ಹೋಗಿ ಪಿತಾಶ್ರೀ, ನಮ್ಮ ಶಕ್ತಿಯಿಂದ ಪಾಂಡವರನ್ನು ಸೋಲಿಸಲು ಆಗುವುದಿಲ್ಲ. ಪಾಂಡವರನ್ನು ಸೋಲಿಸಲು ಕರ್ಣ ನಂಥವರು ನಮ್ಮ ಜೊತೆ ಬೇಕು. ಆದ್ದರಿಂದ ‘ಅಂಗರಾಜ್ಯದ’ ರಾಜನನ್ನಾಗಿ ಕರ್ಣನಿಗೆ ಪಟ್ಟಾಭಿಷೇಕ ಮಾಡುತ್ತೇನೆ ಎಂದು ದೃತರಾಷ್ಟ್ರನಿಗೆ ತಿಳಿಸಿ, ಅಲ್ಲಿದ್ದ ದ್ರೋಣರ ಬಳಿ ಬಂದು, ಗುರುಗಳೇ ಇಲ್ಲಿ ಕುಲ ಪರೀಕ್ಷೆ ನಡೆಯುತ್ತಿಲ್ಲ ನಡೆಯುತ್ತಿರುವುದು ಶೌರ್ಯ ಪರೀಕ್ಷೆ ನೀವು ಒಬ್ಬ ವೀರನಿಗೆ ಅವಮಾನ ಮಾಡುತ್ತಿದ್ದೀರಿ.
🌟 ರಾಜರಿಗೆ ಮಾತ್ರ ಯುದ್ಧಮಾಡುವ ಅರ್ಹತೆ ಇದೆಯೆಂದಾದರೆ ನನ್ನ ಅಂಗ ರಾಜ್ಯವನ್ನು ಕರ್ಣನಿಗೆ ಧಾರೆ ಎರೆಯುತ್ತೇನೆ ಎಂದವನೇ, ನಿಂತ ಮೆಟ್ಟಿಗೆ ಕರ್ಣನನ್ನು ‘ಅಂಗ ರಾಜನನ್ನಾಗಿ’ ಮಾಡುವೆ ಎಂದು ಘೋಷಿಸಿದ. ಪವಿತ್ರ ನದಿಗಳ ನೀರಿನಿಂದ ಮಂಗಳ ಸ್ನಾನ ಮಾಡಿಸಲು ತಯಾರಿ ಮಾಡುವಾಗ, ಕುಂತಿಗೆ ದುಃಖ ಉಕ್ಕಿ ಬಂತು ‘ಕರ್ಣ’ ತನ್ನ ಮಗ ಅಂತ ಗೊತ್ತಿದ್ದು ಹೇಳುವ ಹಾಗೆ ಇರಲಿಲ್ಲ. ಅದೇ ಸಮಯಕ್ಕೆ ಕರ್ಣನ ಸಾಕು ತಂದೆ ಸಾರಥಿ ಅದಿರಥನು ಬಂದ. ಘಟಾನುಘಟಿ ರಾಜರುಗಳ ನಡುವೆ ಅಂದಿನ ಸಮಾರಂಭದ ಕೇಂದ್ರಬಿಂದುವಾಗಿ ರಾರಾಜಿಸುತ್ತಾ ಕುಳಿತ ಮಗನನ್ನು ನೋಡಿ ಸಂತೋಷದಿಂದ ಅವನ ಕಣ್ಣು ತುಂಬಿ ಬಂತು. ರಾಜರುಗಳ ನಡುವೆ ಕುಳಿತ ಕರ್ಣ ತನ್ನ ಮಗ ಎಂದು ತಿಳಿದು ಅವನಿಗೆ ತೊಂದರೆಯಾದರೆ ಎಂದುಕೊಂಡು ದೂರದಲ್ಲಿ ನಿಂತು ನೋಡುತ್ತಿದ್ದನು.
🌟 ದುರ್ಯೋಧನನು ತಮ್ಮ ದುಶ್ಯಾಸನನಿಗೆ ಪಟ್ಟಾಭಿಷೇಕದ ಸಿಂಹಾಸನವನ್ನು ಅಲಂಕರಿಸಲು ಹಾಗೂ ನವರತ್ನ ಖಚಿತ ಕಿರೀಟವನ್ನು ಸಿದ್ದಪಡಿಸಲು ಹೇಳಿದ. ಪುಣ್ಯವಂತ ಸ್ತ್ರೀಯರೇ ಕರ್ಣನಿಗೆ ಮಂಗಳ ಸ್ನಾನ ಮಾಡಿಸಿ, ವೀರ ತಿಲಕವನ್ನು ಹಣೆಗೆ ತಿದ್ದಿರಿ ಎಂದು ಆಜ್ಞೆ ಮಾಡಿ, ಈ ದಿನವೇ ‘ಜಾತಿ’ ಅನ್ನುವ ಮಾತನ್ನು ನಿಮ್ಮೆಲ್ಲರ ಸಮಕ್ಷಮದಲ್ಲಿ ಸುಟ್ಟು ಭಸ್ಮ ಮಾಡುತ್ತೇನೆ, ಎಂದು ಅಬ್ಬರಿಸಿ, ಕರ್ಣನ ಬಳಿ ಬಂದು, ಅವನ ಭುಜದ ಮೇಲೆ ಕೈ ಹಾಕಿ ಗೆಳೆಯಾ, ನಿನಗೆ ಅಂಗ ರಾಜ್ಯ ಮಾತ್ರವಲ್ಲ ನನ್ನ ಸಿಂಹಾಸನದಲ್ಲಿ ಅರ್ಧ ಪಾಲು ಸಿಂಹಾಸನ ನಿನಗೆ ಧಾರೆ ಎರೆಯುತ್ತೇನೆ. ಎಂದು ಶಪಥ ಮಾಡಿ ಕರ್ಣನನ್ನು ಅಂಗ ರಾಜ್ಯಕ್ಕೆ ರಾಜನನ್ನಾಗಿ ಮಾಡುವ ತಯಾರಿಗೆ ಹೊರಟನು.
🌟 ಅಲ್ಲಿರುವ ಸ್ತ್ರೀಯರು ಕರ್ಣನಿಗೆ ಮಂಗಳ ಸ್ಥಾನವನ್ನು ಮಾಡಿಸುತ್ತಿದ್ದಾರೆ. ಆ ಹೊತ್ತಿಗೆ ಕರ್ಣನಿಗೆ ತಂದೆ ಅಧಿರಥ ಬಂದಿದ್ದು ಕಾಣುತ್ತದೆ. ಮಂಗಳ ಸ್ನಾನವನ್ನು ಅರ್ಧದಲ್ಲೆ ಬಿಟ್ಟೆದ್ದು , ಮೈಯಲ್ಲಿ ನೀರು ತೊಟ್ಟಿಕ್ಕುತ್ತಿದ್ದರೂ ಲಕ್ಷಿಸದೆ ಓಡಿಬಂದು ತಂದೆಯ ಕಾಲಿಗೆ ನಮಸ್ಕರಿಸಿ ‘ಅಪ್ಪಾ’ ಎಂದು ಪ್ರೀತಿಯಿಂದ ಕರೆದ. ಇದನ್ನು ಅಲ್ಲಿ ನೋಡುತ್ತಿದ್ದ ಜನರು, ಅವನ ಧೈರ್ಯ, ಒಳ್ಳೆಯತನ, ಅಂತಃಕರಣ ಕಂಡು, ಅಭಿಮಾನದಿಂದ ಜನರು ಕರ್ಣನಿಗೆ ಜೈಕಾರ ಹಾಕಿದರು.
🌟 ನೋಡಿದ ಜನರು ಏನು ತಿಳಿದುಕೊಳ್ಳುತ್ತಾರೋ ಅಂತ ಹೆದರಿ ರಾಜನಾಗುವ ಆಸೆಯಿಂದಲೋ, ತಂದೆ ಸಾರಥಿ ಎಂದು ಗೊತ್ತಾದರೆ, ಈ ಅವಕಾಶ ತನಗೆ ತಪ್ಪಿಹೋದರೆ ಎಂಬ ಸ್ವಾರ್ಥದಿಂದಲೋ, ಇಂಥ ಕೀಳುಮಟ್ಟದ ಯೋಚನೆ ಮಾಡದೆ, ರಾಜರುಗಳು ಹಾಗೂ ಸಾವಿರಾರು ಜನರ ನಡುವೆ ತಂದೆಗೆ ಗೌರವ ಕೊಟ್ಟ ಕರ್ಣನ ಗುಣ ಎಲ್ಲಾ ಕಾಲಕ್ಕೂ ಆದರ್ಶ ಪ್ರಾಯವಾಗಿದೆ. ಎಲ್ಲರ ಸಮ್ಮುಖದಲ್ಲಿ ದುರ್ಯೋಧನನನು ಕರ್ಣನಿಗೆ ಗೆಳತನದ ಅಭಯ ಹಸ್ತ ಚಾಚಿ, ಕರ್ಣನಿಗೆ ವಿಜೃಂಭಣೆಯಿಂದ ಪಟ್ಟಾಭಿಷೇಕ ಮಾಡಿ, ಅಂಗರಾಜ್ಯದ ರಾಜನನ್ನಾಗಿ ಮಾಡುತ್ತಾನೆ.

ತುಂಬಾ ಅದ್ಭುತವಾದ ಕಥೆ ಮತ್ತು ತುಂಬಾ ಬದುಕಿನ ಸಾರಾಮತ್ತು ನಾವು ಹೇಗೆ ಬದುಕಬೇಕು ಮತ್ತು ನಮ್ಮ ಜೀವನ ಹೇಗೆ ನಾವು ನಿರ್ಮಿಸಿಕೊಳ್ಳಬೇಕೆಂಬುವುದು ಅದರ ಬಗ್ಗೆ ಇದು ತುಂಬಾ ಅದ್ಭುತವಾಗಿ ಒಂದು ಕಥೆಯಾಗಿದೆ ಇಂಥ ಕಥೆಗಳನ್ನು ನಮ್ಮ ಜೀವನದಲ್ಲೂ ಕೂಡ ಅಳವಡಿಸಿಕೊಳ್ಳಬೇಕಾಗಿದೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನಾವು ಮುಂದೆ ಅವರಿಗೆ ತಿಳಿಸಿ ಕೊಡಬೇಕಾಗಿದೆ..!! 💛♥️