ಕಾರ್ತಿಕದ ಹುಣ್ಣಿಮೆಯ ಆಚರಣೆ ಮತ್ತು ಮಹತ್ವ | Karthika Masam

ಕಾರ್ತಿಕದ ಹುಣ್ಣಿಮೆಯ ಆಚರಣೆ ಮತ್ತು ಮಹತ್ವ

ಕಾರ್ತಿಕದ ಹುಣ್ಣಿಮೆಯ ಆಚರಣೆ ಹೀಗಿರಲಿ

ಕಾರ್ತಿಕದ ಹುಣ್ಣಿಮೆಯನ್ನು ದೇವ ದೀಪಾವಳಿಯಂದು ಕರೆಯುವರು.

ಕಾರಣ ಚಾತುರ್ಮಾಸದ 4 ತಿಂಗಳಗಳ ಕಾಲ ಶಯನದಲ್ಲಿರುವ ಹರಿಯು, ಉತ್ತಾನ ದಾದ್ವಶಿಯಂದು ಎದ್ದು ಈ ಹುಣ್ಣಿಮೆಯಿಂದಲೆ ತನ್ನ ದಾಯಿತ್ವದ ಅಧಿಕಾರಗಳನ್ನು ಮಾಹಾಲಕ್ಷ್ಮೀಯ ಕಡೆಯಿಂದ ಮತ್ತೆ ತನ್ನ ಕಡೆಗೆ ತೆಗೆದುಕೊಳ್ಳುವನು

ಅಂದರೆ ಚಾತುರ್ಮಾಸದ ಈ ಅವಧಿಯಲ್ಲಿ ಶ್ರೀಹರಿಯು ಅಮ್ಮನವರಿಗೆ ಎಲ್ಲ ಜವಾಬ್ದಾರಿಯನ್ನು ನೀಡುವರು ಅದನ್ನು ಮರಳಿ ತನ್ನೆಡೆಗೆ ಪಡೆಯುವ ದಿನ ಈ ಹುಣ್ಣಿಮೆಯಾದ ಕಾರಣ ಚರಾಚರ ಜಂತುಗಳಿಂದ ಇಡೀಯ ಬ್ರಹ್ಮಾಂಡಕ್ಕೆ ಮಹತ್ವದ ದಿನವೆ.

ಹಾಗಾಗಿ ಈ ದಿನದ ದಿನಚರ್ಯೆ ಭಿನ್ನವಾಗಿ ಇರಬೇಕು.

ಕಾರ್ತಿಕ ಮಾಸದಲ್ಲಿ ಕಾರ್ತಿಕ ಸ್ನಾನಕ್ಕೆ ವಿಶೇಷ ಮಹತ್ವ ಇದೆ, ಹಾಗೇಯೆ ಈ ನಿಯಮವನ್ನು ಪಾಲಿಸಲಾಗದವರು ಈ ಹುಣ್ಣಿಮೆಯ ದಿನವಾದರು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕೈ ಕಾಲುಗಳನ್ನು ಶುದ್ಧವಾಗಿ ತೊಳೆದುಕೊಂಡು, ಶುದ್ದ ಹಸುವಿನ ತುಪ್ಪವನ್ನು ಸ್ವಲ್ಪ ಸೇವಿಸಿ ಆಚಮನವನ್ನು ಮಾಡಿ ಕೈಯಲ್ಲಿ ಅಕ್ಷತೆಯ ಸಹಾಯದಿಂದ ಸಂಕಲ್ಪವನ್ನು ಮಾಡಬೇಕು.

ಶ್ರೀಹರಿಯ ಪಿತ್ಯರ್ಥಕ್ಕಾಗಿ ಈ ಸ್ನಾನವನ್ನು ಆಚರಿಸುವೆ ಇದರಿಂದ ಪ್ರಸನ್ನನಾಗಿ ಭಗವಂತ ನನಗೆ ಪಾಪದಿಂದ ಮುಕ್ತಿಯನ್ನು ನೀಡೆಂದು ಕೇಳಬೇಕು.

ತದನಂತರ ತಾಮ್ರದ ಲೋಟದ ಸಹಾಯದಿಂದ 9 ಬಾರಿ ನೀರನ್ನು ತಲೆಯ ಮೇಲೆ ಹಾಕಿಕೊಂಡು ಒಂದು ಬಟ್ಟಲದಷ್ಟು ಹಾಲನ್ನು ತಲೆಯ ಮೇಲೆ ಹಾಕಿಕೊಳ್ಳಬೇಕು.

ತದನಂತರ ಮತ್ತೆ ನೀರಿನಿಂದ ಸ್ನಾನ ಮಾಡಿ ಮಡಿಯನ್ನು ಧರಿಸಿ ಸಂಧ್ಯಾವಂದನೆ ಆದಿ ಕಾರ್ಯ ಮುಗಿಸಿ ಶ್ರೀಹರಿಯ ದೇವಾಲಯಕ್ಕೆ ತೆರಳಿ ಅಲ್ಲಿ ಭಗವಂತನ 21 ಪ್ರದಕ್ಷಿಣೆ ನಮಸ್ಕಾರ ಸಲ್ಲಿಸಿ ಮನೆಗೆ ಮರಳಬೇಕು.

ತದನಂತರ ಮನೆಯ ಹಿರಿಯರ , ತಂದೆ ತಾಯಿಗಳ ಆಶಿರ್ವಾದ ಪಡೆದು ಅವರಿಗೆ ಸಿಹಿಯನ್ನು ನೀಡಿ ತದ ಪಶ್ಚಾತ ನೀವು ಭೋಜನ ಗ್ರಹಣ ಮಾಡಬೇಕು.

ಇದರ ನಂತರ ಸಾಯಂಕಾಲ 21 ಅಥವಾ ಅದಕ್ಕೂ ಹೆಚ್ಚು ಎಳ್ಳೆಣ್ಣೆ ಅಥವಾ ತುಪ್ಪದ ದೀಪವನ್ನು ಮನೆಯಲ್ಲಿ ಪ್ರಜ್ವಲಿಸಿ ದೇವದೀಪಾವಳಿಯನ್ನು ಆಚರಿಸಬೇಕು.

ಇದರಿಂದ ಪ್ರಸನ್ನನಾದ ಭಗವಂತ ಜನ್ಮ ಜನ್ಮಾಂತರಗಳ ಪಾಪವನ್ನು ನಾಶ ಮಾಡುವನು.

ಇನ್ನು ಈ ದಿನ ಸಹಸ್ರನಾಮ ಪಾರಾಯಣ , ಸಹಸ್ರ ಗಾಯತ್ರೀ ಜಪ , ರುದ್ರಾಭಿಷೇಕ , ಗಣಹೋಮ , ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಈ ಅನುಷ್ಠಾನಗಳಿಗೆ ವಿಶೇಷ ಮಹತ್ವ ಇದೆ 

ಕಾರ್ತಿಕ ಮಾಸವು ಶೈವ ಮತ್ತು ವೈಷ್ಣವ ಎರಡು ಮತದ ಅವಲಂಭಿಗಳಿಗು ಪವಿತ್ರ ಮಾಸ.

ಈ ಮಾಸದಲ್ಲಿ ಮಾಡಿದ ದಾನ , ಪೂಜೆ , ಜಪ , ಹವನ, ಶಾಂತಿಗಳಿಗೆ ಅದರದ್ದೆ ಆದ ಮಹತ್ವ ಇರುವುದು.

ಅನುಷ್ಠಾನಗಳಿಗೆ‌ ಹೇಗೆ ಗ್ರಹಣದ ಕಾಲ ಸರ್ವೋಪರಿಯೊ ಹಾಗೆಯೆ ಕಾರ್ತಿಕವು 12 ಮಾಸಗಳಲ್ಲಿ ಹೊಲಿಸಿದಾಗ ಅನುಷ್ಠಾನಗಳಿಗೆ ಉತ್ತಮವಾಗಿರುವ ಕಾಲ.

ಭಗವಂತನ ಪ್ರೀತ್ಯರ್ಥಕ್ಕಾಗಿ, ನಮ್ಮ ಪಾಪಗಳ ಕ್ಷಯಕ್ಕಾಗಿ, ನಿತ್ಯ ದೇವರ ಮುಂದೆ ಸಾಧ್ಯವಿದ್ದಷ್ಟು ಶುದ್ದ ಹಸುವಿನ ತುಪ್ಪದ ದೀಪವನ್ನು ಪ್ರಜ್ವಲಿಸಿ ವಿಷ್ಣು ಸಹಸ್ರನಾಮ ಪಠಿಸಿ ಇದರಿಂದ ನಿಮಗೆ ಸರ್ವ ಪ್ರಕಾರದಿಂದಲೂ ಶ್ರೇಯೋಭಿವೃದ್ಧಿ ಒದಗಿ, ಕಷ್ಟಗಳು ಕರಗಿ ಹೋಗುವವು.

ದೀಪೋತ್ಸವ – ಒಂದು ಚಿಂತನೆ

ಕಾರ್ತೀಕ ಮಾಸದ ಕೃತ್ತಿಕಾ ನಕ್ಷತ್ರದಲ್ಲಿ ಸಾಯಂಕಾಲ ಚಿಕ್ಕ ಮತ್ತು ದೊಡ್ಡ ಅನಿಲ ದೀಪಗಳನ್ನು ಮನೆಯಲ್ಲಿ ಒಳಗೂ – ಹೊರಗೂ – ಸುತ್ತಲೂ ಹಚ್ಚಬೇಕು ಎಂದು ” ಜ್ಯೋತಿಸ್ಸಿದ್ಧಾಂತ ” ದಲ್ಲಿಯೂ, ಹಾಗೆಯೇ ಭಾರದ್ವಾಜ ಸ್ಮೃತಿಯಲ್ಲಿಯೂ ಹೇಳಲಾಗಿದೆ.

ಕಾರ್ತೀಕ ಮಾಸದ ಹುಣ್ಣಿಮೆಯ ದಿನ ದೀಪ ದಾನ ಮಾಡಬೇಕು ಎಂದು ಹೇಳಿರುವುದರಿಂದ ಹುಣ್ಣಿಮೆಯ ತಿಥಿಯು ಇರುವ ಸಾಯಂಕಾಲದಲ್ಲಿಯೇ ದೀಪೋತ್ಸವ ಆಚರಿಸಬೇಕೆಂದು ನಿರ್ಣಯದಿಂದ ತಿಳಿದು ಬರುತ್ತದೆ.

ತತ್ರೈವ ತತ್ಪೂಜಾಪ್ರಕಾರಃ 
ಪಂಚರಾತ್ರೇ ವಿಸ್ತರಣೇ ಅಭಿಮತಃ ।

ಶ್ರೀ ಬ್ರಹ್ಮೋವಾಚ …

ದೇವದೇವ! ಜಗನ್ನಾಥ! 
ವಾಂಛಿತಾರ್ಥ ಫಲಪ್ರದ ।
ದೀಪೋತ್ಸವ ವಿಧಾನಂ 
ಮೇ ಬ್ರೂಹಿ ಲಕ್ಷಣತಃ ಪ್ರಭೋ ।।

ಶ್ರೀ ಭಗವಾನ್ ಉವಾಚ :-

ದೀಪೋತ್ಸವ: ಕೃತೋ ಯೇನ 
ಸರ್ವಾಭೀಷ್ಟಪ್ರದಾಯಕಃ ।
ವರ್ಧಂತೇ ತಸ್ಯ ಸತತಂ 
ಜ್ಞಾನಸೌಭಾಗ್ಯಸಂಪದಃ ।। 

ದೀಪೋತ್ಸವಂ ಯಃ ಕುರುತೇ 
ತಂ ಯಮೋಪಿ ನ ಪಶ್ಯತಿ ।
ಅಧಯೋ ವ್ಯಾಧಯೋ ಬ್ರಹ್ಮನ್ ! 
ನ ಸ್ಪೃಶಂತಿ ಕದಾಚನ ।।

ಊರ್ಜೆ ಸೀತೇ ಪೂರ್ಣಿಮಾಯಾ೦ 
ಕೃತೇ ಸ್ನಾನಾದಿ ಸತ್ಕ್ರಿಯಃ ।
ದೀಪಸ್ಯ ಪುರತೋ ಮಂತ್ರ-
ಮಿಮಮುಚ್ಚಾರಯೇಚ್ಚುಚಿ: ।।

ಆದ್ಯ ದೀಪೋತ್ಸವಂ ದೇವ 
ಕರಿಷ್ಯೆ ತ್ವತ್ ಪ್ರಸಾದತಃ ।
ನಿರ್ವಿಘ್ನ೦ ಸಿದ್ಧಿಮಾಯಾತು 
ಯಥೋಕ್ತ ಫಲದೋ ಭವ ।
ಇತಿ ಸಂಕಲ್ಪ್ಯ ದೀಪಸ್ಯ 
ಪಾತ್ರಾಣಿ ಪರಿಸಾದಯೇತ್ ।।

ದೀಪೋತ್ಸವ ರೀತಿಯನ್ನು ” ಪಂಚರಾತ್ರ ” ದಲ್ಲಿ ವಿಸ್ತಾರವಾಗಿ ಹೇಳಿದ್ದಾರೆ.

ಶ್ರೀ ಚತುರ್ಮುಖ ಬ್ರಹ್ಮದೇವರು ಹೀಗೆ ಹೇಳುತ್ತಾರೆ..

” ಜಗತ್ತಿಗೆ ಒಡೆಯನಾದ – ದೇವದೇವೋತ್ತಮನಾದ – ಸರ್ವೋತ್ತಮನಾದ – ಇಷ್ಟಾರ್ಥ ಕೊಡುವ ಸರ್ವ ಸಮರ್ಥನಾದ ಶ್ರೀ ಹರಿಯೇ! 

ದೀಪೋತ್ಸವ ಮಾಡುವ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನನಗೆ ಹೇಳುವ ಕೃಪೆ ಮಾಡು ” ಯೆಂದು ಶ್ರೀ ಚತುರ್ಮುಖ ಬ್ರಹ್ಮದೇವರು ಪ್ರಾರ್ಥಿಸಿದಾಗ..

ಶ್ರೀ ಹರಿ ಪರಮಾತ್ಮನು…

ದೀಪೋತ್ಸವವು ಸಕಲ ಅಭೀಷ್ಟಗಳನ್ನೂ ಕೊಡುತಕ್ಕಂತಹುದಾಗಿದೆ. 

ಇಂಥಹಾ ದೀಪೋತ್ಸವವನ್ನು ಯಾವನು ಮಾಡುತ್ತಾನೋ ಅವನಿಗೆ ನಿರಂತರವಾಗಿ ಜ್ಞಾನಾಭಿವೃದ್ಧಿಯಾಗುತ್ತದೆ ಮತ್ತು ಅವನ ಮನೆಯಲ್ಲಿ ನಿರಂತರವಾಗಿ ಸೌಭಾಗ್ಯ ಸಂಪದ ಹೆಚ್ಚುತ್ತದೆ.

ಯಾವ ಮಾನವನು ದೀಪೋತ್ಸವವನ್ನು ಮಾಡುತ್ತಾನೋ ಅವನನ್ನು ” ಯಮ ” ನೂ ಕಣ್ಣೆತ್ತಿ ನೋಡುವುದಿಲ್ಲ.

ಮಾನಸಿಕ ವ್ಯಥೆಯೂ ಅವನನ್ನು ಎಂದೂ ಪೀಡಿಸುವುದಿಲ್ಲ. 

ಅವನಿಗೆ ಶರೀರದಲ್ಲಿ ರೋಗಾದ್ಯುಪದ್ರವಗಳು ಎಂದೂ ಉಂಟಾಗುವುದಿಲ್ಲ.

ಕಾರ್ತೀಕ ಶುಕ್ಲ ಹುಣ್ಣಿಮೆಯ ದಿನ ಸ್ನಾನ ಮುಂತಾದ ದೈನಂದಿನ ಕಾರ್ಯವನ್ನು ಪೂರೈಸಿ ಶುಚಿಯಾಗಿ ಈ ಮಂತ್ರವನ್ನು ಉಚ್ಛರಿಸಬೇಕು. 

ಆ ಮಂತ್ರ ಹೀಗಿದೆ..

ಆದ್ಯ ದೀಪೋತ್ಸವಂ ದೇವ 
ಕರಿಷ್ಯೆ ತ್ವತ್ಪ್ರಸಾದತಃ ।
ನಿರ್ವಿಘ್ನ೦ ಸಿದ್ಧಮಾಯಾತು 
ಯಥೋಕ್ತ ಫಲದೋ ಭವ ।।

ಪರಮಾತ್ಮನೇ! 

ಈ ದಿನ ನಿನ್ನ ಅನುಗ್ರಹದಿಂದ ದೀಪೋತ್ಸವವನ್ನು ಮಾಡಲಿದ್ದೇನೆ. 

ಈ ದೀಪೋತ್ಸವವು ವಿಘ್ನವಿಲ್ಲದೇ ನಡೆಯುವಂತಾಗಲಿ. 

ನನಗೆ ನಿನ್ನ ಅನುಗ್ರಹದಿಂದ ದೀಪೋತ್ಸವದ ಶಾಸ್ತ್ರೋಕ್ತವಾದ ಫಲಗಳು ಉಂಟಾಗಲಿ. 

ಈ ಅಭಿಪ್ರಾಯದ ಮಂತ್ರವನ್ನು ಹೇಳಿ ಸಂಕಲ್ಪ ಮಾಡಿ ದೀಪದ ಪಾತ್ರಗಳನ್ನೆಲ್ಲಾ ಒದಗಿಸಿಕೊಳ್ಳಬೇಕು.

” ದೀಪಾ ಪಾತ್ರಾಣಿ ( ದೀಪದ ಪಾತ್ರಗಳು ) “

ಅಯೋಮಯಾನಿ ತಾಮ್ರಾಣಿ 
ಕಾಂಸ್ಯ ಸ್ವರ್ಣಮಯಾನಿ ಚ ।।

ದೀಪದ ಪಾತ್ರಗಳು :-

ಕಬ್ಬಿಣ – ತಾಮ್ರ – ಕಂಚು ಮತ್ತು ಬಂಗಾರ ಮುಂತಾದವುಗಳಿಂದ ನಿರ್ಮಿತವಾಗಿರಬಹುದು.

” ಪಾತ್ರಾ ವಿಶೇಷೇ – ಫಲ ವಿಶೇಷಃ “

ದೇವತೆಗಳಿಗೆ ಅಧಿಪತಿಯಾದ ಬ್ರಹ್ಮನೇ!

1. ಯಾವನು ಮಣ್ಣಿನ ಪಾತ್ರೆಯಲ್ಲಿ ಹಸುವಿನ ತುಪ್ಪದಿಂದ ದೀಪ ಹಚ್ಚಿ ದಾನ ಮಾಡುತ್ತಾನೋ ಅಥವಾ ನನಗೆ ಅರ್ಪಿಸುತ್ತಾನೋ ಅವನು ಜ್ಞಾನಿಯೂ – ಯೋಗಿಯೂ – ಸುಖವಂತನೂ ಆಗುತ್ತಾನೆ.

2. ಕಬ್ಬಿಣದಿಂದ ನಿರ್ಮಿತವಾದ ಪಾತ್ರೆಯಿಂದ ಶ್ರೀ ಹರಿಗೆ ದೀಪವನ್ನು ಸಮರ್ಪಿಸಿದವನಿಗೆ ಅಂಥಹಾ 100 ದೀಪಗಳನ್ನು ಅರ್ಪಿಸಿದರೆ ಮಾತ್ರವೇ ಫಲ ಸಿದ್ಧಿಯಾಗುತ್ತದೆ.

3. ಕಂಚಿನ ಪಾತ್ರೆಯಲ್ಲಿ ದೀಪವನ್ನು ಹಚ್ಚಿ ಯಾವ ಮಾನವನು ಶ್ರೀ ಹರಿಯನ್ನು ಪೂಜಿಸುತ್ತಾನೋ ಅವನಿಗೆ ಒಳ್ಳೆಯ ತೇಜಸ್ಸು, ಉತ್ತಮವಾದ ಸೌಭಾಗ್ಯವೂ ಹೆಚ್ಚುತ್ತದೆ.

4. ಯಾವನು ತಾಮ್ರದ ಪಾತ್ರೆಯಲ್ಲಿ ದೀಪವನ್ನು ಹಚ್ಚಿ ಭಕ್ತಿಯಿಂದ ದಾನ ಮಾಡುತ್ತಾನೋ ಅಂಥವನು ೧೦೦೦ ದೀಪಗಳನ್ನು ಹಚ್ಚಿ ಸಮರ್ಪಿಸಿದರೆ ಉತ್ತಮ ಫಲಗಳನ್ನು ಪಡೆಯುತ್ತಾನೆ.

5. ಬೆಳ್ಳಿಯ ಪಾತ್ರೆಯಲ್ಲಿ ಯಾವನು ದೀಪವನ್ನು ಹಚ್ಚಿ ಸಮರ್ಪಿಸುತ್ತಾನೋ ಆ ಮನುಷ್ಯನ ಪುಣ್ಯವು ” ಲಕ್ಷ ಪಾಲು ” ಹೆಚ್ಚುತ್ತದೆ.

6. ಯಾವನು ಬಂಗಾರದ ಪಾತ್ರೆಯಲ್ಲಿ ದೀಪವನ್ನು ಉರಿಸಿ ಶ್ರೀ ಹರಿಗೆ ಸಮರ್ಪಿಸುತ್ತಾನೋ ಅವನಿಗೆ ಅನಂತ ಸಂಖ್ಯೆಯಿಂದ ಗುಣಿತವಾದ ( ಲೆಕ್ಕವಿಲ್ಲದಷ್ಟು ಸಂಖ್ಯೆಯ ) ಫಲವು ಉಂಟಾಗುತ್ತದೆ.

ಅವನು ನನ್ನನ್ನೇ ( ಶ್ರೀ ಹರಿಯನ್ನೇ ) ಹೊಂದುತ್ತಾನೆ ಇದರಲ್ಲಿ ಸಂಶಯವಿಲ್ಲ!

ದೇವಪಾರ್ಶ್ವೇ ಸ್ವರ್ಣರೌಪ್ಯ-
ತಾಮ್ರಕಾಂಸ್ಯಸಾಪಿಷ್ಟಕೈ: ।
ಅಲಾಭೇ ಮೃನ್ಮ ಯೇನಾಪಿ 
ದೀಪಾ ದೇಯಾ ವಿಚಕ್ಷನೈ ।।

ದೇವರ ಪಾರ್ಶ್ವದಲ್ಲಿ ದೀಪ ಹಚ್ಚಲು ಬಂಗಾರ – ಬೆಳ್ಳಿ – ತಾಮ್ರ – ಕಂಚು ಅಥವಾ ಹಿಟ್ಟು ಇವುಗಳಿಂದ ದೀಪದ ಪಾತ್ರೆಯನ್ನು ಮಾಡಬೇಕು. 

ಹೀಗೆ ಮಾಡಲು ಸಾಧ್ಯವಾಗದಿದ್ದರೆ ಮಣ್ಣಿನಿಂದ ಮಾಡಿದ ದೀಪದ ಪಾತ್ರೆಯನ್ನು ಸಂಗ್ರಹಿಸಬೇಕು. 

ಹರಿಪ್ರಸಾದಾಕಾಂಕ್ಷಿಗಳಾದ ಕುಶಲ ಜೀವರು ಆಯಾ ದೀಪದ ಪಾತ್ರೆಗಳಲ್ಲಿ ಶ್ರೀಹರಿಯ ಪ್ರೀತ್ಯರ್ಥವಾಗಿ ದೀಪಗಳನ್ನು ಹಚ್ಚಿ ಶ್ರೀ ಹರಿಗೆ ಸಮರ್ಪಿಸಬೇಕು.

1. ಯಾವನು ಪರಿಶುದ್ಧವಾದ ಮನಸ್ಸುಳ್ಳವನಾಗಿ ನನಗೆ ( ಶ್ರೀ ಹರಿಗೆ ” ಕರ್ಪೂರದ ದೀಪ ” ಸಮರ್ಪಿಸುತ್ತಾನೋ ೧೦೦ ವರ್ಷಗಳ ವರೆಗೂ ಅವನ ಪುಣ್ಯ ಮುಗಿಯುವುದಿಲ್ಲ.

2. ” ಹಸುವಿನ ತುಪ್ಪ ” ದಿಂದ ದೀಪವನ್ನು ಹಚ್ಚಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ.

3. ” ಕುಸುಬೆ ಎಣ್ಣೆ ” ಯಿಂದ ದೀಪವನ್ನು ಬೆಳಗಿಸಿದರೆ ಅಮಂಗಲ ಪರಿಹಾರವಾಗುತ್ತದೆ ಮತ್ತು ಕೀರ್ತಿಯೂ ಹೆಚ್ಚುತ್ತದೆ.

4. ” ಕೊಬ್ಬರಿ ಎಣ್ಣೆ ” ಯಿಂದ ದೀಪವನ್ನು ಹಚ್ಚಿದರೆ ಸೌಖ್ಯವು ಹೆಚ್ಚಾಗುತ್ತದೆ.

5. ” ಆಡಿನ ತುಪ್ಪ ” ದಿಂದ ದೀಪ ಹಚ್ಚಿದರೆ ಸುಖವು ( ಭೋಗ ) ಸಿಗುತ್ತದೆ.

ವಿಶೇಷ ವಿಚಾರ : –

ಹರಳೆಣ್ಣೆ ಮತ್ತು ಎಮ್ಮೆಯ ತುಪ್ಪವನ್ನು ದೀಪ ಹಚ್ಚಲು ಸರ್ವಥಾ ಉಪಯೋಗಿಸಬಾರದು.

” ದೀಪದ ಬತ್ತಿಯ ಕುರಿತು ಮಾಹಿತಿ “

1. ತಾವರೆ ನಾರಿನಿಂದ ಬತ್ತಿಯನ್ನು ಮಾಡಿ ದೀಪವನ್ನು ಉರಿಸಿದರೆ ಸಾರ್ವಭೌಮತ್ವವೂ, ಎಲ್ಲಾ ಅಭಿಲಾಷೆಗಳೂ ಸಿದ್ಧಿಯಾಗುತ್ತವೆ.

2. ಅಗಸೆ ನಾರಿನಿಂದ ಬತ್ತಿಯನ್ನು ಮಾಡಿ ದೀಪವನ್ನು ಹಚ್ಚಿದರೆ ಜನನ – ಮರಣಗಳು ( ಷಡೂರ್ಮಿಗಳು ) ಪರಿಹಾರವಾಗುತ್ತದೆ ಮತ್ತು ನಿತ್ಯ ಯೌವನ ಪ್ರಾಪ್ತವಾಗುತ್ತದೆ.

3. ಹತ್ತಿಯ ದೀಪವನ್ನು ಹಚ್ಚಿದರೆ ಪಾಪವು ನಾಶವಾಗಿ ಪುಣ್ಯಾಭಿವೃದ್ಧಿಯಾಗುತ್ತದೆ.

ಹೀಗೆ ನಾರಿನಿಂದ ಮಾಡಿದ ಬತ್ತಿಯಿಂದ ದೀಪ ಹಚ್ಚಿದರೆ ಭಕ್ತಿಯ ಸಂಪೂರ್ಣ ಫಲ ಸಿಗುತ್ತದೆ ಮತ್ತು ಅವನಿಗೆ ” ಅಶ್ವಮೇಧ ಯಾಗ ” ದ ಫಲವೂ ಉಂಟಾಗುತ್ತದೆ.

” ಉಪ ಸಂಹಾರ “

ಯಾವನು ಕಾರ್ತೀಕ ಮಾಸದಲ್ಲಿ ಈ ಶ್ರೇಷ್ಠವಾದ ದೀಪೋತ್ಸವವನ್ನು ಮಾಡುವುದಿಲ್ಲವೋ ಅವನು ಒಂದು ವರ್ಷ ಮಾಡಿದ ಪೂಜೆಯು ಖಂಡಿತವಾಗಿಯೂ ನಿಷ್ಫಲವಾಗುತ್ತದೆ.

ಆದುದರಿಂದ ಮಂತ್ರ – ತಂತ್ರ ವಿಧಿಗಳಿಂದ ದೀಪೋತ್ಸವ ಮಾಡಲೇಬೇಕು. 

ಇದರಿಂದ ಆಯುಸ್ಸು – ಆರೋಗ್ಯ – ಐಶ್ವರ್ಯ – ಜ್ಞಾನ – ಸೌಭಾಗ್ಯ – ಸಂಪತ್ತು ಶ್ರೀ ಮಹಾಲಕ್ಷ್ಮೀಪತಿಯಾದ ಶ್ರೀಮನ್ನಾರಾಯಣನ ಪರಮಾನುಗ್ರಹ ನಿತ್ಯದಲ್ಲಿಯೂ ನಿಶ್ಚಯವಾಗಿಯೂ ಉಂಟಾಗುತ್ತದೆ.

ಇಂಥಹಾ ಭಗವಂತನ ಭಕ್ತನು ಮಾಡುವ ದೀಪೋತ್ಸವವನ್ನು ನೋಡಿ ದೇವತೆಗಳು ತಿರ್ಯಕ ಪ್ರಾಣಿಗಳೂ – ಮನುಷ್ಯರು ಇವರೇ ಮೊದಲಾದವರು ಎಲ್ಲಾ ಪಾಪಗಳಿಂದಲೂ ಬಿಡುಗಡೆ ಹೊಂದಿ ಶ್ರೇಷ್ಠವಾದ ನನ್ನ ಆಸ್ಥಾನವನ್ನು ( ವೈಕುಂಠವನ್ನು ) ಪಡೆಯುತ್ತಾನೆ!!

1 thought on “ಕಾರ್ತಿಕದ ಹುಣ್ಣಿಮೆಯ ಆಚರಣೆ ಮತ್ತು ಮಹತ್ವ | Karthika Masam”

  1. Pingback: ದೀಪಂಜ್ಯೋತಿ ಪರಬ್ರಹ್ಮ: ದೀಪ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ? – Acharane

Leave a Comment

Your email address will not be published. Required fields are marked *