ಶ್ರೀ ಅನ್ನಪೂರ್ಣಾ ಸ್ತೋತ್ರಮ್ (ಶ್ರೀ ಶಂಕರಾಚಾರ್ಯ ವಿರಚಿತ)

ಶ್ರೀ ಶಂಕರಾಚಾರ್ಯ ವಿರಚಿತ – ಶ್ರೀ ಅನ್ನಪೂರ್ಣಾ ಸ್ತೋತ್ರಮ್.

ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀ। 

ನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ। 

ಪ್ರಾಲೇಯಾಚಲ ವಂಶ ಪಾವನಕರೀ ಕಾಶೀಪುರಾಧೀಶ್ವರೀ। 

ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ॥

ಭಾವಾರ್ಥ:- ಶಾಶ್ವತವಾದ ಆನಂದವನ್ನು ನೀಡುವವಳು, ಭಕ್ತರಿಗೆ ವರ ಮತ್ತು ಅಭಯವನ್ನು ನೀಡುವವಳು, ಸೌಂದರ್ಯವಂತಳು, ಭಕ್ತರ ಪಾಪಗಳನ್ನು ನಾಶಮಾಡಿ ಪವಿತ್ರಗೊಳಿಸುವವಳು, ಮಹೇಶ್ವರನ ಪ್ರತ್ಯಕ್ಷ ಪ್ರಣವಲ್ಲಭೆಯೂ, ಪರ್ವತರಾಜನ ವಂಶವನ್ನು ಪಾವನಗೊಳಿಸಿದವಳು, ಕಾಶೀಪುರದ ಅದಿದೇವತೆಯು, ಕರುಣೆಯಿಂದ ಸಹಾಯವನ್ನು ಮಾಡುವವಳೂ ಆದ ಹೇ ಅನ್ನಪೂರ್ಣೇಶ್ವರಿ ಮಾತೆಯೇ ಬಿಕ್ಷೆಯನ್ನು ನೀಡು.

 ನಾನಾ ರತ್ನ ವಿಚಿತ್ರ ಭೂಷಣಕರಿ ಹೇಮಾಂಬರಾಡಂಬರೀ। 

ಮುಕ್ತಾಹಾರ ವಿಲಂಬಮಾನ ವಿಲಸತ್ ವಕ್ಷೋಜ ಕುಂಭಾಂತರೀ। 

ಕಾಶ್ಮೀರಾಗರು ವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ। 

ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ॥

ಭಾವಾರ್ಥ:- ವಿವಿಧ ಪ್ರಕಾರದ ಆಶ್ಚರ್ಯಕರವಾದ ಬಂಗಾರದ ರತ್ನಾಭರಣಗಳನ್ನು ಧರಿಸಿರುವವಳು, ಸಂತೋಷವಾಗಿರುವವಳು, ಮುತ್ತಿನ ಹಾರವನ್ನು ಧರಿಸಿರುವವಳು, ಕೇಶರ, ಕಸ್ತೂರಿ, ಚಂದನಾದಿಗಳಿಂದ ಸುವಾಸಿತಾಳು, ಕಾಂತಿಯುಕ್ತದೇಹವುಳ್ಳವಳು, ಕಾಶೀಪುರದ ಅದಿದೇವತೆಯು, ಕರುಣೆಯಿಂದ ಸಹಾಯವನ್ನು ಮಾಡುವವಳೂ ಆದ ಹೇ ಅನ್ನಪೂರ್ಣೇಶ್ವರಿ ಮಾತೆಯೇ ಬಿಕ್ಷೆಯನ್ನು ನೀಡು.

ಯೋಗಾನಂದಕರೀ ರಿಪುಕ್ಷಯಕರೀ ಧರ್ಮೈಕ್ಯ ನಿಷ್ಠಾಕರೀ। 

ಚಂದ್ರಾರ್ಕಾನಲ ಭಾಸಮಾನ ಲಹರೀ ತ್ರೈಲೋಕ್ಯ ರಕ್ಷಾಕರೀ। 

ಸರ್ವೈಶ್ವರ್ಯಕರೀ ತಪಃ ಫಲಕರೀ ಕಾಶೀಪುರಾಧೀಶ್ವರೀ। 

ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ॥

ಭಾವಾರ್ಥ:- ಭಕ್ತರಿಗೆ ಪರಮಾನಂದವನ್ನು ಕೊಡುವವಳು, ಅರಿಷಡ್ವರ್ಗದಿ ಶತ್ರುಗಳನ್ನು ನಾಶಮಾಡುವವಳು, ಧರ್ಮ ಮತ್ತು ಪುರುಷಾರ್ಥದಲ್ಲಿ ನಿಷ್ಠೆಯನ್ನು ನೀಡುವವಳು, ಚಂದ್ರ, ಸೂರ್ಯ ಹಾಗೂ ಅಗ್ನಿಗಳಂತೆ ತೇಜಸ್ವಿಯಾಗಿರುವವಳು, ತ್ರಿಲೋಕಗಳನ್ನು ರಕ್ಷಿಸುತ್ತಿರುವವಳೂ ( ಜಾಗ್ರತ್, ಸ್ವಪ್ನ, ಸುಷುಪ್ತಿ ಎಂಬ ಮೂರೂ ಲೋಕಗಳಿಗೂ ಬೆಳಕನ್ನು ನೀಡಿ ರಕ್ಷಿಸುತ್ತಿರುವವಳೂ), ಭಕ್ತರಿಗೆ ಸಕಲ ಐಶ್ವರ್ಯವನ್ನು ನೀಡುವವಳು, ಭಕ್ತರ ತಪಸ್ಸಿಗೆ ಫಲನೀಡುವವಳು, ಕಾಶೀಪುರದ ಅದಿದೇವತೆಯು, ಕರುಣೆಯಿಂದ ಸಹಾಯವನ್ನು ಮಾಡುವವಳೂ ಆದ ಹೇ ಅನ್ನಪೂರ್ಣೇಶ್ವರಿ ಮಾತೆಯೇ ಬಿಕ್ಷೆಯನ್ನು ನೀಡು.

ಕೈಲಾಸಾಚಲ ಕಂದರಾಲಯಕರೀ ಗೌರೀ ಉಮಾ ಶಂಕರೀ। 

ಕೌಮಾರೀ ನಿಗಮಾರ್ಥಗೋಚರಕರೀ ಓಂಕಾರ ಬೀಜಾಕ್ಷರೀ। ಮೋಕ್ಷದ್ವಾರ-ಕವಾಟಪಾಟನಕರೀ ಕಾಶೀಪುರಾಧೀಶ್ವರೀ। 

ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ॥

ಭಾವಾರ್ಥ:- ಕೈಲಾಸ ಪರ್ವತದಲ್ಲಿ ವಾಸಿಸುವಳು, ಶುಭ್ರಳು, ಪ್ರಶಾಂತಾಳು, ಮಂಗಳವನ್ನುಂಟುಮಾಡುವವಳು, ಕನ್ನಿಕೆಯು,  ವೇದಾಂತ ಸಾರವನ್ನು ಅರ್ಥವಾಗುವಂತೆ ಮಾಡುವವಳು, ಓಂಕಾರ ಸ್ವರೂಪಳು, ಭಕ್ತರಿಗೆ ಮೋಕ್ಷದ ಬಾಗಿಲನ್ನು ತೆರೆಯುವವಳು, ಕಾಶೀಪುರದ ಅದಿದೇವತೆಯು, ಕರುಣೆಯಿಂದ ಸಹಾಯವನ್ನು ಮಾಡುವವಳೂ ಆದ ಹೇ ಅನ್ನಪೂರ್ಣೇಶ್ವರಿ ಮಾತೆಯೇ ಬಿಕ್ಷೆಯನ್ನು ನೀಡು.

ದೃಶ್ಯಾದೃಶ್ಯ ವಿಭೂತಿ ವಾಹನಕರೀ ಬ್ರಹ್ಮಾಂಡ ಭಾಂಡೋದರೀ। 

ಲೀಲಾ ನಾಟಕ ಸೂತ್ರ ಭೇದನಕರೀ ವಿಜ್ಞಾನ ದೀಪಾಂಕುರೀ। 

ಶ್ರೀವಿಶ್ವೇಶಮನಃ ಪ್ರಸಾದನಕರೀ ಕಾಶೀಪುರಾಧೀಶ್ವರೀ। 

ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ॥

ಭಾವಾರ್ಥ:- ಬಾಹ್ಯ ಮತ್ತು ಆಂತರಿಕ ಸಂಪತ್ತುಗಳನ್ನು ಅಭಿವೃದಿಯಾಗುವಂತೆ ಮಾಡುವವಳು, ಬ್ರಹ್ಮಾಂಡಗಳ ಜನನಿಯು, ವ್ಯವಸ್ಥಿತವಾಗಿ ಲೀಲಾ ನಾಟಕವನ್ನು ಮಾಡುತ್ತಾ ಆನಂದದಿಂದ ವಿನೋದಿಸುತ್ತಿರುವವಳು, ಜ್ಞಾನ ದೀಪವನ್ನು ಬೆಳಗಿಸುವವಳು, ಭಕ್ತರ ಮೇಲೆ ವಿಶ್ವೇಶ್ವರನ್ನು ಸುಪ್ರಸನ್ನನಾಗಿ ಹರಸುವಂತೆ ಮಾಡುವವಳು, ಕಾಶೀಪುರದ ಅದಿದೇವತೆಯು, ಕರುಣೆಯಿಂದ ಸಹಾಯವನ್ನು ಮಾಡುವವಳೂ ಆದ ಹೇ ಅನ್ನಪೂರ್ಣೇಶ್ವರಿ ಮಾತೆಯೇ ಬಿಕ್ಷೆಯನ್ನು ನೀಡು.

ಉರ್ವೀಸರ್ವಜಯೇಶ್ವರೀ ಭಗವತೀ ಮಾತಾ ಕೃಪಾಸಾಗರೀ। 

ವೇಣೀ ನೀಲಸಮಾನ ಕುಂತಲಧರೀ ನಿತ್ಯಾನ್ನ ದಾನೇಶ್ವರೀ। 

ಸರ್ವಾನಂದಕರೀ ಸದಾ ಶುಭಕರೀ ಕಾಶೀಪುರಾಧೀಶ್ವರೀ। 

ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ॥

ಭಾವಾರ್ಥ:- ಭೂಮಿಯ ಸರ್ವ ಜನರಿಗೂ ರಕ್ಷಕಿಯು, ಯಶಸ್ಸನ್ನು ಉಂಟುಮಾಡುವವಳು, ದಯಾಸಾಗರಳದ ಮಾತೆಯು, ಕಪ್ಪಾಗಿರುವ ತಲೆಕೂದಲುಗಳಿಂದ ಕೂಡಿರುವ ಸುಂದರವಾದ ಜಡೆಯಿಂದ ಶೋಭಿಸುತ್ತಿರುವವಳು, ಎಲ್ಲರಿಗೂ ಆನಂದವನ್ನು ನೀಡುವವಳು, ಸದಾ ಶುಭವಾಗುವಂತೆ ಮಾಡುವವಳು, ಕಾಶೀಪುರದ ಅದಿದೇವತೆಯು, ಕರುಣೆಯಿಂದ ಸಹಾಯವನ್ನು ಮಾಡುವವಳೂ ಆದ ಹೇ ಅನ್ನಪೂರ್ಣೇಶ್ವರಿ ಮಾತೆಯೇ ಬಿಕ್ಷೆಯನ್ನು ನೀಡು.

ಆದಿಕ್ಷಾಂತ ಸಮಸ್ತ ವರ್ಣನಕರೀ ಶಂಭೋಸ್ತ್ರಿಭಾವಾಕರೀ। 

ಕಾಶ್ಮೀರಾ ತ್ರಿಪುರೇಶ್ವರೀ ತ್ರಿನಯನಿ ವಿಶ್ವೇಶ್ವರೀ ಶರ್ವರೀ। 

ಸ್ವರ್ಗದ್ವಾರ ಕಪಾಟ ಪಾಟನಕರೀ ಕಾಶೀಪುರಾಧೀಶ್ವರೀ। 

ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ॥

ಭಾವಾರ್ಥ:- ಅ ಕಾರದಿಂದ ಕ್ಷ ಕಾರದವರೆಗಿನ ಸಮಸ್ತ ಎಲ್ಲ ವರ್ಣ ಸಮೂಹಕ್ಕೆ ಅಧಿಷ್ಠಾನಳು, ಶಿವನ ಮೂರೂ ಭಾವಗಳಾದ ಸೃಷ್ಟಿ- ಸ್ಥಿತಿ- ಲಯಗಳನ್ನು ಮಾಡುವ ಮಾಯಾಶಕ್ತಿಯು, ಕಾಶ್ಮೀರದಲ್ಲಿ ವಾಸಿಸುವವಳು, ಎಚ್ಚರ- ಕನಸು- ನಿದ್ಧೆಗಳೆಂಬ ಮೂರು ಪುರಗಳ ನಾಯಕಿಯು, ಬಾಹ್ಯ, ಅಂತರ್ ಹಾಗೂ ಜ್ಞಾನವೆಂಬ  ಮೂರು ನೇತ್ರಗಳಿರುವವಳು, ವಿಶ್ವಕ್ಕೆ ಒಡತಿಯು, ರಾತ್ರಿಯನ್ನು ಉಂಟುಮಾಡುವವಳು, ಭಕ್ತರಿಗೆ ಸ್ವರ್ಗದ ಬಾಗಿಲನ್ನು ತೆಗೆಯುವವಳು, ಕಾಶೀಪುರದ ಅದಿದೇವತೆಯು, ಕರುಣೆಯಿಂದ ಸಹಾಯವನ್ನು ಮಾಡುವವಳೂ ಆದ ಹೇ ಅನ್ನಪೂರ್ಣೇಶ್ವರಿ ಮಾತೆಯೇ ಬಿಕ್ಷೆಯನ್ನು ನೀಡು.

ದೇವೀ ಸರ್ವವಿಚಿತ್ರ ರತ್ನ ರಚಿತಾ ದಾಕ್ಷಾಯಿಣೀ ಸುಂದರೀ। 

ವಾಮಾ ಸ್ವಾದುಪಯೋಧರಾ ಪ್ರಿಯಕರೀ ಸೌಭಾಗ್ಯಮಾಹೇಶ್ವರೀ। 

ಭಕ್ತಾಭೀಷ್ಟಕರೀ ಸದಾ ಶುಭಕರೀ ಕಾಶೀಪುರಾಧೀಶ್ವರೀ।

ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ॥

ಭಾವಾರ್ಥ:- ತೇಜಸ್ವಿಯಾಗಿರುವವಳು, ಎಲ್ಲ ವಿಶೇಷ ರತ್ನಗಳಿಂದ ಅಲಂಕೃತಳಾಗಿರುವವಳು, ಸೌಂದರ್ಯವತಿಯು, ದಾಕ್ಷಾಯಣಿಯು, ವಾಮ ಹಸ್ತದಲ್ಲಿ ರುಚಿಕರವಾದ ಅಮೃತದ ಪಾತ್ರೆಯಿಂದ ಭಕ್ತರಿಗೆ ಪ್ರಿಯವನ್ನು ಉಂಟುಮಾಡುವವಳು, ಸೌಭಾಗ್ಯಗಳ ಈಶ್ವರಿಯು, ಭಕ್ತರ ಇಷ್ಟಗಳನ್ನು ನೆರೆವೇರಿಸುವವಳು, ಯಾವಾಗಲು ಶುಭವನ್ನು ಉಂಟುಮಾಡುವವಳು, ಕಾಶೀಪುರದ ಅದಿದೇವತೆಯು, ಕರುಣೆಯಿಂದ ಸಹಾಯವನ್ನು ಮಾಡುವವಳೂ ಆದ ಹೇ ಅನ್ನಪೂರ್ಣೇಶ್ವರಿ ಮಾತೆಯೇ ಬಿಕ್ಷೆಯನ್ನು ನೀಡು.

ಚಂದ್ರಾರ್ಕಾನಲ ಕೋಟಿಕೋಟಿ ಸದೃಶೀ ಚಂದ್ರಾಂಶು ಬಿಂಬಾಧರೀ। 

ಚಂದ್ರಾರ್ಕಾಗ್ನಿ ಸಮಾನ ಕುಂಡಲಧರೀ ಚಂದ್ರಾರ್ಕ ವರ್ಣೇಶ್ವರೀ। 

ಮಾಲಾ ಪುಸ್ತಕ ಪಾಶಸಾಂಕುಶಧರೀ ಕಾಶೀಪುರಾಧೀಶ್ವರೀ। 

ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ॥

ಭಾವಾರ್ಥ:- ಕೋಟಿ ಕೋಟಿ ಸೂರ್ಯ, ಚಂದ್ರ, ಅಗ್ನಿಗಳಂತೆ ತೇಜಸ್ವಿಯಾಗಿರುವವಳು, ಚಂದ್ರನ ಬಿಂಬವನ್ನು ಧರಿಸಿರುವವಳು, ಸೂರ್ಯ, ಚಂದ್ರ, ಅಗ್ನಿಗಳಿಗೆ ಸಮಾನವಾದ ಪ್ರಕಾಶದಿಂದ ಕೂಡಿರುವ ಕಿವಿಯ ಒಲೆಗಳನ್ನು ಧರಿಸಿರುವವಳು, ಸೂರ್ಯ- ಚಂದ್ರರಂತೆ ಮೈಕಾಂತಿಯಿರುವ ಜಗದೀಶ್ವರಿಯು, ಕೈಗಳಲ್ಲಿ ಜಪಮಾಲೆ, ಪುಸ್ತಕ, ಪಾಶ ಹಾಗೂ ಅಂಕುಶವನ್ನು ಧರಿಸಿರುವ, ಕಾಶೀಪುರದ ಅದಿದೇವತೆಯು, ಕರುಣೆಯಿಂದ ಸಹಾಯವನ್ನು ಮಾಡುವವಳೂ ಆದ ಹೇ ಅನ್ನಪೂರ್ಣೇಶ್ವರಿ ಮಾತೆಯೇ ಬಿಕ್ಷೆಯನ್ನು ನೀಡು.

ಕ್ಷತ್ರತ್ರಾಣಕರೀ ಮಹಾಭಯಕರೀ ಮಾತಾ ಕೃಪಾಸಾಗರೀ। 

ಸಾಕ್ಷಾನ್ಮೋಕ್ಷಕರೀ ಸದಾ ಶಿವಕರೀ ವಿಶ್ವೇಶ್ವರೀ ಶ್ರೀಧರೀ। 

ದಕ್ಷಾಕ್ರಂದಕರೀ ನಿರಾಮಯಕರೀ ಕಾಶೀಪುರಾಧೀಶ್ವರೀ। 

ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ॥

ಭಾವಾರ್ಥ:- ಧಾರ್ಮಿಕರಾದ ಕ್ಷತ್ರಿಯರನ್ನು ರಕ್ಷಿಸುವವಳು, ಮಹತ್ತರವಾದ ಸಂಸಾರ ಭಯವನ್ನು ನಿವಾರಿಸುವವಳು, ಮಾತೆಯು, ಕರುಣಾಸಾಗರಳು, ಶಾಶ್ವತವಾದ ಜ್ಞಾನವನ್ನು ನೀಡುವವಳು ಹಾಗೂ ಶುಭವನ್ನು ಮಾಡುವವಳು, ವಿಶ್ವವನ್ನು ಪಾಲಿಸುವವಳು, ಸಂಪತ್ತನ್ನು ಹಾಗೂ ಆರೋಗ್ಯವನ್ನು ಕೊಡುವವಳು, ಕಾಶೀಪುರದ ಅದಿದೇವತೆಯು, ಕರುಣೆಯಿಂದ ಸಹಾಯವನ್ನು ಮಾಡುವವಳೂ ಆದ ಹೇ ಅನ್ನಪೂರ್ಣೇಶ್ವರಿ ಮಾತೆಯೇ ಬಿಕ್ಷೆಯನ್ನು ನೀಡು.

ಅನ್ನಪೂರ್ಣೇ ಸದಾಪೂರ್ಣೇ ಶಂಕರಃ ಪ್ರಾಣವಲ್ಲಭೇ। 

ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ॥

ಭಾವಾರ್ಥ:- ಅನ್ನದ ಸ್ವರೂಪಳೇ, ಸದಾ ಪರಿಪೂರ್ಣಳೇ, ಶಿವನಿಗೆ ಪ್ರಿಯಳೇ, ಹೇ ಪಾರ್ವತಿಯೇ, ನನ್ನಗೆ ಜ್ಞಾನ ಲಭಿಸುವಂತೆ ಹಾಗೂ ಇಂದ್ರಿಯ ಸಂಯಮ ಉಂಟಾಗುವಂತೆ ಭಿಕ್ಷೆಯನ್ನು ನೀಡು.

ಮಾತಾ ಚ ಪಾರ್ವತೀದೇವೀ ಪಿತಾದೇವೋ ಮಹೇಶ್ವರಃ। 

ಬಾಂಧವಾಃ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್॥

ಭಾವಾರ್ಥ:- ನನ್ನಗೆ ತಾಯಿಯು ಪಾರ್ವತಿಯು, ತಂದೆಯು ಶಿವನು, ಶಿವನ ಭಕ್ತರೇ ನನ್ನ ಬಂಧುಗಳು ಹಾಗೂ ಮೂರು ಲೋಕಗಳು ನನ್ನ ದೇಶವೇ ಆಗಿದೆ.

Leave a Comment

Your email address will not be published. Required fields are marked *