ಬಾಡಿದ ತುಳಸಿಗಿಡವನ್ನು ಏನು ಮಾಡಬೇಕು?
Index of Important Points
ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ. ಆ ನಂತರ ಗಿಡ ಬಾಡಿ(ಸತ್ತು) ಹೋಗುತ್ತದೆ.
ತುಳಸಿಕಟ್ಟೆಯ ಅಥವ ಮನೆಯ ಹತ್ತಿರದ ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು. ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು.
ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯಬಾರದು.. ದ್ವಾದಶಿಯಂತೂ ಸರ್ವಥಾ ತೆಗೆಯಬಾರದು.
ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು.ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವುದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.
ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು.
ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ಕೆಲವು ಹೋಮ ಹವನಗಳಲ್ಲಿ ಬಳಸುವುದರಿಂದ ಹತ್ತಿರದ ವೈದಿಕರಿಗೆ ಮತ್ತು ದೇವಾಲಯಗಳಲ್ಲಿ ನೀಡಬಹುದು .
ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು. ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು. ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು. ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು. ದೇವರಿಗೆ ಅತ್ಯಂತ ಪ್ರಿಯ.
ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು.
ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ.
ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ. ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು. ಇದು ದೇವರಿಗೆ ಅತ್ಯಂತ ಪ್ರಿಯ.
ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ.
ಯದ್ಯೇಕಂ ತುಲಸೀಕಾಷ್ಠಂ
ಮಧ್ಯೇ ಕಾಷ್ಠಶತಸ್ಯ ಚ
ದಾಹಕಾಲೇ ಭವೇನ್ಮುಕ್ತಿಃ
ಪಾಪಕೋಟಿಯುತಸ್ಯ ಚ
ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು.
ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು. ತುಳಸೀ ಕಾಷ್ಟದಿಂದ ಮಣಿಗಳ ಮಾಡಿ ಧಾರಣೆ ಮಾಡಬಹುದು ಇದು ಶರೀರ ಹಾಗೂ ಮನಸ್ಸನ್ನು ಶುದ್ಧೀಕರಿಸುವುದು. ದೇವರ ಪೂಜೆಗೆ ತುಳಸಿ ಸಿಗದಿದ್ದಾಗ ತುಳಸೀ ಕಾಷ್ಟವನ್ನಾದರೂ ಉಪಯೋಗಿಸಬಹುದು. ತುಲಸೀ ಕಾನನಂ ಯತ್ರ ಯತ್ರ ಪದ್ಮವನಾನಿ ಚ। ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ।
ಯಾವ ಕಾರಣಕ್ಕೂ ಬಿಸಾಡಬಾರದು.
ಒಂದೊಳ್ಳೆ ಸುವಿಚಾರದೊಂದಿಗೆ ನಿರಂತರ…
ಸುವಿಚಾರ ಸಂಗ್ರಹ
ಗೋಮಾತೆ
|| ಗಾವೋ ವಿಶ್ವಸ್ಯ ಮಾತರಃ ||
ಗೋವಿನ ಪ್ರಾಧಾನ್ಯತೆ, ಸಾಕಣೆ, ಉಪಯುಕ್ತತೆ, ಅನಿವಾರ್ಯತೆಗಳನ್ನು ನಾವು ಅನ್ವೇಷಿಸುತ್ತಾ ಹೋದಲ್ಲಿ ನಮಗೆ ವಿಪುಲ ಆಧಾರಗಳು, ಸಾಕ್ಷಿಗಳು ಸಿಗುವುದು ವೇದದಲ್ಲಿ. ಪರಮ ಸತ್ಯವಾದ ವೇದದಲ್ಲಿ ಗೋವಿನ ಅಗತ್ಯತೆ ಮಾನವೀಯ ಜೀವನದಲ್ಲಿ ಎಷ್ಟು ಆವರಿಸಿವೆ? ಅವು ನಮಗೆ ಎಷ್ಟು ರಕ್ಷಣಾತ್ಮಕವಾಗಿವೆ? ಎಂದು ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯ. ಆದರೆ ವೇದದ ಉದಾಹರಣೆಯೊಂದಿಗೆ ತುಲನಾತ್ಮಕ ಸಂಶೋಧನೆ ಮಾಡಿದಲ್ಲಿ ಗೋ ಸಾಕಣೆಯಲ್ಲಿರತಕ್ಕ ಉಪಯುಕ್ತತೆ ಸದೃಢ ಸಮಾಜಕ್ಕೆ ಎಷ್ಟು ಎಂಬುದು ಅರ್ಥವಾಗುತ್ತದೆ. ಮನುಷ್ಯಮಾತ್ರರಾದ ನಾವು ಈ ಜೀವನ ಯಾತ್ರೆಯ ಪರಿಪೂರ್ಣ ರಕ್ಷಕಿಯಾದ ಗೋ ಸಾಕಣೆಯಲ್ಲಿ ಎಷ್ಟು ಸಫಲರು? ಎಷ್ಟು ಅರ್ಹರು? ಎಷ್ಟು ಸಮರ್ಥವಾಗಿ ಸಾಕಬಲ್ಲೆವು? ಎಂದು ಅಥರ್ವದ ಒಂದು ಮಂತ್ರ ಹೇಳುತ್ತದೆ ಗಮನಿಸಿ.
ಓಂ|| ಕಃ ಪೃಶ್ನಿಂ ಧೇನುಂ ವರುಣೇನ ದತ್ತಾಮಥರ್ವಣೇ ಸುದುಘಾಂ ನಿತ್ಯವತ್ಸಾಂ |
ಬೃಹಸ್ಪತಿನಾ ಸಖ್ಯಂ ಜುಷಾಣೋ ಯಥಾ ವಶಂ ತನ್ನಃ ಕಲ್ಪಯಾತಿ ||
ಹೇ ಗೋಮಾತೆಯೇ, ನಾವು ಕೊಡುವ ಈ ಅಲ್ಪ ಆಹಾರದಿಂದಲೇ ನೀನು ತೃಪ್ತಳಾಗು. ನಮ್ಮನ್ನು ರಕ್ಷಿಸು. ನಾವು ಅಶಕ್ತರು. ನಿನ್ನನ್ನು ಪ್ರಜಾಪತಿಯೂ ಕೂಡಾ ಸಮರ್ಥವಾಗಿ ತೃಪ್ತಿ ಪಡಿಸುತ್ತಾನೆ ಎಂದು ಹೇಳಲಾರೆ. ಆದರೆ ನೀನು ನಿತ್ಯತೃಪ್ತಳು, ಅಲ್ಪತೃಪ್ತಳು. ಹಾಗಾಗಿ ನಾವು ಕೊಡುವ ಈ ಅಲ್ಪಾಹಾರದಿಂದಲೇ ತೃಪ್ತಳಾಗಿ ಈ ಅಮೃತೋಪಮವಾದ ಹಾಲನ್ನು ನೀನು ಕರುಣೆಯಿಂದ ನೀಡುತ್ತಿದ್ದೀಯಾ. ಇದರಿಂದ ನಮ್ಮಲ್ಲಿ ಸಹಜ ಜ್ಞಾನ ವೃದ್ಧಿಯಾಗುತ್ತದೆ. ಸಕಲ ಸಂಪತ್ತು ಲಭಿಸುತ್ತದೆ. ಏಕೆಂದರೆ ಸಕಲೈಶ್ವರ್ಯ ರೂಪಿಯಾದ ನೀನು ಎಲ್ಲಾ ಸಂಪತ್ತನ್ನೂ ನಮಗೆ ಕೊಡುತ್ತಿದ್ದಿಯಾ. ಆದರೆ ಅದಕ್ಕೆ ಪೂರಕವಾಗಿ ನಾವೇನು ಕೊಡಬಲ್ಲೆವು? ನಮ್ಮ ಮೇಲೆ ಕರುಣೆಯಿರಲಿ.
ವೇದಕಾಲದಲ್ಲಿ ಒಬ್ಬನ ಅರ್ಹತೆ ಸಂಪತ್ತುಗಳನ್ನು ಗುರುತಿಸುತ್ತಿದ್ದುದು ಗೋ ಸಂಖ್ಯೆಯಿಂದ. ಎಷ್ಟು ಗೋ ಸಾಕಣೆ ಮಾಡತ್ತದ್ದ ಎಂಬುದರಿಂದ ಅವನು ಎಷ್ಟ ಆರ್ಥಿಕ ಸಬಲ ಎಂದು ಗುರುತಿಸುತ್ತಿದ್ದರು. ವಿನಿಮಯವೂ ಕೂಡಾ ಗೋವಿನ ಮುಖೇನವೇ ನಡೆಯುತ್ತಿತ್ತು ಎಂದು ಕಂಡು ಬರುತ್ತದೆ. ಒಬ್ಬ ಶ್ರೇಷ್ಠನನ್ನೋ, ಜ್ಞಾನಿಯನ್ನೋ ಗುರುತಿಸಿ ಗೌರವಿಸುವಾಗ ಗೌರವರೂಪದ ಕಾಣಿಕೆಯಾಗಿ ಕೊಡುತ್ತಿದ್ದುದು ಗೋವನ್ನು, ಈಗಿನ ಹಿತ್ತಾಳೆಯ ಸ್ಮರಣಿಕೆಯನ್ನಲ್ಲ. ಈ ಸ್ಮರಣಿಕೆಗಳು ನಾಶವಾಗುತ್ತವೆ. ಆದರೆ ಗೋ ವೃದ್ಧಿಯಾಗುತ್ತದೆ, ಶಾಶ್ವತವಾಗಿ ಉಳಿಯುತ್ತದೆ. ಗೋ ಎಂದಾಗ ಬರೇ ಹಾಲು ಕರೆಯುವ ಹಸು ಮಾತ್ರವಲ್ಲ ಎಂಬುದು ಅಗತ್ಯವಾಗಿ ತಿಳಿದಿರಬೇಕು. ರುದ್ರಾಧ್ಯಾಯ ಭಾಗದಲ್ಲಿ ಒಂದು ಕಡೆ ಉದಾಹರಿಸಲ್ಪಟ್ಟಿದೆ – “ಸವತ್ಸಾಃ ಸಪಯಸಃ ಋಷಭಃ”. ಅಂದರೆ ಕರುವಿದ್ದು, ಹಾಲು ಕೊಡುವ ಸಾಮರ್ಥ್ಯವೂ ಇದ್ದು, ಪುನರುತ್ಪಾದನಾ ಶಕ್ತಿಯನ್ನು ಹೊಂದಲು ಬೇಕಾದ ಎತ್ತು ಕೂಡಿರಲಿ ಎಂದೇ ಅರ್ಥ. ಅಂದರೆ ಸಪರಿವಾರ ಗೋ ಸಾಕಣೆ ಮಾಡಬೇಕು ಎಂದು ಭಾವ. ನೈಜವಾಗಿ ಸಾಕಣೆಯಲ್ಲಿ ನಮ್ಮ ಅಸಮರ್ಥತೆಯನ್ನು ಗುರುತಿಸಿ, ವೇದದಲ್ಲಿ ಯಜಮಾನಸ್ಯ ಪಶೂನ್ ಪಾಹಿ ಅಂದರೆ ತನ್ನ ಅಸಮರ್ಥತೆಯಿಂದ ನಿನ್ನ ಸಂಪತ್ತಿಗೆ ತೊಂದರೆಯಾಗದಿರಲಿ. ಇಲ್ಲಿ ವಿಶಾಲಾರ್ಥವಿದೆ. ಪಶು ಎಂದರೆ ಗೋ ಮಾತ್ರವಲ್ಲ, ಸರ್ವಸಂಪತ್ತು, ಸಪರಿವಾರವೆಲ್ಲಾ ಪಶುವೆಂದು ಉದಾಹರಿಸಲ್ಪಟ್ಟಿದೆ. ಪತ್ನಿ, ಪುತ್ರ ಹೊರತಾದ ತನ್ನದ್ದಾದ ಸಕಲವೂ ಪಶು, ಎಂದರೆ ಪಾಲಿಸಿಕೊಳ್ಳಬೇಕಾದ ಅಗತ್ಯತೆ ಮತ್ತು ಬದ್ಧತೆ ಇರತಕ್ಕದ್ದು ಎಂದು ಅರ್ಥ. ಹಾಗಾಗಿಯೇ ಹಿಂದೆ ಉದಾಹರಿಸಿದ ಮಂತ್ರದಲ್ಲಿ ಪ್ರಜಾಪತಿಯಾದವನೇ ನಿನ್ನನ್ನು ಅಂದರೆ ಗೋವನ್ನು ಎಷ್ಟು ಪೋಷಿಸಬಲ್ಲ? ಎಷ್ಟು ಸಮರ್ಥ? ನಿನ್ನ ಸತ್ಸಂಗದಿಂದ ಸಾಮಾನ್ಯರೂ ಬ್ರಹ್ಮಜ್ಞಾನಗಳನ್ನು ಹೊಂದಲು ಸಾಧ್ಯ. ಮಹಾಜ್ಞಾನಿಗಳು ನಿನ್ನ ಸಖ್ಯದಿಂದಲೇ ಮಹಾಜ್ಞಾನಿಗಳೆನಿಸಿಕೊಂಡಿದ್ದಾರೆ ಎಂದು ಘೋಷಿಸಿದೆ.
ಅಥರ್ವವೇದ ಕಾಂಡ ೯, ವೃಷಭ ಸೂಕ್ತ ೪, ೩೨ ಮಂತ್ರಗಳು ವೃಷಭಗಳ ಸಾಕಣೆ, ಅವುಗಳಿಂದಾಗುವ ಪರಿಣಾಮ, ವಾತಾವರಣ ಶುದ್ಧತೆ, ಮಾನಸಿಕ ಬಲ-ಭದ್ರತೆ, ಆರ್ಥಿಕ ಸಬಲತೆಗೆ ಪ್ರಾಪಂಚಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಎಷ್ಟು ಪೂರಕ ಆಲೋಚಿಸಿ?
ಗೋವೃಷಭಗಳು ಒಟ್ಟಾರೆ ಮಾನವ ಜೀವನದ ಭದ್ರತೆಗೆ ಆಧಾರಸ್ತಂಭ ಎನ್ನುವುದು ಈ ಮಂತ್ರಗಳಿಂದ ಅರ್ಥವಾಗುತ್ತದೆ.
೧. ಸಾಹಸ್ರತ್ವೇಷಃ ಋಷಭಃ ಪಯಸ್ವಾನ್ ವಿಶ್ವಾ ರೂಪಾಣಿ ವಕ್ಷಣಾಸು ಬಿಭ್ರತ್ |
ಭದ್ರಂ ದಾತ್ರೇ ಯಜಮಾನಾಯ ಶಿಕ್ಷನ್ ಬಾರ್ಹಸ್ಪತ್ಯ ಉಸ್ರಿಯಸ್ತಂತು ಮಾತಾನ್ ||
ಮಹಾಶಕ್ತಿಶಾಲಿಯಾದ, ಸದೃಢವಾದ, ಪುನರುತ್ಪಾದನಾ ಶಕ್ತಿಯನ್ನು ಹೊಂದಿದ ಒಂದು ಎತ್ತು ಯಜಮಾನನಿಗೆ ಸದಾ ಮಂಗಳಕರವಾಗಿರುತ್ತದೆ. ಮಂಗಳವನ್ನುಂಟು ಮಾಡುತ್ತದೆ. ಮಂತ್ರ ವಿವರಿಸುತ್ತಾ ಸಾಕ್ಷಾತ್ ಪರಮಾತ್ಮ ಸ್ವರೂಪಿಯೇ ವೃಷಭ ಎಂದು ಹೇಳುತ್ತಾ, ಯಜಮಾನನ ಭಾಗ್ಯಸೂತ್ರವನ್ನು ಈ ಗೋವೃಷಭಗಳು ಎಳೆಎಳೆಯಾಗಿ ವಿವರಿಸುತ್ತವೆ ಗಮನಿಸಿ.
೨. ಅಪಾಂ ಯೋ ಅಗ್ರೇ ಪ್ರತಿಮಾ ಬಭೂವ ಪ್ರಭೂ ಸರ್ವಸ್ಮೈ ಪೃಥಿವೀವ ದೇವೀ |
ಪಿತಾ ವತ್ಸಾನಾಂ ಪತಿರಘ್ನ್ಯಾನಾಂ ಸಾಹಸ್ರೇ ಪೋಷೇ ಅಪಿ ನಃ ಕೃಣೋತು ||
ಋಷಭರೂಪೀ ಭಗವಂತನೂ, ಮಾತೃರೂಪೀ ಹಸುವೂ ಹೇಗೆ ಪ್ರಪಂಚಧಾರಣೆ ಮಾಡುತ್ತದೆ? ಹೇಗೆ ಪ್ರಕೃತಿಯ ಸಮಸ್ತ ಚೈತನ್ಯ ಸಾರಸರ್ವಸ್ವ ಅಡಕಗೊಂಡು ಅಧೀನತ್ವ ಹೊಂದಿದೆ? ಜೀವನ ನಿರ್ವಹಣೆಯಲ್ಲಿ ಮಾನವನಿಗೆ ಹೇಗೆ ಸಹಕಾರಿ ಎಂದು ವರ್ಣಿಸಿದೆ.
೩. ಪುಮಾನಂತರ್ವಾಂತಸ್ಥವಿರಃ ಪಯಸ್ವಾನ್ ವಸೋಃ ಕಬಂಧಮೃಷಭೋ ಬಿಭರ್ತಿ |
ತಮಿಂದ್ರಾಯ ಪಥಿಭಿರ್ದೇವಯಾನೈರ್ಹುತಮಗ್ನಿರ್ವಹತು ಜಾತವೇದಾಃ ||
ಮಾನವ ಜೀವನದ ಸಹಕಾರಿಯಾಗಿ ತನ್ನೆಲ್ಲಾ ಶಕ್ತಿಸಂಪನ್ನತೆಯನ್ನು ಮಾನವರಿಗೆ ಧಾರೆಯೆರೆಯುತ್ತಾ ದೇವಯಜ್ಞವನ್ನು ನಿರ್ವಹಿಸುತ್ತಿವೆ. ಈ ವೃಷಭದಂಪತಿಗಳು ಆತ್ಮೋನ್ನತಿಗೆ ಸಹಕಾರಿಯಾಗುತ್ತಿವೆ.
೪. ಪಿತಾ ವತ್ಸಾನಾಂ ಪತಿರಘ್ನ್ಯಾನಾಮಥೋ ಪಿತಾ ಮಹತಾಂ ಗರ್ಗರಾಣಾಂ |
ವತ್ಸೋ ಜರಾಯು ಪ್ರತಿಧುಕ್ ಪೀಯೂಷ ಆಮಿಕ್ಷಾ ಘೃತಂ ತದ್ ವಸ್ಯ ರೇತಃ ||
ಹಸುವು ತನ್ನೆಲ್ಲಾ ಶಕ್ತಿಯನ್ನು ಬಸಿದು ಪೌಷ್ಟಿಕವಾದ ಜೀವಜಗತ್ತಿನ ಮೊದಲ ಆಹಾರ ಹಾಲನ್ನು ಕೊಟ್ಟು ಪ್ರಪಂಚವನ್ನು ಪೋಷಿಸುತ್ತದೆ. ಎತ್ತು ತನ್ನೆಲ್ಲಾ ಶಕ್ತಿಯನ್ನು ಧಾರೆ ಎರೆದು ಕೃಷಿವಾಣಿಜ್ಯಗಳ ಉತ್ಪನ್ನಕ್ಕೆ ಸಹಕಾರಿಯಾಗಿ ತನ್ನ ಯಜಮಾನನ ರಕ್ಷಣೆ ಮಾಡುವ ಪರಮಾತ್ಮನಂತಿದೆ. ನಮ್ಮ ಜಾನಪದೀಯ ಪದ್ಧತಿಯಲ್ಲಿ ಎತ್ತನ್ನು ಅಲಂಕರಿಸಿಕೊಂಡು ಮನೆ ಮನೆಗೆ ಹೋಗಿ ಪೂಜಿಸುವ ಪದ್ಧತಿಯಿದೆ ಗಮನಿಸಿ.
೫. ದೇವಾನಾಂ ಭಾಗ ಉಪನಾಹ ಏಷೋ ೩ ಪಾಂ ರಸ ಓಷಧೀನಾಂ ಘೃತಸ್ಯ |
ಸೋಮಸ್ಯ ಭಕ್ಷಮವೃಣೀತ ಶಕ್ರೋ ಬೃಹನ್ನದ್ರಿರಬವದ್ ಯಚ್ಛರೀರಂ ||
ಈ ಮಂತ್ರಭಾಗದ ಅರ್ಥ ಗಮನಿಸಿ. ಋಷಭದಂಪತಿಗಳು ಮನುಷ್ಯನ ಆಹಾರಶಕ್ತಿಗೆ ಮಾತ್ರವಲ್ಲ ಆರೋಗ್ಯಕ್ಕೆ ಪೂರಕವಾದ ಔಷಧಿಸಸ್ಯಗಳ ಬೆಳವಣಿಗೆಗೂ, ಅಂತಃಸತ್ವಕ್ಕೂ ಸಹಾಯಕವಾಗಿದೆ. ಅವುಗಳೆಲ್ಲಾ ಶುಕ್ರವೃದ್ಧಿಗೆ ಅಂದರೆ ಔಷಧಿಗಳ ಮೂಲಶಕ್ತಿಗೆ ಹಸುವಿನ ಗಂಜಲ, ಸೆಗಣಿಗೊಬ್ಬರಗಳು ಸಹಾಯಕ ಎನ್ನುವ ಸತ್ಯ ಎಲ್ಲರಿಗೂ ತಿಳಿದದ್ದೆ. ಎಲ್ಲಾ ಅನ್ನಾದಿಗಳಿಗೂ ಜಲ, ಸಸ್ಯರಾಶಿಗಳಿಗೆ ಶಕ್ತಿಯೂ, ಪಾವಿತ್ರ್ಯತೆ ಅವುಗಳಿಂದಲ ಪೂರೈಕೆಯಾಗುತ್ತಿವೆ ಎಂಬುದು ಎಷ್ಟು ಸತ್ಯ? ಗೋವೃಷಭಗಳ ಈ ಸಹಕಾರ್ಯ ಮನುಜಕುಲಕ್ಕೆ ವರದಾನವೆಂಬುದರಲ್ಲಿ ಎರಡು ಮಾತಿಲ್ಲ.
೬. ಸೋಮೇನ ಪೂರ್ಣಂ ಕಲಶಂ ಬಿಭರ್ಷಿ ತ್ವಷ್ಟಾ ರೂಪಾಣಾಂ ಜನಿತಾ ಪಶೂನಾಂ |
ಶಿವಾಸ್ತೇ ಸಂತು ಪ್ರಜನ್ವ ಇಹ ಯಾ ಇಮಾ ನ್ಯ೧ ಸ್ಮಭ್ಯಂ ಸ್ವಧಿತೇ ಯಚ್ಛ ಯಾ ಅಮೂಃ ||
ಹೇ ಋಷಭನೇ ನೀನು ಮಹಾಶಕ್ತಿಶಾಲಿಯೂ, ಧೀಮಂತನೂ, ಕರುಣಾಳುವೂ ಆಗಿದ್ದೀಯೆ. ಈ ಜಗತ್ತಿನ ಬಾಧೆಗಳಿಂದ ದೂರಮಡುವ ಶಕ್ತಿಸಂಪನ್ನನಾಗಿದ್ದೀಯೆ. ನೀನು ಎಲ್ಲರಿಗೂ ಶುಭಕಾರಿಯಾದ್ದರಿಂದ ನಿನ್ನನ್ನು ಶಿವನೆಂದು ಉದಾಹರಿಸುತ್ತಾರೆ. ಪಶುಪತಿಯೂ ನೀನಾಗಿದ್ದೀಯೆ.
೭. ಆಜ್ಯಂ ಬಿಭರ್ತಿಘೃತಮಸ್ಯ ರೇತಃ ಸಾಹಸ್ರಃ ಪೋಷಸ್ತಮು ಯಜ್ಞಮಾಹುಃ |
ಇಂದ್ರಸ್ಯ ರೂಪಮೃಷಭೋ ವಸಾನಃ ಸೋ ಅಸ್ಮಾನ್ ದೇವಾಃ ಶಿವ ಐತು ದತ್ತಃ ||
ದೇವತಾ ಆಹಾರವಾದ ಆಜ್ಯವಾಗಲೀ, ಪಾರ್ಥಿವ ಶಕ್ತಿಯಾಗಲೀ, ರೇತಸ್ಸಾಗಲೀ ಎರಡೂ ನಿನ್ನಿಂದಲೇ ಉತ್ಪನ್ನವಾಗುತ್ತವೆ. ಆಜ್ಯಭೋಕ್ತೃವಾದ ದೇವತೆಗಳು ಯಜ್ಞರೂಪದಲ್ಲಿ ಅದನ್ನು ಸ್ವೀಕರಿಸಿ ಸಂತೃಪ್ತರಾಗುತ್ತಾರೆ. ಪಾರ್ಥಿವರು ಅವರಿಂದ ಅನುಗ್ರಹಿಸಲ್ಪಟ್ಟ ರೇತಸ್ಸನ್ನು ಪಡೆದು ಆಮೋದದಿಂದ ವಿಹರಿಸುತ್ತಾರೆ. ಅದನ್ನೇ ಶಕ್ತಿ ಅಥವಾ ಇಂದ್ರ ಎಂದು ಕರೆಯುತ್ತಾರೆ. ಆದರೆ ಎರಡರ ಉತ್ಪತ್ತಿಗೂ ನೀನೇ ಕಾರಣವೆಂಬುದು ಅರಿತ ನಾವು ನಿನ್ನನ್ನು ಗೌರವಿಸುತ್ತೇವೆ, ಪೂಜಿಸುತ್ತೇವೆ. ದಾನಶೀಲನಾದ ನೀನು ಪ್ರಪಂಚಕ್ಕೆ ಮಂಗಳಕಾರಕನೂ, ಜ್ಞಾನದಾಯಕನೂ ಆಗಿ ನಮ್ಮನ್ನು ಅನುಗ್ರಹಿಸು.
೮. ಇಂದ್ರಸ್ಯೌಜೋ ವರುಣಸ್ಯ ಬಾಹೂ ಅಶ್ವಿನೋರಂಸೌ ಮರುತಾಮಿಯಂ ಕಕುತ್ |
ಬೃಹಸ್ಪತಿಂ ಸಂಭೃತಮೇತಮಾಹುರ್ಯೇ ಧೀರಾಸಃ ಕವಯೋ ಯೇ ಮನೀಷಿಣಃ ||
ನಿನ್ನಿಂದ ಕೊಡಲ್ಪಡುವ ಆ ಐದು ಅಮೃತಸಮಾನವಾದ ಔಷಧಿಗಳಿಂದ ನಾವು ಸದೃಢರಾಗುತ್ತೇವೆ ಅನುಗ್ರಹಿಸು.
೧. ಬೃಹಸ್ಪತಿ = ಹಾಲು; ನಮಗೆ ಪೌಷ್ಠಿಕವೂ, ಜ್ಞಾನಪ್ರದವೂ ಆಗಿರಲಿ.
೨. ವರುಣ = ಮೊಸರು; ದೃಢಮನಸ್ಕತೆಯನ್ನೂ, ಪ್ರಾಪಂಚಿಕ ಬಂಧ ವಿಮೋಚನೆಯನ್ನೂ ಅನುಗ್ರಹಿಸಲಿ.
೩. ಇಂದ್ರ = ತುಪ್ಪ; ಅದು ನಮ್ಮನ್ನು ಶಕ್ತಿಶಾಲಿಗಳನ್ನಾಗಿ ಮಾಡಲಿ.
೪. ಅಶ್ವಿನಿ = ಗೋಮೂತ್ರ; ಅದು ನಮ್ಮನ್ನು ನಿರೋಗಿಯನ್ನಾಗಿಯೂ, ಸದೃಢನನ್ನಾಗಿಯೂ ಇಡಲಿ.
೫. ಮರುತ್ = ಸೆಗಣಿ; ಈ ಪೃಥ್ವಿಯ ಎಲ್ಲಾ ರೀತಿಯ ಬಾಧಕಕಾರೀ ವಿಷಯುಕ್ತ ಕ್ರಿಮಿ ಜಂತುಗಳಿಂದ ನಮ್ಮನ್ನು ದೂರ ಇಡಲಿ.
ಈ ರೀತಿಯ ನಿನ್ನ ರಕ್ಷಣೆಯನ್ನು ಹೊಂದಿ ಪಾರ್ಥಿವ ಶರೀರಿಗಳಾದ ನಾವು ನಿನ್ನಿಂದ ಪ್ರಾಣಶಕ್ತಿಯನ್ನು ಪಡೆಯುತ್ತಿದ್ದೇವೆ ಎಂಬ ಅರಿವಿದೆ ನಮಗೆ.
ವಂದೇ ಗೋ ಮಾತರಂ
ಮಾತಿನ ಪ್ರಭಾವ | ಮಾತು ಹೇಗಿರಬೇಕು
ಮನದಾಳದಿಂದ ಬರುವ ಮಾತಿನ ಮಹತ್ವ ಮತ್ತು ಮಾತನಾಡುವ ಮಾನವರಲ್ಲಿ ಮಾತಿನ ಪ್ರಭಾವ.
वागर्थाविव सम्पृक्तौ वागर्थप्रतिपत्तये|
जगतः पितरौ वन्दे पार्वतीपरमेश्वरौ||
ಕಾಳಿದಾಸನ ಕಾವ್ಯದ ಶ್ಲೋಕವನ್ನು ನೆನಪು ಮಾಡಿಕೊಂಡು ,ಜಗತ್ತಿನ ತಂದೆ-ತಾಯಿಯಾದ ಪಾರ್ವತಿ-ಪರಮೇಶ್ವರರನ್ನು ಮನದಿ ಧ್ಯಾನಿಸುತ್ತಾ, ಗಣಪತಿಗೆ ವಂದಿಸಿ, ಮನದಾಳದ ಭಾವನೆಯನ್ನು ಅಭಿವ್ಯಕ್ತಪಡಿಸುವ “ಮಾತು” ಎಂಬ ವಿಷಯದ ಬಗ್ಗೆ ಕೆಲವೇ ಮಾತುಗಳಲ್ಲಿ ಸಂಪೂರ್ಣ ವಿಚಾರ ವಿನಿಮಯ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.
ಅಂತಹ ಮಾತಿನ ಕುರಿತು ನನ್ನ ಮತಿಗೆ ತಿಳಿದಂತೆ ಮಾಹಿತಿ ನೀಡುವ ಪ್ರಾಮಾಣಿಕ ಪ್ರಯತ್ನ.
ಮಾನವ ತನ್ನ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಬಳಸಿಕೊಂಡ ಮಾಧ್ಯಮವೇ ಭಾಷೆ. ಅಂತಹ ಭಾಷೆಯ ಮೂಲ ಬಂಡವಾಳವೇ ಮಾತು.
ಮಾತಿನ ಮೂಲವೇ ಅಕ್ಷರ.ಅಕ್ಷರ ಎಂದರೆ ನಾಶವಾಗದೇ ಎಂದೆಂದಿಗೂ ಅಮರವಾಗಿ ಇರತಕ್ಕದ್ದು.
ಮಾತು ಎಂಬುದು ಮಾತನಾಡುವವರ ಮೇಲೆ ಹೇಳಲಾರದಂತಹ ಪ್ರಭಾವ ಬಿರುತ್ತದೆ.ಅದರ ವರ್ಣನೆಯನ್ನು ವಚನದಲ್ಲಿ ಸರ್ವಜ್ಞನು
ಈ ರೀತಿ ಹೇಳಿದ್ದಾನೆ———
“ಮಾತಿನಿಂದಲೇ ನಗೆ ನುಡಿಯು,
ಮಾತಿನಿಂದಲೇ ಹಗೆ ಹೊಲೆಯು.
ಮಾತಿನಿಂದಲೇ ಸರ್ವ ಸಂಪದವು,
ಲೋಕಕ್ಕೆ ಮಾತೇ ಮಾಣಿಕ್ಯ ಸರ್ವಜ್ಞ.”||
ನಾವಾಡುವ ಮಾತಿನಲ್ಲೇ ಇನ್ನೊಬ್ಬರಿಗೆ ನಗು, ದ್ವೇಷ, ಅಸೂಯೆ, ಪರಿವರ್ತನೆ ಇತ್ಯಾದಿಗಳು ಉಂಟಾಗುತ್ತದೆ. ನಮ್ಮಿಂದ ಲೋಕಕ್ಕೆ ಮಾಣಿಕ್ಯದಂತ ನಾಣ್ಣುಡಿ ಮೂಡಿ ಬರವಂತಾಗಲಿ ಎಂದು ಆ ಮಾತೆ ವಾಗೀಶ್ವರಿಯನ್ನು ನಿತ್ಯವೂ ಪ್ರಾರ್ಥಿಸಬೇಕು.
“ಮಾತು ಬೆಳ್ಳಿ ಮೌನ ಬಂಗಾರ”,”ಮಾತು ಬಲ್ಲವನಿಗೆ ಜಗಳವಿಲ್ಲ”, “ನುಡಿದರೆ ಮುತ್ತಿನ ಹಾರದಂತಿರಬೇಕು”
“ಮಾತು ಮನೆಕಡಿಸಿತು”, ಇತ್ಯಾದಿ ಗಾದೆಗಳು ಮತ್ತು ನುಡಿ ಗಟ್ಟುಗಳು ಕನ್ನಡದಲ್ಲಿ ಮಾತಿನ ಮಹತ್ವವನ್ನು ಸಾರುತ್ತದೆ.
ಸಂಸ್ಕೃತದಲ್ಲಿ ಸುಭಾಷಿತಗಳು ಮಾತಿನ ಮಹತ್ವವನ್ನು ವಿಧ-ವಿಧವಾಗಿ ಸಾರುತ್ತದೆ.
ಅದರಲ್ಲಿ ಒಂದು ಅರ್ಥಗರ್ಭಿತವಾದ ಸುಭಾಷಿತ
ಇಂತಿದೆ———-
“संसार विषयवृक्षस्य द्वे फलेऽव अमृतोपमे|
सुभाषित रसास्वादःसंगतिः सुजनैः सह||”
ಇದರ ಅರ್ಥ–
ಸಂಸಾರ ಎಂಬ ವಿಷವೃಕ್ಷದಲ್ಲಿ ಅಮೃತಯುಕ್ತವಾದ ಎರಡು ಹಣ್ಣುಗಳಿವೆ.ಸುಮಧುರವಾದ ಮಾತು ಮೊದಲನೇ ಹಣ್ಣು,ಸಜ್ಜನರ ಸಹವಾಸ ಎರಡನೇ ಹಣ್ಣು.ಅಂದರೆ ಸಜ್ಜನರ ಸಹವಾಸದಿಂದ ಮಾತ್ರ ಸುಮಧುರವಾದ ಮಾತುಗಳು ಕೇಳಿಬರಲು ಸಾಧ್ಯ.
ಮಾತು ಎಂಬುದು ಯೋಗ್ಯ ಕಾಲದಲ್ಲಿ ಮತಿಯಿಂದ ಮೂಡಿ ಬಂದರೆ ಮಾತ್ರ ಅದು ಮಹತ್ವವನ್ನೂ ಮತ್ತು ಅದರದೇ ಆದ ತೂಕ(ಭಾರ)ವನ್ನು ಪಡೆಯಲು ಸಾಧ್ಯ.
ಅದನ್ನೇ ಕನ್ನಡ ವಚನಸಾಹಿತ್ಯ ———
“ಹೊತ್ತಿಗೊದಗಿದ ಮಾತು ಸತ್ತವನು ಎದ್ದು ಬಂದಂತೆ,
ಹೊತ್ತಾಗಿ ನುಡಿದ ಬರಿ ಮಾತು ಹಾಳೂರ ಮುತ್ತಿನಂತಿಕ್ಕು ಸರ್ವಜ್ಞ…”||
ಅಕಾಲದಲ್ಲಿ ಪದೇ ಪದೇ ಎಡೆಬಿಡದೇ ಆಡುವ ಮಾತುಗಳು ಇನ್ನೊಬ್ಬರಿಗೆ ಹಿಂಸೆಯಾಗಿಯೂ ಕಾಡಬಹುದು.
ಸರ್ವೇಸಾಮಾನ್ಯ ಜನತೆಯಲ್ಲಿ ಮಾತು
ಮಾತನಾಡುವ ವಿಷಯದಲ್ಲಿ ಮತ್ತು ಮಾತನಾಡುವವರಲ್ಲಿ ಬಹಳಷ್ಟು
ವರ್ಗಗಳಿಗೆ ಸೇರಿದ ಜನರಿದ್ದಾರೆ.ಅದರಲ್ಲಿ ಸಾಧಾರಣ ಮಾತನಾಡುವ ಜನರ ತಿಳಿದುಕೊಳ್ಳೋಣ……..
ಅವಶ್ಯಕತೆಯಷ್ಟೇ ಮಾತನಾಡುವವರು
ಅವಶ್ಯಕತೆಯಷ್ಟೆ ಮಾತನಾಡುವವರು ಅಂದರೆ
ಉದಾಹರಣೆಗೆ ಕೆಲವರ ಹತ್ತಿರ ಊಟ ಆಯ್ತಾ?ಹೇಗಿದ್ದೀರಾ?ಎಂದರೂ ಊಂ ಅಥವಾ ಉಹೂಂ ಉತ್ತರ ಪಡೆಯಲು ಸಾಧ್ಯ ಅಷ್ಟೇ.ಇವರ ಸ್ನೇಹ, ಸಹವಾಸ ಸ್ವಲ್ಪ ಕಷ್ಟವೇ. ಇಂತಹವರ ಜೋತೆ ಜೀವಿಸುವವರಿಗೆ ತುಂಬಾ ತಾಳ್ಮೆ,ಸಹನೆ ಬೇಕಾಗುತ್ತದೆ.ಇಂತಹವರು ತಮ್ಮ ನಿರ್ಧಾರ ತಿಳಿಸಲು ಬಹಳ ಸಮಯ ಬೇಕಾಗುತ್ತದೆ.ಇಂತಹವರಿಗೆ ಸಂಶಯ ಹೆಚ್ಚು ಮತ್ತು ಯಾರನ್ನೂ ಸಂಪೂರ್ಣ ನಂಬಲೂ ಅಸಾಧ್ಯ.ಇದು ಅತೀ ಓದಿದವರಲ್ಲಿ,ಉನ್ನತ ಸ್ಥಾನಕ್ಕೆ ಏರಿದವರಲ್ಲಿ, ಬಾಲ್ಯದಲ್ಲಿ ಅವಮಾನ ಸಹಿಸಿ ಕಷ್ಟದಿಂದ ಮೇಲೆ ಬಂದವರಲ್ಲಿ , ಸಂಶೋಧನಾತ್ಮಕ ವೃತ್ತಿಯಲ್ಲಿ ಇರುವವರಲ್ಲಿ ಕಾಣಬಹುದು.
ಅತಿಯಾಗಿ ಮಾತನಾಡುವವರು
ಅತಿ ಮಾತನಾಡುವವರಲ್ಲಿ ಎರಡು ವಿಧ .
ಮೊದಲನೆಯ ಸಾಲಿನವರು ಜನ್ಮತಃ ಅತಿಯಾಗಿ ಮಾತನಾಡುವವರು. ಇವರು ನಂಬಿಕಸ್ಥರು ಹಾಗೂ ಯಾರಿಗೂ ಹಾನಿ ಮಾಡದವರು.ಇವರ ಬಳಿ ಯಾವ ಗುಟ್ಟು ನಿಲ್ಲುವುದಿಲ್ಲ,ಮತ್ತು ಪರರ ಬಗ್ಗೆ ಅನುಕಂಪ ಜಾಸ್ತಿ.ಇವರು ಪದೇ ಪದೇ ಮೋಸಕ್ಕೆ ಸಿಲುಕಿ,ಕಷ್ಟ ತಂದುಕೊಳ್ಳುತ್ತಾರೆ.
ಇನ್ನೊಂದು ವರ್ಗದ ಜನರು ಸ್ವಭಾವತಃ ಅತಿ ಮಾತನಾಡುವವರಲ್ಲ.ಆದರೆ ಸಂದರ್ಭಕ್ಕನುಸಾರವಾಗಿ ತಮ್ಮ ಕಾರ್ಯ ಸಾಧನೆಗಾಗಿ ಅತಿ ಮಾತನಾಡುತ್ತಾರೆ.
ಇದು ವ್ಯಾಪಾರ-ವಹಿವಾಟು,ದಲಾಲಿಗಳು, ಜೀವವಿಮೆ ಏಜೆಂಟರು, ಕಂಪನಿ ಪ್ರೊಡಕ್ಷನ್ಸ್ ನಡೆಸುವವರಲ್ಲಿ ಕಾಣಬಹುದು.
ಪರಾವಲಂಬಿ ಮಾತುಗಾರರು
ಪರಾವಲಂಬಿ ಮಾತುಗಾರರು ಎಂದರೆ ಮಾತಿಗಾಗಿ ಇನ್ನೊಬ್ಬರನ್ನು ಅವಲಂಬಿಸುವುದು ಎಂದಲ್ಲ ಇವರು ಮಾತನಾಡುತ್ತಾ ಪ್ರತಿಯೊಂದಕ್ಕೂ ಇನ್ನೊಬ್ಬರ ವಿಷಯ ಉದಾರಿಸುವ ಸ್ವಭಾವ.
ಇವರಲ್ಲೂ ಎರಡು ವಿಧಧವರು ಇದ್ದಾರೆ.
ಮೊದಲನೆಯ ಸಾಲಿನವರು ಸತ್ಯವಂತರು .ಇವರು ವಿಷಯಕ್ಕೆ ಸಂಬಂಧಿಸಿದ ಹೋಲಿಕೆಗಾಗಿ
ಬೇರೆಯವರ ಉದಾಹರಣೆ ಕೊಡುತ್ತಾರೆ.
ಇದು ವಕೀಲ, ವಿದ್ವಾಂಸರು,ಭಾಷಣಗಾರರಲ್ಲಿ ಕಾಣಬಹುದು.
ಇನ್ನೊಂದು ಸಾಲಿನವರು ನಯವಂಚಕರು
ಸುಮ್ಮ-ಸುಮ್ಮನೆ ಎಲ್ಲರ ಹೆಸರನ್ನು ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.ಉದಾಹರಣೆ ಸಮೇತ ಹೇಳುವುದಾದರೆ ನಮ್ಮ ಹುಡುಗನಿಗೆ ಕೆಲಸ ಸಿಗಲಿಲ್ಲ ಎಂದರೆ ಚಿಂತೆ ಮಾಡಬೇಡಿ ನನ್ನ ಪರಿಚಯದವರು ಮಂತ್ರಿಯ ಸಂಬಂದಿಕರು ಎಂದು ನಮ್ಮ ಮಿತ್ರರು ದೊಡ್ಡ ಹುದ್ದೆಯಲ್ಲಿ ಇದ್ದಾರೆ ಅವರ ಹತ್ತಿರ ಹೇಳಿದರೆ ನಿಮಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂದು ಹೊಗಳಿ ಅಗುಳು ಬೇಯಿಸಿ ತಮ್ಮ ಹೊತ್ತಿನ ಊಟ ಪೂರೈಸಿಕೊಳ್ಳುತ್ತಾರೆ.
ಈ ಎರಡನೇ ಸಾಲಿನ ಪರಾವಲಂಬಿ ಮಾತುಗಾರರು ಯಾವುದಕ್ಕೂ ಉಪಯೋಗ ಇಲ್ಲದವರು ಹಾಗೂ ಅವರು ಹೇಳಿದ್ದರಲ್ಲಿ ಅರ್ಧ ನಿಜವಾಗಿದ್ದರೆ ಇನ್ನರ್ಧ ಸುಳ್ಳಿರುತ್ತದೆ.”ಮಾಡೋನು ಹೇಳಲಾರ ಹೇಳೋನು ಮಾಡಲಾರ” ಎಂಬ ಗಾದೆ ಮಾತಿನಂತೆ ಇವರಿಗೆ ಆತ್ಮ ಪ್ರಶಂಸೆ ಮತ್ತು ಪರನಿಂದನೆ ಯೊಂದೇ ಬಂಡವಾಳ.ಇವರಿಗೆ ಸ್ವಲ್ಪ ಗೊತ್ತಿರುವ ವಿಷಯಗಳನ್ನೇ ದೊಡ್ಡದಾಗಿ ಮಾಡಿ ಹೇಳುವ ದುರಭ್ಯಾಸವಿರುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾತು
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾತೆಂಬುದು ಮನಸ್ಸು ಮತ್ತು ಬುದ್ಧಿಶಕ್ತಿ ಗೆ ಸಂಬಂಧಪಟ್ಟಿದ್ದು.
ಮನೋಕಾರಕ ಚಂದ್ರ ಮತ್ತು ಬುದ್ಧಿ ಹಾಗೂ ವಾಕ್ ಕಾರಕ ಬುಧ ಸಬಲರಾಗಿದ್ದು ಗುರುಯುತಿ ಅಥವಾ ಗುರುದೃಷ್ಠಿ ಇದ್ದರೆ ಆ ಜಾತಕನು ಅದ್ವಿತೀಯ ವಾಕ್ಚಾತುರ್ಯವುಳ್ಳವನಾಗುತ್ತಾನೆ.ಜಾತಕ ಮತ್ತು ಪ್ರಶ್ನಾವಳಿ ದ್ವಾದಶ ಭಾವ ಚಿಂತನೆಯಲ್ಲಿ ದ್ವಿತೀಯ ಭಾವವು ವಾಕ್ (ಮಾತಿನ) ಸ್ಥಾನವಾಗಿದೆ.ದ್ವಿತೀಯಾಧಿಪತಿ ಸಬಲವಾಗಿದ್ದಲ್ಲಿ ಅಥವಾ ದ್ವಿತೀಯದಲ್ಲಿ ಬಲಿಷ್ಠ ಗ್ರಹನು ಮಿತ್ರಗ್ರಹನ ಯುಕ್ತ ವಾಗಿದ್ದರೆ ಆ ವ್ಯಕ್ತಿಯ ಮಾತುಗಾರಿಕೆ ಮನೋಹರವಾಗಿಯೂ,ಹಾಸ್ಯಭರಿತವೂ, ತಾರ್ಕಿಕವಾಗಿಯೂ,ಪ್ರಾಸಬದ್ದವಾಗಿ ಇರಲು ಸಾಧ್ಯ.ಮತ್ತು ಆತನ ಮಾತಿನಿಂದ ಮಾನಸಿಕವಾಗಿ ನೊಂದವರಿಗೆ ಸಾಂತ್ವನ ದೊರೆಯುತ್ತದೆ.ಆತನು ಸಮಾಜಮುಖಿಯಾಗಿ ದುರ್ಮಾರ್ಗಿಯನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾತಿನಿಂದ ಆತನ ಮನಸ್ಸನ್ನು ಪರಿವರ್ತಿಸುತ್ತಾನೆ.ಮತ್ತು ಸಾಧನೆಯ ಗರಿ ಗಿಟ್ಟಿಸಿಕೊಳ್ಳುವವರಿಗೆ ಗುರಿಯನ್ನು ತೋರಿಸುವ ಗುರುವಾಗುತ್ತಾನೆ.
ಅದೇ ರೀತಿ ದ್ವಿತೀಯಾಧಿಪತಿ ವೈರಿ ಕ್ಷೇತ್ರದಲ್ಲಿ,ಪಾಪಗ್ರಹಗಳ ಜೊತೆಗೆ ಸೇರಿ ನೀಚಭಾವದಿಂದ ನೋಡಲ್ಪಟ್ಟರೆ ಕೆಟ್ಟ ವಿತಂಡ ವಾದದ ಮುಖಾಂತರ ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾರಣನಾಗುತ್ತಾನೆ ಮತ್ತು ಮನೆಯಲ್ಲಿ ತನ್ನ ವಾಗ್ದೋಷದ ಪ್ರಭಾವದಿಂದ ವಾಸ್ತುಬಲವನ್ನೇ ಕುಂದಿಸಿ ಮನೆ ಬಿಟ್ಟು ಅಲೆಮಾರಿಯಾಗಿ ಜೀವನ ಸಾಗಿಸುತ್ತಾನೆ.ಮನೆತನವನ್ನೇ ನಾಶದಂಚಿಗೆ ಕೊಂಡೊಯ್ಯುತ್ತಾನೆ.
ಜ್ಯೋತಿಷ್ಯದಂತೆ ಧರ್ಮಶಾಸ್ತ್ರ ,ತರ್ಕ,ವೇದಾಂತಾದಿ ಶಾಸ್ತ್ರಗಳ ಹಾಗೂ ಪುರಾಣಗಳ
ಪಾಠ- ಪ್ರವಚನಗಳಲ್ಲಿ ಮಾತು ಅಗ್ರವಾದ ಸ್ಥಾನ ಪಡೆದಿದೆ.
“ಮನಃಶಾಸ್ತ್ರ” ದಲ್ಲಿ ಮಾತು
“ಮ” ಕಾರದ ಕುರಿತು ದೇವಭಾಷೆಯಾದ ಸಂಸ್ಕೃತವು
ಈ ಮಾತನ್ನು ಹೇಳುತ್ತದೆ.
मनो मधुकरो मेघो मानिनी मदनो मरुत्|
मा मदो मर्कटो मत्स्यो म कारो दश चञ्चलाः||
ಮನಸ್ಸು,ಮಧುಕರ(ಜೇನುಹುಳುಗಳು), ಮೇಘ(ಮೋಡ),ಮಾನಿನಿ (ಹೆಣ್ಣು), ಮುದನ(ಕಾಮ),ಮಾರುತ(ಗಾಳಿ),ಮಾ(ನಾನು),
ಮದ(ಗರ್ವ),ಮರ್ಕಟ(ಮಂಗ), ಮತ್ಸ್ಯ (ಮೀನು) ಈ ಹತ್ತು “ಮ”ಕಾರ ಶಬ್ದವು ಚಂಚಲ ಎಂದು ಪರಿಗಣಿಸಬಹುದು.
ಮೇಲಿನ ಶ್ಲೋಕದಲ್ಲಿ “ಮ”ಕಾರದಲ್ಲಿ ಚಂಚಲತೆಯ ಕುರಿತು ಮೊದಲು ಮನಸ್ಸನ್ನು ಸೂಚಿಸಲಾಗಿದೆ.
“मनः एव मनुष्याणां कारणं बन्धमोक्षयोः” ಮನಸ್ಸೇ ಮಾನವನ ಬಂಧನ ಮತ್ತು ಮೋಕ್ಷಕ್ಕೆ ಕಾರಣ.ಮನುಷ್ಯನ ಮನಸ್ಸು ಬಹಳ ಮೃದು . ಮಾತಿನಿಂದಲೇ ಮನಸ್ಸಿಗೆ ನಲಿವು (ನೆಮ್ಮದಿ) ಮತ್ತು ನೋವು ಉಂಟಾಗುತ್ತದೆ.ನೋವು ನಲಿವಿನಿಂದಲೇ ಮನಸ್ಸಿನ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ಸಂಭವಿಸುತ್ತದೆ.
ಮಾತು ಬೇಕು ಆದರೆ ಅತಿಯಾಗಬಾರದು.ತನ್ನಷ್ಟಕ್ಕೇ ತಾನೇ ಮಾತನಾಡುವ
ವ್ಯಕ್ತಿಯ ರೀತಿ, ನೀತಿಗಳಿಂದ ಅವನೆಂತಹ
ಸ್ವಭಾವದವನು ಮತ್ತು ಆತನ ಮನಸ್ಥಿತಿಯ ಕುರಿತು ಮನಃಶಾಸ್ತ್ರವು ಬೇರೆಯದೇ ರೀತಿಯಲ್ಲಿ ಸಾರುತ್ತದೆ.
Psychology ಯಲ್ಲಿ Human behaviour csycsologyಎಂಬ ವಿಭಾಗವು ಮನುಷ್ಯನ ವರ್ತನೆ ಹೇಗಿರುತ್ತದೆ ಮತ್ತು ಆರೀತಿ ಏಕಿರುತ್ತದೆ ,ಏತಕ್ಕಾಗಿ ಹಾಗಾಗಿದೆ ಎಂಬಿತ್ಯಾದಿ ವಿವರಗಳನ್ನು ಮನುಷ್ಯನ ನಡವಳಿಕಾ ಶಾಸ್ತ್ರವಾದ “ಮನಃಶಾಸ್ತ್ರ” ವು ತಿಳಿಸುತ್ತದೆ.
ಅದರಂತೆ ಅಂತಹವರನ್ನು ಮನಃಶಾಸ್ತ್ರಜ್ಞರು ಮಾನಸಿಕ ಕಾಯಿಲೆ ಎಂದು ಪರಿಗಣಿಸುತ್ತಾರೆ.
ಲೌಕಿಕ ಜೀವನದಲ್ಲಿ ಮಾತು
ಲೌಕಿಕವಾಗಿ ಹೇಳುವುದಾದರೆ ಮಾತುಗಾರಿಕೆಯೇ ಮನುಷ್ಯನ ಮೂಲಭೂತ ಬೌದ್ಧಿಕ ಶಕ್ತಿ.
“ಬಾಯಿ ಬಿಟ್ಟರೆ ಬಂಡವಾಳ ಬಯಲು”ಎಂಬ ನಾಣ್ಣುಡಿಯಂತೆ ಹೇಳುವುದಾದರೆ ಕಡಿಮೆ ಮಾತನಾಡುವ ಜನರಿಗೆ ಕ್ಷೇಮ. ಏಕೆಂದರೆ ಕಡಿಮೆ ಮಾತನಾಡುವ ವ್ಯಕ್ತಿಯನ್ನು ಸಮಾಜ “ಗಂಭಿರ” ನೆಂದೋ, “ಬುದ್ಧಿವಂತ”ನೆಂದೋ , “ಲೆಕ್ಕಾಚಾರದ ಮನುಷ್ಯ”ನೆಂದೋ ಗುರುತಿಸುತ್ತದೆ.ಓತಪ್ರೇತವಾಗಿ ಅಗತ್ಯಕ್ಕಿಂತ ಹೆಚ್ಚು ಮಾತನಾಡುವವರನ್ನು “ತರಲೆ”,”ತಲೆಹರಟೆ”,”ಬಾಯಿಬಡುಕ”ನೆಂದು ಸಮಾಜ ಚಿತ್ರಿಸುತ್ತದೆ.
ಹೆಚ್ಚು ಮಾತನಾಡುವವರನ್ನು ಬುದ್ಧಿವಂತರಲ್ಲ ಎಂದು ಭಾವಿಸುವುದು ತಪ್ಪಾಗುತ್ತದೆ.ಏಕೆಂದರೆ ಹೆಚ್ಚಾಗಿ ಮಾತನಾಡಲು ಅವರ ಬಳಿ ವಿಷಯವಿದೆ ಎಂದಾಯಿತು.ವಿಷಯ ಇದ್ದಾಗ ದಡ್ಡನಾಗಲು ಹೇಗೆ ಸಾಧ್ಯ?ಆದರೆ ಮಾತಿನಲ್ಲಿ ನಯಗಾರಿಕೆ,ಹಿಡಿತ,ಗಾಂಭೀರ್ಯತೆ ,
ಸಮಯ- ಸಂದರ್ಭಾನುಸಾರ ಮಾತನಾಡುವ ಚಾಕಚಕ್ಯತೆ ಮತ್ತು ನಾಜೂಕುತನ ಹಾಗೂ ಸೂಕ್ತ ಪರಿಸ್ಥಿತಿಯಲ್ಲಿ ಸೂಕ್ತ ಸಮಾಧಾನಕರ ಮಾತುಗಳನ್ನು ಆಡುವುದು ಅಗತ್ಯ ಅಷ್ಟೇ.
प्रियवाक्यप्रदानेन सर्वे तुष्यन्ति जन्तवः|
तस्मात्तदेव वक्तव्यं वचने का दरिद्रता||
ಮಮತೆಯುಕ್ತ ಮಾತಿಂದ ಕರೆದಾಗ ಆ ಕರೆಗೆ ಓಗೊಟ್ಟು ಮೂಕ ಪ್ರಾಣಿಗಳೇ ಓಡೋಡಿ ಬರುತ್ತವೆ.ಇನ್ನು ಮಾತನಾಡುವ ಮನುಜನಿಗೆ ಪ್ರೀಯವಾದ ಮಾತಿನಿಂದ ಮಾತನಾಡಿಸಿದರೇ ಸಂತೋಷಗೊಳ್ಳದೇ ಇರಲಾರನೇನು? ಅಂತಹ ಪ್ರೀಯವಾದ ಮಾತನಾಡಲು ಮೌನವೇಕೆ?
ಮೌನ ಮುರಿದು ಮಾತನಾಡಿ ಮಾನವರ ಮಾನವನ್ನು ಕಾಪಾಡಿ.
ಸಮಾಜದಲ್ಲಿ ಎಲ್ಲರನ್ನೂ ಸಂತಸದಿಂದ ಅತಿಥಿಗಳಾಗಿ ಆಧರಿಸಿ
ಸಮಾಧಾನಕರವಾದ ಮಾತನಾಡಿ ಎಂಬುದು ಮಾತನಾಡುವ ಮನುಜರಿಗೆ ನನ್ನ ಮನದಾಳದ ಮಾತುಗಳು.
ಈ ಮಾತಿನ ಮಾಹಿತಿಯ ಕುರಿತು ನಿಮ್ಮ ಮನಸ್ಸಿನ ಅಭಿಪ್ರಾಯ ತಿಳಿಸಿ.. ಇಂತಿ ನಿಮ್ಮ ಮಾತಿಗಾಗಿ ಕಾಯುತ್ತಿರುವ ಮಾನವ
