ಕಾರ್ತೀಕ ಮಾಸದ ( ಉತ್ಪತ್ತಿ ) ಏಕಾದಶಿಯ ವಿಶೇಷತೆ ಏನು? ಏಕಾದಶಿ ದೇವಿಯ ಕಥೆ.
ಕಾರ್ತೀಕ ಮಾಸದ ( ಉತ್ಪತ್ತಿ ) ಏಕಾದಶಿ ಬಹಳ ವಿಶೇಷವಾದಂತಹ ದಿನ , ಯಾಕೆ ಅಂದ್ರೆ ಶ್ರೀ ಮಹಾ ವಿಷ್ಣುವು ಮುರಾಸುರನನ್ನು ಸಂಹರಿಸಿಸಲು ಕನ್ನೆಯ ಶರೀರದಿಂದ ಜನಿಸಿದ ದಿನ ಇದು
ಹಿಂದೊಮ್ಮೆ ಮುರ ಎಂಬ ರಾಕ್ಷಸನು ಅತ್ಯಂತ ಬಲಶಾಲಿ ಹಾಗೂ ಶೂರವಂತನೂ ಆಗಿದ್ದನು.
ಈತನು ಇಂದ್ರಲೋಕಕ್ಕೆ ದಾಳಿಯಿಟ್ಟು, ಇಂದ್ರನನ್ನು ಪದಚ್ಯುತಿಗೊಳಿಸಿ, ಇತರ ದೇವಾದಿದೇವತೆಗಳನ್ನು ಯುದ್ಧದಲ್ಲಿ ಪರಾಭವಗೊಳಿಸಿದ್ದನು.
ಸಜ್ಜನರಿಗೆ, ಋಷಿಮುನಿಗಳಿಗೆ ಮತ್ತು ಇತರ ದೇವತೆಗಳಿಗೆ ಕಂಟಕನಾಗಿದ್ದ ಈ ಅಸುರನ ಉಪಟಳವನ್ನು ತಡೆಯಲಾರದೆ ಎಲ್ಲರೂ ಮಹಾವಿಷ್ಣುವಿನಲ್ಲಿ ಕಾಪಾಡುವಂತೆ ಮೊರೆಯಿಡುತ್ತಾರೆ.
ಅಂತೆಯೇ, ಮಹಾವಿಷ್ಣುವು ಮುರಾಸುರನ ಮೇಲೆ ಯುದ್ಧವನ್ನು ಆರಂಭಿಸುತ್ತಾನೆ. ಈ ಯುದ್ಧವು ಹಲವಾರು ವರ್ಷಗಳವರೆಗೂ ನಡೆಯುತ್ತಲೇ ಇದ್ದುದರಿಂದ, ಮಹಾವಿಷ್ಣುವು ಬಳಲಿದಂತೆ ನಟಿಸುತ್ತಾ ಗುಹೆಯೊಂದರೊಳಗೆ ಹೋಗಿ ವಿಶ್ರಮಿಸುತ್ತಾನೆ. ಇದನ್ನು ಕಂಡ ಮುರನು ವಿಷ್ಣುವನ್ನು ಸೋಲಿಸಿಬಿಟ್ಟೆನೆಂದು ಭಾವಿಸಿ, ಗುಹೆಯೊಳಗೆ ಪ್ರವೇಶಿಸುತ್ತಾನೆ.
ಅಲ್ಲಿ ಆತನಿಗೆ ಪರಮಸುಂದರಿಯಾದ ಓರ್ವ ಕನ್ಯೆಯು ಕಾಣಿಸುತ್ತಾಳೆ. ಆಕೆಯನ್ನು ಮೋಹಿಸಬೇಕೆಂದುಕೊಳ್ಳುತ್ತಿರುವಾಗಲೆ ಆ ಸ್ತ್ರ್ರೀಯು ಈತನ ಮೇಲೆ ಹಲ್ಲೆನಡೆಸಿ, ಕ್ಷಣಮಾತ್ರದಲ್ಲಿ ಅವನನ್ನು ಕೊಂದುಬಿಡುತ್ತಾಳೆ.
ಅಂತಹ ಸಂದರ್ಭದಲ್ಲಿ ನಿದ್ರೆಯಿಂದೆಚ್ಚೆತ್ತ ವಿಷ್ಣುವು ಈಕೆಯನ್ನು ಮತ್ತು ಗತಪ್ರಾಣನಾದ ಮುರನನ್ನು ಕಂಡು ಮುಗುಳುನಗೆಯನ್ನು ಸೂಸುತ್ತಾನೆ.
ತಾನು ಮಲಗುವ ಮುನ್ನ ತನ್ನ ಹನ್ನೊಂದು ಅಂಗಾಂಶಗಳಿಂದ ಆ ದೇವಿಯನ್ನು ಸೃಷ್ಟಿಸಿದ್ದನು. ಆಕೆಯೇ ಮುರನನ್ನು ಸಂಹರಿಸಿದವಳು. ವಿಷ್ಣುವಿನ ಹನ್ನೊಂದು ಅಂಗಾಂಶಗಳಿಂದ ಜನಿಸಿದವಳಾದ್ದರಿಂದ, ಈಕೆಯನ್ನು ಏಕಾದಶಿ ದೇವಿಯೆಂದು ಕರೆದ .
ಪರಮಾತ್ಮನು ಏಕಾದಶಿಯಂದು ಉಪವಾಸವಿದ್ದು ತನ್ನನ್ನು ಅಂದರೆ ವಿಷ್ಣುವನ್ನು ಪೂಜಿಸಿದವರಿಗೆ ಆಯುರಾರೋಗ್ಯ, ಅಭೀಷ್ಟಗಳ ಸಿದ್ಧಿ ಹಾಗೂ ಮೋಕ್ಷಗಳು ದೊರಕುವಂತೆ ವರವನ್ನು ನೀಡುವ ಶಕ್ತಿಯನ್ನು ಆಕೆಗೆ ನೀಡುತ್ತಾನೆ. ಆದ್ದರಿಂದಲೇ ಏಕಾದಶಿವ್ರತವು ಸದಾಕಾಲವೂ ಸರ್ವಮಾನ್ಯವಾದ ವ್ರತವಾಗಿದೆ.
ಏಕಾದಶಿ ದೇವಿಯು ಪ್ರಕಟಗೊಂಡ ಕಾರಣ ಕಾರ್ತೀಕ ಮಾಸದ ಕೃಷ್ಣಪಕ್ಷದಲ್ಲಿ ಸಂಭವಿಸುವ ಏಕಾದಶಿಯನ್ನು ಉತ್ಪತ್ತಿ ಅಥವಾ ಉತ್ಪನ್ನ ಏಕಾದಶಿಯೆಂದು ಕರೆಯಲಾಗಿದೆ.