ಆಗಾಮಿ ಕರ್ಮ: ಈ ಜನ್ಮದಲ್ಲಿ ನಾವು ಮಾಡುತ್ತಲಿರುವ ಕರ್ಮಗಳಿಂದ ಉಂಟಾಗುವ ಫಲಗಳಿಗೆ ಆಗಾಮಿ ಕರ್ಮ ಎಂದು ಹೇಳುವರು.
ಈ ಆಗಾಮಿ ಕರ್ಮಗಳ ಮೂಲಕ ಹೊಸ ಸಂಸ್ಕಾರಗಳು ಉದಯವಾಗುತ್ತವೆ.
ಈ ಆಗಾಮಿ ಕರ್ಮದಲ್ಲಿ ಕೆಲವು ಕರ್ಮಗಳು ಸಂಚಿತ ಕರ್ಮದಲ್ಲಿ ಮಿಶ್ರಿತವಾಗಿ ಸುಪ್ತಾವಸ್ಥೆಯನ್ನು ತಲುಪಿರುತ್ತವೆ. ಮುಂದಿನ ಜನ್ಮದಲ್ಲಿ ಅವು ಫಲ ಕೊಡುತ್ತವೆ.
ಈ ಆಗಾಮಿ ಕರ್ಮಗಳು ನಮ್ಮ ಮುಂದಿನ ಸಂಚಿತವನ್ನು ಸೂಚಿಸುವುದರಿಂದ ಜಾತಕದಲ್ಲಿ ಭಾಗ್ಯ ಸ್ಥಾನವಾದ 9ನೇ ಮನೆಯನ್ನು ನೋಡಲು ಬಳಸುತ್ತಾರೆ.
ಜಾತಕ ಪರಿಶೀಲಿಸುವಾಗ ಲಗ್ನವು ವ್ಯಕ್ತಿಯ ಬಗ್ಗೆಯೂ, ದ್ವಿತೀಯವು ಕುಟುಂಬದ ಬಗ್ಗೆಯೂ, ತೃತೀಯವು ಒಡಹುಟ್ಟಿದವರ ಬಗ್ಗೆಯೂ, ಚತುರ್ಥವು ಆಂತರಿಕ ಸುಖವನ್ನೂ ತಿಳಿಯಪಡಿಸುವುದರಿಂದ 1ರಿಂದ 4 ಭಾವಗಳು ಪ್ರಾರಬ್ಧ ಕರ್ಮವನ್ನು ಸೂಚಿಸುವ ಭಾವಗಳಾಗಿರುತ್ತವೆ.
ಪಂಚಮ ಭಾವವು ಸಂತಾನವನ್ನೂ, ಷಷ್ಠಭಾವವು ರೋಗವನ್ನೂ, ಸಪ್ತಮ ಭಾವವು ಸಂಗಾತಿಯನ್ನೂ ಅಷ್ಟಮ ಭಾವವು ಆಯುಸ್ಸನ್ನೂ ಸೂಚಿಸುವುದರಿಂದ 5ರಿಂದ 8ನೇ ಭಾವಗಳು ಸಂಚಿತ ಕರ್ಮವನ್ನು ಸೂಚಿಸುತ್ತವೆ.
ನವಮ ಭಾವವು ಭಾಗ್ಯವನ್ನು, ದಶಮ ಭಾವವು ವೃತ್ತಿಯನ್ನೂ ಏಕಾದಶ ಭಾವವು ಲಾಭವನ್ನೂ, ದ್ವಾದಶ ಭಾವವು ಮೋಕ್ಷವನ್ನೂ ತಿಳಿಯಪಡಿಸುವುದರಿಂದ 9ರಿಂದ 12 ಭಾವಗಳು ಆಗಾಮಿ ಕರ್ಮವನ್ನು ಸೂಚಿಸುವ ಭಾವಗಳಾಗಿರುತ್ತವೆ.
ಹೀಗೆ ದಶಾಭುಕ್ತಿ ನಡೆಯುವಾಗ ಯಾವ ಕರ್ಮದ ದೆಸೆ ನಡೆಯುತ್ತಿದೆ ಎಂದು ತಿಳಿದು ನಾವು ಅನುಭವಿಸುತ್ತಿರುವ ಫಲವೇನೆಂಬುದನ್ನು ತಿಳಿಯಬಹುದು.
ಕರ್ಮಗಳು ಜಡವಾದುದರಿಂದ ತಾವೇ ಸ್ವತ: ಶುಭಾಶುಭ ಫಲಗಳನ್ನು ಕೊಡುವುದಿಲ್ಲ.
ಸ್ವತಂತ್ರ ಚೇತನದಿಂದ ಪ್ರೇರಿತರಾಗಿ ಅವು ಫಲಗಳನ್ನು ಕೊಡುತ್ತವೆ.
ಸ್ವತಂತ್ರ ಚೇತನವನ್ನೇ ಶಿವ, ವಿಷ್ಣು, ವಿನಾಯಕ ದುರ್ಗಾ, ಮೊದಲಾದ ಹೆಸರುಗಳಿಂದ ಕರೆಯುತ್ತಾರೆ.
ದೇವತೆಗಳು ಗ್ರಹರೂಪದಿಂದ ಅವರವರ ಪ್ರಾಕ್ಕರ್ಮಾರ್ಜಿತ ಶುಭಾಶುಭ ಫಲಗಳಿಗನುಗುಣವಾದ ಫಲಗಳನ್ನು ಅವರವರಿಗೆ ಕೊಡುತ್ತಾರೆ.
ನಾವು ಸತ್ಕರ್ಮ, ದಾನ, ಧರ್ಮ, ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರೆ ಅಶುಭ ಫಲಗಳನ್ನು ಅಳಿಸಿ ಶುಭ ಫಲಗಳನ್ನು ಪಡೆಯಬಹುದು.