ಪುರಾಣಗಳ ಪ್ರಕಾರ ತಮ್ಮ ತಮ್ಮ ಭಕ್ತರನ್ನು ಮಾತ್ರವೇ ಕಾಪಾಡುತ್ತಾ, ಅವರು ಬೇಡಿದ್ದೆಲ್ಲವನ್ನೂ ಕೊಡುತ್ತಾ, ತಮ್ಮ ಭಕ್ತರು ಏನೇ ಪಾಪಗಳನ್ನು ಮಾಡಿದರೂ ತಮ್ಮ ಹೆಸರು ಸ್ಮರಿಸಿದರೇ ಸಾಕು ಅವುಗಳನ್ನು ನಿವಾರಿಸಿಬಿಡುತ್ತಾ (ಒಂದರ್ಥದಲ್ಲಿ ಮತ್ತೆ ಮತ್ತೆ ತಪ್ಪು ಮಾಡುವ ಅವಕಾಶ ಕೊಡುತ್ತಾ), ತಮ್ಮನ್ನು ವಿರೋಧಿಸುವವರನ್ನು ನಿಗ್ರಹಿಸಿ ದಮನ ಮಾಡುತ್ತಾ, ಸೀಮೆಗಳಿರುವ ಒಂದು ರಾಷ್ಟ್ರದ ಸರ್ವಾಧಿಕಾರಿ ರಾಜನಂತೆ ವರ್ತಿಸುವ ಮತ್ತು ತನಗೆ ಪ್ರಿಯರಾದವರು – ಅಪ್ರಿಯರು ಎಂಬ ಭೇದಭಾವ ತೋರುತ್ತಾರೆನ್ನುವ ಯಾವುದೇ ದೈವಸ್ವರೂಪಕ್ಕಿಂತಲೂ, ದೇವ-ರಾಕ್ಷಸ, ಯಕ್ಷ ಗಂಧರ್ವ ಕಿನ್ನರ ಕಿಂಪುರುಷ ಮಾನವ ದಾನವ ಸಸ್ಯ ಸಂಕುಲ, ವೃಕ್ಷ ಸಂಕುಲ, ಬೆಟ್ಟ ಗುಡ್ಡ ಪರ್ವತ ನದೀ ಸಮುದ್ರ, ಸಮಸ್ತ ಪ್ರಾಣಿ – ಪಕ್ಷಿ ಸಂಕುಲ ಹಾಗೂ ಸ್ತ್ರೀ ಪುರುಷರೆಂಬ ಲಿಂಗ ಭೇದ ತೋರದೆ, ತನ್ನ ಪೂಜಕರು ಅಥವಾ ವಿರೋಧಿಗಳು ಎಂಬ ಭೇದಭಾವ ಮಾಡದೆ, ತನ್ನ ಸಮಸ್ತ ಸೃಷ್ಟಿಯಲ್ಲಿ ಸಮಾನತೆ ತೋರುವ ಆ ಪರಮೇಶ್ವರನೇ ನನ್ನ ಮೋಕ್ಷದವರೆಗಿನ ಎಲ್ಲಾ ಜನ್ಮಗಳಲ್ಲಿಯೂ ನನಗೆ ಇಷ್ಟ ದೈವವಾಗಲಿ.
ಜಗತ್ತಿನಲ್ಲಿ ಇರುವ ಸಮಸ್ತ ಪದಾರ್ಥಗಳೂ, ಸಮಸ್ತ ಜೀವ ಸಂಕುಲವೂ ಪರಬ್ರಹ್ಮದ ಅಂಶಗಳೇ ಆದ್ದರಿಂದ ಯಾರಲ್ಲಿಯೂ ಯಾವುದರಲ್ಲಿಯೂ ಭೇದಭಾವ ಮಾಡಲೇಬಾರದು ಎಂದು ಭೋದಿಸಿ ಇಡೀ ಭಾರತವನ್ನು ಮೂರು ಸಲ ಸುತ್ತಿ ಪ್ರಚಾರ ಮಾಡಿದ ಜಗದ್ಗುರು ಪರಬ್ರಹ್ಮ ಶ್ರೀ ಆದಿ ಶಂಕರಾಚಾರ್ಯರೇ ನನ್ನ ಮೋಕ್ಷಕಾಲದವರೆಗಿನ ನನ್ನ ಎಲ್ಲಾ ಜನ್ಮಗಳಲ್ಲಿಯೂ ನನಗೆ ಗುರುವಾಗಿರಲಿ.
ಸಮಾನತೆಯನ್ನು ಭೋದಿಸುವ, ಮುಕ್ತಿಯ ದಾರಿಯನ್ನು ತೋರುವಂತಹಾ ಶಾಸ್ತ್ರಗಳನ್ನೇ ನಾನು ಜನ್ಮ ಜನ್ಮಗಳಲ್ಲಿಯೂ ನಂಬುವಂತಾಗಲಿ.
ಪೂರ್ವಜನ್ಮಕೃತಂ ಪಾಪಂ ವ್ಯಾಧಿರೂಪೇಣ ಭಾಧತೇ|ತಚ್ಚಾಂತಿರೌಷಧೈರ್ದಾನೈ: ಜಪ ಹೋಮ ಸುರಾರ್ಚನೈ:||
ಎಂಬುದಾಗಿ ಶಾಸ್ತ್ರದಲ್ಲಿ ಉಕ್ತವಾಗಿರುವಂತೆ, ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಪುಣ್ಯಗಳ ಫಲವನ್ನು ಈ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ.ಸರ್ವದಾನ ಪುಣ್ಯದ ಫಲಗಳನ್ನು ಅನುಭವಿಸುವುದು ಸುಖಕರವಾಗಿರುತ್ತದೆ. ದುಷ್ಕರ್ಮಗಳ ಮೂಲಕವಾದ ಪಾಪದ ಫಲಗಳನ್ನು ಅನುಭವಿಸುವುದು ದುಃಖಕರವಾಗಿರುತ್ತದೆ. ದುಷ್ಕರ್ಮಗಳ ಫಲವೂ ಆಯಾ ಕರ್ಮಗಳಿಗೆ ಅನುಸಾರವಾಗಿ ದೈಹಿಕ, ಮಾನಸಿಕ ರೋಗದ, ಹಾಗೂ ಅಡಚಣೆ ತಾಪತ್ರಯಾದಿ, ಉಪದ್ರವಗಳ, ರೂಪದಲ್ಲಿ ಪ್ರಕಟವಾಗುತ್ತವೆ.
ಈ ಉಪದ್ರವಗಳು ಔಷಧ, ದಾನ, ಜಪ, ಹೋಮ, ದೇವರಪೂಜೆ. ಇತ್ಯಾದಿಗಳಿಂದ ನಿವಾರಣೆಯಾಗುತ್ತವೆ ಎನ್ನುವುದೇ ಶಾಸ್ತ್ರದ ತಾತ್ಪರ್ಯ
ವೇದಗಳನ್ನು ಏತಕ್ಕಾಗಿ ಓದಬೇಕು?
Index of Important Points
ತಿಸ್ರೋ ಯದಗ್ನೇ ಶರದಸ್ತ್ವಾಮಿ-ಚ್ಛುಚಿಂ ಘೃತೇನ ಶುಚಯಃ ಸಪರ್ಯಾನ್ |
(ಋಗ್ವೇದ. ಮಂಡಲ ೧. ಸೂಕ್ತ ೭೨. ಮಂತ್ರ ೩)
ನಾಮಾನಿ ಚಿದ್ ದಧಿರೇ ಯಜ್ಞಿಯಾ-ನ್ಯಸೂದಯಂತ ತನ್ವ ಸುಜಾತಾಃ ||೩||
ಭಾವಾರ್ಥ :- ಯಾವನು ಕೂಡ ವೇದವಿದ್ಯೆಯನ್ನು ಅಧ್ಯಯನ ಮಾಡದ ಹೊರತು ವಿದ್ವಾಂಸನಾಗುವುದಿಲ್ಲ ಮತ್ತು ವಿದ್ಯೆಗಳ ಹೊರತು ನಿಶ್ಚಯವಾಗಿ ಮನುಷ್ಯ ಜನ್ಮದ ಸಫಲತೆ ಹಾಗೂ ಪವಿತ್ರತೆಯಾಗುವುದಿಲ್ಲ. ಆದುದರಿಂದ ಎಲ್ಲ ಮನುಷ್ಯರಿಗೂ ಉಚಿತವಾದುದು ಏನೆಂದರೆ, ಧರ್ಮದ ಸೇವನೆಯನ್ನು ನಿತ್ಯ ಮಾಡಲಿ.
ಜೀತೇಂದ್ರಿಯ ಯಾರು?
ಜಿತೇಂದ್ರಿಯರು ಎಂದರೆ, ತಮ್ಮ ಮನಸ್ಸನ್ನು ತಾವೇ ಕಠಿಣ ರೂಪದಿ ನಿಯಂತ್ರಣದಲ್ಲಿಟ್ಟುಕೊಳ್ಳುವವರು. ಇವರು ತಮ್ಮ ಬದುಕಿನಲ್ಲಿ ಆತ್ಮಸಂಯಮ ಸಾಧಿಸಿ ಭಗವಂತನ ಜ್ಞಾನವನ್ನು ಪಡೆಯಲು ಮುಂದಾಗುವರು. ಇವರು ತಮ್ಮ ಕರ್ಮವನ್ನು ಪರಮಾತ್ಮನ ಕರ್ಮವೆಂದು ಪರಿಗಣಿಸುತ್ತಾ ಆ ಕರ್ಮದ ಫಲದ ಬಯಕೆಯನ್ನು ಕೂಡಾ ಆ ಪರಮಾತ್ಮನಿಗೆ ಅರ್ಪಿಸುವರು.
ಹೀಗೆ ಇವರು ಕರ್ಮಗಳೊಳಗಿನ ಭಗವದ್ಪ್ರಜ್ಞೆ ಪಡೆದು ತನ್ನ ಕರ್ಮಗಳ ಫಲವನ್ನು ಶುದ್ಧ ಮನಸ್ಸಿನಿಂದ, ನಿರ್ವಂಚನೆಯಿಂದ ಮತ್ತು ಧರ್ಮಪಾಲಕನಾಗಿ ಪರಮಾತ್ಮನಿಗೆ ತ್ಯಾಗ ಮಾಡುವುದರಿಂದ ಯಾವುದೇ ರೀತಿಯ ಬಂಧನಕ್ಕೊಳಗಾಗದೇ ಎಲ್ಲಾ ಬಗೆಯ ಪಾಪ ಬಂಧನಗಳಿಂದ ಮುಕ್ತರಾಗಿ ದೋಷರಹಿತವಾದ ಮೋಕ್ಷವನ್ನು ಪಡೆಯಬಲ್ಲರು.
ಪರಿಮಿತವಾದ ಮಾತುಗಳಲ್ಲಿ ಆತ್ಮಸ್ವರೂಪದ ಅರಿವು
ಕಿಂ ಜ್ಯೋತಿಸ್ತವಭಾನುಮಾನಹನಿ ಮೇ ರಾತ್ರೌ ಪ್ರದೀಪಾದಿಕಂ, ಸ್ಯಾದೇವಂ ರವಿದೀಪದರ್ಶನವಿಧೌ ಕಿಂ ಜ್ಯೋತಿರಾಖ್ಯಾಹಿ ಮೇ . ಚಕ್ಷುಸ್ತಸ್ಯ ನಿಮೀಲನಾದಿ ಸಮಯೇ ಕಿಂ ಧೀರ್ಧಿಯೋ ದರ್ಶನೇ, ಕಿಂ ತತ್ರಾಹಮತೋ ಭವಾನ್ ಪರಮಕಂ ಜ್ಯೋತಿಸ್ತದಸ್ಮಿ ಪ್ರಭೋ
ಏಕಶ್ಲೋಕೀ
ಭಗವಾನ್ ಶಂಕರಾಚಾರ್ಯರು: ನಿನ್ನ ಬೆಳಕು ಯಾವುದು?
ಶಿಷ್ಯ: ಹಗಲು ಸೂರ್ಯ, ರಾತ್ರಿ ದೀಪಗಳು.
ಭಗವಾನರು: ಸೂರ್ಯನ ಮತ್ತು ದೀಪಗಳ ಬೆಳಕನ್ನು ನೋಡಲು ನಿನ್ನಲ್ಲಿರುವ ಬೆಳಕು ಯಾವುದು?
ಶಿಷ್ಯ: ನನ್ನ ಕಣ್ಣುಗಳು.
ಭಗವಾನರು: ಕಣ್ಗಳನ್ನು ಮುಚ್ಚಿರುವಾಗ (ಕತ್ತಲಿರುವಾಗ, ಕಣ್ಗಳಿಲ್ಲದಿರುವಾಗ) ಹೇಗೆ?
ಶಿಷ್ಯ: ಬುದ್ಧಿಯ ಸಹಾಯದಿಂದ ಗ್ರಹಿಸಬಲ್ಲೆ. ಬುದ್ಧಿಯೇ ನನ್ನ ಬೆಳಕು.
ಭಗವಾನರು: ಬುದ್ಧಿಯನ್ನು ಬೆಳಗುವುದು (ನಡೆಸುವುದು) ಯಾವುದು?
ಶಿಷ್ಯ: ಅದು ನಾನು ಗುರುಗಳೇ. ನಾನು ಎಂಬ ಒಳಗಿನ ಆತ್ಮವೇ ಆ ಬೆಳಕು.
ಶಂಕರರು: ನಿಜ. ಆ ಎಂದೆಂದಿಗೂ ಬೆಳಗುವ ಬೆಳಕು ನೀನೇ ಆಗಿದ್ದೀ. ತತ್ ತ್ವಮಸಿ
ಎಲ್ಲ ನಮ್ಮ ಚಟುವಟಿಕೆಗಳಿಗೂ ಒಳಗಿರುವ ನಮ್ಮ ಚೈತನ್ಯವೇ ಪ್ರೇರಕಶಕ್ತಿ.
ಜಗತ್ – ಬೃಹತ್ ಎಂದರೇನು ?
ಜಗತ್ತು ಎಂದರೆ ಎಲ್ಲರಿಗೂ ಕಾಣುವ ಭೂಮಿ ಅಥವಾ ಆಕಾಶಕಾಯಗಳಷ್ಟೇ ಅಲ್ಲ. ಇವೆಲ್ಲವನ್ನೂ ಒಳಗೊಂಡ ಇಡೀ ಜೀವ ಸಂಕುಲದ ಬಾಹ್ಯ ಮತ್ತು ಆಂತರಿಕ ಮನೋಬುದ್ಧಿಗಳು ಸಹಾ. ವ್ಯಕ್ತಿ ಅಥವಾ ಇಡೀ ಮಾನವ ಜಾತಿಯನ್ನೊಳಗೊಂಡು ಇಡೀ ಜೀವಸಂಕುಲದ ಜೀವನದ ಚಲನೆ. ಅದಕ್ಕೆ ವರ್ತಮಾನವೆಂಬುದೇ ಇಲ್ಲ. ಪ್ರತಿಕ್ಷಣವೂ ಯಾವುದೋ ಒಂದು ದಿಶೆಯಲ್ಲಿ ಚಲಿಸುತ್ತಲೇ ಇರುತ್ತದೆ. ಜಗತ್ ಎಂದರೆ ‘ಚಲಿಸುತ್ತಿರುವುದು’, ಸದಾ ಬದಲಾಗುತ್ತಿರುವುದು ಎಂದರ್ಥ. ಸ್ಥಿರತೆ ಇಲ್ಲದ್ದು. ಈಗ ಇರುವ ಸ್ಥಿತಿ ಮುಂದಿನ ಕ್ಷಣಕ್ಕಿಲ್ಲ. ದೇಹಗಳಾಗಲೀ, ಮನಸ್ಸುಗಳಾಗಲೀ ಒಂದೇ ಸ್ಥಿತಿಯಲ್ಲಿ ಇರುವುದಿಲ್ಲ. ಹಾಗಾಗಿಯೇ ‘ಜಗನ್ಮಿಥ್ಯಾ’ ಅಂದರೆ ಕಣ್ಣಿಗೆ ಕಾಣುವ ಎಲ್ಲವೂ ಕಾಣುತ್ತಿರುವಂತೆ ಇಲ್ಲ ಕ್ಷಣ ಕ್ಷಣ ಬದಲಾಗುತ್ತಿರುತ್ತದೆ.
ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು ಅಷ್ಟೇ ಅಲ್ಲ ಭಾವಿಸಿದ್ದೂ ಸಹಾ ಸುಳ್ಳಾಗಬಹುದು. ಎಲ್ಲವೂ ಮಾಯೆಯೇ.
ಸದಾ ಬದಲಾಗದೆ ಇರುವುದು (ಅಂದರೆ ಸತ್ಯ) ವಿಶಾಲ ಅಥವಾ ಬೃಹತ್ ಆಕಾಶ ಮಾತ್ರ. ಆಕಾಶದಲ್ಲಿ, ನಕ್ಷತ್ರಗಳು, ಭೂಮಿಗಳು ಹುಟ್ಟುತ್ತಿರುತ್ತವೆ ಮತ್ತು ಸಾಯುತ್ತಿರುತ್ತವೆ. ಆದರೆ ಆ ವೈಶಾಲ್ಯ ಮಾತ್ರ ಸದಾ ಹಾಗೇ ಇರುತ್ತದೆ. ಅದೇ ಬ್ರಹ್ಮ. ಬ್ರಹ್ಮ ಎಂದರೆ ಬೃಹತ್.
ಗಂಗಾ ಪಾಪಂ ಶಶಿ ತಾಪಂ
ದೈನ್ಯಂ ಚ ಹರತಿ ಕಾಮಧೇನು,ಕಲ್ಪತರು,ಆದರೇ……
ಸಂಸ್ಥಾನ
ಪಾಪಂ ಚ ತಾಪಂ ಚ ದೈನ್ಯಂ ಚ ಹರತಿ ಸಂತ ಸಮಾಗಮ …..
ಗಂಗೆ ಪಾಪ ನಾಶಮಾಡುವಳು
ಚಂದ್ರ ತಂಪನ್ನ ಕೊಡುವನು ಕಾಮಧೇನು,ಕಲ್ಪತರುಗಳು ಮನುಷ್ಯರ ದೈನ್ಯವನ್ನು ನೀಗಿಸುವವು…
ಆದರೆ….ಒಬ್ಬ ಸದ್ಗುಗುರುವಿನ ದರ್ಶನ ಮಾಡಿದಾಕ್ಷಣದಲ್ಲಿ ಪಾಪ,ತಾಪ,ದೈನ್ಯಗಳು ಮೂರೂ
ತತ್ ತಕ್ಷಣದಲ್ಲಿ ಹೋಗಿಬಿಡುವವು
ಧರ್ಮವು ಸೂರ್ಯನಂತೆ ಮೊದಲು ಬಿಸಿಯನಿಸಿದರು ಅದರಲ್ಲಿ ಬೆಳಕಿದೆ , ಅಜ್ಞಾನವು ರಾತ್ರಿಯಂತೆ ತಂಪೆನೇಸಿದರು ಅದರಲ್ಲಿ ಅಂಧಕಾರವಿದೆ . ಆಯ್ಕೆಯು ನಮ್ಮದಿರಬೇಕು ತಂಪಿನೊಂದಿಗೆ ಅಂಧಕಾರ ಬೇಕೆ ಅಥವಾ ಶಾಖದೊಂದಿಗೆ ಬೆಳಕು ಎಂದು
ಕೆಳಗೆ ಕುಳಿತವನು ಎಂದೂ ಬೀಳಲಾರ!
ಎಷ್ಟು ಬಾಗುವೆವೋ ಅಷ್ಟು ಶ್ರೇಯಸ್ಸು:
ಎಷ್ಟು ಬೀಗುವೆಯೋ ಅಷ್ಟು ಆಪತ್ತು!
ಭಗವಂತನ ಭಕ್ತಿಸೇವೆ ಮತ್ತು ಅದರ ಪ್ರಯೋಜನಗಳು
ಸರ್ವೋಪಾಧಿ-ವಿನಿರ್ಮುಕ್ತಮ್
ಭಕ್ತಿರಸಾಮೃತಸಿಂಧು 1.1.12
ತತ್ಪರತ್ವೇನ ನಿರ್ಮಲಂ
ಹೃಷೀಕೇಣ ಹೃಷೀಕೇಶ
ಸೇವನಂ ಭಕ್ತಿರುಚ್ಯತೇ
“ಭಕ್ತಿ, ಅಥವಾ ಭಕ್ತಿಸೇವೆಯೆಂದರೆ ನಮ್ಮ ಎಲ್ಲಾ ಇಂದ್ರಿಯಗಳನ್ನು ಪರಮ ಪುರುಷನಾದ ಮತ್ತು ಎಲ್ಲಾ ಇಂದ್ರಿಯಗಳ ಒಡೆಯನಾದ ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳುವುದು. ಜೀವಾತ್ಮನು ಪರಮಾತ್ಮನಿಗೆ ಸೇವೆಯನ್ನು ಸಲ್ಲಿಸಿದಾಗ, ಅದರಿಂದ ಎರಡು ಪರಿಣಾಮಗಳು ಉಂಟಾಗುತ್ತದೆ. ಒಬ್ಬನು ಎಲ್ಲಾ ಭೌತಿಕ ಸ್ಥಾನ ಮತ್ತು ಹುದ್ದೆಗಳಿಂದ ಮುಕ್ತನಾಗುತ್ತಾನೆ, ಮತ್ತು ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವನ ಇಂದ್ರಿಯಗಳು ಪರಿಶುದ್ಧವಾಗುತ್ತವೆ.”
ಸಾಧನೆ ಹಲವು ಫಲ ಒಂದೆ
ಯತ್ಸಾಂಖ್ಯೈ: ಪ್ರಾಪ್ಯತೇ ಸ್ಥಾನಂ ತದ್ಯೋಗ್ಯರಪಿ ಗಮ್ಯತೇ|
ಏಕಂ ಸಾಂಖ್ಯಂ ಚ ಯೋಗಂ ಚ ಯ: ಪಶ್ಯತಿ ಸ ಪಶ್ನತಿ||
ಜ್ಞಾನನಿಷ್ಠರು ಯಾವ ಸ್ಥಾವನ್ನು ಹೊಂದುತ್ತಾರೆಯೋ ಅದನ್ನೇ ಧ್ಯಾನಯೋಗಿಗಳು ಹೊಂದುತ್ತಾರೆ. ಜ್ಞಾನ ಯೋಗವನ್ನೂ ಧ್ಯಾನಯೋಗವನ್ನೂ ಒಂದೇ ಎಂದು ಯಾವನು ನೋಡುವನೋ ಅವನೇ ಬಲ್ಲವನು.
— (ವಿದ್ಯಾರಣ್ಯ ಕೃತ ಪಂಚದಶಿ :- ಧ್ಯಾನದೀಪ- ೧೩೪)
—- ( ಶ್ವೇ.ಉಪ. ೬-೧೩)
— ಇದೇ ಸಂಗತಿ ಕುರಿತು ಗೀತೆ ೫-೫ ಶ್ಲೋಕವು ಹೇಳುವುದು:
ಜ್ಞಾನಯೋಗಿಯು ಯಾವ ಪರಂಧಾಮವಂ ಪಡೆದುಕೊಂಬುವನೋ ಕರ್ಮಯೋಗಿಯೂ ಸಹ ಅದನ್ನೇ ಪಡೆಯುತ್ತಾನೆ. ಅದಕ್ಕಾಗಿ ಯಾವ ಪುರುಷನು ಜ್ಞಾನಯೋಗ ಹಾಗು ಕರ್ಮಯೋಗವನು ಫಲರೂಪದಲಿ ಒಂದೆಂದು ನೋಡುತ್ತಾನೋ ಅವನೇ ಯಥಾರ್ಥವಾಗಿ ನೋಡುತ್ತಾನೆ. ಅವರಿಗೆ ” ಎಲ್ಲಾ ಒಂದೆ ಎರಡಿಲ್ಲ ತಂದೆ” ಎಂಬ ಸದ್ಭಾವವುಂಟಾಗಿರುತ್ತದೆ.
ತತ್ತ್ವಾನುಸಂಧಾನ ಕೃತಿಯು(ಪು. ೩೯೦) ಹೇಳೋದೇನಂದರೇ, ಕೇವಲ ಸಮಾಧಿಯಿಂದಲೇ ‘ಬ್ರಹ್ಮಸಾಕ್ಷಾತ್ಕಾರ’ ಉಂಟಾಗುವದೆಂಬ ನಿಯಮವಿಲ್ಲ. ವಿವೇಕದಿಂದಲೂ ಅಧಿಕಾರಿ ಪುರುಷರಿಗೆ ಬ್ರಹ್ಮ ಸಾಕ್ಷಾತ್ಕಾರವಾಗುವುದು.
ತತ್ವಮಸ್ಯಾದಿ ಮಹಾವಾಕ್ಯ ಜನ್ಯ ಬ್ರಹ್ಮ ಸಾಕ್ಷಾತ್ಕಾರೋತ್ಪತ್ತಿಯಲಿ ಆ ಸಮಾಧ್ಯಾಭ್ಯಾಸವು ಅವಶ್ಯವಪೇಕ್ಷಿತ. ಅಂದರೆ ಸಮಾಧಿ ಸಾಧಾನೆಯ ಅಗತ್ಯವಿಲ್ಲ. ತಾತ್ಪರ್ಯವೇನಂದರೇ ಸಮಾಧಿಯಂತೆ, ವಿಚಾರವೂ ಕೂಡ ‘ಬ್ರಹ್ಮಸಾಕ್ಷಾತ್ಕಾರ’ಕೆ ಹೇತುವಾಗಿದೆ.
ಆದರೆ ಶ್ರುತಿ ವಿಧಿಸುವ ಒಂದು ಷರತ್ತು ಏನಂದರೇ, ಯಾವ ಅಧಿಕಾರಿ ಬಹು ವ್ಯಾಕುಲ(ಚಿಂತಾಕ್ರಾಂತ) ಚಿತ್ತನೋ ಅಂತವರಿಗೆ ಸಮಾಧಿಯ ಅಭ್ಯಾಸ ಅಗತ್ಯವಿದೆ.
ವ್ಯಾಕುಲಚಿತ್ತ ರಹಿತಂಗೆ(ಶುದ್ಧ ಮನವುಳ್ಳ) ಸಮಾಧಿ ಅಭ್ಯಾಸವಿಲ್ಲದೇ ಕೇವಲ ವಿಚಾರ ಮಾತ್ರದಿಂದ ಆ ಬ್ರಹ್ಮ ಸಾಕ್ಷಾತ್ಕಾರವಾಗುವುದು.(ಆಧಾರ:- ತತ್ತ್ವಾನು ಸಂಧಾನ)
ಪ್ರಾಸಂಗಿಕವಾಗಿ (ಜನಕಮಹರಾಜ) ಹಿಂದೆ ಜನಕಾದಿಗಳಿಗೆ ಆ ಸಮಾಧಿ ಇಲ್ಲದಲೇ ಕೇವಲ ‘ಸಿದ್ಧಗೀತ’ ಶ್ರವಣ ಮಾತ್ರದಿಂದ ಬ್ರಹ್ಮ ಸಾಕ್ಷಾತ್ಕಾರೋತ್ಪತ್ತಿಯನು ಹೇಳಲ್ಪಟ್ಟಿದೆ.
ಹೀಗಿರುವಾಗ ಅದು ಶ್ರೇಷ್ಠ, ಇದು ಕನಿಷ್ಠ ಎಂಬುವ ಸಂಘರ್ಷಕೆ/ ವಾದಕ್ಕೆ ಆಸ್ಪದವೆಲ್ಲಿದೆ?
ಗುರುವು ಉಪದೇಶ ನೀಡುವಾಗ್ಗೆ ಶಿಷ್ಯನ ಅಧಿಕಾರತ್ವ ( ಯೋಗ್ಯತೆ)ಪರೀಕ್ಷಿಸಿಯೇ ತಕ್ಕುದಾದ ದೀಕ್ಷೆ ನೀಡುವರು. ಅದು ಸದ್ಗುರವಿನ ನಿರ್ಣಯ. ಎಲ್ಲರಿಗೂ ಒಂದೇ ರೀತಿಯ ಬೋಧೆ ಎಂಬ ನಿಯಮವೇನಿಲ್ಲ.
||ಜೈ ಅವಧೂತ್ ಅಲಕ್ ನಿರಂಜನ್||
