ರಾಜ ಯೋಗ ನಿಮಗೂ ಇದೆಯೇ ? ಗೊತ್ತಿದ್ದರೆ ಹೆಚ್ಚು ಲಾಭ

ರಾಜ ಯೋಗ ನಿಮಗೂ ಇದೆಯೇ ? ಗೊತ್ತಿದ್ದರೆ ಹೆಚ್ಚು ಲಾಭ

ರಾಜ ಯೋಗ ಹೇಗೆ ಉಂಟಾಗುತ್ತದೆ..???

ರಾಜಯೋಗಕ್ಕೆ ಜನ್ಮ ಕುಂಡಲಿಯ ಗ್ರಹಗಳು ಹೇಗೆ ಕಾರಣವಾಗುತ್ತಾರೆ..??? 

ಮತ್ತು ಅದು ಹೇಗೆ ಆಗುತ್ತದೆ???

ಬನ್ನಿ, ಕೆಲವು  ಉದಾಹರಣೆಗಳೊಂದಿಗೆ ನೋಡೋಣ….

  1. ಅಸ್ತಂಗತರಾಗದೇ ಮೂರು ಅಥವಾ ಹೆಚ್ಚು ಗ್ರಹಗಳು ಜಾತಕದಲ್ಲಿ ಸ್ವಕ್ಷೇತ್ರ ಅಥವಾ ಉಚ್ಛರಾಶಿಯಲ್ಲಿದ್ದರೆ ಅಂತಾ ಜಾತಕರು ರಾಜವಂಶದಲ್ಲಿ ಜನಿಸುತ್ತಾರೆ.
  2. ಜಾತಕದಲ್ಲಿ ಗ್ರಹವೊಂದು ವಕ್ರನಾಗಿ, ಪ್ರಕಾಶಮಾನನೂ ಆಗಿ, ಒಳ್ಳೆಯ ಸ್ಥಾನದಲ್ಲಿ ನೀಚರಾಶಿಯಲ್ಲಿದ್ದರೂ ಅದು ರಾಜಯೋಗವು.
  3. ಎರಡು ಮೂರು ಗ್ರಹಗಳು ವಕ್ರರು. ಪಾಪ ಗ್ರಹಗಳ ದೃಷ್ಟಿ ಇಲ್ಲದೇ ಒಳ್ಳೆಯ ಸ್ಥಾನದಲ್ಲಿ ನೀಚರಾಗಿದ್ದರೂ ಅದೂ ಕೂಡ ರಾಜಯೋಗವೇ.
  4. ಮೂರು ಅಥವಾ ಹೆಚ್ಚು ಗ್ರಹಗಳು ಸ್ವಕ್ಷೇತ್ರ ಅಥವಾ ಉಚ್ಛದಲ್ಲಿದ್ದು ಕೇಂದ್ರದಲ್ಲಿದ್ದರೆ ಆ ಜಾತಕನು ಸುಪ್ರಸಿದ್ಧ ರಾಜನಾಗುತ್ತಾನೆ ಅಥವಾ ಸುಪ್ರಸಿದ್ಧ ವ್ಯಕ್ತಿಯಾಗುವನು.
  5. ಚಂದ್ರ ಅಥವಾ ಲಗ್ನವು ವರ್ಗೋತ್ತಮ ನವಾಂಶದಲ್ಲಿದ್ದರೆ ಮತ್ತು ನಾಲ್ಕು ಗ್ರಹಗಳು ಲಗ್ನವನ್ನು ನೋಡಿದರೆ. ಶನಿ ಬಿಟ್ಟು ಉಳಿದ ಗ್ರಹಗಳಲ್ಲಿ ಐದು ಅಥವಾ ನಾಲ್ಕು ಗ್ರಹಗಳು ದಿಗ್ಬಲಯುಕ್ತರಾದರೆ ಬಲಿಷ್ಠ ರಾಜಯೋಗವಾಗುತ್ತದೆ.
  6. ಚಂದ್ರ ಬಲಯುತನಾಗಿ ಉಚ್ಛ ಅಥವಾ ಸ್ವಕ್ಷೇತ್ರಯುತ ಗುರು ಅಥವಾ ಮಿತ್ರ ಗ್ರಹರಿಂದ ನೋಡಲ್ಪಟ್ಟರೂ ಅದೂ ಒಂದು ರಾಜಯೋಗವಾಗುತ್ತದೆ.
  7. ಮೇಷ, ಸಿಂಹ ಮತ್ತು ಧನು ಲಗ್ನವಾಗಿ ಕುಜನು ಲಗ್ನದಲ್ಲಿದ್ದು ಮಿತ್ರ ಗ್ರಹರಿಂದ ನೋಡಿದರೆ, ದಶಮಾಧಿಪತಿ ನವಮಭಾವದಲ್ಲಿ ಮತ್ತು ನವಮಾಧಿಪತಿ ದಶಮದಲ್ಲಿ(ಪರಿವರ್ತನ ಯೋಗ) ಇದ್ದರೂ ಜಾತಕನು ರಾಜ ಅಥವಾ ರಾಜಸಮಾನನಾಗುತ್ತಾನೆ.
  8. ಲಗ್ನಾಧಿಪತಿಯು ಬಲಿಷ್ಠನಾಗಿ ನೀಚ ಅಥವಾ ಶತ್ರು ಕ್ಷೇತ್ರವಲ್ಲದ ದ್ವಿತೀಯ ಭಾವದಲ್ಲಿ ಶುಕ್ರನ ಜೊತೆಯಲ್ಲಿದ್ದರೆ ರಾಜಯೋಗವಾಗುತ್ತದೆ.
  9. ಧನು ರಾಶಿಯ ಮಧ್ಯದಲ್ಲಿ ರವಿ ಮತ್ತು ಚಂದ್ರ ಇದ್ದು; ಶನಿಯು ಲಗ್ನದಲ್ಲಿ ಇದ್ದು ;ಕುಜನು ಬಲಿಷ್ಠನಾಗಿ ತನ್ನ ಉಚ್ಛರಾಶಿಯಲ್ಲಿ ಇದ್ದರೆ ; ಪೂರ್ಣಚಂದ್ರನು ಸೂರ್ಯನ ನವಾಂಶದಲ್ಲಿದ್ದು ಮತ್ತು ಶುಭಗ್ರಹವು ಪಾಪಗ್ರಹದ ಜೊತೆಗಿಲ್ಲದಿದ್ದರೆ ಹಾಗೂ ಕೇಂದ್ರಗಳಲ್ಲಿದ್ದರೆ ;ಗುರು ಬುಧ ಶುಕ್ರ ಅಥವಾ ಚಂದ್ರ ನವಮದಲ್ಲಿ ಅಸ್ತನಾಗದೇ, ಪ್ರಕಾಶಮಾನವಾಗಿ, ಮಿತ್ರಗ್ರಹಗಳೊಂದಿಗಿದ್ದರೆ ಈ ಗ್ರಹ ಕೂಟವು ಅಪ್ಪಟ ರಾಜಯೋಗವನ್ನು ಕರುಣಿಸುವುದು.
  10. ಗುರು ಮತ್ತು ಶುಕ್ರ ಮೀನ ರಾಶಿಯಲ್ಲಿರಬೇಕು. ಶನಿ ಉಚ್ಛನಾಗಿರಬೇಕು. ಉಚ್ಛ ಪೂರ್ಣಚಂದ್ರನನ್ನು ಕುಜ ನೋಡಬೇಕು. ಮೇಷ ಲಗ್ನವಾಗಿ ಲಗ್ನದಲ್ಲಿ ರವಿ ಇರಬೇಕು. ಈ ಯೋಗದಲ್ಲಿ ಜನಿಸಿದವರು ರಾಜನಾಗುತ್ತಾನೆ ಅಥವಾ ಪ್ರಸಿದ್ಧ ಆಡಳಿತಗಾರನಾಗುತ್ತಾನೆ.
  11. ಏಕಾದಶ ಷಷ್ಠ ಅಥವಾ ತೃತೀಯದಲ್ಲಿ ಶುಭಗ್ರಹವು ನೀಚರಾಗಿರಬೇಕು.
  12. ಉಚ್ಛದಲ್ಲಿ ಶುಭಗ್ರಹರು ಇರಬೇಕು. ಗ್ರಹಗಳು ಬಲಯುತರಾಗಿ ಕೇಂದ್ರದಲ್ಲಿರಬೇಕು ಮತ್ತು ಚಂದ್ರ ಕರ್ಕಾಟಕ ರಾಶಿಯಾಗಿ ಅದು ದಶಮ ರಾಶಿಯಾಗಿದ್ದರೆ, ಅದು ಒಂದು ಉತ್ತಮ ರಾಜಯೋಗವಾಗುತ್ತದೆ 
  13. ಕೇಂದ್ರಗಳಲ್ಲಿ ಗುರುಚಂದ್ರ ಗ್ರಹಗಳಿದ್ದು, ಶುಕ್ರನಿಂದ ನೋಡಬೇಕು;ಈ ಸಂದರ್ಭದಲ್ಲಿ ಗ್ರಹಗಳು ನೀಚದಲ್ಲಿರಬಾರದು;ಆ ರಾಶಿಯಲ್ಲಿ ಚಂದ್ರ ಅಥವಾ ಜಲರಾಶಿ ನವಾಂಶ ಲಗ್ನದಲ್ಲಿ ಶುಭಗ್ರಹ ಅಥವಾ ತನ್ನ ನವಾಂಶದಲ್ಲಿ ಇರಬೇಕು; ಪಾಪಗ್ರಹಗಳು ಕೇಂದ್ರದಲ್ಲಿರಬೇಕು ಇದು ಒಂದು ರಾಜಯೋಗ.
  14. ಮಕರ ಲಗ್ನವನ್ನು ಹೊರತುಪಡಿಸಿ, ಉಳಿದ ಲಗ್ನದಲ್ಲಿ ಗುರು ಇದ್ದರೆ ವಿಶೇಷವಾಗಿ ಕರ್ಕದಲ್ಲಿ ಇದ್ದರೆ  ಅದು ಕೂಡ ಒಂದು ರಾಜಯೋಗವೇ…
  15. ಲಗ್ನಾಧಿಪತಿಯು ಬಲಿಷ್ಠನಾಗಿ ಕೇಂದ್ರದಲ್ಲಿ ಇದ್ದರೂ ರಾಜಯೋಗವಾಗುವುದು.
  16. ಚಂದ್ರ ಗ್ರಹವು ಪರಮೋಚ್ಛದಲ್ಲಿ (ವೃಷಭ)ಇದ್ದು, ಮಿತ್ರಗ್ರಹಗಳಿಂದ ನೋಡಿದರೆ ಜಾತಕನು ರಾಜನಾಗುತ್ತಾನೆ. ಪರಮೋಚ್ಛ ಗ್ರಹದ ಯುತಿಯಲ್ಲಿ ಮಿತ್ರಗ್ರಹ ಇದ್ದರೆ ರಾಜಯೋಗ ಉಂಟಾಗಿ  ಜಾತಕನು ಬಹಳ ಧನಾಧಿಪತಿಯಾಗುತ್ತಾನೆ.
  17. ಚಂದ್ರನು ಸ್ವಕ್ಷೇತ್ರದಲ್ಲಿ ಹಾಗೂ ಅವನೊಂದಿಗೆ ಸೂರ್ಯನಿದ್ದರೆ ಗುರು ದೃಷ್ಟಿ ಇದ್ದರೆ ರಾಜಯೋಗ ಆಗುತ್ತದೆ.
  18. ಮೀನ ರಾಶಿಯಲ್ಲಿರುವ ಚಂದ್ರನನ್ನು ಹಲವು ಮಿತ್ರ ಗ್ರಹಗಳು ನೋಡಿದರೂ ಆಡಳಿತಗಾರನಾಗಿ, ಹೆಸರು ಮಾಡುತ್ತಾನೆ. 
  19. ವೃಷಭ ರಾಶಿಯಲ್ಲಿ ಚಂದ್ರನಿರುವುದೂ ರಾಜಯೋಗವೇ ಏಕೆಂದರೆ ವೃಷಭ ರಾಶಿಯು ಚಂದ್ರನಿಗೆ ಉಚ್ಛ ಕ್ಷೇತ್ರ ಆಗಿರುತ್ತದೆ.
  20. ಚಂದ್ರನು ಅಧಿ ಮಿತ್ರಾಂಶದಲ್ಲಿ ಶುಕ್ರನ ಶುಭ ದೃಷ್ಟಿ ಬಿದ್ದರೂ ಆಡಳಿತಗಾರನಾಗುತ್ತಾನೆ. ಈ ಯೋಗದಲ್ಲಿ ಚಂದ್ರನನ್ನು ಗುರುವು ನೋಡಿದರೆ ರಾಜ ಯೋಗವಾಗುತ್ತದೆ.
  21. ಲಾಭಾಧಿಪತಿ, ನವಮಾಧಿಪತಿ ಮತ್ತು ಧನಾಧಿಪತಿ ಇದರಲ್ಲಿ ಒಬ್ಬನು ಚಂದ್ರನ ಕೇಂದ್ರದಲ್ಲಿರಬೇಕು. ಗುರುವು ಉಚ್ಛನಾಗಿ ಪಂಚಮಾಧಿಪತಿ ಅಥವಾ ಲಾಭಾಧಿಪತಿ ಆಗಿರಬೇಕು. ಈ ಯೋಗದಲ್ಲಿ ಜನಿಸಿದವರು ರಾಜರಾಗುತ್ತಾರೆ ಅಥವಾ ರಾಜಸಮಾನರಾಗಿರುತ್ತಾರೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ಅಭಿಪ್ರಾಯ.

ಇವಿಷ್ಟೇ ಅಲ್ಲದೇ ಇತರ ಗ್ರಹಗಳ ಸ್ಥಾನ; ದೃಷ್ಟಿ; ಶತ್ರುತ್ವ;ಮಿತೃತ್ವ ಹಾಗೂ ಅವುಗಳ ಸಂಯೋಗಗಳು-ದಶೆಗಳು-ಭುಕ್ತಿಗಳನ್ನು ಕೂಡಾ ಪರಿಗಣಿಸಲಾಗುತ್ತದೆ ಎಂಬುದು ಗಮನಾರ್ಹ ವಿಷಯವಾಗಿರುತ್ತದೆ….

….ಇನ್ನು ನಿಮ್ಮ ಜಾತಕ ಕುಂಡಲಿಯಲ್ಲಿ ರಾಜಯೋಗ ಇದೆಯೇ ಎಂದು ನೋಡಿಕೊಳ್ಳಿ ಏಕೆಂದರೆ ತಿಳಿದಿದ್ದರೆ ಇದರಿಂದ ನಮಗೆ ಹೆಚ್ಚು ಅನುಕೂಲ; ಅದಕ್ಕೆ ತಕ್ಕ ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದು….

ತಿಳಿಯದೇ ಇದ್ದರೆ ಸುಮ್ಮನೆ ಬಂದು ಹೋಗುತ್ತವೆ… ಅಷ್ಟೇ

ತಿಳಿಯದೆ ಹಾದು ಹೋದರೆ, ಕನಿಷ್ಠ ಎಂಬತ್ತು ರೂಪಾಯಿ ಲಾಭ,  ಅದೇ ತಿಳಿದು ಹಾದು ಹೋದರೆ ಇಪ್ಪತ್ತು ರೂಪಾಯಿ ಅಂತೂ ಖಚಿತ…!!

ನೀಚ ಭಂಗ ರಾಜಯೋಗ!!

ಜಾತಕದಲ್ಲಿ ರಾಜಯೋಗ, ನೀಚ ಫಲ, ಶನಿ ಕಾಟ… ಹೀಗೆ ಗ್ರಹ ಗತಿಗಳು ಪ್ರಭಾವ ಬೀರುತ್ತವೆ. 

ಮನುಷ್ಯನ ಜೀವನವೇ ಬದಲಾಗುವುದು ಈ ಜಾತಕದಿಂದ. 

ಅಷ್ಟಕ್ಕೂ ಜಾತಕದಲ್ಲಿ ಹೇಳುವ ಈ ರಾಜಯೋಗ ಎಂದರೇನು? 

ಇಲ್ಲಿದೆ ಮಾಹಿತಿ… 

ನೀಚ ಭಂಗವಾಗುವುದು ಸಂತೋಷದ ವಿಚಾರ.

ಆದರೆ ನೀಚ ಸ್ಥಿತಿ ಎಂದರೇನು..? 

ನೀಚ ಸ್ಥಿತಿಯು ರಾಜಯೋಗವಾಗುವುದು ಹೇಗೆ..? 

ಅದು ಅರ್ಥವಾಗಬೇಕು. ನಿಮ್ಮ ಜಾತಕದಲ್ಲಿ ಯಾವುದಾದರೂ ಗ್ರಹ ನೀಚ ಸ್ಥಿತಿಯಲ್ಲಿದ್ದರೆ ಆ ಗ್ರಹ ತಾನು ಕೊಡಬೇಕಾದ ಉತ್ತಮ ಫಲವನ್ನು ಕೊಡುವುದಿಲ್ಲ. 

ನೀಚ ಸ್ಥಿತಿ ಎಂದರೆ ಹೆಸರೇ ಹೇಳುವ ಹಾಗೆ ಗ್ರಹಗಳು ನಿಕೃಷ್ಟ ಸ್ಥಿತಿಯಲ್ಲಿರುತ್ತವೆ. 

ಯಾವ ಗ್ರಹಗಳು ಯಾವ ರಾಶಿಯಲ್ಲಿದ್ರೆ ನೀಚವಾಗುತ್ತವೆ ಅನ್ನುವುದು ಗೊತ್ತಾದ್ರೆ ನಿಮಗೊಂದು ಸ್ಪಷ್ಟ ಕಲ್ಪನೆ ಬರುತ್ತದೆ. 

ಗ್ರಹಗಳ ನೀಚ ಸ್ಥಿತಿ

  1. ರವಿ – ತುಲಾ ರಾಶಿ
  2. ಚಂದ್ರ – ವೃಶ್ಚಿಕ ರಾಶಿ
  3. ಕುಜ – ಕರ್ಕಟಕ ರಾಶಿ
  4. ಬುಧ – ಮೀನ ರಾಶಿ
  5. ಗುರು – ಮಕರ ರಾಶಿ
  6. ಶುಕ್ರ – ಕನ್ಯಾ ರಾಶಿ
  7. ಶನಿ – ಮೇಷ ರಾಶಿ

ಈ ಗ್ರಹಗಳು ಈ ರಾಶಿಯಲ್ಲಿದ್ದಾಗ ಉತ್ತಮ ಫಲ ಕೊಡಲಿಕ್ಕೆ ಅಸಮರ್ಥವಾಗಿರುತ್ತವೆ. 

ಆಗ ಗ್ರಹಗಳಿಗೆ ಬಲವಿರುವುದಿಲ್ಲ. 

ಹಾಗಾಗಿ ಈ ನೀಚ ಗ್ರಹಗಳ ದಶೆ-ಭುಕ್ತಿ ಅಂದರೆ ಆ ಗ್ರಹಗಳು ಲೀಡ್ ಮಾಡುವ ಟೈಮ್ ಬಂದಾಗ ಕೆಟ್ಟ ಫಲಗಳನ್ನು ಕೊಡುತ್ತವೆ. 

ಆಗಲೇ ಮನುಷ್ಯನಿಗೆ ಕಷ್ಟ ಕೋಟಲೆಗಳು ಬಂದೆರಗುವುದು. 

ನೀಚತ್ವ ಭಂಗವಾಗುದು ಹೇಗೆ..?

ಅದೇ ತಿಳಿದುಕೊಳ್ಳಬೇಕಾದ ಮುಖ್ಯ ವಿಚಾರ. 

ಒಂದು ಗ್ರಹ ನೀಚ ಸ್ಥಿತಿಯಲ್ಲಿದ್ದರೂ ಕೆಲವೊಂದು ಸಂದರ್ಭಗಳಲ್ಲಿ ನೀಚತ್ವ ಕಳೆದುಕೊಂಡು ರಾಜಯೋಗವನ್ನು ತಂದು ಕೊಡುತ್ತವೆ. ಹೇಗೆ ಎಂದರೆ 

ನೀಚಸ್ಥಿತೋ ಜನ್ಮನಿ ಯೋ ಗ್ರಹ: 

ಸ್ತ್ಯಾತ್ತದ್ರಾಶಿನಾಥೋಪಿ ತದುಚ್ಚನಾಥ:

ಸ ಚಂದ್ರಲಗ್ನಾದ್ಯದಿಕೇಂದ್ರವರ್ತೀ 

ರಾಜಾ ಭವೇದ್ಧಾರ್ಮಿಕ ಚಕ್ರವರ್ತಿ

ಎಂಬ ಆಧಾರದ ಹಾಗೆ  ಜನ್ಮ ಕಾಲದಲ್ಲಿ ಒಂದು ಗ್ರಹ ನೀಚನಾಗಿದ್ದರೆ, ಉದಾಹರಣೆಗೆ ಒಂದು ಜಾತಕದಲ್ಲಿ ಶುಕ್ರ ನೀಚನಾಗಿದ್ದಾನೆ ಎಂದಿಟ್ಟುಕೊಳ್ಳಿ. ಅಲ್ಲಿಗೆ ಶುಕ್ರ ಕನ್ಯಾರಾಶಿಯಲ್ಲಿರುತ್ತಾನೆ. 

ಅದು ಅವನ ನೀಚ ಮನೆ. ಹಾಗಿದ್ದಾಗ ಕನ್ಯಾರಾಶಿಯ ಅಧಿಪತಿ ಬುಧ. ಆ ಬುಧ ಗ್ರಹ ಚಂದ್ರನಿಂದ ಕೇಂದ್ರ ಸ್ಥಾನದಲ್ಲಿ ಅಂದರೆ ಚಂದ್ರನಿರುವ ಮನೆಯಿಂದ  1, 4, 7, 10 ನೇ ಮನೆಯಲ್ಲಿದ್ದರೆ ಅದು ಶುಕ್ರನ ನೀಚತ್ವವನ್ನು ಭಂಗ ಮಾಡಿ ರಾಜಯೋಗವನ್ನು ತಂದುಕೊಡುತ್ತದೆ. 

ಅಥವಾ ಜನ್ಮ ಲಗ್ನದಿಂದ ಕೇಂದ್ರ ಸ್ಥಾನದಲ್ಲಿ ಬುಧನಿದ್ದರೂ ನೀಚ ಭಂಗವಾಗಿ ರಾಜಯೋಗ ತರುತ್ತದೆ.! 

ಇದು ಕೇವಲ ಒಂದು ರೀತಿಯ ಉದಾಹರಣೆಯಷ್ಟೇ ಇನ್ನೂ ಅನೇಕ ರೀತಿಯಲ್ಲಿ ಗ್ರಹಗಳ ನೀಚತ್ವ ಭಂಗವಾಗಿ ರಾಜಯೋಗವಾಗಿ ಪರಿವರ್ತನೆಯಾಗುತ್ತದೆ ಮತ್ತು ಸುಖ ಶಾಂತಿಯನ್ನು ಕರುಣಿಸುತ್ತದೆ.

Leave a Comment

Your email address will not be published. Required fields are marked *