ಭೂತ, ಭವಿಷ್ಯತ್, ವರ್ತಮಾನಗಳನ್ನು ನಿಮ್ಮ ಜಾತಕದಿಂದ ತಿಳಿಯಬಹುದೇ ?
ಈ ಭೂತ, ಭವಿಷ್ಯತ್, ವರ್ತಮಾನಗಳಿಗನುಗುಣವಾಗಿ ಕರ್ಮವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು.
ಅವು ಯಾವುವೆಂದರೆ ಕ್ರಮವಾಗಿ ಸಂಚಿತ ಕರ್ಮ, ಆಗಾಮಿ ಕರ್ಮ, ಹಾಗೂ ಪ್ರಾರಬ್ಧ ಕರ್ಮ.
ಸಂಚಿತ ಕರ್ಮ: ಜಾತಿ, ಆಯುಸ್ಸು, ಭೋಗ ಇವು ಸಂಚಿತ ಕರ್ಮದಿಂದ ಹುಟ್ಟಿದಾಗಲೇ ನಿಶ್ಚಯವಾಗುವಂತಹುದು.
ಜಾತಿ ಅಂದರೆ ಆತ್ಮವು ಮನುಷ್ಯ ಜಾತಿಯಲ್ಲೋ, ಅಥವಾ ಪ್ರಾಣಿ ವರ್ಗದಲ್ಲೋ ಹುಟ್ಟುವುದು ಎಂದು ನಿಶ್ಚಯವಾಗತಕ್ಕಂತಹುದು.
ಇನ್ನು ಇಂತಿಷ್ಟು ವರ್ಷ ಆಯುಸ್ಸು ಎಂಬುದು ಹುಟ್ಟಿದಾಗಲೇ ನಿರ್ಣಯವಾಗಿ ಬಿಟ್ಟಿರುತ್ತದೆ. ಭೋಗವೆಂದರೆ ನಮ್ಮ ಸ್ಥಿತಿಗತಿ.
ಇವೆಲ್ಲವೂ ಸಂಚಿತ. ಇವು ಹಿಂದಿನ ಜನ್ಮದಿಂದ ಪಡೆದಿರುತ್ತೇವೆ. ಆದರೆ ಈಗ ಪ್ರಾರಬ್ಧದಲ್ಲಿ ನಾವಿದನ್ನು ಅಭಿವೃದ್ಧಿ ಅಥವಾ ಅವನತಿಗೆ ತಂದುಕೊಳ್ಳುತ್ತೇವೆ. ಇದಕ್ಕೆ ನಮ್ಮ ಪೂಜೆ ಪುನಸ್ಕಾರಗಳು ಅಥವಾ ನಮ್ಮ ಕೆಟ್ಟ ವ್ಯವಹಾರಗಳೇ ಕಾರಣ. ಇದರ ಫಲವೇ ಮುಂದಿನ ಆಗಾಮಿ ಕರ್ಮ.
ಜಾತಕದಲ್ಲಿ 5ನೇ ಮನೆಯು ಪೂರ್ವ ಪುಣ್ಯವನ್ನು ಸೂಚಿಸುತ್ತವೆ. ಪೂರ್ವ ಪುಣ್ಯವು ಜಾತಕನು ಹಿಂದಿನ ಜನ್ಮದಲ್ಲಿ ಗಳಿಸಿದ್ದ ಫಲವಾದುದರಿಂದ ಪಂಚಮ ಭಾವದಿಂದ ಸಂಚಿತ ಕರ್ಮವನ್ನು ನೋಡಬಹುದು. ಈ ಭಾವದಲ್ಲಿ ಶುಭ ಗ್ರಹಗಳಿದ್ದರೆ ಶುಭ ಸಂಚಿತವೆಂದೂ ಅಶುಭ ಗ್ರಹಗಳಿದ್ದರೆ ಅಶುಭ ಸಂಚಿತವೆಂದೂ ತಿಳಿಯಬೇಕು.
ಪ್ರಾರಬ್ಧ ಕರ್ಮ: ಸಂಚಿತ ಕರ್ಮ ವಾಸನೆಗಳಲ್ಲಿ ಯಾವ ಕರ್ಮಗಳನ್ನು ಭೋಗಿಸಲು ಆತ್ಮವು ಜನಿಸುವುದೋ ಅಂತಹ ಕರ್ಮಕ್ಕೆ ಪ್ರಾರಬ್ಧ ಕರ್ಮ ಎಂದು ಕರೆಯುತ್ತಾರೆ.
ಸಂಚಿತ ಕರ್ಮಗಳನ್ನು ಒಟ್ಟಿಗೆ ಅನುಭವಿಸಲುಬ ಸಾಧ್ಯವಾಗುವುದಿಲ್ಲವಾದ್ದರಿಂದ ಹಿಂದೆ ಜನ್ಮ ಜನ್ಮಗಳಲ್ಲಿ ಮಾಡಿದ ಕರ್ಮಗಳಲ್ಲಿ ಕೆಲವು ಈ ಜನ್ಮದಲ್ಲಿ ಪ್ರಭಾವ ಬೀರುತ್ತವೆ. ಉಳಿದ ಕರ್ಮಗಳು ಸುಪ್ತಾವಸ್ಥೆಯಲ್ಲಿರುತ್ತವೆ.
ಜಾತಕದಲ್ಲಿ ಲಗ್ನವು ವರ್ತಮಾನದ ಜನ್ಮವನ್ನು ತಿಳಿಸುವುದರಿಂದ ವರ್ತಮಾನವೆಂದರೆ ವ್ಯಕ್ತಿಯು ಈಗ ಅನುಭವಿಸುತ್ತಿರುವ ಫಲವಾದುದರಿಂದ ಲಗ್ನದಿಂದ ಪ್ರಾರಬ್ಧ ಕರ್ಮವನ್ನು ತಿಳಿಯಬಹುದು.
ಪ್ರಾರಬ್ಧವೆಂದರೆ ಅನುಭವಿಸಲೇ ಬೇಕಾದ ಕರ್ಮವಾಗಿರುತ್ತದೆ. ಲಗ್ನವು ಬಲಾಢ್ಯವಾಗಿದ್ದರೆ ಶುಭ ಫಲವೆಂದೂ, ಬಲಹೀನವಾಗಿದ್ದರೆ ಅಶುಭ ಫಲವೆಂದೂ ತಿಳಿಯಬೇಕು.