ಶಿವನ ಬಗ್ಗೆ ತಿಳಿದುಕೊಳ್ಳಬೇಕಾದ ಕುತೂಹಲಕಾರಿ ಸಂಗತಿಗಳು
Index of Important Points
🍀 ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾ ಶಿವನು ಲಯಕಾರನು 🍀
🌷ಮಹಾದೇವ, ನಟರಾಟ, ನೀಲಕಂಠ, ಚಂದ್ರಶೇಖರ, ಜಟಾಧರ, ನಾಗಭೂಷಣ ಹೀಗೆ ನೂರಾರು ಹೆಸರುಗಳನ್ನು ಪಡೆದವನು ಈ ನಂಜುಂಡೇಶ್ವರನು. ಲಯಕಾರನಾದ ಮಹಾಶಿವನು ಈ ಲೋಕದಲ್ಲಿ ಅಖಂಡತೆಯ ಸಂಕೇತ. ಹಿಂದೂ ಪುರಾಣಗಳಲ್ಲಿ ಯಾವುದರಲ್ಲೂ ಕೂಡಾ ಪರಮ ಶಿವನ ಮಾತಾ ಪಿತೃಗಳ ಉಲ್ಲೇಖವಿಲ್ಲ. ಆತ ಸ್ವಯಂ ಜನ್ಮಿಸಿದವನು. ಇಂತಹ ದೇವ ದೇವನ ಬಗ್ಗೆ ಕೆಲವು ಆಸಕ್ತಿಕರ ವಿಷಯಗಳನ್ನು ತಿಳಿಯೋಣ, ತಿಳಿದು ಮಹಾಶಿವನ ನಾಮ ಸ್ಮರಣೆಯನ್ನು ಮಾಡೋಣ ಬನ್ನಿ.
🌷ಮಹಾದೇವನನ್ನು ಆರಾಧಿಸಲು ಇತರೆ ದೇವಿ ದೇವತೆಗಳನ್ನು ಆರಾಧಿಸುವಂತೆ ಯಾವುದೇ ನಿರ್ದಿಷ್ಟವಾದ ಪೂಜಾ ವಿಧಾನವಿಲ್ಲ. ಮಹಾಶಿವನನ್ನು ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಹೇಗೆ ಪೂಜಿಸಿದರೂ ಆತ ಒಲಿದು ಬರುವನು. ಶಿವ ಮತ್ತು ಮಹಾ ವಿಷ್ಣು ಇಬ್ಬರೂ ಕೂಡಾ ಸಮಾನರು. ಅಲ್ಲದೆ ರಾಕ್ಷಸ ಸಂಹಾರಕ್ಕಾಗಿ ಹರಿ ಹರರ ಮಿಲನದಿಂದ ಹುಟ್ಟಿದ ಕಂದನೇ ಅಯ್ಯಪ್ಪ. ಆತನಿಂದಲೇ ಮಹಿಷಾಸುರ ನ ಸಹೋದರಿ ಮಹಿಷಿಯ ವಧೆಯಾಯಿತು. ಕೆಲವು ಚಿತ್ರ ಪಟಗಳಲ್ಲಿ ನಾವು ಮಹಾ ಶಿವನು ಮಗುವಿನಂತೆ ಇರುವುದನ್ನು ನೋಡಿದ್ದೇವೆ. ಮಹಾಶಿವನು ತನ್ನ ಭಕ್ತನಾದ ವಿಶ್ವನಾಥನ ಕೋರಿಕೆಯನ್ನು ಈಡೇರಿಸಲು ಬಾಲ ರೂಪವನ್ನು ಧಾರಣೆ ಮಾಡುವನು. ಬಾಲ ಶಿವನ ಈ ರೂಪವನ್ನು ಗ್ರಹಪತಿ ಎನ್ನಲಾಗಿದೆ.
🌷ಮಹಾ ಶಿವನ ಬಳಿ ಇರುವುದು ಕೈಯಲ್ಲಿ ತ್ರಿಶೂಲ, ಜಟಾಧಾರಿ, ಮೈಮೇಲೆ ಹುಲಿಯ ಚರ್ಮ, ಕೊರಳಲ್ಲಿ ಸರ್ಪ, ದೇಹಕ್ಕೆ ಬಳಿದುಕೊಳ್ಳಲು ಭಸ್ಮ. ಹೀಗೆ ಬಹಳ ಸರಳ ಆತನ ರೂಪ. ಆದರೆ ಇದೇ ಮಹಾದೇವನು ಕುಬೇರನಿಗೆ ಅಷ್ಟೈಶ್ವರ್ಯಗಳನ್ನು ಕರುಣಿಸಿದ ದೇವ ದೇವನು. ಶಿವನ ಬಳಿ ತನಗಾಗಿ ಏನೂ ಇಲ್ಲ. ಆದರೆ ತನ್ನ ನಂಬಿದ ಭಕ್ತರಿಗೆ ನೀಡಲು ಸಕಲವೂ ಆತನ ಬಳಿ ಇದೆ. ಶಿವನ ರೂಪಗಳಲ್ಲಿ ದಕ್ಷಿಣಾ ಮೂರ್ತಿ ರೂಪವು ಶಾಂತ ಚಿತ್ತ ರೂಪವಾದರೆ, ಶರಭ ಮಹಾ ಶಿವನ ಅತ್ಯಂತ ಉಗ್ರ ರೂಪ ಎನ್ನಲಾಗಿದೆ.
🌷ರೂಪಗಳು ಹಲವಾದರೂ ತ್ರಿಮೂರ್ತಿ ಗಳಲ್ಲಿ ಲಯಕಾರನಾದ ಬೋಳಾ ಶಂಕರನಿಗೆ ಭಕ್ತಿಯಿಂದ ಹೇಳುವ ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವೇ ಸಾಕು ತಾನು ಭಕ್ತರ ಪಾಲಿಗೆ ಒಲಿದು ಬರಲು. ಶಿವ ಮತ್ತು ವಿಷ್ಣು ಒಂದೆ ಕ್ಷೇತ್ರದಲ್ಲಿ ಇರುವ ದೇವಸ್ಥಾನ ಕೊಡಗಿನ ವಿರಾಜಪೇಟೆ ತಾಲೂಕಿನ ಹಾತೂರಿನಲ್ಲಿದೆ. ಅತ್ಯಂಥ ಶಕ್ತಿ ಕ್ಷೇತ್ರ, ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ, ದ.ಕ ಜಿಲ್ಲೆಯ ಶಂಕರನಾರಾಯಣದಲ್ಲೂ ಕೂಡಾ ಶಿವ ಹಾಗೂ ವಿಷ್ಣು ಮಂದಿರಗಳಿವೆ.
ಶಿವ ಕೊರಳಲ್ಲಿ ವಾಸುಕಿ ಧರಿಸುವ ಹಿಂದಿನ ಕಾರಣವೇನು 🍀
🌷ಶಿವನು ಕುತ್ತಿಗೆಯಲ್ಲಿ ಹಾವನ್ನು ಹಾರವಾಗಿ ಏಕೆ ಧರಿಸುತ್ತಾನೆ ಎಂಬುದಕ್ಕೆ ಸಂಬಂಧಿಸಿದ ಅನೇಕ ಕಥೆಗಳು ಮತ್ತು ಸಾಂಕೇತಿಕ ಕಾರಣಗಳಿವೆ. ಶಿವ ಹಾವಿನ ಹೆಸರು ವಾಸುಕಿ, ಹಾವುಗಳ ರಾಜ. ಹಾವುಗಳು ವಿಷಕಾರಿ ಜೀವಿಗಳು. ಪ್ರಪಂಚದಾದ್ಯಂತ ಅನೇಕ ಜನರು ಹಾವುಗಳಿಗೆ ಹೆದರುತ್ತಾರೆ. ಆದರೆ ಶಿವನು ಹಾವುಗಳನ್ನು ಧರಿಸಿರುವುದು ಸಾಂಕೇತಿಕವಾಗಿ ಅವನು ಸಂಪೂರ್ಣವಾಗಿ ನಿರ್ಭೀತ ಮತ್ತು ಅಮರನೆಂದು ತೋರಿಸುತ್ತದೆ. ಶಿವನ ಕುತ್ತಿಗೆಗೆ ಹಾವು ಜನನ, ಮರಣ ಮತ್ತು ಪುನರ್ಜನ್ಮದ ಅಂತ್ಯವಿಲ್ಲದ ಚಕ್ರವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ಹಳೆಯ ಚರ್ಮವು ಬೆಳೆದಾಗ ಹಾವುಗಳು ತಮ್ಮ ಚರ್ಮವನ್ನು ಚೆಲ್ಲುತ್ತವೆ. ಇದು ಸಾಂಕೇತಿಕವಾಗಿ ಜನನ, ಮರಣ ಮತ್ತು ಪುನರ್ಜನ್ಮದ ಚಕ್ರವನ್ನು ಪ್ರತಿನಿಧಿಸುತ್ತದೆ. ಹಾವು ಶಿವನ ಕುತ್ತಿಗೆಗೆ ಮೂರು ಸುತ್ತುಗಳನ್ನು ಹೊಂದಿದೆ, ಅಲ್ಲಿ ಪ್ರತಿ ಸುತ್ತು ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಪ್ರತಿನಿಧಿಸುತ್ತದೆ. ಅವನು ಸಮಯವನ್ನು ಮೀರಿದ್ದಾನೆ ಮತ್ತು ಅದನ್ನು ನಿಯಂತ್ರಿಸುತ್ತಾನೆ ಎಂದು ಇದು ಸೂಚಿಸುತ್ತದೆ. ಅದಕ್ಕಾಗಿಯೇ ಶಿವನನ್ನು “ಮಹಾಕಾಲ್” ಎಂದೂ ಕರೆಯುತ್ತಾರೆ. ಕಾಲ್ (ಸಮಯ) ಗಿಂತ ಮೇಲಿರುವ ಮತ್ತು ಮೀರಿದವನು.
🍀 ಹಾವುಗಳು ಶಿವನನ್ನು ಆಶ್ರಯಕ್ಕಾಗಿ ಸಂಪರ್ಕಿಸಿದಾಗ
🌷ಒಮ್ಮೆ ಹಾವುಗಳ ಪ್ರಭೇದಗಳು ಅಳಿವಿನ ಅಂಚಿನಲ್ಲಿದ್ದಾಗ, ಅವುಗಳು ರಕ್ಷಣೆಗಾಗಿ ಶಿವನನ್ನು ಸಂಪರ್ಕಿಸಿದವು. ಶಿವ ಕೈಲಾಸದಲ್ಲಿ ಉಳಿಯಲು ಅವಕಾಶ ನೀಡುವ ಮೂಲಕ ಅವುಗಳಿಗೆ ಆಶ್ರಯವನ್ನು ಒದಗಿಸುತ್ತಾರೆ. ಆದರೆ ಕೈಲಾಸ ಪರ್ವತದಲ್ಲಿನ ಶೀತ ವಾತಾವರಣದಿಂದಾಗಿ, ಹಾವುಗಳು ಅವನ ದೇಹವನ್ನು ಉಷ್ಣತೆಗಾಗಿ ಸಮೀಪಿಸುತ್ತಿದ್ದವು. ಇದನ್ನು ನೋಡಿದ ಶಿವ, ಹಾವುಗಳನ್ನು ಬೆಚ್ಚಗಾಗಲು ಕುತ್ತಿಗೆಗೆ ಧರಿಸಲು ನಿರ್ಧರಿಸಿದರು.
🍀 ಶಿವನು ವಿಷ ಸೇವಿಸಿದಾಗ
🌷ಇದಕ್ಕೆ ಸಂಬಂಧಿಸಿದ ಮತ್ತೊಂದು ಜನಪ್ರಿಯ ಕಥೆ ಸಮುದ್ರ ಮಂಥನ ಸಮಯದಲ್ಲಿ. ದೇವತೆಗಳು ಮತ್ತು ಅಸುರರು ಮಂದಾರ ಪರ್ವತದ ಸುತ್ತಲೂ ವಾಸುಕಿ (ಹಾವುಗಳ ರಾಜ) ಅನ್ನು ಹಗ್ಗದಂತೆ ಬಳಸಿ ಸಾಗರವನ್ನು ಮಥಿಸಿದಾಗ, ಅದರಿಂದ ಅನೇಕ ವಿಷಗಳು ಹೊರಬಂದವು. ಅವುಗಳಲ್ಲಿ ಒಂದು ಹಾಲಾಹಲ, ಮಾರಕ ವಿಷ. ಇದು ದೇವರು ಮತ್ತು ರಾಕ್ಷಸರನ್ನು ಭಯಭೀತಿಗೊಳಿಸಿತು ಮತ್ತು ಈ ಮಾರಕ ವಿಷವನ್ನು ಯಾರು ಸೇವಿಸುತ್ತಾರೆ ಎಂದು ಅವರು ಗೊಂದಲಕ್ಕೊಳಗಾದರು. ವಿಷವು ಎಷ್ಟು ಶಕ್ತಿಯುತವಾಗಿತ್ತೆಂದರೆ ಅದು ಇಡೀ ಸೃಷ್ಟಿಯನ್ನು ನಾಶಪಡಿಸುತ್ತದೆ. ನಂತರ ಎಲ್ಲರೂ ರಕ್ಷಣೆಗಾಗಿ ಶಿವನನ್ನು ಸಂಪರ್ಕಿಸುತ್ತಾರೆ. ಬ್ರಹ್ಮಾಂಡವನ್ನು ರಕ್ಷಿಸುವ ಸಲುವಾಗಿ, ಅವನು ವಿಷವನ್ನು ಸ್ವತಃ ಕುಡಿಯುತ್ತಾನೆ. ಅವನು ವಿಷವನ್ನು ಕುಡಿಯುವಾಗ, ಅವನ ಪತ್ನಿ ಪಾರ್ವತಿ ದೇವಿಯು ವಿಷವನ್ನು ನುಂಗುವುದನ್ನು ತಡೆಯುವ ಸಲುವಾಗಿ ಅವನ ಗಂಟಲನ್ನು ಹಿಡಿದಳು. ಪರಿಣಾಮವಾಗಿ, ಅವನ ಕುತ್ತಿಗೆ ನೀಲಿ ಬಣ್ಣಕ್ಕೆ ಬರುತ್ತದೆ. ಹೀಗಾಗಿ ಅವನನ್ನು ನೀಲಕಂಠ (ನೀಲಿ ಕುತ್ತಿಗೆ ಹೊಂದಿರುವವನು) ಎಂದೂ ಕರೆಯುತ್ತಾರೆ. ಈಗ ದೇವಿಯು ಶಿವನ ಕುತ್ತಿಗೆಯನ್ನು ಶಾಶ್ವತವಾಗಿ ಹಿಡಿದಿಟ್ಟುಕೊಳ್ಳುವುದು ಸಹ ಸಾಧ್ಯವಿಲ್ಲ, ಅದಕ್ಕಾಗಿಯೇ ಪಾರ್ವತಿಯು ವಿಷವನ್ನು ನುಂಗುವುದನ್ನು ತಡೆಯುವ ಸಲುವಾಗಿ ಹಾವನ್ನು ಅವನ ಕುತ್ತಿಗೆಗೆ ಕಟ್ಟಿದಳು.
ಸುಂದ – ಅಪಸುಂದ ಕಥೆ
🌸 ಶಿವನ ನಾಲ್ಕು ಮುಖಗಳ (ಚತುರ್ಮುಖ) ಕುರಿತಂತೆ ಸುಂದ, ಅಪಸುಂದರರ ಕಥೆ. ಮಹಾಭಾರತದ ಅನುಶಾಸನ ಪರ್ವದಲ್ಲಿ ಒಂದು ರೋಚಕ ಸನ್ನಿವೇಶದಲ್ಲಿ ನಡೆದ ಒಂದು ಕಥಾನಕವನ್ನು ನಾರದರು ಕೃಷ್ಣನ ಮುಂದೆ ನಿರೂಪಿಸುತ್ತಿದ್ದಾರೆ. ಶಿವನ ವಿಚಿತ್ರ ಉಡುಗೆ – ತೊಡುಗೆ, ವಾಸಸ್ಥಳ, ಅವನ ಜೊತೆಯಲ್ಲಿರುವ ಗಣಗಳು, ದೇಹದ ವಿಶೇಷತೆಗಳ (ಜಟೆ, ಕುತ್ತಿಗೆಯ ಹಾವು, ರುದ್ರಾಕ್ಷಿ, ಹುಲಿ ಚರ್ಮ, ಇಂಥವು) ಕುರಿತು, ಹಾಗೂ ನಾಲ್ಕು ದಿಕ್ಕಿನಲ್ಲಿ ನಾಲ್ಕು ಮುಖಗಳನ್ನು ಹೊಂದಿದ ಚತುರ್ಮುಖ ರುದ್ರನ ಕುರಿತಾಗಿ ಹೇಳುತ್ತಿದ್ದರು.
🌸 ಒಂದು ದಿನ ಪಾರ್ವತಿ ಸ್ನಾನಾದಿಗಳನ್ನು ಮುಗಿಸಿ ಅಲಂಕೃತಳಾಗಿ, ಎಲ್ಲಾ ಪುಣ್ಯ ನದಿಗಳ ತೀರ್ಥಗಳು, ರುಚಿಯಾದ ಫಲಗಳು, ಸುಗಂಧಭರಿತ ಪುಷ್ಪಗಳನ್ನು ತೆಗೆದುಕೊಂಡು ಶಿವನ ಪೂಜೆಗೆ ಬರುತ್ತಿದ್ದಾಳೆ. ಶಿವನು ಶಾಂತಚಿತ್ತನಾಗಿ ಕುಳಿತಿದ್ದಾನೆ. ಅವನನ್ನು ಭಕ್ತಿಯಿಂದ ಅರ್ಚಿಸಿ ರಸಿಕತೆ ಭಾವ ತಳೆದು ಶಿವನ ಹಿಂದೆ ಬಂದು ಅವನ ಎರಡು ಕಣ್ಣುಗಳನ್ನು ತನ್ನ ಮೃದುವಾದ ಕೈಗಳಿಂದ ಮುಚ್ಚಿ ಅವನ ಭುಜಕ್ಕೆ ಒರಗುತ್ತಾಳೆ.
🌸 ಆ ಕ್ಷಣಕ್ಕೆ ಇಡೀ ಜಗತ್ತೆ ಕತ್ತಲಾವರಿಸಿ ಅಲ್ಲೋಲಕಲ್ಲೋಲವಾಗುತ್ತದೆ. ಎಲ್ಲೆಡೆ ಹಾಹಾಕಾರ ಉಂಟಾಗಿ, ವಿಶ್ವವೇ ತಲ್ಲಣಗೊಂಡಿದೆ. ಅನುಷ್ಠಾನದಲ್ಲಿರುವ ಋಷಿ – ಮುನಿಗಳು ದಾರಿ ಕಾಣದೆ ಕಂಗಾಲಾದರೆ, ಪಶು ಪಕ್ಷಿಗಳೆಲ್ಲ ದಿಕ್ಕು ತಪ್ಪಿವೆ. ಕೂಡಲೇ ಶಿವನು ತನ್ನ ಹಣೆಗಣ್ಣನ್ನು ತೆರೆದು ಜಗತ್ತನ್ನು ನೋಡಿ ರಕ್ಷಣೆ ಮಾಡುತ್ತಾನೆ. ಈ ರೀತಿ ಆದ ಸ್ಥಿತಿಯನ್ನು ಕಂಡು ಪಾರ್ವತಿ ಅವನ ಕಣ್ಣ ಮೇಲಿದ್ದ ಕೈಯನ್ನು ತೆಗೆದು ಹಣೆಯ ಮೇಲಿರುವ ಕಣ್ಣನ್ನು ನೋಡಿ ಶಿವನನ್ನು ಕುರಿತು ಹಣೆಗಣ್ಣನ್ನು ಯಾಕೆ ಧರಿಸಿದ್ದೀರಿ? ಎಂದು ಕೇಳಿದ್ದಕ್ಕೆ ಆಗ, ಶಿವನು ನಾನು ನನ್ನ ಕಣ್ಣುಗಳಿಂದ ಜಗತ್ತನ್ನು ಪಾಲನೆ ಮಾಡುತ್ತಿದ್ದೇನೆ.
🌸 ನೀನು ಸಲುಗೆಯಿಂದ ನನ್ನ ಕಣ್ಣು ಮುಚ್ಚಿದಾಗ ಜಗತ್ತಿನಲ್ಲಿ ಬೆಳಕಿಲ್ಲದೆ ಅಂಧಕಾರ ಉಂಟಾಯಿತು. ಆಗ ನಾನು ಜಗತ್ತನ್ನು ವೀಕ್ಷಿಸಿ, ರಕ್ಷಣೆ ಮಾಡವ ಸಲುವಾಗಿ ನನ್ನ ಮೂರನೇ ಕಣ್ಣನ್ನು ಪ್ರಕಟಿಸಬೇಕಾಯಿತು ಎಂದನು. ಹಾಗೆಯೇ ಕಂಡದ್ದನ್ನೆಲ್ಲಾ ಸತ್ಯ ಎಂದು ತಿಳಿಯುವ ಮುನ್ನ ವಿಮರ್ಶೆ ಮಾಡಿ ವಿವೇಚನೆಯಿಂದ ಅರಿಯಲು ಮೂರನೇ ಕಣ್ಣಿನಂತೆ ಅಂತಃಚಕ್ಷು ಎಲ್ಲರಿಗೂ ಇರಬೇಕು ಎಂದನು. ಶಿವನಿಗೆ ಹಣೆಯ ಮೇಲೆ ಮೂರನೇ ಕಣ್ಣು ಇರುವುದರಿಂದ ‘ವಿರೂಪಾಕ್ಷ’ ಎಂಬ ಹೆಸರು ಬಂದಿತು.
🌸 ಇನ್ನೊಂದು ಕಥೆಯ ಪ್ರಕಾರ, ಪೂರ್ವದಲ್ಲಿ ‘ನಿಕುಂಬ’ ಎಂಬ ರಾಕ್ಷಸನಿದ್ದ. ಅವನಿಗೆ ಸುಂದ – ಅಪಸುಂದ ಎಂಬ ಇಬ್ಬರು ಮಕ್ಕಳಿದ್ದರು. ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರುವುದಿಲ್ಲ. ಜೊತೆಯಾಗಿಯೇ ಇರುತ್ತಿದ್ದರು. ಇಬ್ಬರ ಆಲೋಚನೆಗಳು ಒಂದೇ ಆಗಿದ್ದಿತು. ತ್ರೀ ಲೋಕದಲ್ಲಿ ತಮ್ಮ ಅಧಿಕಾರ ಸ್ಥಾಪಿಸಲು ಬ್ರಹ್ಮದೇವನನ್ನು ಕುರಿತು ಹಲವು ವರ್ಷಗಳು ಕಠಿಣ ತಪಸ್ಸು ಮಾಡಿದರು. ಆ ತಪಸ್ಸಿಗೆ ಬ್ರಹ್ಮನ ಪೀಠವೇ ಅಲುಗಾಡಿತು. ಸ್ವತಃ ಬ್ರಹ್ಮದೇವನೇ ವರ ಕೊಡಲು ಬಂದನು. ಬ್ರಹ್ಮದೇವನಿಗೆ ನಮಸ್ಕರಿಸಿದ ಅವರು, ಸಾವೇ ಬರದಂತೆ ವರ ಕೊಡಲು ನಿನಗೆ ಸಾಧ್ಯವಿಲ್ಲ. ಅಣ್ಣ – ತಮ್ಮಂದಿರು ನಾವಿಬ್ಬರೇ ಹೊಡೆದುಕೊಂಡು ಸಾಯುವಂಥಹ ವರ ಕೊಡು ಎಂದರು.
🌸 ಅವರಿಬ್ಬರಿಗೂ ಗೊತ್ತು. ಅದೆಂದಿಗೂ ಸಾಧ್ಯವಿಲ್ಲ. ಎಂದರೆ ಅವರಿಬ್ಬರು ಎರಡು ದೇಹ ಒಂದೇ ಪ್ರಾಣ ಎಂಬಂತಿದ್ದರು. ಹಾಗೆ ಭೋಜನ, ಕೆಲಸ, ನಿದ್ರೆ, ಎಲ್ಲವನ್ನು ಒಟ್ಟಿಗೆ ಮಾಡುತ್ತಿದ್ದರು. ಕೂಡಲೇ ಬ್ರಹ್ಮ ತಥಾಸ್ತು ಎಂದನು. ಅವರೆಂದಿಗೂ ಒಬ್ಬರನ್ನೊಬ್ಬರು ಸಾಯಿಸುತ್ತಿರಲ್ಲ. ಮತ್ತಷ್ಟು ಪ್ರೀತಿ ದುಪ್ಪಟ್ಟಾಗಿ ತ್ರಿಲೋಕವನ್ನೆ ಅಲ್ಲೋಲಕಲ್ಲೋಲ ಮಾಡಿದರು. ಯುದ್ಧವನ್ನು ಮಾಡುತ್ತಾ ಎಲ್ಲವನ್ನೂ ಪಡೆದುಕೊಂಡರು. ಅವರ ಒಗ್ಗಟ್ಟೆ ಅವರ ಶಕ್ತಿಯಾಗಿತ್ತು. ಆಗ ದೇವತೆಗಳು ಬ್ರಹ್ಮನನ್ನು ಕುರಿತು ಪ್ರಾರ್ಥಿಸಿದರು ಬ್ರಹ್ಮ ಪ್ರತ್ಯಕ್ಷನಾಗಿ ಜಗತ್ತಿನಲ್ಲಿ ಏನೇನು ಸೌಂದರ್ಯಗಳಿವೆಯೋ ಅದರಲ್ಲಿರುವ ಶೇಷ ಭಾಗದ ಎಳ್ಳಿನಷ್ಟು ಭಾಗವನ್ನು ತೆಗೆದು ಸೇರಿಸಿ ಒಬ್ಬ ಸುಂದರಿಯನ್ನು ಸೃಷ್ಟಿ ಮಾಡಿದನು. ‘ತಿಲ’ ಎಂದರೆ ಎಳ್ಳು ಹಾಗಾಗಿ ಅವಳನ್ನು ತಿಲೋತ್ತಮೆ ಎಂದು ಕರೆದರು.
🌸 ಆಕೆ ಸೃಷ್ಟಿಯಾದ ಕೂಡಲೇ ಬ್ರಹ್ಮದೇವರು ಹೇಳಿದ ಕೆಲಸ ಮಾಡುವ ಮುಂಚೆ ಅದಕ್ಕೆ ಬೇಕಾದ ಸಿದ್ಧಿಯನ್ನು ಪಡೆಯಲು ಶಿವನನ್ನು ಭಕ್ತಿಯಿಂದ ಪ್ರದಕ್ಷಿಣೆ ಹಾಕುತ್ತಾಳೆ. ಅವಳು ಯಾವ ಉದ್ದೇಶದಿಂದ ತನ್ನ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದಾಳೆ, ಎಂಬ ಕುತೂಹಲದಿಂದ ಶಿವನು ಸುತ್ತಲೂ ತಿರುಗಿ ನೋಡಲು ನಾಲ್ಕು ಮುಖ ಧರಿಸಿದನಂತೆ. ಅಂದರೆ ಯಾರು ಶಿವನಿಗೆ ಭಕ್ತಿಯಿಂದ ಪ್ರದಕ್ಷಿಣೆ ಹಾಕುತ್ತಾರೋ ಅವರು ತಮ್ಮ ಕಾರ್ಯಸಿದ್ಧಿಯನ್ನು ಪಡೆಯುತ್ತಾರೆ ಎಂದು ಅರ್ಥ. ಆ ಮುಖಗಳಲ್ಲಿ ಪೂರ್ವದ ಮುಖ ತಪಸ್ಸು, ದಕ್ಷಿಣದ್ದು ಅಘೋರ ಎಂಬ ಉಗ್ರವಾದ ಮುಖ, ದುಷ್ಟರನ್ನು ಸಂಹಾರ ಮಾಡುವುದು, ಪಶ್ಚಿಮದ ಮುಖ ಜಗತ್ತಿನ ಹಿತವನ್ನು ಬಯಸಲು ಶಾಂತವಾಗಿದೆ, ಉತ್ತರದ ಮುಖ ಎಡೆಬಿಡದೆ ವೇದಾಧ್ಯಯನ ಮಾಡುತ್ತಿರುತ್ತದೆ, ಮಧ್ಯದ ಮುಖ ಜಟಾಧಾರಿಯಾಗಿರುತ್ತದೆ.
🌸 ನಂತರ ಅವಳನ್ನು ಸುಂದ – ಅಪಸುಂದರು ಇರುವ ಕಾಡಿಗೆ ಹೋಗಲು ಅಪ್ಪಣೆ ಮಾಡಿದರು. ಅವಳು ಹೋಗುವಾಗ ಅದೇ ಮಾರ್ಗದಲ್ಲಿ ಆ ರಾಕ್ಷಸರಿಬ್ಬರು ಬರುತ್ತಿದ್ದರು. ಅದರಲ್ಲಿ ಒಬ್ಬನಿಗೆ ಕಾಣಿಸಿದಳು. ಆಗ ಒಬ್ಬರಿಗೊಬ್ಬರು ನಿನಗೆ ಅತ್ತಿಗೆ ಅವಳು ಎಂದರೆ, ಇನ್ನೊಬ್ಬನು ಕೆಳಗೆ ಇಳಿದ ಹುಡುಗಿಯನ್ನು ಯಾರು ನೀನು ಎಂದಾಗ? ನಾನು ಬ್ರಹ್ಮಾಂಡದಲ್ಲೇ ಸುಂದರವಾಗಿರುವವಳು ಅಂದರೆ ‘ತಿಲೋತ್ತಮೆ’ ಅಂತ ನನ್ನ ಹೆಸರು. ನನಗೆ ಎಲ್ಲಕ್ಕಿಂತ ಉತ್ತಮವಾದದ್ದು ಇಷ್ಟ ಎಂದಳು. ಅವರಿಬ್ಬರೂ ನಮ್ಮಲ್ಲಿ ಯಾರನ್ನು ಮದುವೆ ಆಗುತ್ತಿಯಾ? ಎಂದು ಕೇಳಿದಾಗ “ನಿಮ್ಮಿಬ್ಬರಲ್ಲಿ ಯಾರು ಹೆಚ್ಚು ಶಕ್ತಿ – ಶಾಲಿಗಳೋ” ಅವರನ್ನು ಎಂದಳು. ಇಬ್ಬರು ಸಮನಾದ ಶಕ್ತಿಶಾಲಿಗಳು ಪರಸ್ಪರರು ಹೋರಾಡಿದರು ಅವರ ಒಗ್ಗಟ್ಟು ಯಾವಾಗ ಒಡೆಯಿತೋ ಆವಾಗ ಸತ್ತರು. ಒಂದು ಹೆಣ್ಣಿನ ಕಾರಣದಿಂದ ಒಗ್ಗಟ್ಟು ಮುರಿದು ಅವರಿಬ್ಬರ ಅಂತ್ಯವಾಯಿತು.
🌷 ಶಿವನನ್ನು ‘ಚಂದ್ರಶೇಖರ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ 🌷
💐 ಹಿಂದೂ ಸಂಪ್ರದಾಯದಲ್ಲಿ ವಿಶೇಷವಾಗಿ ಶಿವ ದೇವರು ಎಲ್ಲಾ ದೇವತೆಗಳಿಂದ ವಿಭಿನ್ನ. ಭಸ್ಮ ಧಾರಿ, ತ್ರಿಶೂಲಧಾರಿ, ಹಾವನ್ನೇ ಆಭರಣವನ್ನಾಗಿಸಿಕೊಂಡಿರುವ ಮಹೇಶ್ವರ ದೇವಾಧಿ ದೇವ. ಚಿನ್ನದ ಆಭರಣಗಳನ್ನೇ ಧರಿಸದೇ ರುದ್ರಾಕ್ಷಿ, ಹಾವನ್ನೇ ತನ್ನ ಆಭರಣವನ್ನಾಗಿಸಿಕೊಂಡಿರುವ ಶಿವ ಸರಳತೆಯನ್ನೇ ಮೈಗೂಡಿಸಿಕೊಂಡವನು. ಹುಲಿಯ ಚರ್ಮವನ್ನೇ ತನ್ನ ಆಸನವಾಗಿಸಿ ಕೈಲಾಸ ವಾಸಿಯಾಗಿರುವ ಮಹಾದೇವ ಭಕ್ತನುರಾಗಿ. ಶಿವನನ್ನು ಅಲಂಕರಿಸಿರುವ ಈ ಆಭರಣಗಳು ತಮ್ಮದೇ ಆದ ಮಹತ್ವನ್ನು ಪಡೆದುಕೊಂಡಿವೆ.
💐 ಜಟಾಧಾರಿಯಾಗಿ ಸರಳ ಸುಂದರನಾಗಿರುವ ಪರಮೇಶ್ವರನು ಭಕ್ತರ ಇಷ್ಟಾರ್ಥಗಳನ್ನು ಕ್ಷಣದಲ್ಲಿ ಸಾಧಿಸುವ ಕರುಣಾಮಯಿ. ಆದ್ದರಿಂದಲೇ ದೇವತೆಗಳಿಂದ ಹಿಡಿದು ರಾಕ್ಷಸರವರೆಗೂ ಶಿವನನ್ನೇ ಆರಾಧಿಸಿರುವ ಭಕ್ತಿ ಪ್ರಧಾನ ಕಥೆಗಳಿವೆ. ಶಿವರಾತ್ರಿಯ ಪುಣ್ಯ ದಿನದಂದು ಶಿವನ ಬಗೆಗಿನ ಎಷ್ಟೋ ಕಥೆಗಳನ್ನು ಕೇಳಿ ಓದಿ ಧನ್ಯರಾಗುತ್ತೇವೆ. ಅದೇ ರೀತಿ ಶಿವನು ಏಕೆ ಸರಳತೆಯ ರುವಾರಿ ಎಂಬುದನ್ನು ತಿಳಿದುಕೊಳ್ಳೋಣ.
💐 ಹಾವು ‘ಜೀವ’ ವನ್ನು ವ್ಯಕ್ತಿಯ ಆತ್ಮವನ್ನು ಪ್ರತಿನಿಧಿಸುವ ಶಿವನ ಆಭರಣವಾಗಿರುವ ಹಾವು ಶಿವನ ಕುತ್ತಿಗೆಯಲ್ಲಿ ವಿರಾಜಮಾನವಾಗಿರುತ್ತದೆ. ಪ್ರತಿಯೊಬ್ಬ ಜೀವ ಸಂಕುಲವೂ ತನ್ನ ಬದುಕಿನ ಏಳಿಗೆಗೆ ದೇವರನ್ನು ನಂಬಿರಬೇಕೆಂಬ ತತ್ವವನ್ನು ಇದು ಪ್ರತಿನಿಧಿಸುತ್ತದೆ. ನಮಗೆ ಹಾವೆಂದರೆ ಭಯ ಆದರೆ ಆ ಪರಶಿವನು ಎಲ್ಲಾ ರೀತಿಯ ಭಾವನೆಗಳಿಂದ ಮುಕ್ತನಾಗಿರುವುದರಿಂದ ಯಾವುದೇ ಭಯ ಶಿವ ದೇವರಿಗಿಲ್ಲ ಮತ್ತು ಹಾವು ಅವರ ಕೊರಳನ್ನು ಸುತ್ತುವರಿದಿದೆ.
💐 ಭಸ್ಮ ಅಥವಾ ವಿಭೂತಿ ನೀವು ಗಮನಿಸರಬಹುದು ಶಿವನು ತನ್ನ ಮೈಗೆಲ್ಲಾ ಪವಿತ್ರ ಭಸ್ಮವನ್ನೂ ಹಚ್ಚಿಕೊಂಡಿರುತ್ತಾರೆ. ಭಸ್ಮ ಅಥವಾ ವಿಭೂತಿ ಮಾನವನ ಜೀವನದ ಕೊನೆಯನ್ನು ಪ್ರತಿನಿಧಿಸುತ್ತದೆ. ಶಿವನು ತನ್ನ ಮೈಗೆಲ್ಲಾ ಭಸ್ಮವನ್ನೂ ಧರಿಸಿರುವ ಉದ್ದೇಶವೇನೆಂದರೆ ಯಾರೊಬ್ಬರೂ ತಮ್ಮ ಅಂತ್ಯವನ್ನು ತಪ್ಪಿಸಿಕೊಳ್ಳಲಾರರು ಎಂಬ ತತ್ವ ಇದರಲ್ಲಡಗಿದೆ. ಭೂಮಿಯಲ್ಲಿ ಜನ್ಮ ತಾಳಿರುವ ಪ್ರತಿಯೊಂದೂ ಬೂದಿಗೆ ಸೇರುತ್ತದೆ ಎಂಬ ಅಂಶ ಇಲ್ಲಿನದು.
💐 ಜಟಾಧಾರಿ ಶಿವನ ಕಟ್ಟಿದ ತುರುಬು ಅಥವಾ ಜಟೆಯು ವಾಯುವಿನ ಅಧಿಪತಿ ಎಂಬುದನ್ನು ತೋರಿಸುತ್ತದೆ. ಎಲ್ಲಾ ಚರಾಚರ ಸಂಕುಲಗಳಿಗೂ ವಾಯು ಅಥವಾ ಗಾಳಿ ಅನಿವಾರ್ಯವಾದುದು.
💐 ರುದ್ರಾಕ್ಷಿ ಶಿವನ ಕೊರಳಹಾರ ಮತ್ತು ಮಣಿಕಟ್ಟಿನ ಆಭರಣ ರುದ್ರಾಕ್ಷಿಯಾಗಿದೆ. ಕೊರಳ ಹಾರವು 108 ರುದ್ರಾಕ್ಷಿಗಳನ್ನು ಹೊಂದಿದ್ದು ಭೂಮಿಯ ರಚನೆಗೆ ಬಳಸಲಾದ ಅಂಶಗಳನ್ನು ಪ್ರತಿನಿಧಿಸುತ್ತದೆ. ಎಲ್ಲಾ ಘಟಕಗಳಿಗೂ ಅಂಶಗಳಿಗೂ ಶಿವನೇ ದೇವರು ಎಂಬ ಅಂಶವನ್ನು ರುದ್ರಾಕ್ಷಿ ಬಿಂಬಿಸುತ್ತದೆ.
💐 ಹುಲಿಯ ಚರ್ಮ ಹುಲಿಯ ಚರ್ಮವು ಬಲ ಅಥವಾ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಶಕ್ತಿಯು ಶಿವನ ಒಂದು ಪಾರ್ಶ್ವವಾಗಿರುವುದರಿಂದ, ಭೂಮಿಯಲ್ಲಿ ಪ್ರಸ್ತುತವಿರುವ ಎಲ್ಲಾ ಪ್ರಕಾರದ ಶಕ್ತಿಗಳಿಂದ ಆತನ ಜಯವನ್ನು ತೋರಿಸುತ್ತದೆ.
💐 ಶಿವನನ್ನು ‘ಚಂದ್ರಶೇಖರ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ತಲೆಯಲ್ಲಿ ಅರ್ಧಚಂದ್ರನನ್ನು ಧರಿಸಿರುವುದಕ್ಕೆ ಶಿವನಿಗೆ ಈ ಹೆಸರು. ಜೀವಿಯ ಪ್ರಕ್ರಿಯೆಯನ್ನು ಒಳಗೊಂಡಂತೆ, ಪ್ರಾರಂಭದಿಂದ ಅಂತ್ಯದವರೆಗಿನ ಕಾಲ ಚಕ್ರವನ್ನು ಅರ್ಧ ಚಂದ್ರ ಪ್ರತಿನಿಧಿಸುತ್ತದೆ. ಚಂದ್ರನು ಕಾಲದ ಅಳತೆಯಾದ್ದರಿಂದ ಶಿವ ದೇವರ ತಲೆಯಲ್ಲಿರುವ ಅರ್ಧಚಂದ್ರ ಕಾಲದ ಮೇಲಿನ ಆತನ ಹಿಡಿತವನ್ನು ತೋರಿಸುತ್ತದೆ. ಕಾಲದ ಅಳತೆಯ ಹಿಂದಿರುವ ಶಕ್ತಿ ಶಿವ ದೇವರು ಮತ್ತು ಆತನೇ ಶಾಶ್ವತ ವಾಸ್ತವವಾಗಿರುವನು.
🌟 ಶಿವ ಮತ್ತು ಅವರ ಭಕ್ತ ನಂದಿ 🌟
🌺 ಶಿವನ ಪರಮ ಭಕ್ತ ನಂದಿ ಎಂದು ಎಲ್ಲರಿಗೂ ತಿಳಿದಿದೆ. ನಂದಿಯು ಶಿವ ಭಕ್ತನಾಗುವುದರ ಹಿಂದೆ ಒಂದು ಕಥೆಯಿದೆ.
🌺 ‘ಶಿಲಾಧರ’ ಎಂಬ ಋಷಿ ಇದ್ದರು. ಈತನು ಶಿವನ ಪರಮ ಭಕ್ತನಾಗಿದ್ದರು. ಶೀಲಾಧರನಿಗೆ ಮಕ್ಕಳಿರಲಿಲ್ಲ. ಹೀಗಾಗಿ ಅವರು ಪುತ್ರ ಸಂತಾನಕ್ಕಾಗಿ ಶಿವನನ್ನು ಕುರಿತು ಬಹಳ ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿದರು. ಅವರ ತಪಸ್ಸಿಗೆ ಪ್ರಸನ್ನಗೊಂಡ ಶಿವನು ದರ್ಶನ ಕೊಟ್ಟು, ನಿನ್ನ ತಪಸ್ಸಿನಿಂದ ನಾನು ಪ್ರಸನ್ನಗೊಂಡಿದ್ದೇನೆ. ನಿನಗೆ ಏನು ವರ ಬೇಕು ಕೇಳಿಕೋ? ಎಂದನು. ‘ಶಿಲಾಧರನು’ ತನಗೆ ಪುತ್ರನು ಬೇಕೆಂದು ಕೇಳಿದರು. ಆಯಿತು ನಿನಗೆ ಪುತ್ರಪ್ರಾಪ್ತಿಯಾಗುವುದು ಎಂದು ವರ ನೀಡಿ ಶಿವ ಅದೃಶನಾದನು. ಶೀಲಾಧರನು ಸಂತೋಷದಿಂದ ಮನೆಗೆ ಬಂದರು. ಕೆಲವು ದಿನಗಳ ನಂತರ ನಿತ್ಯ ಕ್ರಮದಂತೆ, ಹೊಲದ ಬದಿ ನಡೆದು ಹೋಗುತ್ತಿರುವಾಗ, ಬೇಲಿ ಬದಿಯಲ್ಲಿ ಅವರಿಗೆ ನವಜಾತ ಶಿಶುವೂಂದು ಕಂಡಿತು. ಆ ಮಗುವಿನ ಸುತ್ತಲೂ ಸೂರ್ಯನಂತೆ ತೇಜಸ್ಸನ್ನು ಹರಡಿತ್ತು.
🌺 ಋಷಿಯು ಆ ಮಗುವನ್ನು ಮನೆಗೆ ತೆಗೆದುಕೊಂಡು ಬಂದರು. ಮಗುವಿಗೆ ‘ನಂದಿ’ ಎಂದು ನಾಮಕರಣ ಮಾಡಿದರು. ಅವರು ಆ ಮಗುವನ್ನು ಬಹಳ ಪ್ರೀತಿಯಿಂದ ಆರೈಕೆ ಮಾಡಿ ಬೆಳೆಸುತ್ತಿದ್ದರು. ನಂದಿಯು ನೋಡಲು ಬಹಳ ಮುದ್ದಾಗಿದ್ದು, ತುಂಬಾ ಬುದ್ಧಿವಂತ ನಾಗಿದ್ದನು. ಋಷಿಯು ತನ್ನ ಮಗ ನಂದಿಯ ಕುರಿತು ಒಂದು ಥರ ಗರ್ವಪಡುತ್ತಿದ್ದರು. ನಂದಿಯು ಸ್ವಲ್ಪ ದೊಡ್ಡವನಾಗುತ್ತಿದ್ದಂತೆ ಅವರ ಮನೆಗೆ ‘ಮಿತ್ರ ಮತ್ತು ವರುಣ’ಎಂಬ ಇಬ್ಬರು ಮಹಾನ್ ತಪಸ್ವಿಗಳು ಬಂದರು. ಆ ಋಷಿಗಳು ಅವರ ಮನೆಯಲ್ಲಿ ಸ್ವಲ್ಪ ಕಾಲ ತಂಗುವುದಾಗಿ ತಿಳಿಸಿದರು. ಶಿಲಾಧರನು ಸಂತೋಷದಿಂದ ಒಪ್ಪಿದನು. ಋಷಿಗಳಿಗೆ ಬೇಕಾದುದನೆಲ್ಲವ ಒದಗಿಸಿ, ಅವರ ಅನುಷ್ಠಾನಗಳಿಗೆ ತೊಂದರೆಯಾಗದಂತೆ ಅವುಗಳನ್ನು ಒದಗಿಸಿ, ಅತಿಥಿ ಸತ್ಕಾರಮಾಡಿ ನೋಡಿಕೊಳ್ಳುವಂತೆ ನಂದಿಗೆ ಹೇಳಿದನು. ನಂದಿಯು ತಂದೆಯ ಮಾತಿನಂತೆ ಋಷಿಗಳ ಸೇವೆಯನ್ನು ತುಂಬಾ ಶ್ರದ್ಧಾಭಕ್ತಿಯಿಂದ ಮಾಡಿದನು. ನಂತರ ಋಷಿಗಳು ಹೊರಟರು. ಹೊರಡುವ ಮುನ್ನ, ಶಿಲಾಧರನು ತನಗೂ ತನ್ನ ಮಗನಿಗೂ ಆಶೀರ್ವಾದ ಮಾಡುವಂತೆ ಬೇಡಿದನು. ಆಗ ಇಬ್ಬರು ಋಷಿಗಳು. ಶೀಲಾಧರನಿಗೆ, ನೀನು ಸುಖ, ಸಂತೋಷವಾಗಿ ದೀರ್ಘಾಯುಷ್ಯವಂತನಾಗಿ ಬಾಳು ಎಂದು ಹರಸಿದರು.
🌺 ನಂದಿಯು ತಪಸ್ವಿಗಳ ಆಶೀರ್ವಾದ ಪಡೆಯಲು ಅವರಿಗೆ ನಮಸ್ಕಾರ ಮಾಡಿಲು ಬಗ್ಗಿದಾಗ, ಋಷಿಗಳು ಸ್ವಲ್ಪಕಾಲ ಮೌನವಾಗಿದ್ದು ನಂತರ, ಗಂಭೀರವದನರಾಗಿ, “ನಂದಿ, ನೀನು ನಿನ್ನ ತಂದೆಯನ್ನು ಹಾಗೂ ಗುರುವನ್ನು, ಚೆನ್ನಾಗಿ ಪ್ರೀತಿಯಿಂದ ನೋಡಿಕೋ ಮತ್ತು ಅವರ ಬಗ್ಗೆ ಹೆಚ್ಚಿನ ಶ್ರದ್ಧೆವಹಿಸು” ತನ್ನ ಮಗನಿಗೆ ಈ ತರಹ ಆಶೀರ್ವದಿಸಿದಾಗ ಶೀಲಾಧರನು ವ್ಯಾಕುಲಗೊಂಡು, ಮಗನಿಗೆ ಗೊತ್ತಾಗದಂತೆ ಋಷಿಗಳ ಜೊತೆ ಮನೆಯಿಂದ ಸ್ವಲ್ಪ ಹೊರಗೆ ಬಂದು, “ಮಹರ್ಷಿಗಳೇ ಏನಾಯಿತು? ನನ್ನ ಮಗ ನಂದಿಗೆ ಆಶೀರ್ವಾದ ಮಾಡುವಾಗ ನೀವು ಬಹಳ ಗಂಭೀರವಾಗಿ, ಉತ್ಸಾಹ ಕಳೆದುಕೊಂಡವರಂತೆ ಇದ್ದೀರಿ,ನನ್ನ ಮಗನು ನಿಮ್ಮ ಸೇವೆ ಮಾಡುವಲ್ಲಿ.
🌺 ಅಚಾತುರ್ಯದಿಂದ ನಿಮಗೇನಾದರೂ ಲೋಪ ಮಾಡಿದನೇ? ಹೇಳಿ ಎಂದು ಹೆದರಿ ಕೇಳಿದನು. ಆಗ ಋಷಿಗಳು, ಹಾಗೆಲ್ಲ ನಂದಿ ತಪ್ಪು ಮಾಡುವನಲ್ಲ. ಅವರು ಶಿವನ ವರಪ್ರಸಾದದಿಂದ ದೊರೆತವನು. ಆದರೆ ನಾವು ನಿನ್ನ ಮಗನಿಗೆ ಧೀರ್ಘಾಯುಷ್ಯವಂತನಾಗು ಎಂದು ಆಶೀರ್ವಾದ ಮಾಡಲಾಗುವುದಿಲ್ಲ. ಏನು ಮಾಡುವುದು. ನಮಗೆ ಈ ವಿಷಯವನ್ನು ಹೇಳಲು ಮನಸ್ಸಿಗೆ ನೋವಾಗುತ್ತಿದೆ. ಬಾಲಕನ ಆಯಸ್ಸು ತುಂಬಾ ಕಡಿಮೆ ಇದೆ ಎಂದು ಹೇಳಿ ಅವರು ಹೊರಟೇಬಿಟ್ಟರು.
🌺 ಶಿಲಾಧರನು ಆತಂಕ ಹಾಗೂ ನಿರುತ್ಸಾಹಗೊಂಡವನಾಗಿ ಮನೆಯೊಳಗೆ ಬಂದನು. ತಂದೆಯ ಮ್ಲಾನ ಮುಖವನ್ನು ನೋಡಿ ನಂದಿಯು ಏನಾಯಿತು? ಎಂದು ಕೇಳಿದನು. ಇದಕ್ಕೆ ಉತ್ತರವನ್ನು ಕೊಡಲು ತಂದೆಗೆ ಏನೂ ಇಷ್ಟವಿರಲಿಲ್ಲ. ಆದರೆ ನಂದಿಯು ಹಟಮಾಡಿ ಕೇಳಿದಾಗ ಹೇಳದೆ ವಿಧಿ ಇರಲಿಲ್ಲ ಹೀಗಾಗಿ ಶಿಲಾಧರನು ಋಷಿಗಳು ಹೇಳಿದ ವಿಷಯವನ್ನು ಹೇಳಿದನು. ಇದನ್ನು ಕೇಳಿದ ಬಾಲಕ ನಂದಿಯು ಜೋರಾಗಿ ನಗುತ್ತಾ ಹೀಗೆ ಹೇಳಿದನು. “ಅಯ್ಯೋ ಅಪ್ಪ ಆ ಪರಮೇಶ್ವರನೇ ನಿನಗೆ ಪ್ರತ್ಯಕ್ಷವಾಗಿ ದರ್ಶನ ಕೊಟ್ಟಿದ್ದಾನೆ ಎಂದು ಹೇಳುವುದನ್ನು ಕೇಳಿದ್ದೇನೆ. ನಮ್ಮ ಜೊತೆ ಶಂಕರನೇ ಇರುವಾಗ ನೀನೇಕೆ ಹೆದರುತ್ತಿಯಾ? ನಾನು ಭಕ್ತಿಯಿಂದ ಶಿವನನ್ನು ಆರಾಧಿಸುತ್ತೇನೆ. ನನ್ನ ಪ್ರಾರ್ಥನೆಗೆ ಅವರು ಒಲಿಯುತ್ತಾರೆ. ಶಿವನು ಬಹಳ ಶಕ್ತಿಶಾಲಿ. ಅವರಿಗೆ ಅಸಾಧ್ಯವಾದುದು ಯಾವುದು ಇಲ್ಲ.
🌺 ಶಿವನು ನನ್ನ ವಿಧಿಯನ್ನು ಖಂಡಿತ ಬದಲಾಯಿಸುತ್ತಾರೆ. ನಾನು ಶಂಕರನನ್ನು ಪ್ರಾರ್ತಿಸುತ್ತೇನೆ. ನೀವು ನನ್ನ ಸಂಕಲ್ಪ ಸಫಲವಾಗಲಿ ಎಂದು ನನಗೆ ಆಶೀರ್ವಾದವನ್ನು ಮಾಡಿರಿ” ಎಂದನು. ಶೀಲಾಧರನು ಸಮಾಧಾನಗೊಂಡು ಮಗನಿಗೆ ಆಶೀರ್ವಾದ ಮಾಡಿದನು. ನಂದಿಯು ಪರ್ವತಕ್ಕೆ ಹೋಗಿ ಸ್ವಲಕಾಲ ನೀರಿನೊಳಗೆ ಇದ್ದು, ನಂತರ ನದಿಯ ದಡದಲ್ಲಿ ಕುಳಿತು ಶಿವನಾಮ ಜಪಿಸುತ್ತಾ ಘೋರ ತಪಸ್ಸು ಮಾಡಿದನು. ನಂದಿಯ ಕಠೋರ ತಪಸ್ಸಿಗೆ ಭಗವಂತನು ಮೆಚ್ಚಿದನು. ಮತ್ತು ಅವರ ಮುಂದೆ ಪ್ರತ್ಯಕ್ಷನಾದನು. ನಂದಿಯು ತನ್ನ ಮುಂದೆ ನಿಂತ ಶಿವನನ್ನು ಮತ್ತು ಶಿವನ ಸೌಂದರ್ಯವನ್ನು ನೋಡಿ ಮೈಮರೆತನು. ಶಿವನನ್ನು ನೋಡುತ್ತಾ ಮೈಮರೆತ ನಂದಿಗೆ ಅವರ ಬಾಯಿಂದ ‘ವರ’ ಕೇಳುವುದು ಮರೆತುಹೋಗಿ ಬಾಯಿಂದ ಯಾವ ಶಬ್ದವು ಹೊರಡಲಿಲ್ಲ. ನಂದಿಯು ಮನಸ್ಸಿನಲ್ಲಿ, ಆಹಾ ನಾನು ಶಿವನ ವಾಹನವಾಗುವುದಾದರೆ ಎಷ್ಟು ಚೆನ್ನಾಗಿರುತ್ತದೆ.
🌺 ಶಿವನ ವಾಹನವಾದರೆ ಯಾವಾಗಲೂ ಅವರ ಜೊತೆಯಲ್ಲೇ ಇರಬಹುದು, ಮತ್ತು ಶಿವನನ್ನು ಸದಾಕಾಲವೂ ನೋಡುತ್ತಿರಬಹುದು ಅಲ್ಲವೇ? ಎಂದು ಮನಸ್ಸಿನಲ್ಲಿ ಅಂದುಕೊಂಡನು. ಹಾಗೂ ಇದನ್ನೇ ಕುರಿತು ಚಿಂತಿಸಿದನು. ಶಿವನಿಗೆ ನಂದಿಯ ಮನಸ್ಸಿನಲ್ಲಿ ಅಂದುಕೊಂಡ ಮಾತುಗಳು ಕೇಳಿದವು. ಶಿವನು ನಗುತ್ತಾ, ಆಯ್ತು ನಂದಿ ನಿನ್ನ ಮನದಿಚ್ಛೆ ಯಂತೆ ಆಗಲಿ, ಎಂದು ವರ ನೀಡಿದನು. ಮತ್ತು ಇಂದಿನಿಂದ ನಿನ್ನ ಮುಖ ವೃಷಭನಂತೆ ಆಗಲಿ ಎಂದು ನಂದಿಗೆ ಹರಸಿ, ನೀನು ಎಂದಿಗೂ ನನಗೆ ಪ್ರೀತಿಯ ವಾಹನವಾಗಿ ಇರುವೆ ಎಂದು ಹೇಳಿದನು. ಅಂದಿನಿಂದ ನಂದಿಯು ಶಿವನ ಪ್ರಮುಖ ವಾಹನವಾದನು ಹಾಗೂ ಶಿವನ ಎಲ್ಲಾ ಗಣಗಳಿಗೂ ನಾಯಕನಾದನು. ಈಶ್ವರನ ದೇವಸ್ಥಾನಕ್ಕೆ ಹೋದಾಗ ಶಿವನ ದರ್ಶನದೊಂದಿಗೆ, ನಂದಿಯ ಬಲಕಿವಿಯಲ್ಲಿ ಯಾರಿಗೆ ಕೇಳದಂತೆ ಪಿಸುಮಾತಿನಲ್ಲಿ ಮನದ ಇಷ್ಟಾರ್ಥವನ್ನು ಬೇಡಿಕೊಂಡರೆ, ನಂದಿಯ ಮೂಲಕ ಶಿವನಿಗೆ ತಲುಪಿ ಅದು ನೆರವೇರುತ್ತದೆ ಎನ್ನುವ ನಂಬಿಕೆ ಇದೆ.
🌷 ಅನ್ನದ ಮಹತ್ವ ಕುರಿತಾದ ಒಂದು ಕಥೆ 🌷
🌻 “ದಾನಕ್ಕಿಂತ ದೊಡ್ಡದಿಲ್ಲ ದಾನ ಮಾಡಿ ಕೆಟ್ಟೋರಿಲ್ಲ” ದಾನದಲ್ಲಿ ಅನ್ನದಾನಕ್ಕಿಂತ ಶ್ರೇಷ್ಠದಾನ ಬೇರಿಲ್ಲ. “ಹಸಿದ ಮನುಷ್ಯನಿಗೆ ಊಟ ಹಾಕಿದ ಮೇಲೆ ಮತ್ತೆ ಬೇರೆ ಏನು ತಿನ್ನಲು ಆಗುವುದಿಲ್ಲ. ಅದೇ ಚಿನ್ನ, ಬಟ್ಟೆ, ಅಥವಾ ಏನೇ ಕೊಡಲಿ, ಹೀಗಿದ್ದರೆ ಚೆನ್ನಾಗಿತ್ತು. ಇದು ನನ್ನ ಹತ್ತಿರ ಇದೆ. ಇದು ಇಷ್ಟವಿಲ್ಲ, ಹೀಗೆ ಏನಾದರೂ ಹುಡುಕಲು ಇರುತ್ತದೆ. ಹಸಿವಾದಾಗ ಹೊಟ್ಟೆತುಂಬಾ ಬಡಿಸಿದರೆ ಅದರ ಮುಂದೆ ಇನ್ನೇನು ಬೇಡ. ಇದು ಅನ್ನದ ಮಹತ್ವ. ಈ ಕುರಿತಾದ ಒಂದು ಕಥೆ.
🌻 ಒಬ್ಬ ತಾಯಿ ಮಗ ಇದ್ದರು. ಆ ತಾಯಿ ನಾಲ್ಕಾರು ಮನೆಗಳ ಕೆಲಸಮಾಡಿ ಅಲ್ಲಿ ಕೊಟ್ಟಿದ್ದನ್ನು ತಂದುದರಲ್ಲಿ, ಬೇಡಲು ಬಂದ ಭಿಕ್ಷುಕರಿಗೆ ಕೊಟ್ಟು ಉಳಿದುದನ್ನು ತಾಯಿ – ಮಗ ತಿನ್ನುತ್ತಿದ್ದರು. ಒಮ್ಮೊಮ್ಮೆ ಒಬ್ಬರಿಗೆ ಮಾತ್ರ ಆಹಾರ ಉಳಿದರೆ ಮಗನಿಗೆ ಹಾಕಿ ತಾಯಿ ಹಾಗೆ ನೀರು ಕುಡಿದು ಮಲಗುತ್ತಿದ್ದಳು. ಮಗ ಹೀಗೆ ಬೆಳೆದು ದೊಡ್ಡವನಾದನು. ಅವನಿಗೆ ತನ್ನ ತಾಯಿ ಅನ್ನದಾನ ಮಾಡದೇ ಹೋಗಿದ್ದರೆ ತಾವು ಎಲ್ಲರಂತೆ ಚೆನ್ನಾಗಿರಬಹುದಿತ್ತು. ತನ್ನ ಅಮ್ಮ ಹೀಗೇಕೆ ಮಾಡುತ್ತಾಳೆ.
🌻 ತಾಯಿ ಅವರಿವರ ಮನೆ ಕೆಲಸ ಮಾಡಿ ಅದರಿಂದ ಬಂದುದರಲ್ಲಿ ನಾವಿಬ್ಬರೂ ಹೇಗೋ ಜೀವನ ಮಾಡುತ್ತಿದ್ದೇವೆ ಅದರೊಳಗೆ ಅವಳೇಕೆ ಅನ್ನದಾನ ಮಾಡಬೇಕು. ಇದನ್ನೆಲ್ಲ ತಿಳಿದುಕೊಳ್ಳಬೇಕು ಎಂದು ಒಂದು ದಿನ, ಅಮ್ಮ ನಮಗೆ ಊಟಕ್ಕೆ ಇಷ್ಟು ಕಷ್ಟ ಪಡುತ್ತೇವೆ, ಒಂದೊಂದು ದಿನ ನೀನು ನಿನ್ನ ಪಾಲಿನ ಊಟವನ್ನು ಭಿಕ್ಷುಕರಿಗೆ ಕೊಟ್ಟು ನೀನು ಉಪವಾಸ ವಿರುತ್ತಿ, ಹೀಗಿರುವಾಗ ಮನೆಗೆ ಬರುವ ಭಿಕ್ಷುಕರುಗೆಲ್ಲ ಅನ್ನ ಕೊಡುತ್ತೀ ಯಾಕೆ? ಅಲ್ಲದೆ ಈ ಅನ್ನದಾನ ಮಾಡದಿದ್ದರೆ ನೀನು ಸಹ ಬೇರೆಯವರ ಮನೆ ಕೆಲಸ ಮಾಡುವ ಅಗತ್ಯವೇ ಇರಲಿಲ್ಲ. ಹಾಗಾದರೆ ಅನ್ನದಾನಕ್ಕೆ ಅಷ್ಟೊಂದು ಮಹತ್ವವಿದೆಯೇ? ಅದನ್ನು ಏನು ಅಂತ ನನಗೂ ಹೇಳು ಎಂದನು.
🌻 ಆಗ ತಾಯಿಯು, ಮಗನೇ ದಾನಗಳಲ್ಲಿ ಶ್ರೇಷ್ಠವಾದ ದಾನ ಅನ್ನದಾನ. ಈ ಅನ್ನದಾನದ ಪುಣ್ಯವು ಕಡೆ ತನಕ ನಮಗೆ ಉಳಿಯುವುದು. ಬಡತನ ಸಿರಿತನ ಇವುಗಳೆಲ್ಲ ಇವತ್ತು ಬರಬಹುದು, ನಾಳೆ ಹೋಗಬಹುದು ಎಂದು ಮಗನಿಗೆ ಹೇಳಿದರಳು. ಹಾಗಾದರೆ ಅನ್ನದಾನ ದಿಂದ ಯಾವ ಪುಣ್ಯ ಸಿಗುತ್ತದೆ ಎಂದು ಕೇಳಿದ. ಆಗ ತಾಯಿಯು ಪುಣ್ಯದ ವಿಚಾರ ನಮ್ಮಂಥವರಿಗೆ ತಿಳಿದಿಲ್ಲ. ಅದೇನಿದ್ದರೂ ‘ಶಿವ’ನಿಗೆ ಗೊತ್ತು ನೀನು ಹೋಗಿ ಅವನನ್ನು ಕೇಳಿದರೆ ತಿಳಿಯುತ್ತದೆ ಎಂದಳು. ಮಗ ಯೋಚಿಸಿದ ‘ಪುಣ್ಯ’ ಎಂದರೇನು? ಹೇಗೆ ಸಿಗುತ್ತದೆ ಎಂದು ತಿಳಿಯಬೇಕು ಎಂದುಕೊಂಡು ತಾಯಿ ಅನುಮತಿ ಪಡೆದು ಒಂದು ದಿನ ಮನೆಯಿಂದ ಶಿವನನ್ನು ಹುಡುಕಲು ಹೊರಟನು.
🌻 ಶಿವನನ್ನು ಹುಡುಕುತ್ತಾ ನಡೆದುಹೋಗುತ್ತಲೇ ಇದ್ದನು. ಎಷ್ಟು ದೂರ ನಡೆದರೂ ಶಿವನು ಸಿಗಲಿಲ್ಲ. ದೊಡ್ಡ ಕಾಡು ಸಿಕ್ಕಿತು, ಕಾಡನ್ನು ದಾಟಿದಮೇಲೆ ಒಂದು ಬೆಟ್ಟ ಬಂದಿತು. ಬೆಟ್ಟ ಹತ್ತಿ ಕೆಳಗೆ ಇಳಿದನು. ಅಷ್ಟು ಹೊತ್ತಿಗೆ ಕತ್ತಲಾಯಿತು ದಾರಿ ತಪ್ಪಿತು. ಮುಂದೆ ಏನು ಮಾಡಬೇಕು ಅವನಿಗೆ ತಿಳಿಯದಾಯಿತು. ಆಗ ಅಲ್ಲಿಗೆ ಬೇಡನೊಬ್ಬ ಬಂದನು. ಅವನಿಗೆ ಬಾಲಕನನ್ನು ನೋಡಿ ಕನಿಕರ ಹುಟ್ಟಿತು. ಹತ್ತಿರ ಬಂದು, ಹುಡುಗ ಈ ರಾತ್ರಿ ಇಲ್ಲೇ ಉಳಿದರೆ ಹುಲಿ, ಸಿಂಹಗಳ ಬಾಯಿಗೆ ನೀನು ಆಹಾರವಾಗುತ್ತಿ ಎಂದನು. ಮತ್ತು ಈ ರಾತ್ರಿ ಕಾಡಲ್ಲಿ ಉಳಿಯ ಬೇಡ. ನೀನು ಇಂದು ನಮ್ಮ ಗುಡಿಸಲಿಗೆ ಬಂದು ರಾತ್ರಿ ಅಲ್ಲೇ ಉಳಿಯುವಂತೆ ಎಂದನು. ಹುಡುಗನಿಗೂ ಬೆಳಗ್ಗಿನಿಂದ ಓಡಾಡಿ ಸಾಕಾಗಿತ್ತು. ಬೇಡನ ಗುಡಿಸಲ ಮನೆ ಸರಿ ಎಂದುಕೊಂಡು, ಅವನ ಜೊತೆ ಗುಡಿಸಲಿಗೆ ಬಂದನು. ಬೇಡನು ತನ್ನ ಹೆಂಡತಿಗೆ, ಈ ಹುಡುಗನು ಕಾಡಲ್ಲಿ ಒಂಟಿಯಾಗಿದ್ದನು.
🌻 ಅಲ್ಲೇ ಉಳಿದಿದ್ದರೆ ಕಾಡುಪ್ರಾಣಿಗಳು ಇವನನ್ನು ಬಿಡುತ್ತಿರಲಿಲ್ಲ ಹಾಗಾಗಿ ನಾನು ಕರೆದುಕೊಂಡು ಬಂದೆ ಹುಡುಗನಿಗೆ ಏನಾದರೂ ತಿನ್ನಲು ಸ್ವಲ್ಪ ಆಹಾರ ಕೊಡು ಎಂದು ಹೇಳಿದನು. ಅದಕ್ಕೆ ಬೇಡನ ಹೆಂಡತಿ ನನ್ನ ಪಾಲಿನ ಆಹಾರವನ್ನು ನಾನು ಕೊಡುವುದಿಲ್ಲ. ಬೇಕಾದರೆ ನಿನ್ನ ಪಾಲಿನ ಆಹಾರವನ್ನು ಕೊಡು ಎಂದಳು. ಬೇಡನು ಏನು ಹೇಳದೆ ತನ್ನ ಪಾಲಿನ ಆಹಾರವನ್ನು ಹುಡುಗನಿಗೆ ಕೊಟ್ಟನು. ನಂತರ ಕನಿಕರದಿಂದ ಹಾಸಿಗೆ ಹಾಸಿ ಕೊಟ್ಟು ಅವನ ಕಾಲನ್ನು ಒತ್ತಿ ನಿದ್ದೆ ಮಾಡುವಂತೆ ಹೇಳಿದನು. ಗುಡಿಸಲಲ್ಲಿ ಬೇಡನಿಗೆ ಮಲಗಲು ಜಾಗವಿಲ್ಲ ವಾಯಿತು ಆಗ ಅವನು ಮನೆಯಿಂದ ಹೊರ ಭಾಗಕ್ಕೆ ತನ್ನ ಕಾಲನ್ನು ಹೊಸಿಲು ಒಳಗಡೆ ತಲೆಯನ್ನು ಇಟ್ಟುಕೊಂಡು ಬಾಗಿಲು ಹಾಕದೆ ಹಾಗೆ ಮಲಗಿಕೊಂಡನು. ಮಧ್ಯರಾತ್ರಿ ಹೊತ್ತಿಗೆ ಒಂದು ಹುಲಿ ಬಂದು ಬೇಡನನ್ನು ತಿಂದು, ಒಳಗೆ ಹೋಗಿ ಅವನ ಹೆಂಡತಿಯನ್ನು ತಿಂದಿತು. ಹೊಟ್ಟೆ ತುಂಬಿದ್ದರಿಂದ ಹುಡುಗನನ್ನು ನೋಡದೆ ಹೊರಟು ಹೋಯಿತು. ಹುಡುಗನು ಬೆಳಿಗ್ಗೆ ಎದ್ದು ನೋಡಿದ ಬರೀ ಮೂಳೆ ಗಳಿದ್ದವು. ಅವನಿಗೆ ತುಂಬಾ ಬೇಸರವಾಯಿತು ಹಾಗೆ ಮುಂದೆ ನಡೆದನು.
🌻 ಮುಂದೆ ಹೋಗುತ್ತಿರುವಾಗ ಅಲ್ಲೊಬ್ಬ ರಾಜನು ತಲೆಯಮೇಲೆ ಕೈಹೊತ್ತು ಕುಳಿತಿದ್ದನು. ಈ ಹುಡುಗನನ್ನು ಕರೆದು ಎಲ್ಲಿಗೆ ಹೋಗುತ್ತಿರುವೆ ಎಂದು ಕೇಳಿದನು. ಹುಡುಗನು ಶಿವನಲ್ಲಿ ನನಗೆ ಕೇಳಲು ಒಂದು ಪ್ರಶ್ನೆಇದೆ. ಅವನನ್ನು ಕಾಣಲು ಹೋಗುತ್ತಿದ್ದೇನೆ ಎಂದನು. ಹಾಗಾದರೆ ನನ್ನದೊಂದು ಪ್ರಶ್ನೆ ಇದೆ ಕೇಳಿಬರುವೆಯಾ ಎಂದನು. ನಾನು ಕೋಟಿ ಹಣ ಖರ್ಚು ಮಾಡಿ ಕೆರೆ ಕಟ್ಟಿಸಿದ್ದೇನೆ. ಆದರೆ ಒಂದು ಹನಿ ನೀರು ಬಂದಿಲ್ಲ ಯಾಕೆಂದು ಕೇಳಿಕೊಂಡು ಬರುತ್ತೀಯಾ? ಎಂದು ಕೇಳಿದನು. ಹುಡುಗನು ಆಗಲಿ ಎಂದು ಉತ್ತರಿಸಿ ಮುಂದೆ ನಡೆದನು.
🌻 ಹೀಗೆ ಮುಂದೆ ಮುಂದೆ ಹೋದಾಗ ಕುಂಟ ನೊಬ್ಬನು ಇವನನ್ನು ಕರೆದು,ಏ ಹುಡುಗ ನೀನು ಎಲ್ಲಿಗೆ ಹೋಗುತ್ತಿರುವೆ? ಎಂದು ಕೇಳಿದನು. ಅದಕ್ಕೆ ನಾನು ಶಿವನನ್ನು ಕಾಣಲು ಹೋಗುತ್ತಿದ್ದೇನೆ. ಎಂದು ರಾಜನಿಗೆ ಹೇಳಿದಂತೆ ಹೇಳಿದನು. ಕುಂಟನು, ಹಾಗಾದರೆ ನೀನು ನನ್ನ ಕುಂಟುತನಕ್ಕೆ ಕಾರಣವೇನು ಎಂದು ಕೇಳಿಕೊಂಡು ಬರುತ್ತೀಯಾ? ಎಂದು ಕೇಳಿದಾಗ ಆಯಿತು ಎಂದು ಅವನಿಗೆ ಹೇಳಿ ಮುಂದೆ ನಡೆದನು. ಸ್ವಲ್ಪ ಮುಂದೆ ಹೋದಂತೆ ಒಂದು ಪೊದೆಯ ಹತ್ತಿರ ಹುತ್ತವಿತ್ತು. ಒಂದು ಸರ್ಪವು ತನ್ನ ದೇಹವನ್ನು ಹುತ್ತದ ಒಳಗೆ ಅರ್ದ ಮತ್ತು ಹುತ್ತದಿಂದ ಹೊರಗೆ ಅರ್ದ ಇಟ್ಟುಕೊಂಡು ಅಲುಗಾಡದೆ ಅತಂತ್ರ ಸ್ಥಿತಿಯಲ್ಲಿ ಒದ್ದಾಡುತ್ತಾ ಬಿದ್ದಿತ್ತು. ಅದು ಸಹ ಹುಡುಗನನ್ನು ಕರೆದು ಕೇಳಿತು. ಹುಡುಗನು ಎಲ್ಲರಿಗೂ ಹೇಳಿದ ಉತ್ತರವನ್ನೇ ಹೇಳಿದನು. ಆಗ ಸರ್ಪವು ಹೇಳಿತು. ಹಾಗಾದರೆ ನನ್ನದೊಂದು ಪ್ರಶ್ನೆ ಇದೆ ನನ್ನ ಈ ಸ್ಥಿತಿಗೆ ಕಾರಣವೇನು ಎಂದು ಶಿವನನ್ನು ಕೇಳಿಬರುತ್ತಿಯಾ? ಎಂದು ಕೇಳಿತು. ಹುಡುಗನು ಆಗಲಿ ಎಂದು ಮುಂದೆ ಹೊರಟನು.
🌻; ಬಹಳಷ್ಟು ದೂರ ನಡೆದು ನಡೆದು ಅವನು ನೇರವಾಗಿ ಕೈಲಾಸಪರ್ವತಕ್ಕೆ ಬಂದನು. ಅಲ್ಲಿ ಜಗತ್ತಿನ ತಂದೆ ತಾಯಿಯರಾದ ಶಿವಪಾರ್ವತಿಯರ ಕುಳಿತಿದ್ದರು. ಹುಡುಗನ ಸಂತೋಷಕ್ಕೆ ಪಾರವೇ ಇರಲಿಲ್ಲ .ಅವರ ಹತ್ತಿರ ಹೋಗಿ ಭಕ್ತಿಯಿಂದ ನಮಸ್ಕರಿಸಿದನು. ಏ ತಂದೆ ಶಿವ, ಶಂಭೋ ಶಂಕರ, ನನ್ನದೊಂದು ಪ್ರಶ್ನೆ ಇದೆ ‘ಅನ್ನದಾನದ ಪುಣ್ಯ’ ಯಾವುದು? ಎಂದು ಕೇಳಿದನು. ಶಿವನ ನೋಡು ಮಗು ಈಗ ನೇಪಾಳದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನೀನು ಹೋಗಿ ಅವಳಿಗೆ ನಾನು ಕೊಡುವ ಈ ಪ್ರಸಾದವನ್ನು ಅವಳಿಗೆ ಕೊಡು. ಆಗ ಅವಳಿಗೆ ಒಂದು ಮಗು ಹುಟ್ಟುತ್ತದೆ. ಹುಟ್ಟಿದ ಮಗುವು ನಿನ್ನ ಪ್ರಶ್ನೆಗೆ ಉತ್ತರ ಹೇಳುತ್ತದೆ ಎಂದನು.
🌻 ಆಮೇಲೆ ಆ ಹುಡುಗನು ತಾನು ಮನೆಯಿಂದ ಬರುವಾಗ ಹಾದಿಯಲ್ಲಿ ರಾಜ, ಕುಂಟ, ಸರ್ಪ, ಇವರೆಲ್ಲರೂ ತಮಗಿರುವ ಸಮಸ್ಯೆಗಳಿಗೆ ಉತ್ತರ ಕೇಳಿಕೊಂಡು ಬರಲು ತಿಳಿಸಿದ್ದಾರೆ ಪ್ರಭು ಎಂದನು. ಶಿವನು ಆ ಪ್ರಶ್ನೆಗಳಿಗೆಲ್ಲ ಒಂದೊಂದಾಗಿ ಉತ್ತರಕೊಟ್ಟನು. ರಾಜನು ಬೆಳೆದುನಿಂತ ತನ್ನ ಮಗಳನ್ನು ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ, ಅವನು ಕಟ್ಟಿಸಿರುವ ಕೆರೆಯಲ್ಲಿ ನೀರು ತುಂಬುತ್ತದೆ ಎಂದು ಹೇಳು. ಎಂದನು. ಎರಡನೇಯದಾಗಿ ಕುಂಟನು ತನ್ನಲ್ಲಿರುವ ವಿದ್ಯೆಯನ್ನು ದಾನ ಮಾಡಿದರೆ ಅವನು ಕುಂಟು ಕಾಲು ಸರಿಹೋಗುವುದು ಎಂದನು. ಮೂರನೆಯದಾಗಿ ಆ ಸರ್ಪವು ತನ್ನ ನೆತ್ತಿಯ ಮೇಲಿರುವ ರತ್ನವನ್ನು ಯೋಗ್ಯರಿಗೆ ದಾನ ಮಾಡಿದರೆ ಅದು ಚಲಿಸಲು ಸಾಧ್ಯವಾಗುತ್ತದೆ ಎಂದನು. ಈ ರೀತಿಯಾಗಿ ಹುಡುಗನು ಶಿವನಿಂದ ಎಲ್ಲರಿಗೂ ಉತ್ತರದ ಪರಿಹಾರವನ್ನು ತೆಗೆದುಕೊಂಡು ಶಿವನಿಗೆ ಭಕ್ತಿಭಾವದಿಂದ ಪ್ರಾರ್ಥಿಸಿ ನಮಸ್ಕರಿಸಿ ಅಲ್ಲಿಂದ ಹೊರಟನು.
🌻 ಆ ಹುಡುಗನಿಗೆ ಬರುವಾಗ ಮೊದಲು ಸರ್ಪ ಸಿಕ್ಕಿತು. ಶಿವನು ಹೇಳಿದ ಪರಿಹಾರವನ್ನು ಅದಕ್ಕೆ ಹೇಳಿದನು. ಆಗ ಸರ್ಪವು ನಿನಗಿಂತ ಯೋಗ್ಯರು ಯಾರಿದ್ದಾರೆ ಎಂದುಕೊಂಡು ಅದರ ನೆತ್ತಿಯಲ್ಲಿರುವ ನಾಗರವನ್ನು ಹುಡುಗನಿಗೆ ದಾನ ಮಾಡಿತು. ತಕ್ಷಣವೇ ಆ ಸರ್ಪವು ಅಲ್ಲಿಂದ ಚಲಿಸಲು ಸಾಧ್ಯವಾಯಿತು ಅದು ಸಂತೋಷವಾಗಿ ತನ್ನ ಹೆಡೆಯನ್ನು ಬಿಚ್ಚಿ ಕೊಂಡಿತು. ಮುಂದೆ ಬಂದಾಗ ಕುಂಟ ಹುಡುಗನು ಸಿಕ್ಕನು. ನೀನು ನಿನ್ನಲ್ಲಿರುವ ವಿದ್ಯೆಯನ್ನು ಯಾರಿಗಾದರೂ ದಾನ ಮಾಡಿದರೆ ನಿನ್ನ ಕುಂಟು ಹೋಗುತ್ತದೆ. ಎಂದು ಶಿವನು ಹೇಳಿದನು. ಇದನ್ನು ಕೇಳಿ ಕುಂಟನು ನಿನಗಿಂತ ಯೋಗ್ಯರು ಯಾರಿದ್ದಾರೆ ಎಂದುಕೊಂಡು ತನ್ನಲ್ಲಿರುವ ಅರವತ್ತನಾಲ್ಕು ವಿದ್ಯೆಯನ್ನು ಹುಡುಗನಿಗೆ ಧಾರೆಯೆರೆದನು. ಮತ್ತೆ ಮುಂದೆ ಬಂದನು ರಾಜನು ಕಂಡನು, ರಾಜನಿಗೆ ಶಿವನು ಹೇಳಿದ ಉತ್ತರವನ್ನು ಹೇಳಿದಾಗ ರಾಜನು ಸಂತೋಷಗೊಂಡು ನಿನಗಿಂತ ಯೋಗ್ಯ ವರ ಇನ್ನಾರು ಇರುವರು ಎಂದು ತನ್ನ ಮಗಳನ್ನು ಆ ಹುಡುಗನಿಗೆ ಕೊಟ್ಟು ಸಂತೋಷದಿಂದ ವಿವಾಹ ಮಾಡಿದನು.
🌻 ಆನಂತರ ತನ್ನ ಪತ್ನಿ ರಾಜಕುಮಾರಿಯೊಂದಿಗೆ ನೇಪಾಳ ರಾಜ್ಯಕ್ಕೆ ಬಂದನು. ಅಲ್ಲಿಯ ರಾಣಿ ಹೆರಿಗೆ ಯಾಗದೆ ಒದ್ದಾಡುತ್ತಿದ್ದಳು. ಹುಡುಗನು ಶಿವನು ಕೊಟ್ಟ ಪ್ರಸಾದವನ್ನು ಆಕೆಗೆ ಕೊಟ್ಟನು. ಶಿವನು ಕೊಟ್ಟ ಪ್ರಸಾದವನ್ನು ಭುಂಜಿಸಿದ ಸ್ವಲ್ಪಹೊತ್ತಿನಲ್ಲೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು. ಸ್ವಲ್ಪ ಸಮಯದ ನಂತರ ಹುಡುಗನು ರಾಜನಲ್ಲಿ ಹೇಳಿದನು. ಹುಟ್ಟಿದ ಮಗುವಿನ ಹತ್ತಿರ ನಾನೊಂದು ಪ್ರಶ್ನೆ ಕೇಳಬೇಕು ಹಾಗಾಗಿ ನನಗೆ ಮಗುವನ್ನು ತೋರಿಸಿ ಎಂದು ಕೇಳಿದಾಗ, ದರ್ಬಾರಿ ನಲ್ಲಿರುವ ಎಲ್ಲರೂ ಆಶ್ಚರ್ಯಪಟ್ಟರು.ರಾಜನು ಹುಡುಗನ ಅಪೇಕ್ಷೆಯಂತೆ ಮಗುವನ್ನು ತಂದು ಬಂಗಾರದ ತಟ್ಟೆಯಲ್ಲಿ ಮಲಗಿಸಿ ತೋರಿಸಿದನು.
🌻 ಅದರ ಕಿವಿಯಲ್ಲಿ ಹುಡುಗನು, ಮಗು ಶಿವನು ನನ್ನ ಪ್ರಶ್ನೆಯನ್ನು ನಿನ್ನಲ್ಲಿ ಕೇಳು ಎಂದು ಹೇಳಿದ್ದಾನೆ. ನನ್ನ ಪ್ರಶ್ನೆ ‘ಅನ್ನದಾನದ ಪುಣ್ಯ ಯಾವುದು’ ಎಂದು ಕೇಳಿದಾಗ ಆ ಮಗು ಜೋರಾಗಿ ನಕ್ಕು , ಶಿವನನ್ನು ಕಂಡು ಬಂದರೂ ನಿನಗೆ ಈ ವಿಚಾರ ಅರ್ಥವಾಗಲಿಲ್ಲವೇ? ಎಂದು ಮಗು ಕೇಳಿತು. ಆನಂತರ ನೋಡು ನೀನು ಅಡವಿಗೆ ಬಂದಾಗ ಅಲ್ಲಿ ದಾರಿತಪ್ಪಿ ಕತ್ತಲೆಯಲ್ಲಿ ಒಬ್ಬನೇ ಉಳಿದಾಗ ಬೇಡನೊಬ್ಬ ನಿನ್ನನ್ನು ಮನೆಗೆ ಕರೆತಂದು ಆಹಾರ ಕೊಟ್ಟು ಉಪಚರಿಸಿದ ನಲ್ಲ ಆ ಬೇಡನೇ ನಾನು, ನನ್ನ ಹೆಂಡತಿ ಅನ್ನದಾನ ಮಾಡದೆ ಹಾಗೆ ಮಲಗಿದಳು.
🌻 ನಡುರಾತ್ರಿ ಹುಲಿಯೊಂದು ಬಂದು ನಮ್ಮಿಬ್ಬರನ್ನು ತಿಂದು ಹಾಕಿತು. ಹಿಂದಿನ ಜನ್ಮದಲ್ಲಿ ನಾನು ನಿನಗೆ ಅನ್ನ ಹಾಕಿದ ಪುಣ್ಯದಿಂದ ಈ ಜನ್ಮದಲ್ಲಿ ರಾಜನ ಮನೆಯಲ್ಲಿ ರಾಜಕುಮಾರನಾಗಿ ಜನ್ಮ ತಾಳಿದ್ದೇನೆ. ನನ್ನ ಹೆಂಡತಿ ನಿನಗೆ ಅನ್ನ ಕೊಡದ ಕಾರಣ ಇದೇ ಊರಿನಲ್ಲಿ ಬೇರೆ ಕಡೆ ಒಂದು ಜಂತು ವಾಗಿ ಜನ್ಮ ತಾಳಿದ್ದಾಳೆ. ನೀನು ಬೇಕಾದರೆ ಹೋಗಿ ನೋಡಬಹುದು ಎಂದಿತು. ಹುಡುಗನಿಗೆ ಆಗಲೇ ಅನ್ನದಾನದ ಪುಣ್ಯದ ಅರಿವು ತಿಳಿದಾಯಿತು ಆದ್ದರಿಂದ ಅವನು ಎಲ್ಲಿಗೂ ಹೋಗದೆ ತಾನು ಮದುವೆಯಾದ ರಾಜಕುಮಾರಿಯೊಂದಿಗೆ ಊರಿಗೆ ಬಂದು ತನ್ನ ತಾಯಿ ಮಾಡುತ್ತಿದ್ದ ಅನ್ನದಾನವನ್ನು ತಾನು ಸಹ ಮುಂದುವರಿಸಿ ಬಡವರು ಶ್ರೀಮಂತರು ಏನ್ನದೆ ಹಸಿದ ಪ್ರತಿಯೊಬ್ಬರಿಗೂ ನಾನಾ ರೀತಿಯಲ್ಲಿ. ಅನ್ನದಾನ ಮಾಡುತ್ತಾ ಸುಖವಾಗಿ ಬಾಳಿದನು.
ಲಘುರುದ್ರ ಎಂದರೇನು?
ಈ ರುದ್ರವು ಪ್ರತ್ಯೇಕವಾಗಿ ೫ ವಿಧವಾಗಿರುತ್ತದೆ. “ರೂಪಮ್, ರುದ್ರಃ, ರುದ್ರೀ, ಮಹಾರುದ್ರಃ, ಅತಿರುದ್ರಃ” ಎಂಬುದಾಗಿ.
ಇದರಲ್ಲಿ, ನಮಕ-ಚಮಕಯುಗ್ಮಕ್ಕೆ “ರೂಪ” ಎಂದು ಹೆಸರು.
ಇವೆರಡೂ ಸೇರಿದರೆ ಅದೇ ರುದ್ರಾಧ್ಯಾಯದ ಸ್ವರೂಪವೆಂದರ್ಥ. ನಮಕ-ಚಮಕಗಳನ್ನು ಒಂದು ಬಾರಿ ಪಠಿಸುವುದು ಎಂಬ ಅಭಿಪ್ರಾಯ.
ಇದಕ್ಕೆ ಆಧಾರ― “ನಮಸ್ತೇ ರುದ್ರಾಗ್ನಾವಿಷ್ಣೂ ಇತ್ಯಧ್ಯಾಯದ್ವಯೇನ ಚ | ಆವರ್ತನಮಿತಿ ಪ್ರೋಕ್ತಮ್…” . ಹೀಗೆ, ರುದ್ರಪ್ರಶ್ನದ ೧೧ ಅನುವಾಕಗಳನ್ನು ೧ ಬಾರಿ ಪಠಿಸಿ, ಚಮಕಪ್ರಶ್ನದ ೧ನೆಯ ಅನುವಾಕವನ್ನು ಪಠಿಸಬೇಕು. ಪುನಃ ರುದ್ರದ ೧೧ ಅನುವಾಕಗಳನ್ನು ಆವರ್ತಿಸಿ, ಚಮಕದ ೨ನೆಯ ಅನುವಾಕವನ್ನು ಪಠಿಸಬೇಕು. ಹೀಗೆ ೧೧ ಬಾರಿ ಪೂರ್ಣ ರುದ್ರದ ಪಠನ ಹಾಗೂ ಒಂದು ಬಾರಿ ಚಮಕದ ೧೧ ಅನುವಾಕಗಳ ಪಠನೆಯಾದಾಗ ಅದನ್ನು “ರುದ್ರೈಕಾದಶಿನೀ / ಏಕಾದಶರುದ್ರ” ಎನ್ನಲಾಗಿದೆ.
ಇದು ೧೧ ಆವೃತ್ತಿಯಾದಾಗ “ರುದ್ರೀ / ಲಘುರುದ್ರ” . ಆಧಾರ― “ಏಕಃ ಪಾಠೋ ನಮಸ್ತೇऽಸ್ಯ ಹ್ಯನುವಾಕಃ ಪರಸ್ಯ ಚ | ತೈರೇಕಾದಶರುದ್ರೈರ್ಲಘುರುದ್ರಃ ಪ್ರಕೀರ್ತಿತಃ || ಏಕಾದಶಭಿರೇತೈಸ್ತು ಮಹಾರುದ್ರಃ ಪ್ರಕೀರ್ತಿತಃ | ಏಕಾದಶಮಹಾರುದ್ರೈರತಿರುದ್ರೋ ಬುಧೈಃ ಸ್ಮೃತಃ ||” ಈ ಲಘುರುದ್ರಗಳ ೧೧ ಆವೃತ್ತಿಯಿಂದ ೧ ಮಹಾರುದ್ರವೂ, ೧೧ ಮಹಾರುದ್ರಗಳಿಂದ ೧ ಅತಿರುದ್ರವೂ ಆಗುವುದು.
ನಮಕ ಎಂದರೇನು? ಇದು ಯಾವ ವೇದದಲ್ಲಿ ಎಲ್ಲಿ ಬರುತ್ತದೆ?
ಈ ರುದ್ರಾಧ್ಯಾಯವು “ನಮಃ” ಪದಬಾಹುಳ್ಯದಿಂದಾಗಿ “ನಮಕ” ವೆಂದು ಕರೆಯಲ್ಪಟ್ಟಿರುವುದೂ, ಮುಂದಿನ ಚಮಕಪ್ರಶ್ನದಲ್ಲಿ “ಚ ಮೇ” ಎಂಬುದು ಅನೇಕಬಾರಿ ಪುನರಾವರ್ತಿತವಾಗಿರುವುದೂ ಕಂಡುಬರುತ್ತದೆ. ತೈತ್ತಿರೀಯ ಕೃಷ್ಣಯಜುರ್ವೇದ ಸಂಹಿತೆಯ ೪ ನೆಯ ಕಾಂಡದ ೫ ನೆಯ ಪ್ರಪಾಠಕವಾದ, ಬಹುಶ್ರೇಷ್ಠತಮವೂ, ಪವಿತ್ರತಮವೂ, ಸರ್ವಸಿದ್ಧಿಪ್ರದವೂ, ಸರ್ವಸಾರವಾಗಿರುವುದರಿಂದ ಉಪನಿಷತ್ತುಲ್ಯವೂ ಆದ ಈ ರುದ್ರಾಧ್ಯಾಯವೆಂಬ ದಿವ್ಯಮಂತ್ರಭಾಗವು ಶ್ರೌತಯಾಗವಾದ “ಮಹಾಗ್ನಿಚಯನ” ದಲ್ಲಿ ಅಜಕ್ಷೀರಹೋಮದ ಮಂತ್ರಸಮೂಹವಾಗಿದೆ. ಅದನ್ನೇ ರುದ್ರಾರಾಧನೆಯಲ್ಲಿ ಪ್ರಯೋಗಿಸಲಾಗುತ್ತದೆ. ಶಿವಪ್ರೀತಿಕರವಾದ ಇದು ಕ್ಷಿಪ್ರಫಲಪ್ರದವೆಂದು ಪ್ರಕೀರ್ತಿತವಾಗಿದೆ. ಶ್ರೌತಯಾಗಗಳಲ್ಲಿ ಅಗ್ನಿಚಯನಕ್ಕಾಗಿ ಸಿದ್ಧಪಡಿಸಿದ ಇಟ್ಟಿಗೆಯ ವೇದಿಯ ಚರಮ / ಅಂತಿಮ / ಕೊನೆಯ / ತುತ್ತತುದಿಯ ಇಷ್ಟಕ / ಇಟ್ಟಿಗೆಯ ಮೇಲೆ ಈ ಮಂತ್ರಗಳ ಮೂಲಕ ಅಜಕ್ಷೀರಹೋಮ ಮಾಡುವ ವಿಧಿ ಶ್ರೌತಸೂತ್ರಪ್ರೋಕ್ತವಾದುದು.
ಪಂಚಾಕ್ಷರೀಮಂತ್ರದ ವೇದಮೂಲವು ಯಾವುದು?
ಪಠನಗಂಭೀರವೂ, ಶ್ರವಣಮನೋಹರವೂ, ವಿಶೇಷಫಲಪ್ರದವೂ ಆದ ಈ ರುದ್ರಾಧ್ಯಾಯದ ೮ ನೆಯ ಅನುವಾಕದಲ್ಲಿಯೇ, ಅತ್ಯಂತ ಸುಪ್ರಸಿದ್ಧವಾದ “ನಮಶ್ಶಿವಾಯ” ಎಂಬ ಪಂಚಾಕ್ಷರೀಮಂತ್ರವು (ಮೊದಲು “ಓಂ” ಸೇರಿಸಿ ಗಣಿಸಿದರೆ ಷಡಕ್ಷರಿಮಂತ್ರ), “ನಮಃ ಶಿವಾಯ ಚ ಶಿವತರಾಯ ಚ” ಎಂಬ ಪೂರ್ಣಮಂತ್ರದ ಒಂದು ಭಾಗವಾಗಿ ಅಡಕವಾಗಿರುವುದು. ಇದಕ್ಕೆ ವಾಮದೇವನೇ ಋಷಿಯು, ಪಂಕ್ತಿಯೇ ಛಂದಸ್ಸು, ಸದಾಶಿವರುದ್ರನೇ ದೇವತೆಯು.
ರುದ್ರಮಂತ್ರವನ್ನು ಎಲ್ಲೆಲ್ಲಿ ಪ್ರಯೋಗಿಸುವರು?
ಈ ರುದ್ರಾಧ್ಯಾಯವು ೧೧ ಅನುವಾಕಗಳಿಂದ ಕೂಡಿದ್ದು, ಪ್ರತಿ ಅನುವಾಕದಲ್ಲೂ “ಚಿತ್ಯಗ್ನೌ ಹೋಮಮನ್ತ್ರಾಃ— ಅಗ್ನಿಋಷಿಃ” ಎಂಬ ಉಲ್ಲೇಖವಿದೆ. ಈ ೧೧ ಅನುವಾಕಗಳಲ್ಲಿ ಒಟ್ಟು ೧೬೯ ಮಂತ್ರಗಳಿದ್ದು, ರುದ್ರಹೋಮದಲ್ಲಿ ಇವುಗಳ ಮೂಲಕ ತಿಲಾದಿ ಆಹುತಿಗಳನ್ನು ಸಮರ್ಪಿಸಲಾಗುತ್ತದೆ. ವಿಶಿಷ್ಟಾದ್ವೈತಿಗಳಲ್ಲಿ ವಿಶೇಷವಾಗಿ ಶ್ರಾದ್ಧದ ಬ್ರಾಹ್ಮಣಭೋಜನಕಾಲದಲ್ಲಿ ಅಭಿಶ್ರವಣಮಂತ್ರವಾಗಿಯೂ ಪಠಿಸುವ ಪದ್ಧತಿಯಿರುವುದು. ಅನ್ನಸೂಕ್ತದಲ್ಲೂ ಇದರ “ ನಮಸ್ಸಹಮಾನಾಯ ಎಂಬ ೩ ನೆಯ ಅನುವಾಕವು ಸಂಕಲಿತವಾಗಿದೆ. ಮಹಾನ್ಯಾಸಪೂರ್ವಕ ರುದ್ರಾಭಿಷೇಕ-ಜಪಾದಿಗಳಲ್ಲಿ ೨ ರಿಂದ ೯ ರವರೆಗಿನ ೮ ಅನುವಾಕಗಳನ್ನು ೩೦೦ ವಿಭಾಗಮಾಡಿ ರುದ್ರತ್ರಿಶತೀ ಅರ್ಚನೆಯನ್ನು ಬಿಲ್ವಾರ್ಚನೆಪೂರ್ವಕ ಮಾಡುವ ವಿಧಿಯೂ ಇದೆ.
ಮಹಾರುದ್ರ, ಅತಿರುದ್ರ… ಎಂದರೇನು?
ಇನ್ನು, ರುದ್ರಾಭಿಷೇಕವು ಏಕವಾರ (ಸಕೃದಾವರ್ತನ / ಒಂದು ಬಾರಿ), ಏಕಾದಶವಾರ (೧೧ ಬಾರಿ) ಹಾಗೂ ಶತರುದ್ರೀಯ (೧೨೧ ಬಾರಿ ಶತರುದ್ರೀಯಮಂತ್ರವೆನಿಸಿದ ರುದ್ರಾಧ್ಯಾಯಪೂರ್ವಕ ಅಭಿಷೇಕ)— ಎಂದು ನಾನಾಬಗೆಯಾಗಿರುವುದು. ಸಕೃದಾವರ್ತನ ದಲ್ಲಿ ೧ ಬಾರಿ “ನಮಸ್ತೇ ರುದ್ರ ಮನ್ಯವ..” ಎಂಬ ೧೧ ಅನುವಾಕಗಳ ರುದ್ರಾಧ್ಯಾಯ, “ಸರ್ವೋ ವೈ ರುದ್ರಸ್ತಸ್ಮೈ..” ಎಂಬ ಋಗ್ಯಜುರ್ಮಂತ್ರಮಿಶ್ರಿತ ಸಂಕಲನವಾದ ರುದ್ರಪ್ರಾರ್ಥನಾಮಂತ್ರ / ತ್ವರಿತರುದ್ರ ಹಾಗೂ “ಅಗ್ನಾವಿಷ್ಣೂ…” ಎಂಬ ೧೧ ಅನುವಾಕಗಳ ಚಮಕಾಧ್ಯಾಯಗಳು ಪೂರ್ತಿಯಾಗಿ ಪಠಿಸಲ್ಪಡುವುವು. ಏಕಾದಶರುದ್ರ ದಲ್ಲಿ ೧ ಬಾರಿಯ ರುದ್ರಕ್ಕೆ ಚಮಕದ ೧ ಅನುವಾಕದಂತೆ, ಅನುಕ್ರಮವಾಗಿ ೧೧ ಬಾರಿ ರುದ್ರವೂ ೧ ಬಾರಿ ಚಮಕವೂ ಪಠಿಸಲ್ಪಡುವುದು. ಶತರುದ್ರಾಭಿಷೇಕ ದಲ್ಲಿ ೧೧ ಮಂದಿ ಋತ್ವಿಜರಿಂದ ೧೧ ಬಾರಿ, ಅಂದರೆ ಒಟ್ಟು ೧೨೧ ಬಾರಿ ರುದ್ರವೂ ೧೧ ಬಾರಿ ಚಮಕವೂ ಪಠಿತವಾಗುವುವು. ೧೨೧ ಮಂದಿ ಋತ್ವಿಜರು ಪ್ರತಿಯೊಬ್ಬರೂ ೧೧ ಬಾರಿಯಂತೆ ೧೨೧×೧೧ = ೧೩೩೧ ಬಾರಿ ರುದ್ರಪಠನ ಮಾಡುವುದೇ ಮಹಾರುದ್ರ / ಸಹಸ್ರರುದ್ರ . ಅಂತೆಯೇ, ೧೩೩೧ ಮಂದಿ ಋತ್ವಿಜರು ೧೧ ಬಾರಿ ರುದ್ರ ಪಠಿಸಿದಾಗ ಆಗುವ ೧೪,೬೪೧ ಆವರ್ತನೆಗೆ ಅತಿರುದ್ರ / ಅಯುತರುದ್ರ ವೆಂದು ಹೆಸರು. ಇದೇ ರೀತಿ, ೧೪,೬೪೧ ಮಂದಿ ಋತ್ವಿಜರು ೧೧ ಬಾರಿ ಪಠಿಸಿದ ೧,೬೧,೦೫೧ ರುದ್ರಾವರ್ತನೆಗೆ ಲಕ್ಷರುದ್ರ ವೆಂತಲೂ, ೧,೬೧,೦೫೧ ಮಂದಿ ಋತ್ವಿಜರು ೧೧ ಬಾರಿ ಪಠಿಸಿದ ೧೭,೭೧,೫೬೧ ರುದ್ರಸಂಖ್ಯೆಗೆ ನಿಯುತರುದ್ರ ವೆಂದೂ, ೧೭,೭೧,೫೬೧ ಮಂದಿ ಪಠಿಸಿದ ೧,೯೪,೮೭,೧೭೧ ರುದ್ರಾವೃತ್ತಿಗೆ ಕೋಟಿರುದ್ರ ವೆಂದೂ ಮುಂತಾಗಿ ಹೇಳುವರು. ರುದ್ರಜಪ-ಹೋಮಗಳಲ್ಲಿ ಮಹಾರುದ್ರ, ಅತಿರುದ್ರಗಳು ಹೆಚ್ಚು ಪ್ರಚಲಿತವಾಗಿದ್ದರೆ, ಶತರುದ್ರವು ಅಭಿಷೇಕದಲ್ಲಿ ಪ್ರಸಿದ್ಧವಾದುದು.
ನಮಕ, ಚಮಕಗಳ ಪಠನದಿಂದೇನು ಲಾಭ?
ಜಪೇತ್ ಸಮಗ್ರಂ ನಮಕಂ ಸಮಗ್ರಂ ಚಮಕಂ ತಥಾ |
ರುದ್ರಮಿತ್ಯುಚ್ಯತೇ ಸಿದ್ಧಿಃ ಸರ್ವಾಘೌಘವಿನಾಶನಮ್ ||
ನಮಕವನ್ನು ಸಮಗ್ರವಾಗಿ, ಹಾಗೆಯೇ ಇಡೀ ಚಮಕವನ್ನು ಜಪಿಸಿ ಮಾಡುವ ರುದ್ರಜಪವು, ಎಲ್ಲ ಜಪಕರ ಎಲ್ಲಾ ಪಾಪಸಮೂಹದ ವಿನಾಶವೆಂಬ ಫಲಸಿದ್ಧಿಪ್ರದವೆಂದು ಹೇಳಲಾಗುತ್ತದೆ.
ಹರಿ ಹರರಲ್ಲಿ ಭೇದವಿಲ್ಲ. ಹೇಗೆ?
ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ |
ಶಿವಸ್ಯ ಹೃದಯಂ ವಿಷ್ಣುರ್ವಿಷ್ಣೋಶ್ಚ ಹೃದಯಂ ಶಿವಃ ||
ವಿಷ್ಣುರೂಪಿಯಾದ ಶಿವನಿಗೂ ಶಿವರೂಪನಾದ ವಿಷ್ಣುವಿಗೂ ನಮಸ್ಕಾರಗಳು. ಲೋಕಶಂಕರನಾದ ಶಿವನ ಹೃದಯವೇ ವಿಷ್ಣುವೂ, ಲೋಕವ್ಯಾಪ್ತನಾದ ವಿಷ್ಣುವಿನ ಹೃದಯವೇ ಶಿವನೂ ಆಗಿರುವನೆಂಬುದು ಶತಸ್ಸಿದ್ಧವಾದುದು ಹಾಗೂ ಪಾರಮಾರ್ಥಿಕವಾದ ಸತ್ಯವೂ ಹೌದು. ಹರಿ-ಹರರಲ್ಲಿ ಭೇದವೆಣಿಸಿದವರನ್ನು ಹರಿ-ಹರರೀರ್ವರೂ ಮೆಚ್ಚುವುದಿಲ್ಲ.
ಶಿವನಾಮಸ್ಮರಣೆ ಹೇಗೆ?
ಶಿವ ಶಿವೇತಿ ಶಿವೇತಿ ಶಿವೇತಿ ವಾ ಭವ ಭವೇತಿ ಭವೇತಿ ಭವೇತಿ ವಾ|
ಹರ ಹರೇತಿ ಹರೇತಿ ಹರೇತಿ ವಾ ಭವ ಮನಶ್ಶಿವಮೇವ ನಿರನ್ತರಮ್ ||
ಎಲೆ ನನ್ನ ಮನವೇ!! ನೀನು ಸದಾ ಶಿವ-ಶಿವನೆಂದು, ಶಿವನೆಂದು, ಶಿವನೆಂದು ಅಥವಾ, ಭವ-ಭವನೆಂದು, ಭವನೆಂದು, ಭವನೆಂದು ಅಥವಾ, ಹರ-ಹರನೆಂದು, ಹರನೆಂದು, ಹರನೆಂದೋ, ಶಿವನನ್ನೇ ನಿರಂತರವೂ ಸ್ಮರಿಸುತ್ತಿರು. ಇಲ್ಲಿ ಭವನೆಂದರೆ ಸೃಷ್ಟಿಪ್ರತಿಪಾದಕವಾದರೆ, ಶಿವನೆಂದರೆ ಸ್ಥಿತಿವಾಚಕವೂ, ಹರನೆಂದರೆ ಲಯಸೂಚಕವೂ ಆಗಿರುವುದು. “ಭವತಿ ಸರ್ವಮ್ ಅನೇನ ಇತಿ ಭವಃ”, “ಶಂ ತನೋತಿ ಸರ್ವೇಷಾಂ ವಶೀ ಚ ಇತಿ ಶಿವಃ”, “ಹರತಿ ಸರ್ವಮ್ ಇತಿ ಹರಃ”.
ಶಿವನನ್ನು ಯಾವರೀತಿ ಧ್ಯಾನಿಸಬಹುದು?
ಧ್ಯಾಯೇನ್ನಿತ್ಯಂ ಮಹೇಶಂ ರಜತಗಿರಿನಿಭಂಚಾರುಚನ್ದ್ರಾವತಂಸಂರತ್ನಾಕಲ್ಪೋಜ್ಜ್ವಲಾಙ್ಗಂ ಪರಶುಮೃಗವರಾಭೀತಿಹಸ್ತಂ ಪ್ರಸನ್ನಮ್

